/newsfirstlive-kannada/media/media_files/2025/10/07/ugrappa-v_s-siddu-2025-10-07-14-08-16.jpg)
EX MP ವಿ.ಎಸ್. ಉಗ್ರಪ್ಪ ವರ್ಸಸ್ ಸಿಎಂ ಸಿದ್ದರಾಮಯ್ಯ !
ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಇಂದು ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ನಡೆದಿದೆ. ಈ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ ಹಾಗೂ ವಾಲ್ಮೀಕಿ ನಾಯಕ ಸಮುದಾಯದ ನಾಯಕ ವಿ.ಎಸ್.ಉಗ್ರಪ್ಪ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಸ್ನೇಹಿತರೇ ಆದ ಸಿಎಂ ಸಿದ್ದರಾಮಯ್ಯ ಹಾಗೂ ವಿ.ಎಸ್. ಉಗ್ರಪ್ಪ ನಡುವೆ ಮೀಸಲಾತಿ ಬಗ್ಗೆ ಟಾಕ್ ವಾರ್ ನಡೆದಿದೆ. ಕುರುಬ ಸಮುದಾಯವನ್ನ ಎಸ್.ಟಿ. ಪಟ್ಟಿಗೆ ಸೇರ್ಪಡೆ ಮಾಡುವ ಬಗ್ಗೆ ಟಾಕ್ ವಾರ್ ನಡೆದಿದೆ.
ಕಾರ್ಯಕ್ರಮದಲ್ಲಿ ಮೊದಲಿಗೆ ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಭಾಷಣ ಮಾಡಿದ್ದರು. ಕೆಲವರನ್ನ ಎಸ್‌ಸಿಗೆ ಸೇರಿಸಿ, ಮತ್ತೆ ಕೆಲವರನ್ನ ಎಸ್‌ಟಿಗೆ ಸೇರಿಸುತ್ತಾರೆ. ವಾಲ್ಮೀಕಿ ಜಾತಿ ಬಯಸಿದ್ದು ಅಲ್ಲ. 341 ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದವರಿಗೆ ಎಸ್‌ಸಿ ಮಾಡಬೇಕು ಅಂತ ಸಿಎಂಗೆ ಹೇಳಿದ್ದೆ. ಕ್ಷೌರಿಕ ಸಮಾಜದವರನ್ನ ನೋಡಿದ್ರೆ ಕೆಲಸ ಆಗಲಲ್ಲ ಅಂತಾರೆ, ಅದು ಅಸ್ಪೃಶ್ಯತೆ . ಎಸ್‌ಸಿ ಜಾತಿಗಳ ಸೇರ್ಪಡೆಗೆ ಕುರುಬರು, ಗೊಲ್ಲರು ಸೇರಿದಂತೆ ಅನೇಕರು ಕೇಳುತ್ತಿದ್ದಾರೆ. ಮೀಸಲಾತಿ ಯಾವುದೇ ಜಾತಿ, ಜನಾಂಗದ ಆಸ್ತಿ ಅಲ್ಲ . ಮೀಸಲಾತಿ ವಂಚಿತರಿಗೆ ಮೀಸಲಾತಿ ಸಿಗಬೇಕು . ನಾಯಕ ಸಮುದಾಯದ ಸಚಿವರು ಮೀಸಲಾತಿಯಿಂದ ಆಯ್ಕೆ ಆಗಿದ್ದೀರಿ ಹೊರತು ವೈಯಕ್ತಿಕ ವರ್ಚಸ್ಸಿನಿಂದ ಅಲ್ಲ. ಹಾಗಾಗಿ ಸಮಾಜದ ಋಣ ತೀರಿಸಬೇಕು . ಅಧಿಕಾರ ಇರಲಿ, ಇಲ್ಲದಿರಲಿ ಶೋಷಿತ ಸಮುದಾಯದ ಪರ ನಾನು ಇರುತ್ತೇನೆ . ಬೊಮ್ಮಾಯಿಯವರು ಕುರುಬರನ್ನ ಎಸ್‌ಟಿಿ ಸೇರ್ಪಡೆಗೆ ಮುಂದಾಗಿದ್ರು . ನಮ್ಮ ತಟ್ಟೆಯ ಅನ್ನ ಕಿತ್ತುಕೊಳ್ಳೋಕೆ ಹೋಗಬಾರದು. ಸಿದ್ದರಾಮಯ್ಯ ಇದನ್ನು ಮಾಡಿಲ್ಲ . ಎಸ್‌ಟಿ ಆಗಬೇಕು ಅನ್ನೋದಾದರೇ, ಕುಲಶಾಸ್ತ್ರೀಯ ಅಧ್ಯಯನ ಆಗಬೇಕು . ನಾವು 7% ಇದ್ದೇವೆ, ನೀವು ಸೇರಿಕೊಂಡರೇ, 7% ಸೇರಿದರೇ, ಆಗ 14% ಮೀಸಲಾತಿಗೆ ಆದೇಶ ಮಾಡಬೇಕು ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆಗ್ರಹಿಸಿದ್ದರು. ಆಗ ನಮ್ಮ ಅಭ್ಯಂತರ ಇರೋದಿಲ್ಲ . ನಮಗೂ ರಾಜಕೀಯ ಮೀಸಲಾತಿ ಬೇಕು . ಸಿದ್ದರಾಮಯ್ಯನವರು ಎಷ್ಟೇ ವರ್ಷ ಸಿಎಂ ಆಗಿದ್ರೂ ಮಾಜಿಗಳಾಗ್ತಾರೆ . ಸಿದ್ದರಾಮಯ್ಯ ಹೊಸ ಅಧ್ಯಯನಕ್ಕೆ ಮುಂದಾಗಬೇಕು . ದೇವರಾಜು ಅರಸು ಮಾರ್ಗವಾಗಿ ನೀವು ಸಾಗುತ್ತಿದ್ದೀರಿ .
ಕುರುಬರು, ಬೆಸ್ತರು ಬರುವಾಗ ಪ್ಲೇಟು ಅನ್ನ ತಂದು ನಮ್ಮೊಟ್ಟಿಗೆ ಕೂತು ಊಟ ಮಾಡಬೇಕು. ಆಗ ನಾವು ಸ್ವಾಗತ ಮಾಡುತ್ತೇವೆ . ಅದು ಬಿಟ್ಟು ನಮ್ಮ ತಟ್ಟೆಗೆ ಕೈ ಹಾಕಿದ್ರೆ ಜನಾಂಗದ ಪರ ಹೋರಾಟ ಮಾಡುತ್ತೇನೆ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಹೇಳಿದ್ದರು.
ಈ ಮೂಲಕ ಕುರುಬ ಸಮುದಾಯವನ್ನು ಎಸ್.ಟಿ. ಪಟ್ಟಿಗೆ ಸೇರ್ಪಡೆ ಮಾಡಿದರೇ, ಹಾಲಿ ಇರುವ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ.7 ರಿಂದ ಶೇ.14 ಕ್ಕೆ ಹೆಚ್ಚಳ ಮಾಡಬೇಕೆಂದು ಆಗ್ರಹಿಸಿದ್ದರು. ಮೀಸಲಾತಿಯ ಪ್ರಮಾಣವನ್ನು ಶೇ.7 ರಿಂದ ಶೇ. 14 ಕ್ಕೆ ಹೆಚ್ಚಳ ಮಾಡದೇ, ಶೇ.7 ರಲ್ಲೇ ಕುರುಬರಿಗೂ ಎಸ್.ಟಿ. ಮೀಸಲಾತಿ ನೀಡಿದರೇ ನಮ್ಮ ಆಕ್ಷೇಪ ಇರುತ್ತೆ. ಅಂಥ ಸಂದರ್ಭದಲ್ಲಿ ವಾಲ್ಮೀಕಿ ನಾಯಕ ಸಮುದಾಯದ ಪರವಾಗಿ ತಾವು ಹೋರಾಟ ಮಾಡುವುದಾಗಿ ವಿ.ಎಸ್.ಉಗ್ರಪ್ಪ ಘೋಷಿಸಿದ್ದಾರೆ.
ತಮ್ಮ ಸ್ನೇಹಿತ ವಿ.ಎಸ್. ಉಗ್ರಪ್ಪ ಮಾತಿಗೆ ಸಿಎಂ ಸಿದ್ದರಾಮಯ್ಯ ಇದೇ ವೇದಿಕೆಯಲ್ಲಿ ಭಾಷಣಕ್ಕೆ ನಿಂತಾಗ ಉತ್ತರ ಕೊಟ್ಟರು.
ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಷಣ ಆರಂಭಿಸಿ, ಅತ್ಯಂತ ಸಂತೋಷದಿಂದ ನಾನು ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದೇನೆ. ಉಗ್ರಪ್ಪನವರು ಬಹಳ ದೀರ್ಘವಾಗಿ ಮಾತನ್ನಾಡಿದ್ದಾರೆ . ನನ್ನ ಭಾರವನ್ನು ಅವರು ಕಡಿಮೆ ಮಾಡಿದ್ದಾರೆ . ಉಗ್ರಪ್ಪನವರು ಒಳ್ಳೆಯ ಮಾತುಗಾರರು, ಒಳ್ಳೆಯ ಸಂಸದೀಯ ಪಟು ಕೂಡ ಹೌದು, ಎರಡು ಕಡೆಗಳಲ್ಲೂ ಅವರು ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಇಲ್ಲೂ ಸಾಮರ್ಥ್ಯ ತೋರಿಸಿದ್ದಾರೆ. ವಾಲ್ಮೀಕಿ, ಬೇಡ, ನಾಯಕ, ಅವರಿಗೆ ಎಸ್‌ಟಿಗೆ ಬರುತ್ತಿದ್ರೆ ಅದಕ್ಕೆ ಉಗ್ರಪ್ಪ ಕಾರಣ. ಇದನ್ನು ನೀವು ಯಾರು ಕೂಡ ಮರೆಯಬಾರದು ಇದಕ್ಕೆ ಬೇರೆ ಯಾರು ಕಾರಣರಲ್ಲ, ಉಗ್ರಪ್ಪನೇ ಕಾರಣ . 1980ರಲ್ಲಿ ನಾನು, ಉಗ್ರಪ್ಪರ ಮಾವ ವೀರಣ್ಣ ಎಂಎಲ್ಎ ಆಗಿದ್ದೆವು. ವೀರಣ್ಣ ಕೊರಟಗೆರೆಯವರು, ವಕೀಲರು . ಅವರ ಮಗಳನ್ನೇ ಉಗ್ರಪ್ಪ ಮದುವೆ ಆಗಿರೋದು . ಆದರೆ ಇವರ ಮದುವೆ ಹೇಗೆ ಆಯ್ತು ಅಂತಾ ಹೇಳೋಕೆ ಹೋಗೋದಿಲ್ಲ . ಅವರ ಮದುವೆಗೆ ನಾನೂ ಕೂಡ ಹೋಗಿದ್ದೆ ಎಂದರು.
ಬಳಿಕ ಸಿಎಂ ಸಿದ್ದರಾಮಯ್ಯ, ವಿ.ಎಸ್. ಉಗ್ರಪ್ಪ ಪ್ರಸ್ತಾಪಿಸಿದ ಎಸ್.ಟಿ. ಮೀಸಲಾತಿ ವಿಷಯದ ಬಗ್ಗೆ ಮಾತನಾಡಿದ್ದರು.
ನಾವು ಯಾರ ತಟ್ಟೆಗೆ ಕೈ ಹಾಕೋದೇ ಇಲ್ಲ. ನಾವು ನಿಮ್ಮ ತಟ್ಟೆಗೆ ಕೈ ಹಾಕೋದೇ ಇಲ್ಲ ಎಂದು ಮಾರ್ಮಿಕವಾಗಿ ಹೇಳಿದ್ದರು. ಅಂದರೇ, ಈ ಮೂಲಕ ಕುರುಬ ಸಮುದಾಯ, ವಾಲ್ಮೀಕಿ ನಾಯಕ ಸಮುದಾಯಕ್ಕೆ ನೀಡಿರುವ ಶೇ.7 ರ ಮೀಸಲಾತಿಯನ್ನು ಕಿತ್ತುಕೊಳ್ಳಲ್ಲ ಎಂದು ಸ್ಪಷ್ಟಪಡಿಸಿದ್ದರು. ಕುರುಬರನ್ನು ಎಸ್‌ಟಿಗೆ ಸೇರಿಸುವ ಚಳುವಳಿ ಮಾಡಿದ್ದು ನಾನಲ್ಲ. ಇದನ್ನು ಮಾಡಿದ್ದು ಮಿಸ್ಟರ್ ಕೆ.ಎಸ್. ಈಶ್ವರಪ್ಪ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು.
ಈಶ್ವರಪ್ಪ, ಹೆಚ್.ಎಂ ರೇವಣ್ಣ, ಸ್ವಾಮೀಜಿಗಳು ಎಲ್ಲರು ಸಭೆಗೆ ಹೋಗಿದ್ದರು. ನಾನು ಆ ಸಭೆಗೆ ಹೋಗಿರಲಿಲ್ಲ . ಬಸವರಾಜ್ ಬೊಮ್ಮಾಯಿ ಸಿಎಂ ಆಗಿ ಶಿಫಾರಸ್ಸು ಮಾಡಿದ್ದು ಬಿಜೆಪಿ ಹೊರತು ನಾನಲ್ಲ ಎಂದು ಹೇಳಿದ್ದರು. ಈಗ ಬಂದಿದ್ದು ಸ್ಪಷ್ಟೀಕರಣ ಅಷ್ಟೇ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು.
ಕುರುಬರನ್ನು ಎಸ್‌ಟಿಗೆ ಸೇರಿಸಿದ್ದೆ ಆದಲ್ಲಿ ವಾಲ್ಮೀಕಿ ಜನಸಂಖ್ಯೆಯಂತೆ ಕುರುಬರ ಸಂಖ್ಯೆ ಕೂಡ ಹೆಚ್ಚು ಮಾಡಬೇಕು. ಕುಲಶಾಸ್ತ್ರೀಯ ಅಧ್ಯಯನ ಮಾಡಿ, ಮೀಸಲಾತಿ ಪ್ರಮಾಣ ಹೆಚ್ಚು ಮಾಡಬೇಕು. ಕುಲಶಾಸ್ತ್ರೀಯ ಅಧ್ಯಯನ ಮಾಡ್ತಾರೆ ಎಂಬ ನಂಬಿಕೆ ಇಲ್ಲ . ಒಂದು ವೇಳೆ ಮಾಡಿದ್ರೆ ಜನಸಂಖ್ಯೆಗೆ ಅನುಗುಣವಾಗಿ ಮಾಡಲಿ . ಆಗ ನಿಮಗೂ ತೊಂದರೆ ಆಗಲ್ಲ, ನನಗೂ ತೊಂದರೆ ಆಗಲ್ಲ . ಶೇ.7 ರ ಮೀಸಲಾತಿ ಬದಲು ಹೆಚ್ಚು ಪರ್ಸೆಂಟೇಜ್ ಮೀಸಲಾತಿ ಮಾಡಲಿ. ಈ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆಯೇ ವಿನಹ ರಾಜ್ಯ ಸರ್ಕಾರಕ್ಕೆ ಅಧಿಕಾರ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.