/newsfirstlive-kannada/media/media_files/2025/10/17/state-contractors-association-met-cm-siddu-2025-10-17-17-33-36.jpg)
ರಾಜ್ಯದಲ್ಲಿ ಸರ್ಕಾರಿ ಗುತ್ತಿಗೆದಾರರಿಗೆ ರಾಜ್ಯ ಸರ್ಕಾರದಿಂದ ಬರೋಬ್ಬರಿ 33 ಸಾವಿರ ಕೋಟಿ ರೂಪಾಯಿ ಹಣ ಬಿಡುಗಡೆಯಾಗಿಲ್ಲ. ಇಷ್ಟೊಂದು ದೊಡ್ಡ ಮೊತ್ತದ ಹಣವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡದೇ ಬಾಕಿ ಉಳಿಸಿಕೊಂಡಿದೆ. ಇದರಿಂದಾಗಿ ಈಗ ಸರ್ಕಾರಿ ಟೆಂಡರ್ ಪಡೆದು ಕಾಮಗಾರಿ ನಡೆಸಿದ ಗುತ್ತಿಗೆದಾರರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈ ವಿಷಯದ ಬಗ್ಗೆ ಇಂದು ಗುತ್ತಿಗೆದಾರರ ಸಂಘ ಪತ್ರಿಕಾಗೋಷ್ಠಿ ನಡೆಸಿ ತಮ್ಮ ನೋವು ತೋಡಿಕೊಂಡಿದ್ದಾರೆ. ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್ ಮಂಜುನಾಥ್ ಸೇರಿದಂತೆ ಪ್ರಮುಖ ಗುತ್ತಿಗೆದಾರರು ಇಂದು ಪತ್ರಿಕಾಗೋಷ್ಠಿ ನಡೆಸಿದ್ದರು. ಎರಡು ವರ್ಷದಿಂದ ಈ ಸರ್ಕಾರದ ಬಗ್ಗೆ ನಂಬಿಕೆ ಇಟ್ಟುಕೊಂಡಿದ್ದೇವೆ.
ನಮಗೆ ರಾಜ್ಯ ಸರ್ಕಾರದಿಂದ 33 ಸಾವಿರ ಕೋಟಿ ರೂಪಾಯಿ ಬಾಕಿ ಇದೆ . ಐದಾರು ಬಾರಿ ಸಿಎಂ ಸೇರಿದಂತೆ ಹಲವು ಸಚಿವರನ್ನು ಭೇಟಿ ಮಾಡಿದ್ದೇವೆ. ಸರ್ಕಾರದ ಎಂಟು ಇಲಾಖೆಯಿಂದ ಒಟ್ಟು 33 ಸಾವಿರ ಕೋಟಿ ಬಾಕಿ ಇದೆ . PWD ಇಲಾಖೆಯಿಂದ ಅಲ್ಪಸ್ವಲ್ಪ ಬಿಡುಗಡೆ ಆಗ್ತಿದೆ, ಅದಾಗಿಯೂ 9 ಸಾವಿರ ಕೋಟಿ ಬಾಕಿ ಇದೆ . ಆದರೆ ನೀರಾವರಿ ಇಲಾಖೆಯಲ್ಲಿ 12 ಸಾವಿರ ಕೋಟಿ ಬಾಕಿ ಇದೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ಹೇಳಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಹಲವು ಬಾರಿ ಮನವಿ ಮಾಡಿದ್ರೂ ಬಿಡುಗಡೆ ಮಾಡ್ತಿಲ್ಲ . ನಮಗೆ ದೀಪಾವಳಿ, ದಸರಾ ಹಬ್ಬ ಏನೂ ಮಾಡೋಕೆ ಆಗುತ್ತಿಲ್ಲ. ನಮ್ಮ ಸಿಬ್ಬಂದಿಗಳಿಗೆ ದಸರಾ, ದೀಪಾವಳಿ ಉಡುಗೊರೆ ಕೊಡೋಕು ಆಗದೆ ಇರುವ ಪರಿಸ್ಥಿತಿಯಲ್ಲಿದ್ದೇವೆ . ಸಣ್ಣ ಮತ್ತು ಮಧ್ಯಮ ವರ್ಗದ ಗುತ್ತಿಗೆದಾರರ ಸ್ಥಿತಿ ಬಹಳ ಕೆಟ್ಟು ಹೋಗಿದೆ. ರಾಜ್ಯ ಸರ್ಕಾರ ಕನಿಷ್ಠ 50 ಲಕ್ಷದಿಂದ 1 ಕೋಟಿ ಬಾಕಿ ಇರುವ ಗುತ್ತಿಗೆದಾರರಿಗೆ ಬೇಗ ಹಣ ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದ್ದರು. ಸಣ್ಣ ನೀರಾವರಿ ಇಲಾಖೆಯಲ್ಲಿ ಅಂತೂ ಹಣ ಬಿಡುಗಡೆ ಆಗದೆ ಕಾಲವೇ ಆಗೋಯ್ತು. ದಸರಾ ಹಬ್ಬದ ಟೈಮಲ್ಲಿ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಓಡಾಡಿದ್ದೇವೆ. ಈಗ ದೀಪಾವಳಿ ಹಬ್ಬ ಬಂದಾಗಲೂ ನಮ್ಮ ಸಿಬ್ಬಂದಿಗಳ ಕಣ್ಣು ತಪ್ಪಿಸಿ ಓಡಾಡಬೇಕಾ ನಾವು? ಎಂದು ಪ್ರಶ್ನಿಸಿದ್ದಾರೆ.
ನಮ್ಮ ಸಹನೆಯ ಕಟ್ಟೆ ಹೊಡೆಯುವ ಹಾಗೆ ಸರ್ಕಾರ ಮಾಡಬಾರದು. ಇನ್ನೂ ನಮಗೆ ಬಾಕಿ ಹಣ ಬಿಡುಗಡೆ ಮಾಡಿಲ್ಲದೇ ಹೋದರೇ, ನಮ್ಮ ಕೆಲಸ ನಿಲ್ಲಿಸುತ್ತೇವೆ. ಗುತ್ತಿಗೆಯಲ್ಲಿ ಪ್ಯಾಕೇಜ್ ಸಿಸ್ಟಮ್ ಕೈ ಬಿಡಬೇಕು . ಹತ್ತು ನಗರ ಪಾಲಿಕೆಯಲ್ಲಿ 10 ಕೋಟಿಗೂ ಅಧಿಕ ಮೊತ್ತ ಗುತ್ತಿಗೆ ನೀಡಬಾರದು ಅಂತ ನಿಯಮ ಇದೆ. ಹೀಗಾಗಿ ಪ್ಯಾಕೇಜ್ ಸಿಸ್ಟಮ್ ಕೈ ಬಿಟ್ಟು , ಕಾನೂನು ಪ್ರಕಾರ ಗುತ್ತಿಗೆ ನೀಡಬೇಕು .
ಪ್ಯಾಕೇಜ್ ಸಿಸ್ಟಮ್ ಗೆ ಹಿಂದಿನ ಸರ್ಕಾರವೇ ಬಲಿಯಾಯ್ತು. ಈ ಸರ್ಕಾರವೂ ಪ್ಯಾಕೇಜ್ ಸಿಸ್ಟಮ್ ಗೆ ಬಲಿಯಾಗಬಾರದು ಅಂತ ಕೇಳಿ ಕೊಳ್ಳುತ್ತೇವೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ಹೇಳಿದ್ದಾರೆ.
ಕರ್ನಾಟಕದಲ್ಲಿ ಹೊರ ರಾಜ್ಯದ ಗುತ್ತಿಗೆದಾರರು ತುಂಬಿಕೊಂಡು ಬಿಟ್ಟಿದ್ದಾರೆ. ನಮ್ಮವರು ಹೊರ ರಾಜ್ಯದ ಗುತ್ತಿಗೆದಾರರಿಗೆ ಪೂರಕವಾದ ವಾತಾವರಣ ನಿರ್ಮಿಸುತ್ತಿದ್ದಾರೆ. ಸಚಿವ ಜಮೀರ್ ಅಹಮ್ಮದ್ ಖಾನ್ ಮೇಲೆ ಗುತ್ತಿಗೆದಾರರು ಗಂಭೀರ ಆರೋಪ ಮಾಡಿದ್ದಾರೆ. ಭ್ರಷ್ಟ ನಿವೃತ್ತ ಇಂಜಿನಿಯರ್ ರನ್ನು ಕರ್ಕೊಂಡು ಬಂದು ಸಲಹೆಗಾರರನ್ನಾಗಿ ನೇಮಿಸಿಕೊಂಡಿದ್ದಾರೆ. ಬಾಲರಾಜ್ ಎಂಬುವವರನ್ನು ನೇಮಿಸಿ ಗೋಲ್ಮಾಲ್ ಮಾಡುತ್ತಿದ್ದಾರೆ. ಬಾಲರಾಜ್ ಮೇಲೆ ಲೋಕಾಯುಕ್ತದಲ್ಲಿ ಕಂಪ್ಲೇಂಟ್ ಇದೆ. ಅವರು ಸೇವೆಯಲ್ಲಿ ಇರುವಾಗಲೇ ಅವರ ಮೇಲೆ ಭ್ರಷ್ಟಾಚಾರ ಆರೋಪ ಇದೆ . ಜಮೀರ್ ಅಹಮ್ಮದ್ ಅವರ ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ಆರೋಪಿಸಿದ್ದಾರೆ.
ಡಿಸೆಂಬರ್ ವರೆಗೂ ರಾಜ್ಯ ಸರ್ಕಾರಕ್ಕೆ ಗುತ್ತಿಗೆದಾರರು ಬಾಕಿ ಹಣ ಬಿಡುಗಡೆಗೆ ಡೆಡ್ ಲೈನ್ ಕೊಟ್ಟಿದ್ದಾರೆ.
ನವೆಂಬರ್ ಒಳಗೆ ಎಲ್ಲಾ ಬಿಲ್ ಬಾಕಿ ಹಣ ಬಿಡುಗಡೆಯಾಗಿ ಪಾವತಿಯಾಗಬೇಕು. ಬಾಕಿ ಹಣ ಬಿಡುಗಡೆ ಮಾಡದಿದ್ರೆ ರಾಜ್ಯಪಾಲರಿಗೆ ದೂರು ನೀಡುತ್ತೇವೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾಗೂ ದೂರು ನೀಡಲು ತೀರ್ಮಾನ ಮಾಡಿದ್ದೇವೆ ಎಂದು ರಾಜ್ಯ ಸರ್ಕಾರಕ್ಕೆ ರಾಜ್ಯ ಗುತ್ತಿಗೆದಾರರ ಸಂಘ ಎಚ್ಚರಿಕೆ ಕೊಟ್ಟಿದೆ.
ಈ ಕಾಂಗ್ರೆಸ್ ಸರ್ಕಾರದಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ. ಡಿಸೆಂಬರ್ ಒಳಗೆ ಬಾಕಿ ಬಿಲ್ ಕ್ಲಿಯರ್ ಆಗದೇ ಹೋದರೇ, ಈ ಸರ್ಕಾರದ ಭ್ರಷ್ಟಾಚಾರದ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಎಷ್ಟು ಕಮಿಷನ್ ತೆಗೆದುಕೊಳ್ಳುತ್ತಿದ್ದಾರೆ ಅನ್ನೋದನ್ನೆಲ್ಲಾ ಡಿಸೆಂಬರ್ ಬಳಿಕ ಹೇಳುತ್ತೇವೆ ಎಂದಿದ್ದಾರೆ. ನಮ್ಮ ಸಹನೆಯ ಕಟ್ಟೆ ಹೊಡೆದು ಹೋಗದಂತೆ ಸರ್ಕಾರ ನೋಡಿಕೊಳ್ಳಬೇಕು ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ಹೇಳಿದ್ದಾರೆ.
ಯಾವ ಇಲಾಖೆಯಲ್ಲಿ ಎಷ್ಟೆಷ್ಟು ಬಾಕಿ? :
* ನೀರಾವರಿ ಇಲಾಖೆ 12000 ಕೋಟಿ
* ಆರ್ ಡಿ ಪಿಆರ್ ಇಲಾಖೆ 3600 ಕೋಟಿ
* ಸಣ್ಣ ನೀರಾವರಿ ಇಲಾಖೆ 3200 ಕೋಟಿ
* ನಗರಾಭಿವೃದ್ಧಿ ಇಲಾಖೆ 2000 ಕೋಟಿ
* ಮಹಾತ್ಮ ಗಾಂಧಿ ಯೋಜನೆ 1600 ಕೋಟಿ
* ಹೌಸಿಂಗ್ ಇಲಾಖೆ 1200 ಕೋಟಿ
* ಕಾರ್ಮಿಕ ಇಲಾಖೆ 800 ಕೋಟಿ
ಲೋಕೋಪಯೋಗಿ ಇಲಾಖೆ-9000 ಕೋಟಿ ರೂ
* ಒಟ್ಟು ಬಾಕಿ 33000 ಕೋಟಿ
ಹೀಗೆ ಪ್ರಮುಖ ಇಲಾಖೆಗಳಿಂದ ರಾಜ್ಯ ಗುತ್ತಿಗೆದಾರರಿಗೆ 33 ಸಾವಿರ ಕೋಟಿ ರೂಪಾಯಿ ಹಣ ಬಿಡುಗಡೆಯಾಗೋದು ಬಾಕಿ ಇದೆ. ಈ ಹಣವನ್ನು ಮುಂದಿನ ತಿಂಗಳಿನೊಳಗಾಗಿ ಬಿಡುಗಡೆ ಮಾಡಬೇಕೆಂದು ರಾಜ್ಯ ಗುತ್ತಿಗೆದಾರರು ಆಗ್ರಹಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.