/newsfirstlive-kannada/media/media_files/2025/12/15/anti-hate-speech-bill-karnataka-2025-12-15-16-01-05.jpg)
ನುಡಿದರೆ ಮುತ್ತಿನ ಹಾರದಂತಿರಬೇಕು. ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು. ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು. ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು. ನುಡಿಯೊಳಗಾಗಿ ನಡೆಯದಿರ್ದಡೆ ಎಂತು ಮೆಚ್ಚುವನಯ್ಯಾ ಕೂಡಲಸಂಗಮದೇವಾ.. ಬಸವಣ್ಣನವರ ವಚನ ಇದು. ಆದ್ರೆ ಅದೇ ಮಾತು ಈಗ ಹರಿತವಾಗ್ಬಿಟ್ಟಿದೆ.. ಅದೇ ಮಾತು ಮನಸ್ಸು ಕೆಡಿಸ್ತಿದೆ.. ಅದೇ ಮಾತು ಲಗಾಮಿಲ್ಲದೆ ಬೆಂಕಿ ಹಚ್ತಿದೆ.. ಅದೇ ಮಾತು ಸಮಾಜದ ಶಾಂತಿ ಕದಡ್ತಿದೆ.. ಹೀಗೆ ದ್ವೇಷ ಹರಡೋ ಮಾತಿಗೆ ಕಡಿವಾಣ ಹಾಕೋಕೆ ಮುಂದಾಗಿದೆ ರಾಜ್ಯ ಸರ್ಕಾರ.. ಆ ಕಾರಣಕ್ಕಾಗಿಯೇ ಅಧಿವೇಶನದಲ್ಲಿ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ ಮಂಡನೆಯಾಗಿರೋದು. ಕಳೆದ ಕೆಲ ದಿನಗಳಿಂದ ರಾಜಕೀಯ ವಲಯದಲ್ಲಿ ಸಿಕ್ಕಾಪಟ್ಟೆ ಚರ್ಚೆಯಲ್ಲಿರೋ ಮಸೂದೆ ಇದು. ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ತಿಕ್ಕಾಟಕ್ಕೆ ಕಾರಣವಾಗಿರೋ ಮಸೂದೆ. ಇಷ್ಟಕ್ಕೂ ಈ ಮಸೂದೆ ಬಗ್ಗೆ ಅಷ್ಟು ಚರ್ಚೆಯಾಗ್ತಿರೋದೇಕೆ? ಬಿಜೆಪಿ ಇದನ್ನ ವಿರೋಧಿಸ್ತಿರೋದು ಯಾಕೆ?
ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ(ಪ್ರತಿಬಂಧಕ) ವಿಧೇಯಕ (Karnataka Hate Speech and Hate Crimes Bill, 2025) ವಿಧಾನಸಭೆಯಲ್ಲಿ ಮಂಡನೆಯಾಗಿದೆ. ಧರ್ಮ, ಜನಾಂಗ, ಭಾಷೆ, ಜನ್ಮಸ್ಥಳ, ಜಾತಿ, ಲಿಂಗ ಆಧಾರದಲ್ಲಿ ದ್ವೇಷದ ಭಾಷಣ ಮಾಡುವವರನ್ನು ನಿರ್ಬಂಧಿಸಲು ಮುಂದಾಗಿರುವ ರಾಜ್ಯ ಸರ್ಕಾರ, ‘ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ಮಸೂದೆಯನ್ನು ಡಿಸೆಂಬರ್ 10 ರಂದು ಅಧಿವೇಶನದಲ್ಲಿ ಮಂಡಿಸಿತ್ತು.
ಧರ್ಮ, ಜನಾಂಗ, ಭಾಷೆ, ಜನ್ಮಸ್ಥಳ, ಜಾತಿ ಅಥವಾ ಲಿಂಗದ ಆಧಾರದ ಮೇಲೆ ದ್ವೇಷದ ಭಾಷಣ ಮಾಡುವುದು ದ್ವೇಷಾಪರಾಧದ ವ್ಯಾಪ್ತಿಗೆ ಬರುತ್ತದೆ. ಅಲ್ಲದೆ, ಯಾವುದೇ ರೀತಿಯ ಭಾವನಾತ್ಮಕ, ಮಾನಸಿಕ, ದೈಹಿಕ, ಸಾಮಾಜಿಕ ಅಥವಾ ಆರ್ಥಿಕ ಹಾನಿ ಉಂಟುಮಾಡುವ ಉದ್ದೇಶದಿಂದ ಪ್ರಚೋದನೆ ನೀಡುವುದು ಸಹ ಇದರಲ್ಲಿ ಸೇರಿದೆ. ದ್ವೇಷ ಭಾಷಣದ ಪ್ರಸಾರ, ಪ್ರಕಟಣೆ, ಪ್ರಚಾರವೂ ಅಪರಾಧ.. ದ್ವೇಷ ಭಾಷಣದ ಪ್ರಚಾರ ಮಾಡುವುದು, ಪ್ರಚೋದಿಸುವುದೂ ಅಪರಾಧ.. ಯಾವುದೇ ಮಾಧ್ಯಮದ ಮೂಲಕ ದ್ವೇಷವನ್ನು ಉತ್ತೇಜಿಸುವುದು ಅಥವಾ ಪ್ರಚಾರ ಮಾಡುವುದಕ್ಕೆ ಈ ಮಸೂದೆಯ ಅಡಿಯಲ್ಲಿ ನಿರ್ಬಂಧ ಹೇರಲಾಗಿದೆ. ದ್ವೇಷ ಭಾಷಣ ಮಾಡುವ ವ್ಯಕ್ತಿಯ ಸಂಘ, ಸಂಸ್ಥೆಯ ಜವಾಬ್ದಾರಿ ಸ್ಥಾನದಲ್ಲಿದ್ರೆ ಅದ್ರ ವಿರುದ್ಧವೂ ಕೇಸ್ ದಾಖಲಿಸೋಕೆ ಅವಕಾಶ ಇದೆ.
ಈ ಮಸೂದೆ ಯಾವುದೇ ನಿರ್ದಿಷ್ಟ ರಾಜಕೀಯ ಪಕ್ಷ ಅಥವಾ ಸಮುದಾಯವನ್ನ ಗುರಿಯಾಗಿಸಿಲ್ಲವೆಂದು ಸ್ಪಷ್ಟಪಡಿಸಿರುವ ಸರ್ಕಾರ, ಇದು ರಾಜ್ಯದಲ್ಲಿ ಸಾಮಾಜಿಕ ಸಾಮರಸ್ಯವನ್ನು ಕಾಪಾಡುವ ಮತ್ತು ದ್ವೇಷದ ಹರಡುವಿಕೆಯನ್ನು ತಡೆಯುತ್ತೆ ಎಂದಿದೆ. ಭವಿಷ್ಯದಲ್ಲಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಈ ಕಾನೂನು ಅನ್ವಯವಾಗಲಿದ್ದು, ಸಂಘಟನೆಗಳ ಮುಖಂಡರು, ರಾಜಕೀಯ ನಾಯಕರು ಮತ್ತು ಪ್ರತಿಯೊಬ್ಬ ವ್ಯಕ್ತಿಯು ವೇದಿಕೆಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಮಾತನಾಡುವಾಗ ಜಾಗರೂಕರಾಗಿರಬೇಕು ಎಂದು ಎಚ್ಚರಿಕೆ ನೀಡಿದೆ.
ದ್ವೇಷಾಪರಾಧಕ್ಕೆ ಶಿಕ್ಷೆಯೇನು?
ಈ ಮಸೂದೆಯ ಅಡಿಯಲ್ಲಿ, ದ್ವೇಷ ಭಾಷಣ ಮಾಡುವವರಿಗೆ ಒಂದು ವರ್ಷದಿಂದ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಒಂದು ವೇಳೆ ಇದೇ ಅಪರಾಧವನ್ನು ಪುನರಾವರ್ತಿಸಿದರೆ ಎರಡು ವರ್ಷದಿಂದ ಹತ್ತು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ 50,000 ರೂಪಾಯಿಗಳಿಂದ 1 ಲಕ್ಷ ರೂಪಾಯಿಗಳವರೆಗೆ ದಂಡ ವಿಧಿಸಲಾಗುತ್ತದೆ. ಇಂತಹ ಕೃತ್ಯಗಳನ್ನು ಜಾಮೀನು ರಹಿತ ಅಪರಾಧ ಎಂದು ಪರಿಗಣಿಸಲಾಗುತ್ತದೆ ಎಂದು ಸರ್ಕಾರ ಹೇಳಿದೆ.
ಬಿಜೆಪಿ ಹೇಳ್ತಿದೆ ಇದು ನಮ್ಮನ್ನ ಹಣಿಯೋಕೆ ಮಾಡಿರೋ ತಂತ್ರ ಅಂತ. ಆರ್‌ಎಸ್‌ಎಸ್‌ಗೆ, ಬಿಜೆಪಿ ನಾಯಕರ ವಿರುದ್ಧ ಜಾರಿ ತರ್ತಿರೋ ಕಾನೂನಿದು ಅನ್ನೋದು ಅವ್ರ ಆರೋಪ. ಒಟ್ನಲ್ಲಿ ಆರೋಪ, ಪ್ರತ್ಯಾರೋಪಗಳೇನೇ ಇರಲಿ, ಸಮಾಜದ ಸ್ವಾಸ್ಥ್ಯ ಕದಡೋ ಮಾತು ಯಾರೇ ಹೇಳಿದ್ರೂ ತಪ್ಪೇ. ಅದಕ್ಕೆ ಕಡಿವಾಣ ಹಾಕೋ ಯತ್ನಕ್ಕೆ ಸರ್ಕಾರ ಮುಂದಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us