/newsfirstlive-kannada/media/media_files/2026/01/05/devaraj-urs-and-siddaramaiah-2026-01-05-16-29-48.jpg)
ದೇವರಾಜ ಅರಸ್ ಹಾಗೂ ಸಿಎಂ ಸಿದ್ದರಾಮಯ್ಯ
ಸಿದ್ದರಾಮಯ್ಯ. ಅಹಿಂದ ಕೋಟೆ ಕಟ್ಟಿ ಚಕ್ರಾಧಿಪತಿಯಾದ ಚಕ್ರವರ್ತಿ.. ಕಾಂಗ್ರೆಸ್​​​ ಅನ್ನು ಪುನರುತ್ಥಾನ ಮಾಡಿದ ಚಾಣಾಕ್ಯ ನಾಯಕ.. ಕರ್ನಾಟಕದಲ್ಲಿ ಸಿದ್ದು ಇಲ್ಲದ ರಾಜಕೀಯ ಚರಿತ್ರೆ ಅಪೂರ್ಣ ಅನ್ನುವಷ್ಟರ ಮಟ್ಟಿಗೆ ಆಳವಾಗಿ ಛಾಪು ಮೂಡಿಸಿದ ಛಲದಂಕಮಲ್ಲ.. ಸಿದ್ದರಾಮಯ್ಯ ಜಪಿಸಿದ ಜನಪರ ಆಡಳಿತ, ಸಮರ್ಥ ನಾಯಕತ್ವ ಅಸಂಖ್ಯಾ ದೀನರ ಬದುಕಿಗೆ ಭರವಸೆಯ ಧಾರೆ ಎರೆದಿದೆ.. ಭಾಗ್ಯಗಳ ಒಡೆಯ ಸಿದ್ದರಾಮಯ್ಯ ನಾಳೆ ರಾಜ್ಯದಲ್ಲಿ ಹೊಸ ದಾಖಲೆ ಬರೆಯಲಿದ್ದಾರೆ..
ನಾಳೆ ರಾಜ್ಯ ರಾಜಕೀಯ ಇತಿಹಾಸದಲ್ಲಿ ಮೈಲುಗಲ್ಲು ಸ್ಥಾಪನೆ!
ಅರಸು ದಾಖಲೆ ಬ್ರೇಕ್ ಮಾಡಲಿದ್ದಾರೆ ಸಿಎಂ ಸಿದ್ದರಾಮಯ್ಯ!
ಉಳುವವನೇ ಹೊಲದೊಡೆಯ.. ಇದು ಅರಸು ಭಿತ್ತಿದ ಕ್ರಾಂತಿಕಾರಿ ಬೀಜ.. ಕರ್ನಾಟಕದಲ್ಲಿ ಬಿತ್ತನೆ ಆದ ಈ ಬೀಜ ಹೊನ್ನಕಳಸದಂತ ಫಲ ನೀಡಿದ ಕಿರಿಟಪ್ರಾಯದ ಯೋಜನೆ.. ಕಾನೂನಿನ ಮೂಲಕ ಭೂಮಿ ಮರುಹಂಚಿ, ಸಾಮಾಜಿಕ ಬದಲಾವಣೆ ಕ್ರಾಂತಿಯ ಹೆಜ್ಜೆ ಇಟ್ಟಿದ್ದು ಇತಿಹಾಸ.. ಅದೇ ದಿಕ್ಕಿನಲ್ಲಿ ರಾಜಕೀಯ ಅರಸಿದ ಸಿದ್ದರಾಮಯ್ಯ, ಭೂಮಿಗಿಂತ ಹೆಚ್ಚಾಗಿ ಸರ್ಕಾರದ ಸಂಪನ್ಮೂಲಗಳನ್ನು ನೇರವಾಗಿ ಜನರಿಗೆ ತಲುಪಿಸುವ ಗ್ಯಾರಂಟಿಗಳ ಹರಿಕಾರ..
ಅಹಿಂದ ಎಂಬ ಗುಪ್ತಗಂಗೆಯ ಮತಬ್ಯಾಂಕ್​​​ನ್ನ ಸೃಷ್ಟಿಸಿದ ಅರಸು, ಆ ಪರಿಕಲ್ಪನೆಯ ಜನ್ಮದಾತ.. ಪ್ರಬಲ ಜಾತಿಗಳ ವಿರುದ್ಧ ಈಜಿದ ಜನ ರಾಜಕಾರಣಿಯಾಗಿ ಮಿಂಚಿದ್ರು.. ಈಗ ಸಿದ್ದರಾಮಯ್ಯ ಸಹ ಅದೇ ಸಿದ್ಧಾಂತವನ್ನ ಆಧುನಿಕ ರಾಜಕಾರಣದಲ್ಲಿ ಮರುಸ್ಥಾಪಿಸಿ, ಆ ವರ್ಗಗಳ ಪ್ರಶ್ನಾತೀತ ನಾಯಕರಾಗಿ ಹೊರಹೊಮ್ಮಿದ್ದು ಚರಿತ್ರೆ.. ಈಗ ಅರಸು ಅವಧಿಯ ದಾಖಲೆಯನ್ನ ಸಿದ್ದರಾಮಯ್ಯ ಮುರಿಯುತ್ತಿದ್ದಾರೆ..
ಅರಸು ಮೇಲೆ ಮಾರ್ಕ್ಸ್​​​​ ಸಿದ್ಧಾಂತದ ದಟ್ಟ ಪ್ರಭಾವ ಆವರಿಸಿದ್ರೆ, ಸಿದ್ದರಾಮಯ್ಯರಿಗೆ ಆಕರ್ಷಿಸಿದ್ದು ಲೋಹಿಯಾರ ಸಮಾಜವಾದಿ ಸಿದ್ಧಾಂತ.. ಇಬ್ಬರದ್ದು ಒಂದೇ ಜಿಲ್ಲೆ.. ಆದ್ರೆ, ಸಾಮಾಜಿಕ ಅಂತಸ್ತಿನಲ್ಲಿ ಭಿನ್ನತೆ.. ಅರಸು ಮೇಲ್ವರ್ಗದ ಅತ್ಯಂತ ಚಿಕ್ಕ ಸಮುದಾಯದ ಸಿರಿತನದಿಂದ ಬಂದು ಕೆಳಜಾತಿಗಳನ್ನ ಸಂಘಟಿಸಿದ ಚತುರ.. ಆದ್ರೆ ಸಿದ್ದರಾಮಯ್ಯ, ಪ್ರಬಲ ಹಿಂದುಳಿದ ಸಮುದಾಯದಿಂದ ಬಂದ ಬಡತನದ ಬೇಗೆಯಲ್ಲಿ ಬೆಂದು ಬೆಳೆದ ನಾಯಕ. ಇಬ್ಬರು ತಮ್ಮ ರಾಷ್ಟ್ರೀಯ ನಾಯಕರ ಜೊತೆ ಸಂಘರ್ಷ ನಡೆಸಿ ಒಬ್ರು ಅಧಿಕಾರ ಕಳೆದ್ಕೊಂಡ್ರೆ ಇನ್ನೊಬ್ರು, ಅಧಿಕಾರದ ಸಿಂಹಾಸನ ಅಲಂಕರಿಸಿದ್ರು..
ಅತೀ ಹೆಚ್ಚು ಅವಧಿ ರಾಜ್ಯದ ಮುಖ್ಯಮಂತ್ರಿಯ ದಾಖಲೆ ನಾಳೆ ಬ್ರೇಕ್​​ ಆಗಲಿದೆ.. ಕರ್ನಾಟಕದಲ್ಲಿ ಸುದೀರ್ಘ ಅವಧಿಗೆ ಸಿಎಂ ಆಗಿದ್ದ ದಾಖಲೆ ದೇವರಾಜ ಅರಸ್ ಅವರ ಹೆಸರಿನಲ್ಲಿದೆ. ದೇವರಾಜ ಅರಸ್ ಅವರು ಕರ್ನಾಟಕದಲ್ಲಿ 2,792 ದಿನಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಈಗ ನಾಳೆ ಸಿಎಂ ಸಿದ್ದರಾಮಯ್ಯ ಆ ದಾಖಲೆಯನ್ನು ಮುರಿಯುತ್ತಿದ್ದಾರೆ. ತಮ್ಮದೇ ತವರು ಜಿಲ್ಲೆಯ ದಿ. ದೇವರಾಜ ಅರಸು ಅವರನ್ನ ದಾಖಲೆಯನ್ನ ನಲ್ವತ್ತು ವರ್ಷಗಳ ಬಳಿಕ ತಮ್ಮದಾಗಿಸ್ತಿದ್ದಾರೆ ಸಿದ್ದರಾಮಯ್ಯ.. ಈ ಬಗ್ಗೆ ಮಾತ್ನಾಡಿದ ಸಿದ್ದರಾಮಯ್ಯ, ಜನಾಶೀರ್ವಾದ ನೆನೆದಿದ್ದಾರೆ.. ಇಬ್ಬರ ನಡುವಿನ ಹೋಲಿಕೆ ಒಪ್ಪದ ಸಿದ್ದರಾಮಯ್ಯ, ತಮ್ಮದೇ ಕರ್ಮಭೂಮಿ ನೆಚ್ಚಿನ ಮೈಸೂರಿನಲ್ಲಿ ಕಾಲಘಟ್ಟದ ಇತಿಹಾಸವನ್ನ ಮೆಲುಕು ಹಾಕ್ತಿದ್ದಾರೆ. ನನಗೂ ದೇವರಾಜ ಅರಸ್ ಅವರಿಗೂ ಹೋಲಿಕೆ ಸರಿಯಲ್ಲ. ನನ್ನ ದಾಖಲೆಯನ್ನು ಮುಂದೆ ಯಾರಾದರೂ ಮುರಿಯಬಹುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸಿದ್ದರಾಮಯ್ಯ ಆಪ್ತ ತಂಡದ ಕಂದಾಯ ಸಚಿವ ಕೃಷ್ಣಬೈರೇಗೌಡ, ಸುದೀರ್ಘ ಅವಧಿಗೆ ಸಿಎಂ ಆಗಿ ಅರಸು ಹೊಸ ದಿಕ್ಕು ಕೊಟ್ಟವ್ರು. ಅದಕ್ಕೆ ಗೌರವ ತರುವ ರೀತಿಯಲ್ಲಿ ಸಿದ್ದರಾಮಯ್ಯ ಆಡಳಿತ ನೀಡ್ತಿದ್ದಾರೆ ಅಂತ ಬಣ್ಣಿಸಿದ್ದಾರೆ.. ಆಡಳಿತದ ಅನುಭವ, ಜನ ಮನ್ನಣೆ, ಜನಮಾನಸ ನಾಯಕ ಅಂತ ಹೊಗಳಿದ್ದಾರೆ..
ಇನ್ನು, ದಾಖಲೆ ಹೊತ್ತಲ್ಲೇ ಸಿದ್ದರಾಮಯ್ಯ ಶಕ್ತಿ ಪ್ರದರ್ಶನ ಆಗ್ಲಿದೆ.. ವಿಜಯಪುರ, ಕಲಬುರಗಿ, ಹಾಸನ, ಮೈಸೂರು ಸೇರಿ ಹಲವೆಡೆ ಕಾರ್ಯಕ್ರಮ ನಡೆಯಲಿವೆ.. ರಕ್ತದಾನ ಶಿಬಿರ, ನಾಟಿಕೋಳಿ ಊಟ ಆಯೋಜನೆ ಆಗಿದೆ.. ಫೆಬ್ರುವರಿ 13ರಂದು ದಾವಣಗೆರೆಯಲ್ಲಿ ಬೃಹತ್ ಸಮಾವೇಶವನ್ನ ಅಭಿಮಾನಿಗಳು ಹಮ್ಮಿಕೊಂಡಿದ್ದಾರೆ.. ಸರ್ಕಾರಕ್ಕೆ 1000 ದಿನ ಪೂರೈಕೆ ಪ್ರಯುಕ್ತ ಹಾವೇರಿಯಲ್ಲಿ ಹಟ್ಟಿ ತಾಂಡಗಳಿಗೆ ಕಂದಾಯ ಗ್ರಾಮ ಸ್ಥಾನಮಾನ ನೀಡಲು ಬೃಹತ್​​​ ಕಾರ್ಯಕ್ರಮ ನಡೆಯಲಿದೆ..
ಒಟ್ಟಾರೆ, ಕರ್ನಾಟಕ ರಾಜಕಾರಣದಲ್ಲಿ ದಶಕಗಳಿಂದ ಇದ್ದ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳ ಪ್ರಾಬಲ್ಯ ಮುರಿದು ಹಿಂದುಳಿದ ವರ್ಗಗಳ ಒಕ್ಕೂಟದ ಮೂಲಕ ಅಧಿಕಾರ ಹಿಡಿದ ಸಾಧಕರು.. ಆದ್ರೆ, ಅರಸು ಸಿದ್ಧಾಂತದ ಉತ್ತರಾಧಿಕಾರಿಯಾಗಿ ಸಿದ್ದರಾಮಯ್ಯ ಕಾಣಿಸಿಕೊಂಡ್ರೂ, ಆಡಳಿತ ಕಾರ್ಯವೈಖರಿ ಮತ್ತು ಆರ್ಥಿಕ ಯೋಜನೆಗಳು ಇಂದಿನ ಕಾಲಘಟ್ಟಕ್ಕೆ ತಕ್ಕಂತೆ ಭಿನ್ನವಾಗಿವೆ..
ದೇವರಾಜ ಅರಸ್ ಅವರು 1972ರ ಮಾರ್ಚ್ 20 ರಿಂದ 1980ರ ಜನವರಿ 12 ರವರೆಗೆ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ದೇವರಾಜ ಅರಸ್ ಅವರು ರಾಜ್ಯದಲ್ಲಿ ಬರೋಬ್ಬರಿ 7 ವರ್ಷ 239 ದಿನ ಮುಖ್ಯಮಂತ್ರಿಯಾಗಿ ಆಳ್ವಿಕೆ ನಡೆಸಿದ್ದಾರೆ.
ಇನ್ನೂ ಸಿಎಂ ಸಿದ್ದರಾಮಯ್ಯ ಅವರು 2 ಅವಧಿಗೆ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. 2013ರ ಮೇ, 13 ರಿಂದ 2018ರ ಮೇ, 17 ರವರೆಗೆ ಭರ್ತಿ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಆಳ್ವಿಕೆ ನಡೆಸಿದ್ದರು. ಇನ್ನೂ 2ನೇ ಅವಧಿಯಲ್ಲಿ 2023ರ ಮೇ, 20 ರಿಂದ ಇಂದಿನವರೆಗೂ ಸಿದ್ದರಾಮಯ್ಯ ಸಿಎಂ ಆಗಿ ಆಳ್ವಿಕೆ ನಡೆಸುತ್ತಿದ್ದಾರೆ. ದೇವರಾಜ ಅರಸ್ ಅವರಿಗೆ ಮಾರ್ಕ್ಸ್ ಸಿದ್ದಾಂತ, ಸಾಹಿತ್ಯ, ಕಲೆ ಬಗ್ಗೆ ಅಳವಾದ ಜ್ಞಾನ ಇತ್ತು. ಹಿಂದುಳಿದ ವರ್ಗಗಳ ಬಗ್ಗೆ ಅರಸ್ ಅವರಿಗೆ ಕಾಳಜಿ ಇತ್ತು. ಹಿಂದುಳಿದ ಸಮುದಾಯಗಳನ್ನು ಗುರುತಿಸಿ ರಾಜಕೀಯ ಪ್ರಾತಿನಿಧ್ಯವನ್ನು ದೇವರಾಜ ಅರಸ್ ನೀಡಿದ್ದರು. ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ನೀಡಿದ್ದರು.
ಇನ್ನೂ ಸಿಎಂ ಸಿದ್ದರಾಮಯ್ಯ ರಾಜ್ಯದಲ್ಲಿ ಭಾಗ್ಯಗಳ ಸರದಾರ ಎಂದೇ ಹೆಸರುವಾಸಿ. ಮೊದಲ ಅವಧಿಯಲ್ಲೇ ಅನ್ನಭಾಗ್ಯ ಯೋಜನೆ ಜಾರಿ ಮಾಡಿದ್ದರು. 2 ನೇ ಅವಧಿಯಲ್ಲೂ ಪಂಚ ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದಾರೆ. ರಾಜ್ಯದ ಹಣಕಾಸು ಸಂಪನ್ಮೂಲವನ್ನು ನೇರವಾಗಿ ಜನರ ಬ್ಯಾಂಕ್ ಖಾತೆಗೆ, ಜನರ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ. ಸಿದ್ದರಾಮಯ್ಯ ಅವರದ್ದು ರಾಮ ಮನೋಹರ್ ಲೋಹಿಯಾ ಅವರ ಸಮಾಜವಾದಿ ಸಿದ್ದಾಂತ.
/filters:format(webp)/newsfirstlive-kannada/media/media_files/2026/01/05/devaraj-urs-and-siddaramaiah-1-2026-01-05-16-33-53.jpg)
ನ್ಯೂಸ್​ಫಸ್ಟ್​ ಬ್ಯೂರೋ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us