/newsfirstlive-kannada/media/media_files/2025/11/07/sugar-cane-farmers-cm-meeting-successful02-2025-11-07-18-17-01.jpg)
ಡಿ.ಕೆ.ಶಿವಕುಮಾರ್ ಗೆ ಸಿಎಂ ಹುದ್ದೆಗಾಗಿ 2028 ರವರೆಗೂ ಕಾಯುವಿಕೆ ಅನಿವಾರ್ಯ!
ಕಾಂಗ್ರೆಸ್ ಹೈಕಮ್ಯಾಂಡ್ ಇಂದು ರಾಜ್ಯದಲ್ಲಿ ಸಚಿವ ಸಂಪುಟ ಪುನರ್ ರಚನೆಗೆ ಸಿಎಂ ಸಿದ್ದರಾಮಯ್ಯ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಿದೆ. ಈ ಮೂಲಕ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದೆ. ರಾಜಕೀಯವಾಗಿಯೂ ರಾಜ್ಯದಲ್ಲಿ ಸ್ಪಷ್ಟ ಸಂದೇಶ ರವಾನೆ ಮಾಡಿದೆ. ಮೊದಲನೇಯದಾಗಿ ಬಾಕಿ ಉಳಿದಿರುವ ಮುಂದಿನ ಎರಡೂವರೆ ವರ್ಷಗಳಿಗೂ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರಿಯುತ್ತಾರೆ, ಹೀಗಾಗಿ ಅವರಿಗೆ ಕ್ಯಾಬಿನೆಟ್ ಪುನರ್ ರಚನೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಎರಡನೇಯದಾಗಿ ರಾಜ್ಯದಲ್ಲಿ ಸಿಎಂ ಹುದ್ದೆಯಲ್ಲಿರುವ ಸಿದ್ದರಾಮಯ್ಯರನ್ನು ಬದಲಾವಣೆ ಮಾಡಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ.
ಕಾಂಗ್ರೆಸ್ ಹೈಕಮ್ಯಾಂಡ್ ನ ಇಂದಿನ ತೀರ್ಮಾನ ಸಿಎಂ ಸ್ಥಾನದ ಆಕಾಂಕ್ಷಿಗಳಾಗಿದ್ದ ಅನೇಕ ಆಸೆ, ಕನಸು ಭಗ್ನವಾಗಲು ಕಾರಣವಾಗಿದೆ. ವಿಶೇಷವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಈ ಅವಧಿಯಲ್ಲೇ ಸಿಎಂ ಸ್ಥಾನದ ಆಕಾಂಕ್ಷಿಯಾಗಿದ್ದರು . 2023 ರಲ್ಲಿ ಡಿ.ಕೆ.ಶಿವಕುಮಾರ್ ಸಿಎಂ ಸ್ಥಾನದ ಆಕಾಂಕ್ಷಿಯಾಗಿದ್ದರು. ಆಗಲೂ ಅವರಿಗೆ ಸಿಎಂ ಸ್ಥಾನ ಸಿಕ್ಕಿರಲಿಲ್ಲ. ಈಗ 2025ರ ನವಂಬರ್ ತಿಂಗಳಿನಲ್ಲಿ ಸಿದ್ದರಾಮಯ್ಯ ಸಿಎಂ ಆಗಿ ಎರಡೂವರೆ ವರ್ಷ ಪೂರೈಸಿದ್ದಾರೆ. ಈಗಲಾದರೂ ಸಿಎಂ ಸ್ಥಾನ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಆ ನಿರೀಕ್ಷೆ ಕೂಡ ಈಗ ಹುಸಿಯಾಗಿದೆ.
ಇನ್ನೂ ಲಿಂಗಾಯತ ಸಮುದಾಯದ ಎಂ.ಬಿ.ಪಾಟೀಲ್ ಕೂಡ ಸಿಎಂ ಸ್ಥಾನದ ಆಕಾಂಕ್ಷಿ. ದಲಿತ ಸಮುದಾಯದ ಡಾ.ಜಿ.ಪರಮೇಶ್ವರ್, ಕೆ.ಎಚ್.ಮುನಿಯಪ್ಪ, ಡಾ.ಎಚ್.ಸಿ.ಮಹದೇವಪ್ಪ ಹಾಗೂ ಪರಿಶಿಷ್ಟ ಪಂಗಡದ ವಾಲ್ಮೀಕಿ ನಾಯಕ ಸಮುದಾಯದ ಸತೀಶ್ ಜಾರಕಿಹೊಳಿ ಕೂಡ ಸಿಎಂ ಸ್ಥಾನದ ಆಕಾಂಕ್ಷಿ. ಈ ಎಲ್ಲ ನಾಯಕರೂ ಕೂಡ 2028ರ ವಿಧಾನಸಭಾ ಚುನಾವಣೆ ಫಲಿತಾಂಶದವರೆಗೂ ಕಾಯಬೇಕಾಗಿದೆ.
ಆದರೇ, 2028 ರಲ್ಲಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಗೆ ಬಹುಮತ ಬರುವ ಗ್ಯಾರಂಟಿ ಇಲ್ಲ. 2028 ರಲ್ಲಿ ರಾಜ್ಯದಲ್ಲಿ ಎನ್‌ಡಿಎ ನಡಿ ಅಧಿಕಾರದ ಗದ್ದುಗೆ ಹಿಡಿಯಲು ಬಿಜೆಪಿ ಹಾಗೂ ಜೆಡಿಎಸ್ ಈಗಾಗಲೇ ಹೋರಾಟ ಆರಂಭಿಸಿವೆ. 2028 ರ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರದ ವಿರೋಧಿ ಅಲೆಯಲ್ಲಿ ಕಾಂಗ್ರೆಸ್ ಕೊಚ್ಚಿಕೊಂಡು ಹೋಗುತ್ತೆ ಎಂಬ ಲೆಕ್ಕಾಚಾರ ಬಿಜೆಪಿ ಮತ್ತು ಜೆಡಿಎಸ್ ಪಾಳಯದಲ್ಲಿದೆ. ಕಾಂಗ್ರೆಸ್ ಪಕ್ಷ ಸತತ ಎರಡನೇ ಭಾರಿಗೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಇದು 70-80 ರ ದಶಕವಲ್ಲ. ಈಗ ಜನರು ಕೂಡ 5 ವರ್ಷಗಳಿಗೊಮ್ಮೆ ಸರ್ಕಾರ, ಅಧಿಕಾರದಲ್ಲಿ ಬದಲಾವಣೆ ಬಯಸುತ್ತಾರೆ ಎಂಬ ಲೆಕ್ಕಾಚಾರ ಕೂಡ ರಾಜ್ಯದ ರಾಜಕೀಯ ವಲಯದಲ್ಲಿದೆ. ಬಿಹಾರದಲ್ಲಿ ಅಧಿಕಾರ ವಿರೋಧಿ ಅಲೆ ಬರುವುದನ್ನು ಅಧಿಕಾರದ ಪರವಾದ ಅಲೆಯಾಗಿ ನಿತೀಶ್ ಕುಮಾರ್ ಪರಿವರ್ತನೆ ಮಾಡಿಕೊಂಡಿದ್ದಾರೆ. ತಮ್ಮ ಅಭಿವೃದ್ದಿ ಕಾರ್ಯಗಳಿಂದಾಗಿ ನಿತೀಶ್ ಕುಮಾರ್ ಅಧಿಕಾರ ಪರವಾದ ಅಲೆಯಾಗಿ ಪರಿವರ್ತನೆಯಾಗಿ ಮಾಡಿಕೊಂಡಂತೆ ಮಾಡಿಕೊಳ್ಳುವುದು ಸಿದ್ದರಾಮಯ್ಯಗೆ ಸವಾಲು. ಸಿದ್ದರಾಮಯ್ಯ ಓಬಿಸಿ ಮತ್ತು ಅಲ್ಪಸಂಖ್ಯಾತ ಮತಗಳನ್ನು ಒಗ್ಗೂಡಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಜೊತೆಗೆ ದಲಿತ ಸಮುದಾಯದ ಮತಗಳು ಕೂಡ ಕಾಂಗ್ರೆಸ್ ಪಕ್ಷದ ಸಂಪ್ರದಾಯಿಕ ವೋಟ್ ಬ್ಯಾಂಕ್. ಅಹಿಂದ ವೋಟ್ ಬ್ಯಾಂಕ್ ಅನ್ನು ಗಟ್ಟಿ ಮಾಡಿಕೊಂಡು ಮತ್ತೆ 2028 ರಲ್ಲೂ ಅಧಿಕಾರದ ಗದ್ದುಗೆ ಹಿಡಿಯುವುದು ಸಿದ್ದರಾಮಯ್ಯ ಪ್ಲ್ಯಾನ್. ಆದರೇ, 2018 ರಲ್ಲಿ ಸಿದ್ದರಾಮಯ್ಯ ನಾಯಕತ್ವದಲ್ಲೇ ವಿಧಾನಸಭಾ ಚುನಾವಣೆ ಎದುರಿಸಿದಾಗ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿಲ್ಲ. 80 ಸ್ಥಾನಗಳಿಗೆ ಕಾಂಗ್ರೆಸ್ ಪಕ್ಷ ಕುಸಿದಿತ್ತು.
ಹೀಗಾಗಿ 2018ರ ಚುನಾವಣೆಯ ಕಹಿ ಅನುಭವ ಪುನಾರಾವರ್ತನೆ ಆಗದಂತೆ ತಡೆಯಲು ಸಿಎಂ ಏನ್ ಮಾಡ್ತಾರೆ ಎಂಬ ಕುತೂಹಲ ಇದೆ. 2013 ರಿಂದ 2018 ರ ಅವಧಿಯಲ್ಲಿ ಸಿಎಂ ಸಿದ್ದರಾಮಯ್ಯ ಸಾಕಷ್ಟು ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಿದ್ದರು. ಅನ್ನಭಾಗ್ಯ ಜಾರಿಗೊಳಿಸಿದ್ದರು. ಆದರೂ ಪಕ್ಷ 2018 ರಲ್ಲಿ ಮತ್ತೆ ಅಧಿಕಾರಕ್ಕೆ ತರುವಲ್ಲಿ ವಿಫಲರಾದರು.
/filters:format(webp)/newsfirstlive-kannada/media/media_files/2025/11/15/karnataka-nda-leaders-2025-11-15-18-56-07.jpg)
ಎನ್‌ಡಿಎ ಪ್ರಮುಖವಾಗಿ ಮೇಲ್ವರ್ಗದ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದ ಮತ ಬ್ಯಾಂಕ್ ಹೊಂದಿವೆ. ಮೇಲ್ವರ್ಗದ ಮತಗಳ ಜೊತೆಗೆ ಓಬಿಸಿ, ದಲಿತ ಮತಗಳನ್ನು ಪಡೆದು ಅಧಿಕಾರದ ಗದ್ದುಗೆ ಹಿಡಿಯಬೇಕೆಂದು ಬಿಜೆಪಿ ಮತ್ತು ಜೆಡಿಎಸ್ ಪ್ಲ್ಯಾನ್ ಮಾಡಿವೆ. ಬಿಹಾರದಲ್ಲಿ ಎನ್‌ಡಿಎ ನಲ್ಲಿ ಐದು ಪಕ್ಷಗಳಿವೆ. ಬಿಹಾರದಲ್ಲಿ ಎನ್‌ಡಿಎ ಮತ್ತೊಮ್ಮೆ ಅಧಿಕಾರದ ಗದ್ದುಗೆ ಹಿಡಿದಂತೆ ಕರ್ನಾಟಕದಲ್ಲೂ ಅಧಿಕಾರದ ಗದ್ದುಗೆ ಹಿಡಿಯಬೇಕೆಂದು ಬಿಜೆಪಿ ಮತ್ತು ಜೆಡಿಎಸ್ ಪ್ಲ್ಯಾನ್ ಮಾಡುತ್ತಿವೆ . ಬಿಹಾರದ ಎನ್‌ಡಿಎ ಗೆಲುವು ರಾಜ್ಯದ ಎನ್‌ಡಿಎ ನಾಯಕರ ಉತ್ಸಾಹ, ಹುಮ್ಮಸ್ಸು ಹೆಚ್ಚಿಸಿದೆ. ಬಿಹಾರ ಮಾದರಿಯಲ್ಲೇ ರಾಜ್ಯದಲ್ಲೂ ಎನ್‌ಡಿಎ ಅನ್ನು ಅಧಿಕಾರಕ್ಕೆ ತರಲೇಬೇಕೆಂದು ಎನ್‌ಡಿಎ ನಾಯಕರು ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದಾರೆ.
ಹೀಗಾಗಿ ರಾಜ್ಯದ ಜನರು ಬದಲಾವಣೆಯತ್ತ ಮನಸ್ಸು ಮಾಡಿದರೇ, ಬಿಜೆಪಿ, ಜೆಡಿಎಸ್ ಪಕ್ಷಗಳಿಗೆ ಬಹುಮತ ಸಿಗಬಹುದು. ಜೊತೆಗೆ 2028ರ ವಿಧಾನಸಭಾ ಚುನವಣೆಗೂ ಸಿದ್ದರಾಮಯ್ಯ ಸ್ಪರ್ಧೆ ಮಾಡಬೇಕೆಂದು ಅವರ ಬೆಂಬಲಿಗರು ಕೂಡ ಒತ್ತಾಯ ಮಾಡುತ್ತಿದ್ದಾರೆ. ಒಂದು ವೇಳೆ ಸಿದ್ದರಾಮಯ್ಯ 2028ರ ಚುನಾವಣೆಗೂ ಸ್ಪರ್ಧೆ ಮಾಡಿದರೂ, ಜನರ ಒಲುವು ಅನ್ನು, ಬೆಂಬಲವನ್ನು ಗಳಿಸಿಕೊಳ್ಳೋದು ಸುಲಭವಲ್ಲ. ಗ್ಯಾರಂಟಿ ಸ್ಕೀಮ್ ಗಳನ್ನು ಕೊಟ್ಟ ಕಾರಣದಿಂದ 2024ರ ಲೋಕಸಭಾ ಚುನಾವಣೆಯಲ್ಲಿ ಮತಗಳನ್ನು ಜನರಿಂದ ಹಾಕಿಸಿಕೊಂಡು ಹೆಚ್ಚಿನ ಸೀಟು ಪಡೆಯಬಹುದು ಎಂಬ ಕಾಂಗ್ರೆಸ್ ನಾಯಕರ ಲೆಕ್ಕಾಚಾರವೇ ತಲೆ ಕೆಳಗಾಗಿದೆ. ಹೀಗಾಗಿ ಗ್ಯಾರಂಟಿ ಸ್ಕೀಮ್ ಗಳ ಕಾರಣಕ್ಕಾಗಿ 2028 ರಲ್ಲೂ ಕಾಂಗ್ರೆಸ್ ಗೆ ಬಹುಮತ ಸಿಗುತ್ತೋ ಇಲ್ಲವೋ ಗ್ಯಾರಂಟಿ ಇಲ್ಲ. 2028 ರಲ್ಲಿ ರಾಜ್ಯದಲ್ಲಿ ಯಾರಿಗೆ ಅಧಿಕಾರದ ಗದ್ದುಗೆ ನೀಡಬೇಕು ಅನ್ನೋದನ್ನು ಜನರೇ ನಿರ್ಧಾರ ಮಾಡಲಿದ್ದಾರೆ.
/filters:format(webp)/newsfirstlive-kannada/media/media_files/2025/10/29/dalit-cm-faces-of-karnataka-2025-10-29-18-10-31.jpg)
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us