/newsfirstlive-kannada/media/media_files/2025/09/18/rera-3-2025-09-18-11-23-28.jpg)
ರೇರಾ ಅಧ್ಯಕ್ಷ ರಾಕೇಶ್ ಸಿಂಗ್, ಸಚಿವ ಜಮೀರ್
ರೇರಾ ಅಕ್ರಮದ ಮುಂದುವರೆದ ಭಾಗ ಇದು. ನಿನ್ನೆಯಷ್ಟೇ ರೇರಾ ಅಕ್ರಮಗಳ ಬಗ್ಗೆ ವಿಸ್ತೃತ ವರದಿಯನ್ನು ನ್ಯೂಸ್ ಫಸ್ಟ್ ಪ್ರಸಾರ ಮಾಡಿತ್ತು. ಗ್ರಾಹಕರು, ಫ್ಲಾಟ್ ಖರೀದಿದಾರರಿಗೆ ಆಗ್ತಿರುವ ಅನ್ಯಾಯದ ಬಗ್ಗೆ ನ್ಯೂಸ್ ಫಸ್ಟ್ ವರದಿ ಪ್ರಸಾರ ಮಾಡಿತ್ತು. ಅಧಿಕಾರಿಗಳಿಂದ ಸಚಿವರವರೆಗೂ ಕಮಿಷನ್ ಫಿಕ್ಸ್ ಬಗ್ಗೆಯೂ ನ್ಯೂಸ್ ಫಸ್ಟ್ ಮಾಹಿತಿಯನ್ನು ಬಹಿರಂಗಪಡಿಸಿತ್ತು. ನ್ಯೂಸ್ ಫಸ್ಟ್ ವರದಿಯು ಶೇ.100 ರಷ್ಟು ನಿಜ ಎಂದು ವಿರೋಧ ಪಕ್ಷದ ನಾಯಕರು ವಾಗ್ದಾಳಿ ನಡೆಸಿದ್ದಾರೆ. ವಸತಿ ಇಲಾಖೆಯ ಸಚಿವ ಜಮೀರ್ ಅಹಮದ್ ಅವರ ಇಲಾಖೆಯಡಿ ಬರುವ ರೇರಾ ಬಗ್ಗೆ ವಿರೋಧ ಪಕ್ಷದ ನಾಯಕರು ವಾಗ್ದಾಳಿ ನಡೆಸಿದ್ದಾರೆ. ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ರೇರಾ ಜನಸಾಮಾನ್ಯರ ಪರ ಕೆಲಸ ಮಾಡುತ್ತಿಲ್ಲ. ಜನ ಸಾಮಾನ್ಯರು, ನಿವೇಶನ ಖರೀದಿದಾರರು, ಪ್ಲ್ಯಾಟ್, ಮನೆ ಖರೀದಿದಾರರ ಹಿತಾಸಕ್ತಿಯನ್ನು ರಕ್ಷಿಸುವ ಕೆಲಸ ಮಾಡುತ್ತಿಲ್ಲ. ಬಿಲ್ಡರ್ , ಲೇಔಟ್ ಡೆವಲಪರ್ ಗಳ ಪರ ರೇರಾ ನಿಂತಿದೆಯಾ ಎಂಬ ಅನುಮಾನ ಅದರ ಕಾರ್ಯವೈಖರಿಯನ್ನು ಹತ್ತಿರದಿಂದ ನೋಡಿದವರಿಗೆ ಬಂದಿದೆ. ಪ್ರತಿ ಪ್ರಾಜೆಕ್ಟ್ ಅಪ್ರೂವಲ್‌ಗೆ , ಅನುಮತಿಗೆ ಕೋಟ್ಯಾಂತರ ರೂಪಾಯಿ ಹಣವನ್ನು ಲಂಚವಾಗಿ ನೀಡಬೇಕು. ರೇರಾದಲ್ಲಿ ಯಾವುದೂ ಜನರಿಗೆ ಫ್ರೀಯಾಗಿ ಸಿಗಲ್ಲ. ಫ್ರೀಯಾಗಿ ಯಾವ ಕೆಲಸವೂ ಆಗಲ್ಲ. ಪ್ರತಿ ಟೇಬಲ್ ಗೆ ಇಂತಿಷ್ಟು ಎಂದು ಲಂಚದ ಹಣ ಫಿಕ್ಸ್ ಆಗಿದೆ. ಲೇಔಟ್ ನಿರ್ಮಾಣ ಮಾಡುವವರು ಸೈಟ್ ಲೆಕ್ಕದಲ್ಲಿ, ಅಪಾರ್ಟ್ ಮೆಂಟ್ ಗಳಾದರೇ, ಪ್ಲ್ಯಾಟ್ ಲೆಕ್ಕದಲ್ಲಿ ಲಂಚ ಫಿಕ್ಸ್ ಆಗಿದೆ. ಅಂತಿಮವಾಗಿ ಈ ಲಂಚಾವತಾರದ ಹೊರೆ ಬೀಳೋದು ನಿವೇಶನ, ಪ್ಲ್ಯಾಟ್ ಖರೀದಿಸುವ ಗ್ರಾಹಕರ ಮೇಲೆ ಎಂಬುದು ಕಟು ಸತ್ಯ. ಬೆಂಗಳೂರು ನಗರದಲ್ಲಿ ಮಿತಿ ಮೀರಿದ ಸೈಟ್ ಮತ್ತು ಫ್ಲಾಟ್ ಗಳ ಬೆಲೆ ಏರಿಕೆಗೆ ವಸತಿ ಇಲಾಖೆ ಹಾಗೂ ರೇರಾ ಭ್ರಷ್ಟಾಚಾರವೂ ಪ್ರಮುಖ ಕಾರಣ.
ಇದರ ಬಗ್ಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ. ರೇರಾ ಕಲೆಕ್ಷನ್ ಸೆಂಟರ್ ಎಂದು ಆರ್.ಅಶೋಕ್ ಲೇವಡಿ ಮಾಡಿದ್ದಾರೆ. ರೇರಾ ಜಾರಿಗೆ ತಂದಿದ್ದು ಪ್ಲಾಟ್ ಖರೀದಿ ಮಾಡಿದವರಿಗೆ ಮೋಸ ಆಗಬಾರದು ಅಂತ ಜಾರಿಗೆ ತರಲಾಗಿತ್ತು. ಕರ್ನಾಟಕದಲ್ಲಿ ಮಾತ್ರ ರೇರಾ ವಸೂಲಿ ಕೇಂದ್ರ ಆಗಿದೆ. ಫ್ಲಾಟ್ ಗೆ ಇಂತಿಷ್ಟು ಅಂತ ದುಡ್ಡು ಫಿಕ್ಸ್ ಮಾಡಿ ವಸೂಲಿ ಮಾಡ್ತಿದ್ದಾರೆ. ರೇರಾ ಈಗ ಹಣ ವಸೂಲಿ ಮಾಡುವ ಕಲೆಕ್ಷನ್ ಸೆಂಟರ್ ಆಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಇನ್ನೂ ನ್ಯೂಸ್ ಫಸ್ಟ್ ನಲ್ಲಿ ರೇರಾ ಬಗ್ಗೆ ವರದಿ ಪ್ರಸಾರದ ಬೆನ್ನಲ್ಲೇ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಈ ಸರ್ಕಾರವೇ ಒಂದು ಅಕ್ರಮ ಸರ್ಕಾರ. ಸತ್ಯ ಹೇಳಿ ಒಳ್ಳೆಯ ಕೆಲಸ ಮಾಡಿ ಅಧಿಕಾರಕ್ಕೆ ಬಂದ ಸರ್ಕಾರ ಅಲ್ಲ. ಸುಳ್ಳು ಹೇಳಿ ಬಂದ ಸರ್ಕಾರ ಇದು. ಸುಳ್ಳಿಗಾಗಿಯೇ ಒಂದು ಸರ್ಕಾರ ಬಂದಿದೆ. ಇನ್ಮುಂದೆ ನಮ್ಮ ಸರ್ಕಾರ ಬರಲ್ಲ ಅಂತ ಗೊತ್ತಾಗಿದ್ದು, ಎಷ್ಟು ಬೇಕಾದರೂ ಅಕ್ರಮ ಮಾಡಿಕೊಳ್ಳುವುದು ಅನ್ನೋ ಉದ್ದೇಶ ಅವರದ್ದು. ಹೀಗಾಗಿ ಎಲ್ಲರೂ ಲೂಟಿಯಲ್ಲಿ ತೊಡಗಿದ್ದಾರೆ. ಯಾವುದೇ ಇಲಾಖೆಗೆ ಹೋದರು ಎಲ್ಲರೂ ಲೂಟಿಯಲ್ಲಿ ತೊಡಗಿದ್ದಾರೆ. ಹೀಗೆ ಲೂಟಿ ಮಾಡುವವರಿಗೂ ಸರ್ಕಾರ ಕ್ಲೀನ್ ಚಿಟ್ ಕೊಡ್ತಿದೆ ಎಂದು ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಇನ್ನೂ ನ್ಯೂಸ್ ಫಸ್ಟ್ ರೇರಾದ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ರಾಜ್ಯದ ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರನ್ನು ಬಿಡದೇ ಪ್ರಶ್ನಿಸಿತ್ತು. ಆದರೇ, ಜಮೀರ್ ಅಹಮದ್ ಖಾನ್, ಸಬೂಬು ಹೇಳಿ ಜಾರಿಕೊಂಡರು. ಅಧಿಕಾರಿಗಳ ಜೊತೆಗೆ ಮಾತನಾಡಿದ್ದೀನಿ. ಸಂಜೆ 6 ಗಂಟೆಗೆ ಸಭೆ ಕರೆದಿದ್ದೀನಿ ಎಂದು ಹೇಳಿದ್ದರು. ಆದರೇ, ಯಾವುದೇ ಸಭೆಯನ್ನು ಕೂಡ ವಸತಿ ಸಚಿವ ಜಮೀರ್ ಅಹಮದ್ ಖಾನ್ ಕರೆಯಲೂ ಇಲ್ಲ. ಸಭೆ ನಡೆಸಲೂ ಇಲ್ಲ.
ಇನ್ನೂ ನಿವೇಶನ ಖರೀದಿದಾರರು, ಪ್ಲ್ಯಾಟ್ ಖರೀದಿದಾರರಿಗೆ ರೇರಾದಿಂದ ನ್ಯಾಯ ಸಿಗುತ್ತಿಲ್ಲ. ಬರೀ ಅನ್ಯಾಯವೇ ಆಗುತ್ತಿದೆ. ಯಾವುದೇ ನಿಯಮಗಳನ್ನು ಪಾಲಿಸುತ್ತಿಲ್ಲ. ಇದು ಕೂಡ ಭ್ರಷ್ಟಾಚಾರದ ಮತ್ತೊಂದು ಏಜೆನ್ಸಿಯಾಗಿದೆ. ರೇರಾದ ಆಕ್ರಮಗಳ ಬಗ್ಗೆ ಸರ್ಕಾರಕ್ಕೆ ಗೊತ್ತಿಲ್ಲ ಎಂದೇನೂ ಇಲ್ಲ. ಆದರೇ, ರಾಜ್ಯ ಸರ್ಕಾರವು ಜಾಣ ಕಿವುಡ, ಮೂಕನಾಗಿದೆ. ಜನ ಸಾಮಾನ್ಯರ ಆರೋಪ, ವಿರೋಧ ಪಕ್ಷಗಳ ಆರೋಪಕ್ಕೆ ರಾಜ್ಯ ಸರ್ಕಾರವೇ ಉತ್ತರ ನೀಡಬೇಕಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ