/newsfirstlive-kannada/media/media_files/2025/08/11/siddaramaiah-kn-rajanna-2025-08-11-19-33-34.jpg)
ಸಿದ್ದರಾಮಯ್ಯ ಜೊತೆ ಕೆಎನ್ ರಾಜಣ್ಣ
ರಾಜ್ಯ ಕ್ಯಾಬಿನೆಟ್ ನಿಂದ ವಜಾಗೊಂಡಿರುವ ಕೆ.ಎನ್. ರಾಜಣ್ಣ ಈಗ ಮುಂದೇನು ಮಾಡಬಹುದು ಎಂಬ ಚರ್ಚೆ ರಾಜ್ಯ ರಾಜಕೀಯ ವಲಯದಲ್ಲಿ ನಡೆಯುತ್ತಿದೆ. ಕೆ.ಎನ್.ರಾಜಣ್ಣ ಮೊದಲೇ ಬಂಡಾಯ ಸ್ವಭಾವದವರು. ಹಾಗಾಗಿ ಕೆ.ಎನ್.ರಾಜಣ್ಣ ಸುಮ್ಮನೇ ಇರುವ ಜಾಯಮಾನದವರಲ್ಲ ಎಂಬುದು ಕಾಂಗ್ರೆಸ್ ನಾಯಕರಿಗೂ ಗೊತ್ತು. ಇದನ್ನು ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರು ದೆಹಲಿಯಲ್ಲಿ ನೇರವಾಗಿ ಹೇಳಿದ್ದಾರೆ. ರಾಜಣ್ಣ ಸುಮ್ಮನೇ ಕೂರಲ್ಲ ಎಂದು ಬಿ.ಕೆ.ಹರಿಪ್ರಸಾದ್ ಅವರು ದೆಹಲಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಾ ಹೇಳಿದ್ದಾರೆ. ಕೆ.ಎನ್.ರಾಜಣ್ಣ ಈಗ ಗಾಯಗೊಂಡ ಹುಲಿಯಂತಾಗಿದ್ದಾರೆ. ಕೆ.ಎನ್. ರಾಜಣ್ಣ ರಾಜಕೀಯವಾಗಿ ಮಾತ್ರ ರಾಜ್ಯದಲ್ಲಿ ಸಕ್ರಿಯವಾಗಿರಲಿಲ್ಲ. ಕೆ.ಎನ್. ರಾಜಣ್ಣ ಸಹಕಾರಿ ರಂಗದಲ್ಲೂ ಸಕ್ರಿಯವಾಗಿದ್ದಾರೆ. ಸಹಕಾರಿ ರಂಗದಲ್ಲೂ ತಮ್ಮದೇ ಆದ ಛಾಪು ಮೂಢಿಸಿದ್ದಾರೆ. ಕಳೆದ 25 ವರ್ಷಗಳಿಂದ ತುಮಕೂರು ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದಾರೆ. ಜೊತೆಗೆ ರಾಜ್ಯದ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿಯೂ ಎಸ್.ಎಂ.ಕೃಷ್ಣ ಕಾಲದಲ್ಲೇ ಕಾರ್ಯನಿರ್ವಹಿಸಿದ್ದಾರೆ. ಬಳಿಕವೂ ರಾಜ್ಯದ ಪ್ರತಿಷ್ಠಿತ ಅಪೆಕ್ಸ್ ಬ್ಯಾಂಕ್ ಗೆ ಅಧ್ಯಕ್ಷರಾಗಿದ್ದರು. ಅಪೆಕ್ಸ್ ಬ್ಯಾಂಕ್ ಅಂದರೇ, ರಾಜ್ಯದ ಮೂರು ಪ್ರಮುಖ ಖಾತೆಗಳಿಗೆ ನೀಡುವ 20 ರಿಂದ 30 ಸಾವಿರ ಕೋಟಿ ರೂಪಾಯಿ ಬಂಡವಾಳ ಇರುವ ಬ್ಯಾಂಕ್. ಅಪೆಕ್ಸ್ ಬ್ಯಾಂಕ್ ಮೂಲಕವೇ ಡಿಸಿಸಿ ಬ್ಯಾಂಕ್ ಗಳಿಗೆ ಹಣವನ್ನು ನೀಡಲಾಗುತ್ತೆ. ಇಂಥ ಪ್ರತಿಷ್ಠಿತ ಬ್ಯಾಂಕ್ ಗೆ ಅಧ್ಯಕ್ಷರಾಗಿ ಯಶಸ್ವಿಯಾಗಿ ನಿರ್ವಹಿಸಿದ ಖ್ಯಾತಿ ಕೆ.ಎನ್.ರಾಜಣ್ಣ ಅವರಿಗೆ ಇದೆ. ಕಳೆದುಕೊಂಡಿದ್ದನ್ನು ಕಳೆದುಕೊಂಡ ಜಾಗದಲ್ಲೇ ಹುಡುಕಿ ಮತ್ತೆ ಪಡೆಯಬೇಕೆಂಬ ಜಿದ್ದಿಗೆ ಕೆ.ಎನ್. ರಾಜಣ್ಣ ಬೀಳಬಹುದು. ರಾಜಕೀಯ ಹಾಗೂ ಸಹಕಾರಿ ರಂಗದಲ್ಲಿ ಮತ್ತೆ ತಮ್ಮ ಆಸ್ತಿತ್ವ ಸಾಬೀತಿಗೆ ಕೆ.ಎನ್.ರಾಜಣ್ಣ ಯತ್ನಿಸಬಹುದು.
ತಮಗೆ ರಾಜಕೀಯವಾಗಿ ಈ ಸ್ಥಿತಿ ಬರಲು ಕಾರಣರಾದವರ ವಿರುದ್ಧ ರಾಜಕೀಯ ಸೇಡು ತೀರಿಸಿಕೊಳ್ಳಲು ಯತ್ನಿಸಬಹುದು. ಇಲ್ಲವೇ ಬೇರೊಬ್ಬರನ್ನು ರಾಜ್ಯದ ಪ್ರಮುಖ ಸಹಕಾರಿ ಸಂಸ್ಥೆಗಳಾದ ಅಪೆಕ್ಸ್ ಬ್ಯಾಂಕ್ ಮತ್ತು ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಬೆಂಬಲಿಸಬಹುದು. ಹೀಗಾಗಿ ಮತ್ತೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನ ಹಾಗೂ ಕೆಎಂಎಫ್ ಅಧ್ಯಕ್ಷ ಸ್ಥಾನ ಯಾರಿಗೆ ನೀಡಬೇಕೆಂಬ ವಿಷಯದಲ್ಲಿ ಕಾಂಗ್ರೆಸ್ ಪಕ್ಷದೊಳಗೆ ಸಿಎಂ ಸಿದ್ದರಾಮಯ್ಯ ಬಣ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಬಣದ ನಡುವೆ ಫೈಟ್ ನಡೆಯುವ ಸಾಧ್ಯತೆಯೂ ಅಧಿಕವಾಗಿದೆ.
ಡಿಸಿಎಂ ಡಿ.ಕೆ.ಶಿವಕುಮಾರ್ ಅಪೆಕ್ಸ್ ಬ್ಯಾಂಕ್ ಗೆ ತಮ್ಮ ಸಂಬಂಧಿ, ವಿಧಾನಪರಿಷತ್ ಸದಸ್ಯ ರವಿ ಅವರನ್ನು ಅಧ್ಯಕ್ಷರನ್ನಾಗಿ ಮಾಡುವ ಬಯಕೆ ಹೊಂದಿದ್ದಾರೆ. ಇನ್ನೂ ಕೆಎಂಎಫ್ ಗೆ ತಮ್ಮ ಸೋದರ ಹಾಗೂ ಈಗಾಗಲೇ ಬಮೂಲ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಿ.ಕೆ.ಸುರೇಶ್ ರನ್ನು ಅಧ್ಯಕ್ಷರನ್ನಾಗಿ ಮಾಡುವ ಮಾಡುವ ಬಯಕೆ ಹೊಂದಿದ್ದಾರೆ. ಇವೆರಡಕ್ಕೂ ಸಹಕಾರ ಖಾತೆಯ ಮಾಜಿ ಸಚಿವ ಕೆ.ಎನ್. ರಾಜಣ್ಣ ಅಡ್ಡಗಾಲು ಹಾಕಬಹುದು ಎಂಬ ಚರ್ಚೆ ಈಗ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆಯುತ್ತಿದೆ.
ಕೆ.ಎನ್.ರಾಜಣ್ಣ ಈ ಹಿಂದೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಹೀಗಾಗಿ ಅಪೆಕ್ಸ್ ಬ್ಯಾಂಕ್ ಮೇಲೆ ಹಿಡಿತ ಸಾಧಿಸಲು ಮತ್ತೆ ಕೆ.ಎನ್. ರಾಜಣ್ಣ ಯತ್ನಿಸಬಹುದು. ಈಗಾಗಲೇ 6 ನೇ ಭಾರಿಗೆ ತುಮಕೂರಿನ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಕೆ.ಎನ್. ರಾಜಣ್ಣ ನಾಮಪತ್ರ ಸಲ್ಲಿಸಿದ್ದಾರೆ. ಈ ತಿಂಗಳಲ್ಲೇ ತುಮಕೂರು ಡಿಸಿಸಿ ಬ್ಯಾಂಕ್ ನಿರ್ದೇಶಕರು ಮತ್ತು ಅಧ್ಯಕ್ಷರಾಗಿ ಅವಿರೋಧವಾಗಿ ಕೆ.ಎನ್. ರಾಜಣ್ಣ ಆಯ್ಕೆಯಾಗುವ ಸಾಧ್ಯತೆ ದಟ್ಟವಾಗಿದೆ. ಬಳಿಕ ತುಮಕೂರು ಡಿಸಿಸಿ ಬ್ಯಾಂಕ್ ನಿಂದ ಅಪೆಕ್ಸ್ ಬ್ಯಾಂಕ್ ಗೆ ತುಮಕೂರು ಡಿಸಿಸಿ ಬ್ಯಾಂಕ್ ಪ್ರತಿನಿಧಿಯಾಗಿ ಬಂದು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಗಾದಿಯ ಮೇಲೆ ಕೂರುವ ಪ್ಲ್ಯಾನ್ ಮಾಡಬಹುದು ಎಂಬ ಚರ್ಚೆ ಕೂಡ ನಡೆಯುತ್ತಿದೆ. ಹಾಲಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿ ಕಡೂರು ಕ್ಷೇತ್ರದ ಮಾಜಿ ಬಿಜೆಪಿ ಶಾಸಕ ಬೆಳ್ಳಿ ಪ್ರಕಾಶ್ ಇದ್ದಾರೆ. ಬಿಜೆಪಿಯ ಮಾಜಿ ಶಾಸಕರನ್ನೇ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಮುಂದುವರಿಸಿರುವುದೇಕೆ ಎಂದು ಕಾಂಗ್ರೆಸ್ ಹೈಕಮ್ಯಾಂಡ್ ಈ ಹಿಂದೆಯೇ ಪ್ರಶ್ನಿಸಿದೆ.
ಹೀಗಾಗಿ ಎಲ್ಲ ಜಿಲ್ಲೆಗಳ ಡಿಸಿಸಿ ಬ್ಯಾಂಕ್ ನಿರ್ದೇಶಕರು, ಅಧ್ಯಕ್ಷರ ಆಯ್ಕೆಯಾದ ಬಳಿಕ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೂ ಚುನಾವಣೆ ನಡೆಯಲಿದೆ. ಆಗ ಕೆ.ಎನ್. ರಾಜಣ್ಣ ಮತ್ತೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಲು ಯತ್ನಿಸಿದರೇ, ಡಿ.ಕೆ.ಶಿವಕುಮಾರ್ ಬಣಕ್ಕೆ ಫೈಟ್ ಎದುರಾಗಲಿದೆ.
ಇನ್ನೂ ಕೆಎಂಎಫ್ ಅಧ್ಯಕ್ಷರಾಗುವ ಮುಂದಾಲೋಚನೆಯಿಂದ ಡಿ.ಕೆ.ಸುರೇಶ್ ಈಗಾಗಲೇ ಬಮೂಲ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಆದರೇ, ಡಿ.ಕೆ.ಸುರೇಶ್ ಗೆ ಕಾಂಗ್ರೆಸ್ ನೊಳಗೆ ಸ್ಪರ್ಧೆ ಎದುರಾಗಿದೆ. ಮಾಲೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ವೈ. ನಂಜೇಗೌಡ ಕೂಡ ತಾವು ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿ ಎಂದಿದ್ದಾರೆ. ಭೀಮಾನಾಯ್ಕ್ ಅವಧಿ ಮುಗಿದ ಬಳಿಕ ತಮಗೆ ಕೆಎಂಎಫ್ ಅಧ್ಯಕ್ಷ ಸ್ಥಾನ ಕೊಡುವುದಾಗಿ ಪಕ್ಷ ಭರವಸೆ ನೀಡಿತ್ತು ಎಂದಿದ್ದಾರೆ. ಇನ್ನೂ ಕೊಪ್ಪಳದ ರಾಘವೇಂದ್ರ ಹಿಟ್ನಾಳ್ ಕೂಡ ಕೆಎಂಎಫ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ರಾಘವೇಂದ್ರ ಹಿಟ್ನಾಳ್ ಅವರು ಸಿಎಂ ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದೊಳಗೆ ತ್ರಿಕೋನ ಸ್ಪರ್ಧೆ ಇದೆ. ಡಿ.ಕೆ.ಶಿವಕುಮಾರ್ ಅವರು ಕೆ.ವೈ.ನಂಜೇಗೌಡರನ್ನು ಬಿಟ್ಟು ತಮ್ಮ ಸೋದರ ಡಿ.ಕೆ.ಸುರೇಶ್ ಗೆ ಕೆಎಂಎಫ್ ಅಧ್ಯಕ್ಷ ಸ್ಥಾನ ಕೊಡಬೇಕೆಂದು ಹೈಕಮ್ಯಾಂಡ್ ಬಳಿ ಲಾಬಿ ಮಾಡುವ ಸಾಧ್ಯತೆಯೂ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.