/newsfirstlive-kannada/media/media_files/2025/09/22/pushpa-amarnath-to-hcm-2025-09-22-14-51-54.jpg)
ಕಾಂಗ್ರೆಸ್ ನಾಯಕಿ ಪುಷ್ಪಾ ಅಮರನಾಥ್ , ಸಚಿವ ಮಹದೇವಪ್ಪ
ನಿಮ್ಮನ್ನ ನಂಬಿದ್ದೇನೆ, ನಂಬಿಕೆ ದ್ರೋಹ ಮಾಡಬೇಡಿ. ಹೀಗೆ ಹೇಳಿದ್ದು ಬೇರಾರು ಅಲ್ಲ, ರಾಜ್ಯದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷೆಯಾಗಿರುವ ಪುಷ್ಪಾ ಅಮರನಾಥ್. ರಾಜ್ಯದ ಸಮಾಜ ಕಲ್ಯಾಣ ಖಾತೆ ಸಚಿವ ಎಚ್.ಸಿ.ಮಹದೇವಪ್ಪ ಮುಂದೆ, ಪುಷ್ಪಾ ಅಮರನಾಥ್ ಹೀಗೆ ಹೇಳಿದ್ದಾರೆ. ಮೈಸೂರಿನ ಕುಪ್ಪಣ್ಣ ಪಾರ್ಕ್ ನಲ್ಲಿ ಸಚಿವ ಮಹದೇವಪ್ಪಗೆ ಪುಷ್ಪಾ ಅಮರನಾಥ್ ಹೀಗೆ ಹೇಳಿದ್ದು ಏಕೆ ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವವಾಗುತ್ತೆ. 2028 ರ ವಿಧಾನಸಭಾ ಚುನಾವಣೆಗೆ ಈಗಲೇ ಪುಷ್ಪಾ ಅಮರನಾಥ್ ಕಾಂಗ್ರೆಸ್ ನಿಂದ ಟಿಕೆಟ್ ಕೇಳಿರಬಹುದು ಎಂದು ಅಲ್ಲಿದ್ದವರಿಗೆ ಒಂದು ಕ್ಷಣ ಅನ್ನಿಸಿದೆ.
ಮೈಸೂರು ದಸರಾದ ಫಲಪುಷ್ಪ ಪ್ರದರ್ಶನದ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ, ಸಚಿವ ಮಹದೇವಪ್ಪ ಆಗಮಿಸಿದ್ದರು. ಈ ವೇಳೆ ಪುಷ್ಪಾ ಅಮರನಾಥ್ , ಮಹದೇವಪ್ಪ ಮುಂದೆ ಮನವಿಯ ಬೇಡಿಕೆಯನ್ನು ಇಟ್ಟಿದ್ದಾರೆ.
ಸಿಎಂ ಸಿದ್ದರಾಮಯ್ಯ ಫಲಪುಷ್ಪ ಪ್ರದರ್ಶನ ಉದ್ಘಾಟಿಸಿ ತೆರಳುವಾಗ, ಮಹದೇವಪ್ಪ ಜೊತೆ ಪುಷ್ಪಾ ಅಮರನಾಥ್ ಮಾತುಕತೆ ನಡೆಸಿದ್ದರು. ಎಲ್ಲರ ಮುಂದೆ ಹೇಳಿದ್ದೀರಾ, ಮಾತು ಕೊಟ್ಟಿದ್ದೀರಾ . ನಿಮ್ಮನ್ನ ನಾನು ನಂಬಿದ್ದೇನೆ . ನಂಬಿಕೆ ದ್ರೋಹ ಮಾಡಬೇಡಿ . ನನಗೆ ಒಂದು ಅವಕಾಶ ಕೊಡಿ ಎಂದು ಪುಷ್ಪಾ ಅಮರನಾಥ್ ಮನವಿ ಮಾಡಿದ್ದರು. ಪುಷ್ಪ ಅಮರನಾಥ್, ಸಚಿವರಿಗೆ ಬೇಡಿಕೆ ಇಟ್ಟ ದೃಶ್ಯ ನ್ಯೂಸ್ ಫಸ್ಟ್ ಕ್ಯಾಮರಾದಲ್ಲಿ ಸೆರೆಯಾಗಿದೆ. ರಾಜ್ಯದ ಅಸೆಂಬ್ಲಿ ಚುನಾವಣೆಗೆ ಮೂರು ವರ್ಷ ಇರುವಾಗಲೇ ಟಿಕೆಟ್ ಗೆ ಪಟ್ಟು ಹಿಡಿದಿರುವುದು ಇದರಿಂದ ಸ್ಪಷ್ಟವಾಗಿದೆ.
ಪುಷ್ಪಾ ಅಮರನಾಥ್ ಈ ಹಿಂದೆಯೂ ಕಾಂಗ್ರೆಸ್ ಪಕ್ಷದಲ್ಲಿ ವಿಧಾನಸಭೆ, ವಿಧಾನಪರಿಷತ್ ಹಾಗೂ ಲೋಕಸಭೆ ಟಿಕೆಟ್ ಕೇಳಿದ್ದರು. ಆದರೇ, ಅಸೆಂಬ್ಲಿ, ಪಾರ್ಲಿಮೆಂಟ್‌ಗೆ ಟಿಕೆಟ್ ಸಿಕ್ಕಿಲ್ಲ. ಒಮ್ಮೆ ರಾಜ್ಯ ಮಹಿಳಾ ಘಟಕದ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಆದರೂ, ಅಸೆಂಬ್ಲಿಗೆ ಟಿಕೆಟ್ ಸಿಗುತ್ತಿಲ್ಲ ಎಂದು ಕೆಲವೊಮ್ಮೆ ಕಣ್ಣೀರು ಹಾಕಿದ್ದಾರೆ. ಈಗ ಮತ್ತೆ ಅಸೆಂಬ್ಲಿ ಟಿಕೆಟ್ ಗಾಗಿ ಈ ರೀತಿ ಸಚಿವ ಎಚ್.ಸಿ.ಮಹದೇವಪ್ಪಗೆ ಮನವಿ ಮಾಡಿದ್ದಾರೆ. ಕೊಳ್ಳೇಗಾಲ, ಕೆ.ಆರ್.ನಗರ , ಟಿ.ನರಸೀಪುರ ಕ್ಷೇತ್ರ ಸೇರಿದಂತೆ ಯಾವುದಾದರೊಂದು ಕ್ಷೇತ್ರದಿಂದ ಸ್ಪರ್ಧೆಗೆ ಅವಕಾಶ ಕೊಡಿ ಎಂದು ಈ ಹಿಂದೆಯೇ ಪುಷ್ಪಾ ಅಮರನಾಥ್ ಕಾಂಗ್ರೆಸ್ ನಾಯಕರಿಗೆ ಮನವಿ ಮಾಡಿದ್ದರು. ಆದರೇ, ಈ ಎಲ್ಲ ಕ್ಷೇತ್ರಗಳಲ್ಲೂ ಈಗಾಗಲೇ ಕಾಂಗ್ರೆಸ್ ಶಾಸಕರು, ಪ್ರಬಲ ಅಭ್ಯರ್ಥಿಗಳೇ ಇರೋದರಿಂದ ಪುಷ್ಪಾಗೆ ಅವಕಾಶ ಸಿಕ್ಕಿಲ್ಲ. ಈಗ ಮತ್ತೊಮ್ಮೆ ಅವಕಾಶಕ್ಕಾಗಿ ಮಹದೇವಪ್ಪಗೆ ಮನವಿ ಮಾಡಿದ್ದಾರೆ.
ರಾಜ್ಯ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆಯಾಗಿದ್ದ ಲಕ್ಷ್ಮಿ ಹೆಬ್ಬಾಳಕರ್ ಈಗಾಗಲೇ 2 ಭಾರಿ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ. ರಾಜ್ಯದಲ್ಲಿ ಈಗ ಮಹಿಳಾ ಮತ್ತು ಕಲ್ಯಾಣ ಖಾತೆ ಸಚಿವೆಯಾಗಿದ್ದಾರೆ. ಆದರೇ, ತಾವು ಕೂಡ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದರೂ, ಅಸೆಂಬ್ಲಿ, ಪಾರ್ಲಿಮೆಂಟ್‌ಗೆ ಸ್ಪರ್ಧಿಸಲು ಅವಕಾಶ ಸಿಗುತ್ತಿಲ್ಲ ಎಂಬ ನೋವು ಪುಷ್ಪಾ ಅಮರನಾಥ್ ಅವರಲ್ಲಿದೆ.
ಇನ್ನೂ ಹಾಲಿ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯ ರೆಡ್ಡಿ, ಈ ಹಿಂದೆ ಜಯನಗರ ಕ್ಷೇತ್ರದಿಂದ ಶಾಸಕಿಯಾಗಿದ್ದರು. ಕಳೆದ ಭಾರಿ ಅಲ್ಪಮತದಿಂದ ಸೋತಿದ್ದಾರೆ. ತಮಗೆ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಯಾವುದಾದರೊಂದು ಕ್ಷೇತ್ರದಿಂದ ಸ್ಪರ್ಧೆಗೆ ಅವಕಾಶ ಕೊಡಿ ಎಂದು ಪುಷ್ಪಾ ಅಮರನಾಥ್ ಈಗ ಬಿಗಿಪಟ್ಟು ಹಿಡಿದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.