/newsfirstlive-kannada/media/media_files/2025/09/08/mnd_ganesha-1-2025-09-08-11-05-15.jpg)
ಮದ್ದೂರಿನಲ್ಲಿ ಪ್ರತಿಭಟನೆ ತಾತ್ಕಾಲಿಕ ಸ್ಥಗಿತ
ಉದ್ವಿಗ್ನವಾಗಿದ್ದ ಮದ್ದೂರು ಟೌನ್ ಗೆ ಜೆಡಿಯು ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಭೇಟಿ ಕೊಟ್ಟಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ನಿಖಿಕ್ ಕುಮಾರಸ್ವಾಮಿ ಎಂಟ್ರಿ ಕೊಟ್ಟಿದ್ದಾರೆ. ಮದ್ದೂರು ತಾಲೂಕು ಕಚೇರಿ ಬಳಿ ಜನರನ್ನು ಉದ್ದೇಶಿಸಿ ನಿಖಿಲ್ ಕುಮಾರಸ್ವಾಮಿ ಮಾತನಾಡಿದ್ದಾರೆ.
ಕೆರೆಗೋಡು ಪ್ರಕರಣ, ನಾಗಮಂಗಲ ಗಣೇಶ ವಿಸರ್ಜನೆ ಪ್ರಕರಣದ ಬಳಿಕ ಈಗ ಮದ್ದೂರು ಗಣೇಶ ವಿಸರ್ಜನೆ ವೇಳೆ ಗಲಭೆಯಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಪಿತೂರಿ ಮಾಡಿ ಗಲಭೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಗಲಭೆ ಆರಂಭವಾಗಿದೆ . ಯಾವುದೋ ಒಂದು ಧರ್ಮವನ್ನ ಓಲೈಕೆ ಮಾಡಿಕೊಳ್ತಿದ್ದಾರೆ. ಧರ್ಮಸ್ಥಳ, ಚಾಮುಂಡಿ ಬೆಟ್ಟ ವಿಷಯಗಳಲ್ಲೂ ಸರ್ಕಾರ ಹಸ್ತಕ್ಷೇಪ ಮಾಡ್ತಿದೆ.
ಪೊಲೀಸ್ ಇಲಾಖೆ ಅಸಹಾಯಕವಾಗಿ ಕೆಲಸ ಮಾಡ್ತಿದೆ. ರಾಜ್ಯ ಸರ್ಕಾರದ ಒತ್ತಡಕ್ಕೆ ಮಣಿದು ಕಾಂಗ್ರೆಸ್ ಹೇಳಿದಂತೆ ಪೊಲೀಸರು ಕೇಳುತ್ತಿದ್ದಾರೆ. ಮಂಡ್ಯ ಜಿಲ್ಲಾಧಿಕಾರಿ ಅವರು ನಮ್ಮ ಡಿಮ್ಯಾಂಡ್ ಗೆ ಒಪ್ಪಿದ್ದಾರೆ. ಸಮಗ್ರ ತನಿಖೆ ನಡೆಸಿ , ಪ್ರಕರಣದಲ್ಲಿ ಭಾಗಿಯಾಗಿರುವ ಕಿಡಿಗೇಡಿಗಳನ್ನ ಬಂಧಿಸಬೇಕು . ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಅಂತ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಪೊಲೀಸರು ಯಾವುದೇ ಒತ್ತಡಕ್ಕೆ ಒಳಗಾಗಬಾರದು. ಪಿತೂರಿ ನಡೆಸುವವರ ವಿರುದ್ಧ ಅಗತ್ಯಕ್ರಮ ಆಗಲೇಬೇಕು. ಸಮಾಜಘಾತುಕ ಶಕ್ತಿಗಳ ವಿರುದ್ಧ ಕ್ರಮ ಆಗಬೇಕು . ಉಸ್ತುವಾರಿ ಸಚಿವರು, ಗೃಹಸಚಿವರ ಒತ್ತಡಕ್ಕೆ ಮಣಿದರೆ ನಾವು ಸುಮ್ಮನೆ ಕೂರಲ್ಲ. ಮಂಡ್ಯ ಜಿಲ್ಲೆಗೆ ಶಾಂತಿಗೆ ಹೆಸರುವಾಸಿಯಾದ ಜಿಲ್ಲೆ . ಜಿಲ್ಲೆಗೆ ಅಪಮಾನ ಮಾಡುವಂತಹ ಕೆಲಸ ಎಂದೂ ಆಗಬಾರದು ಎಂದು ಜೆಡಿಯು ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ನಿನ್ನೆಯಿಂದ ಅಶಾಂತಿ ವಾತಾವರಣ ನಿರ್ಮಾಣ ಆಗಿದೆ. ಎರಡು ವರ್ಷದಲ್ಲಿ ಮೂರು ಬಾರಿ ಈ ರೀತಿಯಾಗಿದೆ. ರಾಜ್ಯ ಸರ್ಕಾರ, ಗೃಹ ಸಚಿವರು ಅಸಮರ್ಥರಾಗಿದ್ದಾರೆ ಎಂದಿದ್ದಾರೆ.
ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮುಂದೆ ನಿಖಿಲ್ ಕುಮಾರಸ್ವಾಮಿ ಬೇಡಿಕೆ
ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮುಂದೆ ಹಲವು ಬೇಡಿಕೆಗಳನ್ನು ನಿಖಿಲ್ ಕುಮಾರಸ್ವಾಮಿ ಇಟ್ಟಿದ್ದಾರೆ.
ಕೋಮುಗಲಭೆ ಮಾಡಿದವರ ಬಂಧನ ಆಗಬೇಕು. ಪ್ರಕರಣದಲ್ಲಿ ಭಾಗಿಯಾದವರನ್ನ ಕೈ ಬಿಟ್ಟರೇ ಉಗ್ರ ಹೋರಾಟ ಮಾಡಬೇಕಾಗುತ್ತೆ. ಒತ್ತಡಕ್ಕೆ ಮಣಿದ್ರೆ ನಾವು ಕೈಕಟ್ಟಿ ಕೂರಲ್ಲ. ಮಚ್ಚು, ಲಾಂಗ್ ಸಂಸ್ಕೃತಿಯ ಕಿಡಿಗೇಡಿಗಳನ್ನ ಬಲಿ ಹಾಕಬೇಕು ಎಂದು ಪೊಲೀಸ್ ಇಲಾಖೆಗೆ ಹಾಗೂ ಮಂಡ್ಯ ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ. ನಿನ್ನೆ ಪ್ರಕರಣದಲ್ಲಿ ಭಾಗಿಯಾದ ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆ ಆಗಬೇಕು. ಕಲ್ಲು, ಮಚ್ಚು ಲಾಂಗ್ ನ ಸಂಸ್ಕೃತಿ ನಿಲ್ಲಬೇಕು. ಸಮಾಜಘಾತುಕ ಶಕ್ತಿಗಳನ್ನ ನಿಗ್ರಹ ಮಾಡಬೇಕು. ಈಗಾಗಲೇ ಪೊಲೀಸರಿಗೆ ಸ್ಪಷ್ಟ ಸಂದೇಶ ರವಾನೆ ಮಾಡಿದ್ದೇವೆ. ಉಸ್ತುವಾರಿ ಸಚಿವರು, ಸರ್ಕಾರ ಯಾರೂ ತನಿಖೆಗೆ ಪ್ರಭಾವ ಬೀರಬಾರದು. ಮಂಡ್ಯ ಶಾಂತಿಗೆ ಹೆಸರುವಾಸಿ ಆದ ಜಿಲ್ಲೆ. ಆ ಗೌರವ ಉಳಿಸಿಕೊಳ್ಳಬೇಕಾಗಿರೋದು ನಮ್ಮ ಜವಾಬ್ದಾರಿ. ಈಗಾಗಲೇ ನಾಳೆ ಬಂದ್ ಗೆ ಹಿಂದೂಪರ ಸಂಘಟನೆಗಳು ಕರೆ ಕೊಟ್ಟಿವೆ ಎಂದು ನಿಖಿಲ್ ಹೇಳಿದ್ದಾರೆ. ಮದ್ದೂರಿನಲ್ಲಿ ಶಾಂತಿ ಕದಡುವ ಕೆಲಸ ಆಗಿದೆ. ಹಿಂದೆ ಕೆರಗೋಡು, ನಾಗಮಂಗಲದಲ್ಲಿ ಗಲಭೆ ಮಾಡಿದ್ರು . ಈಗ ಮದ್ದೂರಿಗೂ ಕಾಲಿಟ್ಟಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಇಂತಹ ದಾಂಧಲೆ ಹೆಚ್ಚಾಗಿದೆ. ಸರ್ಕಾರ ತನಿಖೆಯಲ್ಲಿ ಪ್ರಭಾವ ಬೀರಿದ್ರೆ ರಾಜ್ಯಾದ್ಯಂತ ಹೋರಾಟ ಮಾಡ್ತೀವಿ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಮೈಸೂರು ಸಂಸದ ಯದುವೀರ್ ಪ್ರತಿಕ್ರಿಯೆ
ಮದ್ದೂರಿನಲ್ಲಿ ಗಣೇಶನ ಮೇಲೆ ಕಲ್ಲು ತೂರಾಟ ಹಿನ್ನಲೆಯಲ್ಲಿ ಮೈಸೂರು ಸಂಸದ ಯದುವೀರ್ ಒಡೆಯರ್ ಪ್ರತಿಕ್ರಿಯೆ ನೀಡಿದ್ದಾರೆ. ಕಲ್ಲು ತೂರಾಟ ಘಟನೆಯನ್ನು ಸಂಸದ ಯದುವೀರ್ ಒಡೆಯರ್ ಖಂಡಿಸಿದ್ದಾರೆ. ಸರ್ಕಾರ ಬೇಜವಾಬ್ದಾರಿ ಹೇಳಿಕೆ ಕೊಡೋದು ಬಿಟ್ಟು ತಪ್ಪಿತಸ್ಥರ ಮೇಲೆ ಕ್ರಮ ತಗೋಬೇಕು. ಈ ಕೂಡಲೇ ಕಲ್ಲು ಕಬ್ಬಿಣದ ರಾಡು ತೂರಿರುವವರನ್ನು ಬಂಧಿಸಬೇಕು. ಇದೊಂದು ಸಂಘಟಿತ ಕೃತ್ಯ . ಹಿಂದೂ ಕಾರ್ಯಕರ್ತರ ಭಾವನೆಗಳಿಗೆ ಧಕ್ಕೆ ತರುವ ಯತ್ನ. ಈ ಕೂಡಲೇ ಸರ್ಕಾರ ತಪ್ಪಿಸ್ಥರ ಮೇಲೆ ಕ್ರಮ ತಗೋಬೇಕು ಎಂದು ರಾಜ್ಯ ಸರ್ಕಾರಕ್ಕೆ ಸಂಸದ ಯದುವೀರ್ ಆಗ್ರಹಿಸಿದ್ದಾರೆ.
ಕಠಿಣ ಕ್ರಮದ ಭರವಸೆ ನೀಡಿದ ಜಿಲ್ಲಾಧಿಕಾರಿ ಡಾ.ಕುಮಾರ್
ಇನ್ನೂ ಪ್ರತಿಭಟನಾಕಾರರ ಮನವಿ ಸ್ವೀಕರಿಸಿದ ಬಳಿಕ ಡಿಸಿ ಡಾ.ಕುಮಾರ್ ಭಾಷಣ ಮಾಡಿದ್ದಾರೆ.
ಮದ್ದೂರು ಪಟ್ಟಣದಲ್ಲಿ ನಡೆದ ಅಹಿತಕರ ಘಟನೆಗೆ ವಿಷಾದ ವ್ಯಕ್ತಪಡಿಸುತ್ತೇವೆ. ನಿನ್ನೆಯಿಂದ ಜಿಲ್ಲಾಡಳಿತ, ಪೊಲೀಸರು ಎರಡು ಪ್ರಕರಣ ದಾಖಲಿಸಿದ್ದೇವೆ. ಈಗಾಗಲೇ 21 ಜನರನ್ನ ಬಂಧಿಸಿದ್ದೇವೆ. ಇನ್ನೂ ಪರಿಶೀಲನೆ ಮಾಡುತ್ತಿದ್ದೇವೆ. ಕಿಡಿಗೇಡಿಗಳನ್ನ ನಾವು ಎಂದಿಗೂ ಸಹಿಸುವುದಿಲ್ಲ. ಅವರ ಮೇಲೆ ಕಠಿಣ ಕ್ರಮಕೈಗೊಳ್ಳುತ್ತೇವೆ. ಮುಂದಿನ ದಿನಗಳಲ್ಲೂ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಮಂಡ್ಯ ಜಿಲ್ಲಾಧಿಕಾರಿ ಕುಮಾರ ಪ್ರತಿಭಟನಾಕಾರರಿಗೆ ಭರವಸೆ ನೀಡಿದ್ದಾರೆ.
ಬೇಲ್ ಸಿಗದಂತೆ ಸೆಕ್ಷನ್ ಹಾಕುವ ಭರವಸೆ ಕೊಟ್ಟ ಮಂಡ್ಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ
ಮಂಡ್ಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಕೂಡ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಘಟನೆ ನಡೆದ ತಕ್ಷಣ ಪ್ರಮುಖ ಆರೋಪಿಗಳನ್ನ ಬಂಧಿಸಿದ್ದೇವೆ. ಸಿಸಿಟಿವಿ ದೃಶ್ಯ, ಮೊಬೈಲ್ ವಿಡಿಯೋ ಆಧರಿಸಿ ಅರೆಸ್ಟ್ ಮಾಡಲಾಗಿದೆ. ಇನ್ನೂ ಹಲವು ಆರೋಪಿಗಳನ್ನ ಬಂಧಿಸುತ್ತೇವೆ. ಬೇಲ್ ಸಿಗದಂತೆ ಸೆಕ್ಷನ್ ಗಳನ್ನ ಹಾಕಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುತ್ತೇವೆ. ಕುಮ್ಮಕ್ಕು ಕೊಟ್ಟವರ ವಿರುದ್ದ ನಾವು ಕ್ರಮಕೈಗೊಳ್ಳುತ್ತೇವೆ. ನಮಗೆ ಸಹಕಾರ ಕೊಟ್ಟು ಶಾಂತ ರೀತಿಯಲ್ಲಿ ವರ್ತಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಮಧ್ಯಾಹ್ನದ ಬಳಿಕ ಪ್ರತಿಭಟನೆ ಸ್ಥಗಿತ
ಪೊಲೀಸರ ಮನವಿಗೆ ಸ್ಪಂದಿಸಿ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಮಧ್ಯಾಹ್ನದ ಬಳಿಕ ಸ್ಥಗಿತಗೊಳಿಸಿವೆ. ಹಿಂದೂ ಪರಸಂಘಟನೆಗಳು, ಬಿಜೆಪಿ, ಜೆಡಿಎಸ್ ಪಕ್ಷದ ಕಾರ್ಯಕರ್ತರು ಪ್ರತಿಭಟನೆಯನ್ನು ಸ್ಥಗಿತಗೊಳಿಸಿದ್ದಾರೆ. ನಾಳೆ ಮದ್ದೂರು ಬಂದ್ ಗೆ ಹಿಂದೂ ಪರ ಸಂಘಟನೆಗಳು ಕರೆ ಕೊಟ್ಟಿವೆ. ಇಂದು ಮಧ್ಯಾಹ್ನ 3 ಗಂಟೆಯ ಬಳಿಕ ಪ್ರತಿಭಟನೆಗೆ ತಾತ್ಕಾಲಿಕ ವಿರಾಮ ಬಿದ್ದಿದೆ. ಪೊಲೀಸರು ಕ್ರಮಕೈಗೊಳ್ಳುವ ಭರವಸೆ ಕೊಟ್ಟ ಬಳಿಕ ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ. ನಾಳೆ ಸ್ವಯಂಪ್ರೇರಿತವಾಗಿ ಬಾಗಿಲು ಮುಚ್ಚುವಂತೆ ವರ್ತಕರಲ್ಲಿ ಪ್ರತಿಭಟನಾಕಾರರು ಮನವಿ ಮಾಡಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.