/newsfirstlive-kannada/media/media_files/2026/03/06/karnataka-budget-2026-5-2026-03-06-12-10-36.jpg)
ಬೆಂಗಳೂರು: ಬೆಂಗಳೂರು ಕೇವಲ ಒಂದು ನಗರವಷ್ಟೇ ಅಲ್ಲ, ಇದು ಅಸಂಖ್ಯಾತ ಕನಸುಗಳ ನೆಲೆಬೀಡು’ ಎಂದು ಬಣ್ಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಿಲಿಕಾನ್ ಸಿಟಿಯನ್ನು ವಿಶ್ವದ ಅತ್ಯುತ್ತಮ ವಾಸಯೋಗ್ಯ ನಗರವನ್ನಾಗಿ ಮಾಡುವ ಉದ್ದೇಶದಿಂದ ಈ ಬಾರಿಯ ಬಜೆಟ್‌ನಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಬೃಹತ್ ಯೋಜನೆಗಳನ್ನು ಘೋಷಿಸಿದ್ದಾರೆ. ಇದರ ಜೊತೆಗೆ ರಾಜ್ಯದ ಇತರೆ ನಗರಗಳ ಅಭಿವೃದ್ಧಿಗೂ ಭರ್ಜರಿ ಕೊಡುಗೆ ನೀಡಲಾಗಿದೆ.
ಬೆಂಗಳೂರು ಅಭಿವೃದ್ಧಿಯ ಪ್ರಮುಖ ಹೈಲೈಟ್ಸ್ ಇಲ್ಲಿದೆ:
1. ಟ್ರಾಫಿಕ್‌ಗೆ ಬ್ರೇಕ್, 40 ಸಾವಿರ ಕೋಟಿಯ ಟನಲ್ ರಸ್ತೆ
ಬೆಂಗಳೂರಿನ ಟ್ರಾಫಿಕ್ ದಟ್ಟಣೆ ನಿವಾರಿಸಲು ಬರೋಬ್ಬರಿ 40,000 ಕೋಟಿ ರೂ. ಅಂದಾಜು ವೆಚ್ಚದಲ್ಲಿ 40 ಕಿ.ಮೀ ಉದ್ದದ ಟನಲ್ ರಸ್ತೆಯನ್ನು (Tunnel Road) BOOT ಮಾದರಿಯಲ್ಲಿ ನಿರ್ಮಿಸಲು ಅನುಮೋದನೆ ನೀಡಲಾಗಿದೆ. ಮೊದಲ ಹಂತದಲ್ಲಿ 17,780 ಕೋಟಿ ರೂ. ವೆಚ್ಚದಲ್ಲಿ 17 ಕಿ.ಮೀ ಉದ್ದದ ಉತ್ತರ-ದಕ್ಷಿಣ ಕಾರಿಡಾರ್ ಯೋಜನೆಗೆ ಟೆಂಡರ್ ಕರೆಯಲಾಗಿದೆ. ಹೆಬ್ಬಾಳ ಜಂಕ್ಷನ್‌ನಿಂದ ಮೇಖ್ರಿ ಸರ್ಕಲ್‌ವರೆಗೆ ಸುರಂಗ ಮಾರ್ಗ ಹಾಗೂ ಮೇಲ್ಸೇತುವೆಯನ್ನು ಬಿಡಿಎ ವತಿಯಿಂದ 2,250 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು.
2. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ 7 ಸಾವಿರ ಕೋಟಿ ಅನುದಾನ
ಬೆಂಗಳೂರಿನ ನಾಗರಿಕರಿಗೆ ಪಾರದರ್ಶಕ ಆಡಳಿತ ನೀಡಲು ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ ಹಾಗೂ ಐದು (5) ಮಹಾನಗರ ಪಾಲಿಕೆಗಳನ್ನು ಸ್ಥಾಪಿಸಲಾಗುತ್ತಿದೆ. ಈ ಐದೂ ಪಾಲಿಕೆಗಳು 'ಮುನಿಸಿಪಲ್ ಬಾಂಡ್' ಹೊರಡಿಸುವ ಮೂಲಕ ಅಭಿವೃದ್ಧಿಗೆ ಸಂಪನ್ಮೂಲ ಕ್ರೋಢೀಕರಿಸಲಿವೆ. ಅಲ್ಲದೆ, ಬೆಂಗಳೂರು ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ನೀಡುತ್ತಿದ್ದ 7,000 ಕೋಟಿ ರೂ. ಅನುದಾನವನ್ನು ಪ್ರಸಕ್ತ ಸಾಲಿನಲ್ಲೂ ಮುಂದುವರಿಸಲಾಗಿದೆ.
/filters:format(webp)/newsfirstlive-kannada/media/media_files/2025/11/30/bengaluru-city-2025-11-30-18-11-07.jpg)
3. ನಮ್ಮ ಮೆಟ್ರೋ ವಿಸ್ತರಣೆ & ಬಿಬಿಎಂಪಿ ಕಾಮಗಾರಿ
2026-27ನೇ ಸಾಲಿನಲ್ಲಿ 41 ಕಿ.ಮೀ ಹೆಚ್ಚುವರಿ ಮೆಟ್ರೋ ಮಾರ್ಗಗಳನ್ನು ಪೂರ್ಣಗೊಳಿಸಲಾಗುವುದು. ಇದರಿಂದ ನಿತ್ಯ 15 ಲಕ್ಷ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ರಸ್ತೆಗಳ ಬಾಳಿಕೆಗಾಗಿ ಮುಂದಿನ 3 ವರ್ಷಗಳಲ್ಲಿ 3,000 ಕೋಟಿ ರೂ. ವೆಚ್ಚದಲ್ಲಿ 450 ಕಿ.ಮೀ ಉದ್ದದ ರಸ್ತೆಗಳಿಗೆ 'ವೈಟ್ ಟಾಪಿಂಗ್' ಮಾಡಲಾಗುವುದು. ಬಿಬಿಎಂಪಿ ಸ್ವಂತ ಅನುದಾನದಲ್ಲಿ ಮುಂದಿನ 3 ವರ್ಷಗಳಲ್ಲಿ 175 ಜಂಕ್ಷನ್‌ಗಳ ಸೌಂದರ್ಯೀಕರಣ, 500 ಕಿ.ಮೀ ಪಾದಚಾರಿ ಮಾರ್ಗ, ಹಾಗೂ 100 ಸ್ಕೈವಾಕ್ (Sky Walk) ನಿರ್ಮಾಣ.
4. ಕಾವೇರಿ 6ನೇ ಹಂತದ ಯೋಜನೆ
ನಗರದ 1.40 ಕೋಟಿ ಜನರಿಗೆ ಕುಡಿಯುವ ನೀರು ಪೂರೈಸಲು, JICA ನೆರವಿನೊಂದಿಗೆ 6,939 ಕೋಟಿ ರೂ. ವೆಚ್ಚದಲ್ಲಿ 'ಕಾವೇರಿ 6ನೇ ಹಂತದ ಯೋಜನೆ'ಯನ್ನು ಜಾರಿಗೊಳಿಸಲಾಗುವುದು. ಇದರಿಂದ ಹೆಚ್ಚುವರಿಯಾಗಿ 6 ಟಿ.ಎಂ.ಸಿ ನೀರು ಪೂರೈಕೆಯಾಗಲಿದೆ.
5. ಬೆಂಗಳೂರು ಬಿಸಿನೆಸ್ ಕಾರಿಡಾರ್ & ರಾಜಕಾಲುವೆ ಅಭಿವೃದ್ಧಿ
ತುಮಕೂರು ರಸ್ತೆಯಿಂದ ಹೊಸೂರು ರಸ್ತೆವರೆಗಿನ 73 ಕಿ.ಮೀ ಉದ್ದದ ಬೆಂಗಳೂರು ಬಿಸಿನೆಸ್ ಕಾರಿಡಾರ್ ಭಾಗ-1 ನಿರ್ಮಾಣಕ್ಕೆ ಭೂಸ್ವಾಧೀನ ಕಾರ್ಯ ಭರದಿಂದ ಸಾಗಿದ್ದು, 4 ವರ್ಷಗಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ವಿಶ್ವಬ್ಯಾಂಕ್ ನೆರವಿನೊಂದಿಗೆ ರಾಜಕಾಲುವೆಗಳ ಅಭಿವೃದ್ಧಿಗೆ ಒಟ್ಟು 2,000 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಟೆಂಡರ್ ಕರೆಯಲಾಗಿದೆ.
ರಾಜ್ಯದ ನಗರಾಭಿವೃದ್ಧಿಗೆ ಸಿಕ್ಕಿದ್ದೇನು?
ಹೊಸ ಪಾಲಿಕೆಗಳಿಗೆ ತಲಾ 200 ಕೋಟಿ: ಹೊಸದಾಗಿ ಮೇಲ್ದರ್ಜೆಗೇರಿಸಲಾದ ರಾಯಚೂರು, ಬೀದರ್ ಮತ್ತು ಹಾಸನ ಮಹಾನಗರ ಪಾಲಿಕೆಗಳಿಗೆ 'ಮಹಾತ್ಮಾ ಗಾಂಧಿ ನಗರ ವಿಕಾಸ್ ಯೋಜನೆ 2.0' ರಡಿ ತಲಾ 200 ಕೋಟಿ ರೂ. ಒದಗಿಸಲಾಗುವುದು.
ನಗರೋತ್ಥಾನ ಯೋಜನೆ: ಮುಖ್ಯಮಂತ್ರಿಗಳ ಅಮೃತ್ ನಗರೋತ್ಥಾನ 4ನೇ ಹಂತದ ಯೋಜನೆಯಡಿ ಮೂಲಸೌಕರ್ಯ ಅಭಿವೃದ್ಧಿಗೆ 3,885 ಕೋಟಿ ರೂ. ಮೀಸಲಿಟ್ಟಿದ್ದು, ಪ್ರಸಕ್ತ ಸಾಲಿಗೆ 500 ಕೋಟಿ ರೂ. ಬಿಡುಗಡೆ ಮಾಡಲಾಗುವುದು.
ಏಕೀಕೃತ ಆಸ್ತಿ ತೆರಿಗೆ: ನಗರ ಸ್ಥಳೀಯ ಸಂಸ್ಥೆಗಳಲ್ಲಿ ಏಕೀಕೃತ ಆಸ್ತಿ ತೆರಿಗೆ (Unified Property Tax) ವ್ಯವಸ್ಥೆಯನ್ನು ಜಾರಿಗೊಳಿಸಿ ಇ-ಆಸ್ತಿ ತಂತ್ರಾಂಶದೊಂದಿಗೆ ಸಂಯೋಜಿಸಲಾಗುವುದು.
ಒಳಚರಂಡಿ ಅಭಿವೃದ್ಧಿ: ಆನೇಕಲ್, ನೆಲಮಂಗಲ, ದೊಡ್ಡಬಳ್ಳಾಪುರ, ಭದ್ರಾವತಿ, ದೇವನಹಳ್ಳಿ, ಮೈಸೂರು ಹಾಗೂ ಕಲ್ಯಾಣ ಕರ್ನಾಟಕ ಭಾಗದ ಆಳಂದ, ಅಫಜಲ್‌ಪುರ, ಚಿತ್ತಾಪುರ, ಯಾದಗಿರಿ ಸೇರಿದಂತೆ ಹಲವು ಪಟ್ಟಣಗಳಲ್ಲಿ ನೂತನ ಒಳಚರಂಡಿ (UGD) ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಒಟ್ಟಾರೆಯಾಗಿ, ಈ ಬಾರಿಯ ನಗರಾಭಿವೃದ್ಧಿ ಬಜೆಟ್ ಮೂಲಸೌಕರ್ಯ, ಸಂಚಾರ ದಟ್ಟಣೆ ನಿವಾರಣೆ ಹಾಗೂ ಕುಡಿಯುವ ನೀರಿನ ಪೂರೈಕೆಗೆ ಹೆಚ್ಚಿನ ಆದ್ಯತೆ ನೀಡಿದೆ.
ಇದನ್ನೂ ಓದಿ: ಅಡಿಕೆ ಎಲೆ ಚುಕ್ಕಿ ಹಳದಿ ಎಲೆ ರೋಗ, ತೆಂಗು ಕಪ್ಪು ತಲೆ ಹುಳು ರೋಗದ ಕೀಟ ನಿಯಂತ್ರಣಕ್ಕೆ 10 ಕೋಟಿ ನೀಡಿಕೆ-ಬಜೆಟ್ ನಲ್ಲಿ ಘೋಷಣೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us