/newsfirstlive-kannada/media/media_files/2025/08/12/congress-ranadeep-surjewala-2025-08-12-15-51-38.jpg)
ಸಚಿವ ಸಂಪುಟದಿಂದ ಕೆ.ಎನ್ ರಾಜಣ್ಣರನ್ನ ವಜಾಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿರುವ ರಣದೀಪ್ ಸುರ್ಜೇವಾಲಾ..! ಹಾಲಿ ರಾಜ್ಯಸಭಾ ಸದಸ್ಯ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿರುವ ರಣದೀಪ್ ಸುರ್ಜೇವಾಲಾ ಇತ್ತೀಚೆಗೆ ಬೆಂಗಳೂರಿಗೆ ಬಂದು ಸಚಿವರು, ಶಾಸಕರ ಸಭೆ ನಡೆಸಿದ್ದರು. ಇದನ್ನು ಸಹಕಾರ ಖಾತೆ ಸಚಿವರಾಗಿದ್ದ ಕೆ.ಎನ್.ರಾಜಣ್ಣ ಬಹಿರಂಗವಾಗಿ ಪ್ರಶ್ನಿಸಿದ್ದರು. ಜೊತೆಗೆ ರಣದೀಪ್ ಸುರ್ಜೇವಾಲಾ, ಎಲ್ಲ ಕ್ಯಾಬಿನೆಟ್ ಸಚಿವರನ್ನು ಪ್ರತ್ಯೇಕವಾಗಿ ಕರೆದು ಮಾತುಕತೆ ನಡೆಸಿದ್ದರು. ಈ ಮಾತುಕತೆಗೆ ಸಹಕಾರ ಸಚಿವರಾಗಿದ್ದ ಕೆ.ಎನ್.ರಾಜಣ್ಣ ಹೋಗಿರಲಿಲ್ಲ. ರಣದೀಪ್ ಸುರ್ಜೇವಾಲಾ, ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸಚಿವರ ಜೊತೆ ನಡೆಸುವಾಗ ಕೆ.ಎನ್.ರಾಜಣ್ಣ, ತಮ್ಮ ಕುಟುಂಬದ ಜೊತೆ ಅಮೆರಿಕಾ ಪ್ರವಾಸ ಹೋಗಿದ್ದರು. ನಂತರ ಹೋಗಿ ರಣದೀಪ್ ಸುರ್ಜೇವಾಲಾರನ್ನು ಭೇಟಿಯಾಗುತ್ತೇನೆ ಎಂದಿದ್ದರು. ಆ ರೀತಿ ರಣದೀಪ್ ಸುರ್ಜೇವಾಲಾರನ್ನು ರಾಜಣ್ಣ ಭೇಟಿಯಾಗಲಿಲ್ಲ. ಜೊತೆಗೆ ರಣದೀಪ್ ಸುರ್ಜೇವಾಲಾ, ಕಾಂಗ್ರೆಸ್ ಪಕ್ಷದ ನಾಯಕರು. ರಣದೀಪ್ ಸುರ್ಜೇವಾಲಾಗೆ ರಾಜ್ಯ ಸರ್ಕಾರದ ಅಧಿಕಾರಿಗಳನ್ನು ಕರೆದು ಸಭೆ ನಡೆಸುವ ಅಧಿಕಾರ ಇಲ್ಲ. ಅಧಿಕಾರಿಗಳನ್ನು ಕರೆದು ಸಭೆ ನಡೆಸಿದ್ದು ಸರಿಯಲ್ಲ ಎಂದೆಲ್ಲಾ ಬಹಿರಂಗವಾಗಿ ರಣದೀಪ್ ಸುರ್ಜೇವಾಲಾ ವಿರುದ್ಧ ಮಾತನಾಡಿದ್ದರು. ಇದು ಸಹಜವಾಗಿಯೇ ರಾಜ್ಯದ ಕಾಂಗ್ರೆಸ್ ಸರ್ಕಾರ, ಪಕ್ಷದ ಬೆಳವಣಿಗೆಗಳ ಬಗ್ಗೆ ಕಣ್ಣಿಟ್ಟಿರುವ ರಣದೀಪ್ ಸುರ್ಜೇವಾಲಾ ಗಮನಕ್ಕೆ ಬಂದಿದೆ. ಹೀಗಾಗಿ ರಣದೀಪ್ ಸುರ್ಜೇವಾಲಾಗೆ ಕೆ.ಎನ್.ರಾಜಣ್ಣ ಬಗ್ಗೆ ಒಳಗೊಳಗೆ ಅಸಮಾಧಾನ ಇತ್ತು. ಹೀಗಾಗಿ ಈಗ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಚುನಾವಣಾ ಆಯೋಗದ ವಿರುದ್ಧ ಮತಗಳವು ಆರೋಪ ಮಾಡಿ ಕ್ಯಾಂಪೇನ್ ಮಾಡುವಾಗ ಅದರ ವಿರುದ್ಧವೂ ರಾಜಣ್ಣ ಹೇಳಿಕೆ ಕೊಟ್ಟಿದ್ದನ್ನೇ ರಣದೀಪ್ ಸುರ್ಜೇವಾಲಾ, ರಾಜಣ್ಣ ವಿರುದ್ಧ ಅಸ್ತ್ರವಾಗಿ ಬಳಕೆ ಮಾಡಿಕೊಂಡಿದ್ದಾರೆ. ತಮ್ಮ ವಿರುದ್ಧ ಮಾತನಾಡಿದ, ತಮ್ಮನ್ನು ಪ್ರಶ್ನಿಸಿದ ಕೆ.ಎನ್.ರಾಜಣ್ಣರನ್ನು ಹಣಿಯಲು ಅವರ ಹೇಳಿಕೆಯನ್ನೇ ಅವರ ವಿರುದ್ಧ ಅಶಿಸ್ತು ಎಂದು ಅಸ್ತ್ರ ಪ್ರಯೋಗಿಸಿ, ರಾಹುಲ್ ಗಾಂಧಿ ಮುಂದಿಟ್ಟಿದ್ದಾರೆ. ತಮ್ಮ ಹೋರಾಟವನ್ನು ಪ್ರಶ್ನಿಸಿದ ತಮ್ಮದೇ ಪಕ್ಷದ ಸಚಿವರ ಮಾತು ಅನ್ನು ಒಪ್ಪಿಕೊಳ್ಳಲು ಆಗಲ್ಲ. ಇದು ಅಶಿಸ್ತು ಎಂದು ರಾಹುಲ್ ಗಾಂಧಿ ಪರಿಗಣಿಸಿದ್ದಾರೆ. ಜೊತೆಗೆ ರಾಜಣ್ಣರ ಈ ಹಿಂದಿನ ವಿವಾದಾತ್ಮಕ ಹೇಳಿಕೆಗಳನ್ನು ಆಗಸ್ಟ್ 8 ರಂದು ರಾಹುಲ್ ಗಾಂಧಿ ಬೆೆಂಗಳೂರಿಗೆ ಬಂದಿದ್ದ ವೇಳೆಯೇ ರಣದೀಪ್ ಸುರ್ಜೇವಾಲಾ, ರಾಹುಲ್ ಗಾಂಧಿ ಗಮನಕ್ಕೆ ತಂದಿದ್ದರಂತೆ.
ಆಗಲೂ ರಾಹುಲ್ ಗಾಂಧಿ, ಕೆ.ಎನ್.ರಾಜಣ್ಣ ಬಗ್ಗೆ ಅಸಮಾಧಾನಗೊಂಡಿದ್ದಾರೆ. ಕರ್ನಾಟಕದಲ್ಲಿ ನಾವು 140 ಶಾಸಕರ ಸರ್ಕಾರ ನಡೆಸುತ್ತಿದ್ದೇವೋ, 115 ಮಂದಿಯ ಶಾಸಕರ ಸರ್ಕಾರ ನಡೆಸುತ್ತಿದ್ದೇವೋ? ಬಹುಮತ ಇದ್ದರೂ, ಪದೇ ಪದೇ ಸರ್ಕಾರದಲ್ಲಿ ಗೊಂದಲ ಏಕೆ ಎಂದು ರಾಹುಲ್ ಗಾಂಧಿ ಅವರು ನೇರವಾಗಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಅವರನ್ನು ಪ್ರಶ್ನಿಸಿದ್ದಾರೆ.
ಕೆ.ಎನ್.ರಾಜಣ್ಣ ಬಹಿರಂಗವಾಗಿ ಹೇಳಿಕೆಗಳನ್ನು ನೀಡುತ್ತಿದ್ದರೂ, ಏಕೆ ಯಾವುದೇ ಕ್ರಮ ಆಗಿಲ್ಲವೆಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದರಂತೆ. ರಾಜಣ್ಣ ಪದೇ ಪದೇ ಪಕ್ಷ , ಸರ್ಕಾರಕ್ಕೆ ಮುಜುಗರ ಆಗುವ ಹೇಳಿಕೆ ನೀಡುತ್ತಿದ್ದಾರೆ ಎಂದು ರಣದೀಪ್ ಸುರ್ಜೇವಾಲಾ ನೇರವಾಗಿ ರಾಹುಲ್ ಗಾಂಧಿಗೆ ಹೇಳಿದ್ದಾರೆ. ಇದರಿಂದಾಗಿಯೇ ರಾಹುಲ್ ಗಾಂಧಿಯೇ ಈಗ ಸಚಿವ ಸಂಪುಟದಿಂದ ಕೆ.ಎನ್.ರಾಜಣ್ಣರನ್ನು ವಜಾಗೊಳಿಸಬೇಕೆಂದು ಸಿಎಂ ಸಿದ್ದರಾಮಯ್ಯಗೆ ಫರ್ಮಾನು ಹೊರಡಿಸಿದ್ದರು. ಹೀಗಾಗಿ ಕೆ.ಎನ್.ರಾಜಣ್ಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ, ಅದನ್ನು ಅಂಗೀಕರಿಸಿ, ರಾಜ್ಯಪಾಲರಿಗೆ ಕಳಿಸದೇ, ಸಿಎಂ ಸಿದ್ದರಾಮಯ್ಯ, ರಾಜಣ್ಣರನ್ನು ಕ್ಯಾಬಿನೆಟ್ ನಿಂದ ವಜಾಗೊಳಿಸುವ ಶಿಫಾರಸ್ಸು ಅನ್ನು ರಾಜ್ಯಪಾಲರಿಗೆ ಕಳಿಸಿದ್ದಾರೆ. ಬಳಿಕ ರಾಜಭವನದಿಂದ ರಾಜಣ್ಣರನ್ನು ಕ್ಯಾಬಿನೆಟ್ ನಿಂದ ವಜಾಗೊಳಿಸುವ ಪತ್ರ ಬಿಡುಗಡೆ ಆಗಿದೆ. ಆ ಪತ್ರವನ್ನು ಸಿಎಂ ಸಿದ್ದರಾಮಯ್ಯ, ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆ.ಸಿ.ವೇಣುಗೋಪಾಲ್, ರಣದೀಪ್ ಸುರ್ಜೇವಾಲಾ ಅವರಿಗೆ ರವಾನೆ ಮಾಡಿದ್ದಾರೆ.
ಹೀಗೆ ಸಚಿವ ಸ್ಥಾನದಿಂದ ಕೆ.ಎನ್. ರಾಜಣ್ಣರ ತಲೆದಂಡಕ್ಕೆ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿದ್ದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಎಂಬ ಮಾತು ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯ ಅಂಗಳದಲ್ಲಿ ನಿನ್ನೆಯಿಂದ ಚರ್ಚೆಯಾಗುತ್ತಿದೆ. ಕೆ.ಎನ್. ರಾಜಣ್ಣ ಕಿಕ್ ಔಟ್ ಎಪಿಸೋಡ್ ನಲ್ಲಿ ಪ್ರಮುಖ ಪಾತ್ರ ವಹಿಸಿದ್ದು ರಣದೀಪ್ ಸುರ್ಜೇವಾಲಾ.
ಬ್ಯಾಕ್ ಟು ಬ್ಯಾಕ್ ರಾಜಣ್ಣರ ಗೊಂದಲದ ಹೇಳಿಕೆಗಳ ಪಟ್ಟಿಯನ್ನೇ ರಣದೀಪ್ ಸುರ್ಜೇವಾಲಾ ಸಂಗ್ರಹಿಸಿಕೊಂಡಿದ್ದರು. ಕೆಲ ರಾಜ್ಯ ನಾಯಕರ ಮೂಲಕ ಸಾಕ್ಷಿ ಸಮೇತ ವರದಿಯನ್ನು ತರಿಸಿಕೊಂಡು ಸೂಕ್ತ ಸಮಯಕ್ಕಾಗಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಕಾಯುತ್ತಿದ್ದರು. ಡಿಕೆಶಿ ವಿರುದ್ಧ ಸಿಎಂ ಗಾದಿ, ಐದು ಡಿಸಿಎಂ ಹುದ್ದೆ ಸೃಷ್ಟಿ, ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಬಗ್ಗೆ ಕೆ.ಎನ್. ರಾಜಣ್ಣ ಬಹಿರಂಗವಾಗಿ ಮಾತನಾಡಿದ್ದರು. ಈ ಬಗ್ಗೆ ಉಸ್ತುವಾರಿ ಸುರ್ಜೇವಾಲಾಗೆ ನಿರಂತರವಾಗಿ ದೂರು ನೀಡುತ್ತಿದ್ದಿದ್ದು ಡಿಸಿಎಂ ಡಿಕೆಶಿ. ರಾಜಣ್ಣರ ಪ್ರತಿಯೊಂದು ಹೇಳಿಕೆಗಳ ಮಾಹಿತಿ ಪಡೆಯುತ್ತಿದ್ದಾಗಲೇ ಉಸ್ತುವಾರಿ ರಣದೀಪ್ ಸುರ್ಜೇವಾಲಾ ವಿರುದ್ಧವೂ ಹೇಳಿಕೆಯನ್ನು ಕೆ.ಎನ್. ರಾಜಣ್ಣ ನೀಡಿದ್ದರು.
ಈಗ ರಾಹುಲ್ ಗಾಂಧಿ ಹೋರಾಟವನ್ನ ಅಣಕಿಸುವಂತೆ ಹೇಳಿಕೆ ನೀಡಿದ್ದನ್ನೆ ರಾಜಣ್ಣ ವಿರುದ್ಧ ಪ್ರಬಲ ಅಸ್ತ್ರವಾಗಿ ಬಳಸಿಕೊಂಡಿದ್ದಾರೆ. ಹನಿಟ್ರ್ಯಾಪ್ ಪ್ರಕರಣದ ಜೊತೆಗೆ ಮತಗಳ್ಳತನ ಸಂಬಂಧ ರಾಜಣ್ಣ ನೀಡಿದ್ದ ಹೇಳಿಕೆಯನ್ನ ರಣದೀಪ್ ಸುರ್ಜೇವಾಲಾ ಬಳಸಿಕೊಂಡಿದ್ದಾರೆ. ಮೊದಲ ಹಂತವಾಗಿ ಕೆ.ಸಿ ವೇಣುಗೋಪಾಲ್ ಗಮನಕ್ಕೆ ರಾಜಣ್ಣರ ವಿವಾದಾತ್ಮಕ ಹೇಳಿಕೆಗಳನ್ನು ತರುವಲ್ಲಿ ಯಶಸ್ವಿಯಾಗಿದ್ದರು. ಬಳಿಕ ನೇರವಾಗಿ ರಾಹುಲ್ ಗಾಂಧಿಗೆ ರಾಜಣ್ಣ ಹೇಳಿಕೆ ಬಗ್ಗೆ ಮನವರಿಕೆ ಮಾಡುವಲ್ಲಿ ರಣದೀಪ್ ಸುರ್ಜೇವಾಲಾ ಯಶಸ್ವಿಯಾಗಿದ್ದಾರೆ. ಇದರಿಂದಾಗಿ ರಾಜ್ಯ ಕ್ಯಾಬಿನೆಟ್ ನಿಂದ ಕೆ.ಎನ್.ರಾಜಣ್ಣ ವಜಾ ಆದೇಶ ಹೈಕಮ್ಯಾಂಡ್ ನಿಂದ ಸಿಎಂ ಸಿದ್ದರಾಮಯ್ಯಗೆ ರವಾನೆಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ