/newsfirstlive-kannada/media/media_files/2025/08/11/siddaramaiah-kn-rajanna-2025-08-11-19-33-34.jpg)
ಸಿದ್ದರಾಮಯ್ಯ ಜೊತೆ ಕೆಎನ್ ರಾಜಣ್ಣ
ನಮ್ಮಲ್ಲೂ ತಪ್ಪಿದೆ, ಈಗ ಪ್ರಶ್ನಿಸುವ ಬದಲು ಮೊದಲೇ ಪ್ರಶ್ನಿಸಬೇಕಾಗಿತ್ತು. ರಾಹುಲ್ ಗಾಂಧಿಯನ್ನ ಕೆರಳುವಂತೆ ಮಾಡಿತ್ತು ರಾಜಣ್ಣರ ಈ ಒಂದು ಹೇಳಿಕೆ. ಮತಗಳ್ಳತನದ ವಿರುದ್ಧ ಇಂಡಿಯಾ ಒಕ್ಕೂಟದ ಜೊತೆ ದೇಶಾದ್ಯಂತ ಹೋರಾಟವನ್ನು ರಾಹುಲ್ ಗಾಂಧಿ ನಡೆಸುತ್ತಿದ್ದಾರೆ. ಇದೇ ಹೊತ್ತಲ್ಲಿ ನಮ್ಮಲ್ಲೂ ತಪ್ಪಿದೆ, ಮೊದಲೇ ವೋಟರ್ ಲಿಸ್ಟ್ ಆಕ್ರಮದ ಬಗ್ಗೆ ಪ್ರಶ್ನಿಸಬೇಕಾಗಿತ್ತು ಎಂದು ಹೇಳಿಕೆ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ರಾಹುಲ್ ಗಾಂಧಿಗೆ ಮುಜುಗರ ಸೃಷ್ಟಿಸಿದ್ದು ಕರ್ನಾಟಕದ ಸಹಕಾರ ಖಾತೆ ಸಚಿವರಾಗಿದ್ದ ಕೆ.ಎನ್. ರಾಜಣ್ಣ. ಈ ಹೇಳಿಕೆಯ ವರದಿಯನ್ನು ವೇಣುಗೋಪಾಲ್ ಮೂಲಕ ರಾಹುಲ್ ಗೆ ತಲುಪುವಂತೆ ಮಾಡಿದ್ದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ. ಕೆ.ಎನ್. ರಾಜಣ್ಣರ ಹೇಳಿಕೆಯ ವಿಡಿಯೋ, ಮಾಧ್ಯಮಗಳ ವರದಿಯನ್ನ ರಾಹುಲ್ ಗೆ ರವಾನೆಯಾಗುವಂತೆ ಮಾಡಿದ್ದು ರಣದೀಪ್ ಸುರ್ಜೇವಾಲಾ. ಜೊತೆಗೆ ಖುದ್ದು ರಾಹುಲ್ ಗಾಂಧಿಯನ್ನು ಭೇಟಿ ಮಾಡಿ ರಾಷ್ಟ್ರೀಯ ಮಾಧ್ಯಮಗಳಲ್ಲಿ ಕೆ.ಎನ್. ರಾಜಣ್ಣ ಹೇಳಿಕೆಯೇ ಚರ್ಚೆಯಾಗುತ್ತಿದೆ ಎಂದು ಒತ್ತಿ ಒತ್ತಿ ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ.
ಆದರೇ, ಇದಕ್ಕೂ ಮುನ್ನ ಆಗಸ್ಟ್ 8 ರಂದು ರಾಹುಲ್ ಗಾಂಧಿ ಬೆಂಗಳೂರಿಗೆ ಬಂದಿದ್ದಾಗಲೂ ಕೆ.ಎನ್.ರಾಜಣ್ಣ ವಿರುದ್ಧ ರಾಹುಲ್ ಗಾಂಧಿಗೆ ರಣದೀಪ್ ಸುರ್ಜೇವಾಲಾ ಈ ಹಿಂದೆ ಕೆ.ಎನ್. ರಾಜಣ್ಣ ನೀಡಿದ್ದ ಹೇಳಿಕೆಗಳನ್ನೆಲ್ಲಾ ಸೇರಿಸಿ ದೂರು ಹೇಳಿದ್ದರು. ಆಗಲೇ ರಾಹುಲ್ ಗಾಂಧಿ, ಸಚಿವ ಕೆ.ಎನ್.ರಾಜಣ್ಣ ವಿರುದ್ಧ ಕ್ರಮಕ್ಕೆ ಸೂಚಿಸಿದ್ದಾರಂತೆ. ಮತ್ತೆ ಮತಗಳವು ಅಂದೋಲನದ ವಿರುದ್ಧ ಕೆ.ಎನ್.ರಾಜಣ್ಣ ಹೇಳಿಕೆ ಕೊಟ್ಟಿದ್ದನ್ನು ರಾಹುಲ್ ಗಾಂಧಿ ಗಮನಕ್ಕೆ ತಂದಾಗ, ತಕ್ಷಣವೇ ಕ್ಯಾಬಿನೆಟ್ ನಿಂದ ವಜಾ ಮಾಡುವಂತೆ ಸಿಎಂ ಸಿದ್ದರಾಮಯ್ಯಗೆ ರಾಹುಲ್ ಗಾಂಧಿ ಸೂಚಿಸಿದ್ದಾರೆ. ಕಾಂಗ್ರೆಸ್ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಮೂಲಕ ಸಿಎಂಗೆ ಕರೆ ಮಾಡಿಸಿ ರಾಜಣ್ಣರನ್ನು ವಜಾ ಮಾಡುವಂತೆ ರಾಹುಲ್ ಗಾಂಧಿ ಸೂಚಿಸಿದ್ದಾರೆ.
ಇದು ಆಗಸ್ಟ್ 11 ರಂದು ವಿಧಾನಸೌಧದ ತಮ್ಮ ಕಚೇರಿಯಲ್ಲಿ ಇದ್ದ ರಾಜಣ್ಣ ಅವರಿಗೆ ಟಿವಿ ಚಾನಲ್ ಗಳ ವರದಿ ಮೂಲಕ ಗೊತ್ತಾಗಿದೆ. ರಾಹುಲ್ ಗಾಂಧಿಯೇ ತಮ್ಮನ್ನು ವಜಾ ಮಾಡುವಂತೆ ಹೇಳಿರುವುದರಿಂದ ಅದಕ್ಕಿಂತ ಮುಂಚಿತವಾಗಿಯೇ ತಾವಾಗಿಯೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಖ ಉಳಿಸಿಕೊಳ್ಳಲು ಕೆ.ಎನ್. ರಾಜಣ್ಣ ಮುಂದಾಗಿದ್ದರು. ಸಚಿವ ಸ್ಥಾನಕ್ಕೆ ರಾಜೀನಾಮೆ ಪತ್ರವನ್ನು ಬರೆದ ಕೆ.ಎನ್.ರಾಜಣ್ಣ ಅದನ್ನು ಸಿಎಂ ಸಿದ್ದರಾಮಯ್ಯಗೆ ತಲುಪಿಸಿದ್ದರು. ಆದರೇ, ಕಾಂಗ್ರೆಸ್ ಹೈಕಮ್ಯಾಂಡ್ ಕೆ.ಎನ್.ರಾಜಣ್ಣರನ್ನು ಕ್ಯಾಬಿನೆಟ್ ನಿಂದ ವಜಾಗೊಳಿಸಲೇಬೇಕೆಂದು ಕಟ್ಟುನಿಟ್ಟಾಗಿ ಸೂಚನೆ ನೀಡಿದ್ದರಿಂದ, ರಾಜೀನಾಮೆ ಪತ್ರವನ್ನು ಸಿಎಂ ಅಂಗೀಕರಿಸಲಿಲ್ಲ. ಬದಲಿಗೆ ಕೆ.ಎನ್.ರಾಜಣ್ಣರನ್ನು ಕ್ಯಾಬಿನೆಟ್ ನಿಂದ ವಜಾಗೊಳಿಸುವಂತೆ ರಾಜ್ಯಪಾಲರಿಗೆ ಶಿಫಾರಸ್ಸು ಮಾಡಿದ್ದರು. ಈ ಶಿಫಾರಸ್ಸು ಆಧಾರದ ಮೇಲೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ , ರಾಜಣ್ಣರನ್ನು ಕ್ಯಾಬಿನೆಟ್ ನಿಂದ ವಜಾ ಮಾಡಿದ್ದರು. ಬಳಿಕ ರಾಜ್ಯಪಾಲರ ವಿಶೇಷ ಸೆಕ್ರೆಟರಿ ಪ್ರಭುಶಂಕರ್, ಕೆ.ಎನ್.ರಾಜಣ್ಣರನ್ನು ಕ್ಯಾಬಿನೆಟ್ ನಿಂದ ತೆಗೆಯಲಾಗಿದೆ ಎಂಬ ಪತ್ರವನ್ನು ರಾಜ್ಯದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಕಳಿಸಿದ್ದರು. ಇದೇ ಪತ್ರ ಮಾಧ್ಯಮಗಳಿಗೂ ಲಭ್ಯವಾಗಿತ್ತು.
ರಾಜೀನಾಮೆ ಅಂಗೀಕರಿಸದೇ, ವಜಾ ಅವಮಾನಕರ
ಸಚಿವ ಸ್ಥಾನಕ್ಕೆ ಕೆಎನ್‌ಆರ್ ಕೊಟ್ಟ ರಾಜೀನಾಮೆಯನ್ನು ಅಂಗೀಕರಿಸಿ, ರಾಜ್ಯಪಾಲರಿಗೆ ಕಳಿಸಿದ್ದರೇ, ಕೆಎನ್‌ಆರ್ ಗೌರವ ಉಳಿಯುತ್ತಿತ್ತು. ಸಾಮಾನ್ಯವಾಗಿ ರಾಜಕೀಯದಲ್ಲಿ, ಯಾರಾದಾದರೂ ಸಚಿವ ಸ್ಥಾನದಿಂದ ತೆಗೆಯುವ ಸಂದರ್ಭದಲ್ಲಿ ಗೌರವಯುತ ನಿರ್ಗಮನಕ್ಕೆ ಅವಕಾಶ ಮಾಡಿಕೊಡಬೇಕೆಂದು ರಾಜೀನಾಮೆ ಪಡೆದು ಅಂಗೀಕರಿಸಲಾಗುತ್ತೆ. ಕ್ಯಾಬಿನೆಟ್ ನಿಂದ ಸಚಿವರೊಬ್ಬರನ್ನು ವಜಾಗೊಳಿಸುವುದು ಅವಮಾನಕರ ಎಂದೇ ರಾಜಕೀಯ ವಲಯದಲ್ಲಿ ಪರಿಗಣಿಸಲಾಗುತ್ತೆ. ಸಿಎಂ ಸಿದ್ದರಾಮಯ್ಯಗೂ ತಮ್ಮ ಆಪ್ತರಾದ ಕೆಎನ್ ರಾಜಣ್ಣಗೆ ಅವಮಾನ ಮಾಡುವ ಉದ್ದೇಶ ಇರಲಿಲ್ಲ. ಆದರೇ, ಕಾಂಗ್ರೆಸ್ ಹೈಕಮ್ಯಾಂಡ್ ಸೂಚನೆಯಿಂದ ಅವಮಾನಕರ ರೀತಿಯಲ್ಲಿ ಕ್ಯಾಬಿನೆಟ್ ನಿಂದ ರಾಜಣ್ಣರನ್ನು ವಜಾಗೊಳಿಸುವ ಶಿಫಾರಸ್ಸು ಅನ್ನು ಸಿದ್ದರಾಮಯ್ಯ ಮಾಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಬೇರೆ ಬೇರೆ ಸೆಕ್ಸ್ ಹಗರಣ, ಸಿ.ಡಿ. ಹಗರಣಗಳಲ್ಲಿ ಸಿಲುಕಿದವರೆಲ್ಲಾ ತಾವಾಗಿಯೇ ರಾಜೀನಾಮೆ ಕೊಟ್ಟಿದ್ದಾರೆ. ಆ ರಾಜೀನಾಮೆಗಳನ್ನು ಅಂಗೀಕರಿಸಿ, ಅಂಥವರಿಗೆಲ್ಲಾ ಕ್ಯಾಬಿನೆಟ್ ನಿಂದ ಗೌರವಯುತ ನಿರ್ಗಮನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಇದೇ ಸಿದ್ದರಾಮಯ್ಯರ ಹಿಂದಿನ ಸರ್ಕಾರದಲ್ಲಿ ಎಚ್.ವೈ.ಮೇಟಿ ಲೈಂಗಿಕತೆಯ ವಿಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾದಾಗ, ಅವರ ರಾಜೀನಾಮೆ ಪಡೆದು ಸಿದ್ದರಾಮಯ್ಯ ಅಂಗೀಕರಿಸಿದ್ದರು. ಹಣಕಾಸು ಅವ್ಯವಹಾರ ಎಸಗಿದ ಆರೋಪ ಬಂದವರಿಂದಲೂ ರಾಜೀನಾಮೆ ಪಡೆಯಲಾಗಿತ್ತು.
ಆದರೇ, ಅಂಥ ಯಾವ ಹಗರಣವನ್ನೂ ಮಾಡದ ಕೆ.ಎನ್.ರಾಜಣ್ಣ ವಿಷಯದಲ್ಲಿ ಮಾತ್ರ ಕಾಂಗ್ರೆಸ್ ಹೈಕಮ್ಯಾಂಡ್ ಕಠಿಣ ತೀರ್ಮಾನ ತೆಗೆದುಕೊಂಡಿದ್ದು, ಕೆ.ಎನ್. ರಾಜಣ್ಣ ಬೆಂಬಲಿಗರಿಗೆ ನುಂಗಲಾರದ ತುತ್ತು. ಇದನ್ನು ಅರಗಿಸಿಕೊಳ್ಳುವುದು ಕೆ.ಎನ್.ರಾಜಣ್ಣ ಮತ್ತು ಬೆಂಬಲಿಗರಿಗೆ ಸುಲಭವೂ ಅಲ್ಲ.
ಕೆ.ಎನ್.ರಾಜಣ್ಣರನ್ನು ಉಳಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ಯತ್ನ
ಆದರೇ, ಸಿಎಂ ಸಿದ್ದರಾಮಯ್ಯ, ತಮ್ಮ ಬೆಂಬಲಿಗ ಸಚಿವರಾಗಿದ್ದ ಕೆ.ಎನ್.ರಾಜಣ್ಣರನ್ನು ಕ್ಯಾಬಿನೆಟ್ ನಲ್ಲಿ ಉಳಿಸಿಕೊಳ್ಳಲು ಭಾರಿ ಪ್ರಯತ್ನ ನಡೆಸಿದ್ದರು. ಅಧಿವೇಶನ ಮುಗಿದ ಬಳಿಕ ರಾಜಣ್ಣ ರಾಜೀನಾಮೆ ಪಡೆಯಲು ಮುಂದಾಗಿದ್ದರು. ಆದರೇ, ಇದಕ್ಕೆ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಒಪ್ಪಲಿಲ್ಲ. ನೀವು ಏನೇ ಹೇಳುವುದಿದ್ದರೂ, ನೀವೇ ನೇರವಾಗಿ ರಾಹುಲ್ ಗಾಂಧಿ ಜೊತೆಗೆ ಮಾತನಾಡಿ ಹೇಳಿ ಎಂದಿದ್ದಾರೆ. ಕೊನೆಗೆ ರಾಹುಲ್ ಗಾಂಧಿಗೆ ಸಿಎಂ ಸಿದ್ದರಾಮಯ್ಯ ಕರೆ ಮಾಡಿದಾಗ, ರಾಜಣ್ಣ ರಾಜೀನಾಮೆ ನೀಡುವುದು ಬೇಡ, ನೀವೇ ಕ್ಯಾಬಿನೆಟ್ ನಿಂದ ವಜಾಗೊಳಿಸಿ ಎಂಬ ಸಂದೇಶವನ್ನು ಸಿಎಂ ಸಿದ್ದರಾಮಯ್ಯಗೆ ನೀಡಿದ್ದಾರೆ. ಕೊನೆಗೆ ರಾಹುಲ್ ಗಾಂಧಿ ಮಾತಿಗೆ ಮರು ಮಾತನ್ನಾಡದೆ ರಾಜಣ್ಣರನ್ನ ಸಂಪುಟದಿಂದ ಸಿಎಂ ಸಿದ್ದರಾಮಯ್ಯ ಕಿತ್ತಾಕಿದ್ದಾರೆ.
ಕೊನೆ ಹಂತದವರೆಗೂ ಕೆ.ಎನ್ ರಾಜಣ್ಣರನ್ನ ಉಳಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ಪ್ರಯತ್ನ ನಡೆಸಿದ್ದರು. ಸಂಪುಟದಿಂದ ವಜಾಗೊಳಿಸುವಂತೆ ವೇಣುಗೋಪಾಲ್ ಕರೆ ಮಾಡಿದ್ದಾಗಲೂ ಉಳಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ಯತ್ನ ನಡೆಸಿದ್ದರು. ಅಧಿವೇಶನದಲ್ಲಿ ಕೆ.ಎನ್. ರಾಜಣ್ಣ ಮೂರು ಪ್ರಮುಖ ಬಿಲ್ ಗಳನ್ನ ಮಂಡಿಸಬೇಕಿದೆ ಎಂದು ವೇಣುಗೋಪಾಲ್ ಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಈಗ ಅಧಿವೇಶನ ನಡೆಯುತ್ತಿದೆ, ಹತ್ತು ದಿನಗಳ ನಂತರ ರಾಜೀನಾಮೆ ಪಡೆಯೋಣ. ಅದರಲ್ಲೂ ಸಹಕಾರ ಇಲಾಖೆಯ ಮೂರು ವಿಧೇಯಕಗಳ ಮಂಡನೆಯಾಗಬೇಕಿದೆ. ಕೆ.ಎನ್. ರಾಜಣ್ಣ ವಿಧೇಯಕಗಳನ್ನ ಮಂಡಿಸಬೇಕಿದೆ. ಹೀಗಿರುವಾಗ ಈಗ ರಾಜಣ್ಣರ ರಾಜೀನಾಮೆ ಪಡೆಯೋದು ಬೇಡ. ಹತ್ತು ದಿನಗಳ ನಂತರ ರಾಜೀನಾಮೆ ಪಡೆಯೋಣ ಎಂದು ಸಿಎಂ ಸಿದ್ದರಾಮಯ್ಯ , ಕೆ.ಸಿ.ವೇಣುಗೋಪಾಲ್ ಗೆ ಹೇಳಿದ್ದಾರೆ. ಆದರೇ, ಸಿಎಂ ಸಿದ್ದರಾಮಯ್ಯ, ಮಾತುಗಳನ್ನು ಕೇಳಲು ವೇಣುಗೋಪಾಲ್ ತಯಾರಿರಲಿಲ್ಲ. ಈ ಕ್ಷಣವೇ ಸಚಿವ ಸ್ಥಾನಕ್ಕೆ ರಾಜಣ್ಣರಿಂದ ರಾಜೀನಾಮೆ ಅಲ್ಲ, ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಕೆ.ಸಿ.ವೇಣುಗೋಪಾಲ್ ಹೈಕಮ್ಯಾಂಡ್ ನಿಲುವು ಅನ್ನು ಸಿದ್ದರಾಮಯ್ಯಗೆ ತಿಳಿಸಿದ್ದರು.
ಕೆ.ಸಿ.ವೇಣುಗೋಪಾಲ್ ಗೆ ಮತ್ತೊಮ್ಮೆ ಮನವೊಲಿಕೆ ಮಾಡಲು ಸಿಎಂ ಸಿದ್ದರಾಮಯ್ಯ ಮುಂದಾಗಿದ್ದರು. ಆದರೇ, ಕೊನೆಗೆ ನೀವೇ ರಾಹುಲ್ ಗಾಂಧಿ ಬಳಿ ಮಾತನಾಡಿ ಎಂದು ಕೆ.ಸಿ.ವೇಣುಗೋಪಾಲ್ ಕಾಲ್ ಕಟ್ ಮಾಡಿದ್ದರು.
ಕೆ.ಎನ್. ರಾಜಣ್ಣ, ಸ್ವಾಭಿಮಾನ, ಆತ್ಮಗೌರವಕ್ಕಾಗಿ ತಮ್ಮನ್ನು ಜೀವನಪರ್ಯಂತ ಹೋರಾಟ ನಡೆಸಿದ್ದಾರೆ. ತಮಗೆ ಗೌರವ ಇಲ್ಲದ ಕಡೆ ಅವರು ಇರುವವರಲ್ಲ. ಆದರೇ, ಈಗ ಆಗಿರುವುದನ್ನು ನುಂಗಿಕೊಂಡು ಮುಂದೆ ಹೆಜ್ಜೆ ಹಾಕಬೇಕಾಗಿದೆ. ಕೆ.ಎನ್.ರಾಜಣ್ಣ, ಸಿಎಂ ಸಿದ್ದರಾಮಯ್ಯರಂತೆ ಜಾತ್ಯಾತೀತತೆ, ಸಾಮಾಜಿಕ ನ್ಯಾಯ, ಶೋಷಿತ ಸಮುದಾಯಗಳ ಏಳಿಗೆಗಾಗಿ ಜೀವನ ಪರ್ಯಂತ ದುಡಿದಿದ್ದಾರೆ. ಶೋಷಿತ ಸಮುದಾಯಗಳ ಬೆನ್ನಿಗೆ ನಿಂತಿದ್ದಾರೆ. ಆದರೇ, ಈಗ ಸಿಎಂ ಸಿದ್ದರಾಮಯ್ಯ ಅವರಿಗೆ ಕೆ.ಎನ್. ರಾಜಣ್ಣ ಬೆನ್ನಿಗೆ ನಿಲ್ಲಲು ಆಗಲಿಲ್ಲ ಎಂಬುದು ವಿಪರ್ಯಾಸ. ತತ್ವ ಸಿದ್ದಾಂತಗಳಲ್ಲಿ ಸಿದ್ದರಾಮಯ್ಯ, ಕೆ.ಎನ್.ರಾಜಣ್ಣ ಇಬ್ಬರು ಒಂದೇ. ಆದರೇ, ಸಿದ್ದರಾಮಯ್ಯ ಮನಸ್ಸಿಗೆ ಅನ್ನಿಸಿದ್ದನ್ನು ನೇರವಾಗಿ ಯಾವಾಗಲೂ ಹೇಳಲ್ಲ. ಕೆ.ಎನ್.ರಾಜಣ್ಣ ನೇರವಾಗಿ ಹೇಳಿ, ಕುರ್ಚಿಗೆ ಕುತ್ತು ತಂದುಕೊಂಡಿದ್ದಾರೆ. ಪಕ್ಷದೊಳಗಿನ ವಿರೋಧಿಗಳು ಇದೇ ಸಂದರ್ಭಕ್ಕಾಗಿ ಕಾದು, ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ ಎಂದು ಮಧುಗಿರಿ ತಾಲ್ಲೂಕು ಹಾಗೂ ತುಮಕೂರು ಜಿಲ್ಲೆಯ ಕೆ.ಎನ್.ಆರ್. ಅಭಿಮಾನಿಗಳು ನೋವು ತೋಡಿಕೊಳ್ಳುತ್ತಿದ್ದಾರೆ. ಕೆ.ಎನ್. ರಾಜಣ್ಣ ತುಮಕೂರು ಜಿಲ್ಲೆಯ ರಾಜಕಾರಣದಲ್ಲಿ ನೋಡಿದರೂ, ನಿಷ್ಠುರವಾದಿ ರಾಜಕಾರಣಿ ಎಂದೇ ಹೆಸರು ಮಾಡಿದವರು. ಅಧಿಕಾರಕ್ಕಾಗಿ ರಾಜೀ ಮಾಡಿಕೊಂಡವರಲ್ಲ. ಜೆಡಿಎಸ್ ನಿಂದ 2004 ರಲ್ಲಿ ಬೆಳ್ಳಾವಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಆದರೇ, ಸಿಎಂ ಸಿದ್ದರಾಮಯ್ಯ ಜೊತೆಯಾಗಲು ಕಾಂಗ್ರೆಸ್ ಸೇರ್ಪಡೆಯಾದರು. ಆದರೇ, ಸಿದ್ದರಾಮಯ್ಯ ಕೂಡ 2009ರ ಮಧುಗಿರಿ ಉಪಚುನಾವಣೆ ವೇಳೆ ಕೆಎನ್.ಆರ್. ಪರ ಚುನಾವಣಾ ಪ್ರಚಾರಕ್ಕೆ ಬಂದಿರಲಿಲ್ಲ. ಆಗ ಸಿದ್ದರಾಮಯ್ಯ ಪ್ರಚಾರಕ್ಕೆ ಬಂದಿದ್ದರೇ, ಅನಿತಾ ಕುಮಾರಸ್ವಾಮಿರನ್ನು ಸೋಲಿಸಿ ಗೆಲ್ಲುತ್ತಿದ್ದೆ ಎಂದು ಕೆಎನ್.ಆರ್ ಹೇಳುತ್ತಾರೆ.