/newsfirstlive-kannada/media/media_files/2025/08/22/veerendra-pappy-01-2025-08-22-14-38-10.jpg)
ಚಿತ್ರದುರ್ಗ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಮನೆ ಮೇಲೆ ಇ.ಡಿ. ದಾಳಿ
ಜಾರಿ ನಿರ್ದೇಶನಾಲಯದ(E.D.) ಅಧಿಕಾರಿಗಳು ಇಂದು ಚಿತ್ರದುರ್ಗದ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಮನೆ, ಕಚೇರಿಗಳ ಮೇಲೆಲ್ಲಾ ದಾಳಿ ಮಾಡಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ವೀರೇಂದ್ರ ಪಪ್ಪಿಗೆ ಸಂಬಂಧಿಸಿದ ಬೆಂಗಳೂರಿನ 10 ಸ್ಥಳಗಳು ಹಾಗೂ ಜೋಧಪುರದ 3 ಸ್ಥಳಗಳ ಮೇಲೆ ಇ.ಡಿ. ದಾಳಿಯಾಗಿದೆ. ಹುಬ್ಬಳ್ಳಿಯ ಒಂದು ಸ್ಥಳ, ಮುಂಬೈನ ಎರಡು ಸ್ಥಳಗಳ ಮೇಲೆ ಇ.ಡಿ. ದಾಳಿಯಾಗಿದೆ. ಗೋವಾದ 8 ಸ್ಥಳಗಳ ಮೇಲೆ ಇ.ಡಿ. ರೇಡ್ ಮಾಡಿದೆ.
ಗೋವಾದಲ್ಲಿ ಪಪ್ಪಿ ಕ್ಯಾಶಿನೋ ಗೋಲ್ಡ್, ಓಸಿಯಾನ್ ರೀವರ್ ಕ್ಯಾಶಿನೋ, ಪಪ್ಪಿ ಕ್ಯಾಸಿನೋ ಪ್ರೈಡ್, ಓಸಿಯಾನ್ 7 ಕ್ಯಾಸಿನೋ, ಬಿಗ್ ಡ್ಯಾಡಿ ಕ್ಯಾಸಿನೋ ಮೇಲೆ ಇ.ಡಿ. ರೇಡ್ ಮಾಡಿದೆ. ಇವೆಲ್ಲವೂ ಚಿತ್ರದುರ್ಗ ಕ್ಷೇತ್ರದ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಮಾಲೀಕತ್ವದ ಕ್ಯಾಸಿನೋಗಳು.
ಇನ್ನೂ ವೀರೇಂದ್ರ ಪಪ್ಪಿ ಮೇಲೆ ಇ.ಡಿ. ರೇಡ್ ಮಾಡಲು ಕಾರಣವಾಗಿದ್ದು, ಆಕ್ರಮ ಆನ್ ಲೈನ್ ಮತ್ತು ಆಫ್ ಲೈನ್ ಬೆಟ್ಟಿಂಗ್ ಕೇಸ್ ಎಂದು ಇ.ಡಿ. ಅಧಿಕಾರಿಗಳು ಹೇಳಿದ್ದಾರೆ. ವೀರೇಂದ್ರ ಪಪ್ಪಿ ಅನೇಕ ಆನ್ ಲೈನ್ ಬೆಟ್ಟಿಂಗ್ ಸೈಟ್ ಗಳನ್ನು ನಡೆಸುತ್ತಿದ್ದಾರೆ. ಕಿಂಗ್ 567, ರಾಜಾ567, ಪಪ್ಪಿ003, ರತ್ನ ಗೇಮಿಂಗ್ ಇತ್ಯಾದಿ ಆನ್ ಲೈನ್ ಬೆಟ್ಟಿಂಗ್ ಸೈಟ್ ಗಳನ್ನು ನಡೆಸುತ್ತಿದ್ದಾರೆ. ಇನ್ನೂ ವೀರೇಂದ್ರ ಪಪ್ಪಿ ಸೋದರ ಕೆ.ಸಿ.ತಿಪ್ಪೇಸ್ವಾಮಿ ದುಬೈನಲ್ಲಿದ್ದುಕೊಂಡು ಮೂರು ಬ್ಯುಸಿನೆಸ್ ಕಂಪನಿಗಳನ್ನು ನಡೆಸುತ್ತಿದ್ದಾರೆ. ದುಬೈ ಸಾಫ್ಟ ಟೇಕ್, ಟಿಆರ್‌ಎಸ್ ಟೆಕ್ನಾಲಜೀಸ್, ಪ್ರೈಮ್ 9 ಟೆಕ್ನಾಲಜೀಸ್ ಎಂಬ ಕಂಪನಿಗಳನ್ನು ನಡೆಸುತ್ತಿದ್ದು, ಇವೆಲ್ಲವೂ ಕಾಲ್ ಸೆಂಟರ್ ಸರ್ವೀಸ್ ನೀಡುವ ಕಂಪನಿಗಳಾಗಿವೆ. ಜೊತೆಗೆ ಕೆ.ಸಿ.ವೀರೇಂದ್ರರ ಗೇಮಿಂಗ್ ಬ್ಯುಸಿನೆಸ್ ಗೆ ಸಂಬಂಧಿಸಿದ ಕಂಪನಿಗಳಾಗಿವೆ. ಇನ್ನೂ ವೀರೇಂದ್ರ ಪಪ್ಪಿ ಜೊತೆಗೆ ವ್ಯವಹಾರಿಕ ಸಂಬಂಧ ಹೊಂದಿರುವ ಅನಿಲ್ ಗೌಡ ಮೇಲೂ ದಾಳಿ ನಡೆಸಲಾಗಿದೆ ಎಂದು ಇ.ಡಿ. ಹೇಳಿದೆ. ಈ ಅನಿಲ್ ಗೌಡ ಕಾಂಗ್ರೆಸ್ ಬೆಂಗಳೂರು ಜಿಲ್ಲಾಧ್ಯಕ್ಷರಾಗಿರುವ ಹನುಮಂತರಾಯಪ್ಪ ಅವರ ಮಗ. ಅನ್ನಪೂರ್ಣೇಶ್ವರಿ ನಗರದ ಅನಿಲ್ ಗೌಡ ಮನೆ ಮೇಲೆ ಇ.ಡಿ. ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಈ ಬಗ್ಗೆ ಇ.ಡಿ. ಈಗ ಅಧಿಕೃತ ಮಾಹಿತಿಯನ್ನು ನೀಡಿದೆ.
ಚಿತ್ರದುರ್ಗದ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ವಿರುದ್ಧ ಆನ್ ಲೈನ್ ಮತ್ತು ಆಫ್ ಲೈನ್ ಬೆಟ್ಟಿಂಗ್ ಕೇಸ್ ದಾಖಲಾಗಿದೆ. ಆನ್ ಲೈನ್ ಬೆಟ್ಟಿಂಗ್ ನಿಂದ ಗಳಿಸಿದ ಹಣವನ್ನು ಆಕ್ರಮವಾಗಿ ವರ್ಗಾವಣೆ ಮಾಡಿದ ಆರೋಪ ಇದೆ. ಹೀಗಾಗಿ ಇ.ಡಿ. ಅಧಿಕಾರಿಗಳು ಇಂದು ಒಟ್ಟಾರೆ 24 ಸ್ಥಳಗಳ ಮೇಲೆ ದಾಳಿ ಮಾಡಿದ್ದಾರೆ. ವೀರೇಂದ್ರ ಪಪ್ಪಿ ಗೋವಾದಲ್ಲಿ ಕ್ಯಾಸಿನೋ ಬ್ಯುಸಿನೆಸ್ ಹೊಂದಿದ್ದಾರೆ ಎಂಬುದು ಚಿತ್ರದುರ್ಗದ ಜನರಿಗೆಲ್ಲಾ ಗೊತ್ತಿರುವ ವಿಚಾರ. ಆದರೇ, ಈಗ ಆನ್ ಲೈನ್ ಬೆಟ್ಟಿಂಗ್ ಸೈಟ್ ಗಳನ್ನು ನಡೆಸುತ್ತಿದ್ದಾರೆ ಎಂಬುದು ಗೊತ್ತಾಗಿದೆ.
ಈ ಹಿಂದೆಯೂ ವೀರೇಂದ್ರ ಪಪ್ಪಿ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ರೇಡ್ ಮಾಡಿದ್ದರು. ಆಗ ಕೋಟಿಗಟ್ಟಲೇ ಹಣ ವೀರೇಂದ್ರ ಪಪ್ಪಿ ಮನೆಯಲ್ಲಿ ಸಿಕ್ಕಿತ್ತು. ಮನೆಯ ಗೋಡೆಯನ್ನು ಕೊರೆದು ರಹಸ್ಯವಾಗಿ ಕೋಟಿಗಟ್ಟಲೇ ಹಣ ಇಟ್ಟಿದ್ದು ಬೆಳಕಿಗೆ ಬಂದಿತ್ತು. ಮನೆಯ ಬೆಡ್ ರೂಮು, ಬಾತ್ ರೂಮುನ ಗೋಡೆಯಲ್ಲಿ ಹಣ ಇಟ್ಟಿದ್ದು ಬೆಳಕಿಗೆ ಬಂದಿತ್ತು. ಇದನ್ನು ಕಂಡು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳೇ ದಂಗಾಗಿ ಹೋಗಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.