/newsfirstlive-kannada/media/media_files/2025/08/25/mla-veerendra-pappy-arrest-2025-08-25-13-37-04.jpg)
ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಮನೆ ಮೇಲೆ ಮತ್ತೆ ಇ.ಡಿ. ದಾಳಿ
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ ಮನೆ ಮೇಲೆ ಮತ್ತೆ ಇ.ಡಿ. ( ಜಾರಿ ನಿರ್ದೇಶನಾಲಯ) ಅಧಿಕಾರಿಗಳು ಇಂದು ದಾಳಿ ಮಾಡಿದ್ದಾರೆ. ಚಳ್ಳಕೆರೆಯ ಹಳೇ ಟೌನ್ ಮನೆ ಮೇಲೆ ಮತ್ತೆ ಇ.ಡಿ ಅಧಿಕಾರಿಗಳು ದಾಳಿ ಮಾಡಿ ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಕಳೆದ ವಾರವೂ ಚಳ್ಳಕೆರೆ, ಚಿತ್ರದುರ್ಗ, ಬೆಂಗಳೂರು, ಗೋವಾ, ಸಿಕ್ಕಿಂ ಸೇರಿದಂತೆ 31 ಸ್ಥಳಗಳ ಮೇಲೆ ಇ.ಡಿ. ಅಧಿಕಾರಿಗಳು ದಾಳಿ ಮಾಡಿ ಶೋಧ ಕಾರ್ಯಾಚರಣೆಯನ್ನು ನಡೆಸಿದ್ದರು. ಬಳಿಕ ಸಿಕ್ಕಿಂನ ಗ್ಯಾಂಗ್ಟಕ್ ನಿಂದ ಶಾಸಕ ವೀರೇಂದ್ರ ಪಪ್ಪಿಯನ್ನು ಬೆಂಗಳೂರಿಗೆ ಕರೆ ತಂದು ಬಂಧಿಸಿ ಕೋರ್ಟ್ ಗೆ ಹಾಜರುಪಡಿಸಿದ್ದರು.
ಈಗ ಎರಡನೇ ಭಾರಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇಂದು ದಾಳಿ ನಡೆಸಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹೋದೆಯಾ ಪಿಶಾಚಿ ಅಂದ್ರೆ, ಗವಾಕ್ಷಿಲಿ ಬಂದೆ ಅಂದಿತಂತೆ, ಹಾಂಗೆ ಶಾಸಕ ವೀರೇಂದ್ರ ಪಪ್ಪಿ ಹಾಗೂ ಕುಟುಂಬಕ್ಕೆ ಇ.ಡಿ. ದಾಳಿ ಮುಗಿಯಿತು ಎಂದುಕೊಂಡು ತೆಪ್ಪಗಿದ್ದವರಿಗೆ ಮತ್ತೆ ಇ.ಡಿ. ಅಧಿಕಾರಿಗಳು ದಾಳಿ ಮಾಡಿ ಬಿಸಿ ಮುಟ್ಟಿಸಿದ್ದಾರೆ.
ಕಳೆದ ವಾರ ಇ.ಡಿ.ಯಿಂದ ಬಂಧನಕ್ಕೊಳಗಾಗಿರುವ ಶಾಸಕ ವೀರೇಂದ್ರ ಪಪ್ಪಿ ಇನ್ನೂ ಇ.ಡಿ. ಅಧಿಕಾರಿಗಳ ವಶದಲ್ಲೇ ಇದ್ದಾರೆ. ಕೋರ್ಟ್ ನಲ್ಲಿ ಬೇಲ್ ಕೂಡ ಸಿಕ್ಕಿಲ್ಲ. ಇ.ಡಿ. ಅಧಿಕಾರಿಗಳ ವಶದಲ್ಲಿರುವಾಗಲೇ ಎರಡನೇ ಭಾರಿಗೆ ಇ.ಡಿ. ದಾಳಿಯಾಗಿದೆ. ಆನ್ ಲೈನ್ ಬೆಟ್ಟಿಂಗ್ & ಅಕ್ರಮ ಹಣ ವರ್ಗಾವಣೆ ಕೇಸ್ ಹಿನ್ನೆಲೆ ದಾಳಿ ಮುಂದುವರಿದಿದೆ. ಇಂದು ಮತ್ತೆ ಮನೆಯಲ್ಲಿ ಇ.ಡಿ. ಅಧಿಕಾರಿಗಳಿಂದ ದಾಖಲೆ ಪರಿಶೀಲನೆ ಮುಂದುವರಿದಿದೆ. ಶಾಸಕರ 4 ಐಶಾರಾಮಿ ಕಾರ್ ಗಳನ್ನ ಜಪ್ತಿ ಮಾಡುವ ಸಾಧ್ಯತೆ ಇದೆಯಂತೆ. ಆಗಸ್ಟ್ 22 ರಂದು ದಾಳಿ ಮಾಡಿ ದಾಖಲೆ ಕಲೆ ಹಾಕಿ, ಕಾರುಗಳ ಪರಿಶೀಲನೆಯನ್ನು ಇ.ಡಿ.( ಜಾರಿ ನಿರ್ದೇಶನಾಲಯ) ಅಧಿಕಾರಿಗಳು ಮಾಡಿದ್ದರು.
ಇ.ಡಿ. ವಶದಲ್ಲಿರುವ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ವಿಚಾರಣೆಯನ್ನು ಇ.ಡಿ. ಅಧಿಕಾರಿಗಳು ಮುಂದುವರಿಸಿದ್ದಾರೆ. ವಿಚಾರಣೆಯ ಬಳಿಕ ಈಗ ದಾಳಿಯನ್ನು ಮುಂದುವರಿಸಿದ್ದಾರೆ. ಶಾಸಕ ಕೆ.ಸಿ. ವೀರೇಂದ್ರ ವಿಚಾರಣೆ ಆಧರಿಸಿ ಮತ್ತೆ ದಾಳಿ ಮಾಡಿ ಇ.ಡಿ. ಶೋಧ ನಡೆಸುತ್ತಿದೆ. ಐಶಾರಾಮಿ ಕಾರುಗಳ ಕುರಿತು ಪರಿಶೀಲನೆಯನ್ನು ಇ.ಡಿ. ಅಧಿಕಾರಿಗಳು ಮಾಡುತ್ತಿದ್ದಾರೆ. ಇಂದು ಆರು ಕಾರುಗಳಲ್ಲಿ ಹತ್ತಕ್ಕು ಹೆಚ್ಚು ಇ.ಡಿ. ಅಧಿಕಾರಿಗಳು ಚಿತ್ರದುರ್ಗ ಹಾಗೂ ಚಳ್ಳಕೆರೆಗೆ ಬಂದಿದ್ದಾರೆ. ಕಾರುಗಳನ್ನ ಜಪ್ತಿ ಮಾಡಲು ಡ್ರೈವರ್ ಗಳ ಸಮೇತ ಇ.ಡಿ. ಅಧಿಕಾರಿಗಳು ಬಂದಿದ್ದಾರೆ. ಮನೆ ಮಾತ್ರವಲ್ಲದೇ ಬ್ಯಾಂಕ್ ಖಾತೆಗಳ ಕುರಿತು ಮಾಹಿತಿ ಇ.ಡಿ. ಸಂಗ್ರಹಿಸುತ್ತಿದೆ. ಚಳ್ಳಕೆರೆ ನಗರದ ಕೋಟೆಕ್ ಮಹೇಂದ್ರ ಬ್ಯಾಂಕ್ ಹಾಗೂ ಆಕ್ಸಿಸ್ ಬ್ಯಾಂಕ್ ಗೆ ಇ.ಡಿ. ಅಧಿಕಾರಿಗಳು ತೆರಳಿದ್ದಾರೆ. ಬ್ಯಾಂಕ್ ನಲ್ಲಿ ವೀರೇಂದ್ರ ಪಪ್ಪಿ ಹಾಗೂ ಅವರ ಕುಟುಂಬ ಸದಸ್ಯರ ಹಣ ವರ್ಗಾವಣೆ ಬಗ್ಗೆ ಮಾಹಿತಿ, ದಾಖಲೆಯನ್ನ ಕಲೆ ಹಾಕುತ್ತಿದ್ದಾರೆ. 17 ಬ್ಯಾಂಕ್ ಖಾತೆಗಳ ಮೂಲಕ ಆಗಿರುವ ಹಣಕಾಸು ವರ್ಗಾವಣೆ ಬಗ್ಗೆ ಮಾಹಿತಿ, ದಾಖಲೆಯನ್ನು ಸಂಗ್ರಹಿಸುತ್ತಿದ್ದಾರೆ. ಬೆಟ್ಟಿಂಗ್ ಆ್ಯಪ್ ಗಳ ಮೂಲಕ ಗಳಿಸಿದ ಹಣವನ್ನು ಈ ಬ್ಯಾಂಕ್ ಖಾತೆಗಳ ಮೂಲಕ ವರ್ಗಾವಣೆ ಮಾಡಿದ್ದಾರೆ. ಶಾಸಕ ವೀರೇಂದ್ರ ಪಪ್ಪಿ ಹಾಗೂ ಸೋದರರು ಆನ್ ಲೈನ್ ಮತ್ತು ಆಫ್ ಲೈನ್ ಬೆಟ್ಟಿಂಗ್ ವ್ಯವಹಾರವನ್ನು ಆಕ್ರಮವಾಗಿ ಮಾಡಿದ್ದಾರೆ ಎಂದು ಇ.ಡಿ. ಕಳೆದ ತಿಂಗಳು ಹೇಳಿತ್ತು. ಹೀಗಾಗಿ ಬೆಟ್ಟಿಂಗ್ ಮೂಲಕ ಗಳಿಸಿದ ಹಣವನ್ನು ಎಲ್ಲೆಲ್ಲಿ ವರ್ಗಾವಣೆ ಮಾಡಲಾಗಿದೆ? ಎಷ್ಟು ಹಣವನ್ನು ಆಕ್ರಮವಾಗಿ ವರ್ಗಾವಣೆ ಮಾಡಲಾಗಿದೆ ಎಂಬ ಬಗ್ಗೆಯೇ ಇ.ಡಿ.( ಜಾರಿ ನಿರ್ದೇಶನಾಲಯ, Enforcement directorate) ತನಿಖೆ ಮಾಡುತ್ತಿದೆ.
ಕಾಲೇಜು ದಿನಗಳಿಂದಲೇ ವೀರೇಂದ್ರ ಪಪ್ಪಿ ಬಡ್ಡಿ ವ್ಯವಹಾರ ಮಾಡುತ್ತಿದ್ದರು. ಬಳಿಕ ಕ್ಯಾಸಿನೋಗಳನ್ನು ಗೋವಾದಲ್ಲಿ ನಡೆಸುತ್ತಿದ್ದರು. ವಿದೇಶಗಳಲ್ಲಿ ವೀರೇಂದ್ರ ಪಪ್ಪಿ ಮಾಲೀಕತ್ವದ ಕ್ಯಾಸಿನೋಗಳಿವೆ. ಜೊತೆಗೆ ಬೆಟ್ಟಿಂಗ್ ವ್ಯವಹಾರ ಕೂಡ ಮಾಡುತ್ತಿದ್ದರು ಎಂದು ಜಾರಿ ನಿರ್ದೇಶನಾಲಯ ಹೇಳಿದೆ.
ಚಿತ್ರದುರ್ಗ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಮನೆ ಮೇಲೆ ಮತ್ತೆ ಇ.ಡಿ. ದಾಳಿ.
ಇದರ ಜೊತೆಗೆ ಚಿತ್ರದುರ್ಗದ ಪೋಸ್ಟ್ ಆಫೀಸ್‌ಗೂ ಇ.ಡಿ. ಅಧಿಕಾರಿಗಳು ಭೇಟಿ ಕೊಟ್ಟಿದ್ದಾರೆ. ಅಂಚೆ ಕಚೇರಿಯಲ್ಲಿ ಶಾಸಕ ವೀರೇಂದ್ರ ಪಪ್ಪಿ ಹಾಗೂ ಅವರ ಕುಟುಂಬ ಸದಸ್ಯರ ಅಂಚೆ ಕಚೇರಿ ಠೇವಣಿಯ ವಿವರಗಳನ್ನು ಕಲೆ ಹಾಕುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ