/newsfirstlive-kannada/media/post_attachments/wp-content/uploads/2023/12/DKSHIVAKUMAR-4.jpg)
ದೆಹಲಿ ತಲುಪಿದ ಡಿಸಿಎಂ ಡಿಕೆಶಿ
ಶತಾಯಗತಾಯವಾಗಿ ಸಿಎಂ ಗದ್ದುಗೆ ಏರಲೇಬೇಕು ಅಂತ ಕನಸು ಕಾಣ್ತಿರುವ ಡಿಕೆಶಿ ಮಾಡದ ಸರ್ಕಸ್​ಗಳಿಲ್ಲ.. ಬೆಂಗಳೂರು, ದೆಹಲಿ ಅಂತ ನಡೆಸಿದ ಪರ್ಯಟನೆಗೆ ಲೆಕ್ಕಗಳೇ ಇಲ್ಲ.. ಇಷ್ಟಾದ್ರೂ ಕುರ್ಚಿ ಮಾತ್ರ ಅವರಿಂದ ದೂರವೇ ಹೋಗ್ತಿದೆ. ಆದ್ರೂ ಛಲಬಿಡದ ತ್ರಿವಿಕ್ರಮನಂತೆ ಮತ್ತೆ ದೆಹಲಿಗೆ ಹಾರಿದ್ದು ಹೋಗುವಾಗ ಒಪ್ಪಂದದ ವಿಷಯವನ್ನು ಮತ್ತೆ ನೆನಪಿಸಿದ್ದಾರೆ.
ಡಿಕೆಶಿ ಎಂಬ ನಾನು.. ಈ ಮಾತನ್ನು ವಿಧಾನದೌದದ ಮುಂದೆ ಹೇಳಬೇಕು.. ಪ್ರತಿಜ್ಞಾವಿಧಿ ಸ್ವೀಕರಿಸಬೇಕು ಅಂತ ಡಿಸಿಎಂ ಡಿಕೆಶಿ ಕಾಣುವ ಕನಸುಗಳಿಗೆ ಲೆಕ್ಕವೇ ಇಲ್ಲದಂತಾಗಿದೆ. ತಮ್ಮ ಉಪಮುಖ್ಯಮಂತ್ರಿ ಹುದ್ದೆಯಿಂದ ಉಪ ಅನ್ನೋದನ್ನು ತೆಗೆದು ಕೇವಲ ಮುಖ್ಯಮಂತ್ರಿ ಅನ್ನೋದು ಮಾತ್ರ ಉಳಿಬೇಕು ಅಂತ ಮಾಡಬಾರದ ಸರ್ಕಸ್​ ಮಾಡ್ತಿದ್ದಾರೆ.. ಇದೇ ನಿಟ್ಟಿನಲ್ಲಿ ಡಿಕೆ ಶಿವಕುಮಾರ್​ ದೆಹಲಿ ದಂಡಯಾತ್ರೆ ಮಾಡಿದ್ದಾರೆ.
ಬಜೆಟ್​ ಬಳಿಕ ಬದಲಾವಣೆ.. ಬಜೆಟ್​​ಗೂ ಮುನ್ನವೇ ಆಟ ಶುರು
ಕುರ್ಚಿ ಕನೆಕ್ಷನ್.. ಸೋನಿಯಾ ಗಾಂಧಿ ಭೇಟಿಗೆ ಡಿಕೆ ಸಜ್ಜು
ರಾಜ್ಯ ಕಾಂಗ್ರೆಸ್​ನಲ್ಲಿ ಸಿಎಂ ಕುರ್ಚಿಗಾಗಿ ಕುರುಕ್ಷೇತ್ರವೇ ನಡೆಯುತ್ತಿದೆ. ಈ ಯುದ್ಧದಲ್ಲಿ ಗೆಲ್ಲಲೇಬೇಕೆಂದು ಜಿದ್ದಿಗೆ ಬಿದ್ದಿರುವ ಡಿಕೆ ಇಂದು ಮತ್ತೆ ದೆಹಲಿಗೆ ಹಾರಿದ್ದಾರೆ. ಈ ಬಾರಿ ಸೋನಿಯಾ ಗಾಂಧಿ ಭೇಟಿಗೆ ಸಜ್ಜಾಗಿದ್ದು ಇವತ್ತು ದೆಹಲಿಯಲ್ಲೇ ವಾಸ್ತವ್ಯ ಹೂಡಲಿದ್ದಾರೆ. ದೆಹಲಿಗೆ ತೆರಳುವ ಮುನ್ನ ಮಾತನಾಡಿದ ಡಿಕೆ, ಯಾಱರು ಸಿಕ್ತಾರೋ ಎಲ್ಲರನ್ನು ಭೇಟಿ ಮಾಡ್ತೇನೆ. ನಿತ್ಯವೂ ನನಗೇ ಸಂತೋಷದ ದಿನವೇ. ಪ್ರತಿ ದಿನವೂ ಕಷ್ಟದ ದಿನವೇ.. ಟೀಕೆಗಳು ಬರುತ್ತಾನೆ ಇರುತ್ತಾವೆ, ಟೀಕೆಗಳನ್ನು ಎದುರಿಸಲೇಬೇಕು. ನಮ್ಮ ಕೆಲಸ ನಾವು ಮಾಡಿಕೊಂಡು ಹೋಗಲೇಬೇಕು ಅಂತ ಮಾರ್ಮಿಕವಾಗಿ ಮಾತನಾಡಿದ್ರು.
ನಾವಿಬ್ಬರೂ ಕದ್ದು ಮುಚ್ಚೇನೂ ಮಾತಾಡಿಲ್ಲ.. ಡಿಕೆ ಸಂದೇಶವೇನು?
ಇನ್ನು ಪದೇ ಪದೇ ಒಪ್ಪಂದದ ಬಗ್ಗೆ ಮಾತನಾಡುವ ಡಿಕೆ ಶಿವಕುಮಾರ್ ಈಗ ಮತ್ತೆ ಅದೇ ಮಾತನ್ನೇ ಪುನರುಚ್ಚರಿಸಿದ್ದಾರೆ. ನಾನು, ಸಿದ್ದರಾಮಯ್ಯ ಏನು ಮಾತಾಡಿದ್ದೇವಂತ ನನಗೆ ಗೊತ್ತು. ನಾವಿಬ್ಬರೂ ಕದ್ದು ಮುಚ್ಚೇನೂ ಮಾತಾಡಿಕೊಂಡಿಲ್ಲ ಅಂತ ಒಪ್ಪಂದ ಅಂದ್ರೆ ಅಧಿಕಾರ ಹಂಚಿಕೆ ವಿಷಯವನ್ನು ಜೀವಂತವಾಗಿಟ್ಟಿದ್ದಾರೆ. ಇತ್ತ ಸಚಿವರು, ಶಾಸಕರು ಕುರ್ಚಿ ಸಂಬಂಧ ನೀಡುವ ಹೇಳಿಕೆಗಳು ಪಕ್ಷಕ್ಕೆ ಹಾನಿ ಮಾಡುತ್ತವೆ. ಹೀಗಾಗಿ ಎಲ್ಲರೂ ಬಾಯಿಮುಚ್ಚಿಕೊಂಡಿರಬೇಕೆಂದು ಪರೋಕ್ಷವಾಗಿ ಯತೀಂದ್ರಗೆ ಟಾಂಗ್ ಕೊಟ್ಟಿದ್ದಾರೆ.
ಇನ್ನು ಇಂದು ಸಂಜೆ ನಡೆದ ಎಐಸಿಸಿ ನಾಯಕರ ಸಭೆಯಲ್ಲಿ ಡಿಕೆಶಿ ಭಾಗಿಯಾಗಿದ್ರು. ಈ ವೇಳೆ ಚುನಾವಣೆ ವಿಚಾರವಾಗಿ ಚರ್ಚೆ ನಡೆದಿದೆ. ಇನ್ನು ದೆಹಲಿಯಲ್ಲೇ ವಾಸ್ತವ್ಯ ಹೂಡಲಿರುವ ಡಿಕೆ ನಾಳೆ ಕೆಲ ಕೇಂದ್ರ ಸಚಿವರನ್ನ ಭೇಟಿಯಾಗಲಿದ್ದಾರೆ. ರಾಜ್ಯದ ನೀರಾವರಿ ಸೇರಿದಂತೆ ಇತರೆ ಯೋಜನೆ ಕುರಿತು ಚರ್ಚೆ ಮಾಡಲಿದ್ದಾರೆ.
ಬಜೆಟ್​ನಿಂದ ಡಿಕೆ ಅಂತರ.. ದೆಹಲಿಯಲ್ಲಿ ಹೈಕಮಾಂಡ್​ಗೆ ಹತ್ತಿರ
ಇನ್ನು ಬಜೆಟ್​ ಹಿನ್ನೆಲೆ ಸಿಎಂ ಸಿದ್ದರಾಮಯ್ಯರ ಬಜೆಟ್ ಸಭೆಯಲ್ಲೂ ಡಿಕೆ ಭಾಗಿಯಾಗಲ್ಲ. ದೆಹಲಿಗೆ ತೆರಳುವುದಕ್ಕೂ ಮುನ್ನ ಸಿದ್ದರಾಮಯ್ಯರಿಗೆ ಪತ್ರ ಬರೆದು ಅನುಮತಿ ಪಡೆದಿದ್ದಾರೆ. ಬಜೆಟ್ ಪೂರ್ವಭಾವಿ ಸಭೆಗೆ ಗೈರಾಗುವ ಕುರಿತು ಪತ್ರ ಬರೆದು ಅನುಮತಿ ತೆಗೆದುಕೊಂಡಿದ್ದಾರೆ.
ಡಿ.ಕೆ ಶಿವಕುಮಾರ್ ಹೇಳಿದ್ರೆ ಅವರನ್ನೇ ಕೇಳಿ ಅಂತ ಸಿಎಂ ಗರಂ
ಇನ್ನು ಅಧಿಕಾರ ಹಂಚಿಕೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ. ಹೈಕಮಾಂಡ್ ಹೇಳಿದ್ದೇ ಅಂತಿಮ ತೀರ್ಮಾನ. ಡಿ.ಕೆ ಶಿವಕುಮಾರ್ ಏನಾದ್ರೂ ಹೇಳಿದ್ರೆ ಅವರನ್ನೇ ಕೇಳಿ ಅಂತ ಖಾರವಾಗಿ ಉತ್ತರಿಸಿದ್ದಾರೆ.
ಸದ್ಯ ಡಿಕೆ ದೆಹಲಿ ಯಾತ್ರೆ ಭಾರೀ ಕುತೂಹಲ ಮೂಡಿಸಿದೆ. ಹೈಕಮಾಂಡ್ ಮುಂದೆ ಹಲವು ವಿಚಾರ ಪ್ರಸ್ತಾಪಕ್ಕೆ ಡಿಕೆಶಿಯಂತೂ ಸಜ್ಜಾಗಿದ್ದಾರೆ. ಈ ವೇಳೆ ನಾಯಕತ್ವ ಗೊಂದಲ ಇತ್ಯರ್ಥಕ್ಕಾಗಿ ಒತ್ತಡ ಹೇರಲಿದ್ದಾರೆ. ಸಿಎಂ ಪಟ್ಟ ಕೊಡಲೇಬೇಕೆಂದು ಬಿಗಿಪಟ್ಟು ಹಿಡಿಯುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.. ಈ ಮೂಲಕ ಬಜೆಟ್ ಬಳಿಕವಾದರೂ ಸ್ಪಷ್ಟ ತೀರ್ಮಾನ ಮಾಡಲಿ ಅನ್ನೋದೇ ಇದರ ಹಿಂದಿರುವ ಲೆಕ್ಕಾಚಾರ..
ಶಿವಪ್ರಸಾದ್ , ಪೊಲಿಟಿಕಲ್ ಬ್ಯೂರೋ, ನ್ಯೂಸ್​ ಫಸ್ಟ್​ .
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us