/newsfirstlive-kannada/media/media_files/2025/09/22/survey-postponment-request-2025-09-22-13-05-48.jpg)
ಸಮೀಕ್ಷೆ ಮುಂದೂಡಲು ಒಕ್ಕಲಿಗ ಮೀಸಲಾತಿ ಹೋರಾಟ ಸಮಿತಿಯ ಮನವಿ
ಇಂದಿನಿಂದ ಆರಂಭವಾಗಿರುವ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯನ್ನು ಮುಂದೂಡುವಂತೆ ಒಕ್ಕಲಿಗ, ಲಿಂಗಾಯತ ಸಮುದಾಯಗಳು ಆಗ್ರಹಿಸಿವೆ. 15 ದಿನಗಳಲ್ಲಿ ಸಮೀಕ್ಷೆ ಮಾಡಲು ಸಾಧ್ಯವಿಲ್ಲ. 3 ತಿಂಗಳು ಕಾಲ ಮುಂದೂಡುವಂತೆ ಒತ್ತಾಯ ಮಾಡಿವೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿಯಾಗಿ ಒಕ್ಕಲಿಗ, ಲಿಂಗಾಯತ ಸಮುದಾಯದ ಮುಖಂಡರು ಒತ್ತಾಯ ಮಾಡಿದ್ದಾರೆ. ಬೆಂಗಳೂರಿನ ಸದಾಶಿವನಗರದಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜೊತೆಗೆ ಸಮಾಲೋಚನೆ ನಡೆಸಿದ್ದಾರೆ. ಒಕ್ಕಲಿಗ, ಲಿಂಗಾಯತ ಸಮುದಾಯ ನಾಯಕರೊಂದಿಗೆ ಖರ್ಗೆ ಚರ್ಚೆ ನಡೆಸಿದ್ದಾರೆ. ಸಮೀಕ್ಷೆ ಮುಂದೂಡುವಂತೆ ಖರ್ಗೆಗೆ ಬಲವಾದ ಮನವಿಯನ್ನು ಲಿಂಗಾಯತ, ಒಕ್ಕಲಿಗ ಸಮುದಾಯದ ಮುಖಂಡರು ಮಾಡಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಭೇಟಿ ಬಳಿಕ ರಾಜ್ಯ ಒಕ್ಕಲಿಗ ಮೀಸಲಾತಿ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಅಡಿಟರ್ ನಾಗರಾಜ್ ಯಲಚವಾಡಿ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಜಾತಿಗಣತಿ ಸಮೀಕ್ಷೆ ಮುಂದೂಡಿ ಎಂದು ಮನವಿ ಮಾಡಿದ್ದೇವೆ . ಸಮೀಕ್ಷೆ ನಡೆಸಲು ಎಲ್ಲಾ ಮನೆಗಳಿಗೆ ನಂಬರ್ ನೀಡಿಲ್ಲ. ರಾಜ್ಯದಲ್ಲಿ ಸುಮಾರು 15 ರಿಂದ 20 ಪ್ರಮುಖ ಜಾತಿಗಳಿವೆ. ಒಕ್ಕಲಿಗ, ಲಿಂಗಾಯತ, ಮುಸ್ಲಿಂ, ಯಾದವ, ಬಲಿಜ ಸಮುದಾಯಗಳಿಗೆ ಕೋಡ್ ನೀಡಬೇಕು. ಉಪ ಜಾತಿಗಳಿಗೆ ಕೋಡ್ ನೀಡಬೇಕು ಎಂದು ಮನವಿ ಮಾಡಿದ್ದೇವೆ. 2012ರಲ್ಲಿ 800 ಜಾತಿಗಳಿದ್ದವು, ಈಗ 1561 ಜಾತಿಗಳಿವೆ. ಈಗ ಜಾತಿಯನ್ನ ಇಯರಿಂಗ್, ಕುಲಶಾಸ್ತ್ರ ಅಧ್ಯಯನ ಕೂಡ ಮಾಡಿಲ್ಲ ಎಂದು ದೂರಿದ್ದಾರೆ.
ಆ್ಯಪ್ ನಲ್ಲಿ ಮಾಹಿತಿ ಅಪ್ ಲೋಡ್ ಮಾಡಲು ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಿಲ್ಲ, ತರಬೇತಿದಾರರಿಗೆ ಸರಿಯಾದ ಮಾಹಿತಿ ಕೂಡ ಇಲ್ಲ. ಒಕ್ಕಲಿಗ ಸಮುದಾಯದ ಸಭೆಯಲ್ಲೂ ಮುಂದೂಡುವಂತೆ ಮನವಿ ಮಾಡಲಾಗಿತ್ತು. ಆ ವಿಚಾರವನ್ನು ಮಲ್ಲಿಕಾರ್ಜುನ ಖರ್ಗೆಯವರ ಗಮನಕ್ಕೆ ತರಲಾಗಿದೆ. 15 ದಿನಗಳಲ್ಲಿ 20 ಗಂಟೆ ಕೆಲಸ ಮಾಡಲು ಸಾಧ್ಯವಿಲ್ಲ . ಹಾಗಾಗಿ 3 ತಿಂಗಳು ಗಣತಿ ಕಾರ್ಯವನ್ನು ಮುಂದೂಡುವಂತೆ ಮನವಿ ಮಾಡಲಾಗಿದೆ . ಪರಿಶೀಲನೆ ಮಾಡುವುದಾಗಿ ಮಲ್ಲಿಕಾರ್ಜುನ ಖರ್ಗೆಯವರು ಹೇಳಿದ್ದಾರೆ. ತೆಲಂಗಾಣದಲ್ಲಿ ಮೂರುವರೆ ಕೋಟಿ ಇರುವ ಜನಸಂಖ್ಯೆಗೆ 45 ದಿನ ತೆಗೆದುಕೊಂಡು ಸಮೀಕ್ಷೆ ಮಾಡಿದ್ದಾರೆ. ನಾವು ಕರ್ನಾಟಕದಲ್ಲಿ ಏಳೂವರೆ ಕೋಟಿ ಜನರು ಇದ್ದೇವೆ , 15 ದಿನದಲ್ಲಿ ಸರ್ವೇ ಮಾಡಲು ಸಾಧ್ಯವಿಲ್ಲ ಎಂದು ಒಕ್ಕಲಿಗ ಮೀಸಲಾತಿ ಹೋರಾಟ ಸಮಿತಿಯ ಸಂಚಾಲಕ ಅಡಿಟರ್ ನಾಗರಾಜ್ ಯಲಚವಾಡಿ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.