/newsfirstlive-kannada/media/media_files/2025/12/11/pm-jan-aushadi-kendra-2025-12-11-16-10-38.jpg)
ಸರ್ಕಾರಿ ಆಸ್ಪತ್ರೆ ಆವರಣದಲ್ಲಿದ್ದ ಜನ ಔಷಧ ಮಳಿಗೆಗಳನ್ನು ಮುಚ್ಚಲು ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಆದರೇ, ಮೊನ್ನೆ ಹೈಕೋರ್ಟ್ ನ ಧಾರವಾಡ ಪೀಠವು ಜನ ಔಷಧಿ ಮಳಿಗೆಗಳನ್ನು ಮುಚ್ಚುವ ರಾಜ್ಯ ಸರ್ಕಾರದ ಆದೇಶವನ್ನು ರದ್ದುಪಡಿಸಿದೆ. ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಜನೌಷಧಿ ಮಳಿಗೆಗಳನ್ನು ತೆರೆಯಲು ಹೈಕೋರ್ಟ್ ಆದೇಶ ನೀಡಿದೆ.
ಸರ್ಕಾರಿ ಆಸ್ಪತ್ರೆ ಆವರಣದಲ್ಲಿರೋ ಜನ ಔಷಧಾಲಯ ಮುಚ್ಚಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದೇಕೆ? ಎಂಬ ಪ್ರಶ್ನೆ ಉದ್ಭವವಾಗಿದೆ. ಸರ್ಕಾರಿ ಆಸ್ಪತ್ರೆ ಆವರಣದಲ್ಲಿರೋ ಜನ ಔಷಧಾಲಯ ಮುಚ್ಚಲು ನಿರ್ಧರಿಸಿದ್ದೇಕೆ? ಕಾರಣಗಳು ಏನೇನು..? ಜನರಿಗೆ ಉಪಯೋಗ ಆಗುತ್ತಿದ್ದರೂ ಈ ನಿರ್ಧಾರಕ್ಕೆ ರಾಜ್ಯ ಸರ್ಕಾರ ಬಂದಿದ್ದೇಕೆ? ಜನ ಔಷಧಾಲಯ ಮುಚ್ಚೋದು ಒಳ್ಳೇಯದಾ? ಮುಚ್ಚದೇ ಇರೋದು ಒಳ್ಳೇದಾ? ಜನ ಹೇಳೋದೇನು? ಎನ್ನುವುದನ್ನು ನಾವು ಈಗ ನಿಮ್ಮ ಮುಂದೆ ಇಡುತ್ತಿದ್ದೇವೆ. ಓದಿ.
ಸದ್ಯ ಜನ ಔಷಧಾಲಯದಲ್ಲಿ 50 ಪರ್ಸೆಂಟ್ ರಿಯಾಯಿತಿಯಲ್ಲಿ ಔಷಧಗಳನ್ನು ಮಾರಾಟ ಮಾಡಲಾಗುತ್ತಿದೆ. ಇದರಿಂದ ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ, ರೋಗಿಗಗಳಿಗೆ ಭಾರಿ ಅನುಕೂಲವಾಗುತ್ತಿದೆ. ಜನ ಔಷಧಿ ಮಳಿಗೆಗಳಲ್ಲಿ ಜನರಿಕ್ ಔಷಧಿಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಳ ಹೊರಗೆ ಇರುವ ಸಾಮಾನ್ಯ ಮೆಡಿಕಲ್ ಸ್ಟೋರ್ ಗಳಲ್ಲಿ ಖರೀದಿಸುವ ಔಷಧಿಗಳಿಗೆ ನೀಡುವ ಬೆಲೆಯ ಅರ್ಧದಷ್ಟು ಬೆಲೆಯಲ್ಲಿ ಅದೇ ಔಷಧಗಳು ಜನ ಔಷಧಿ ಕೇಂದ್ರಗಳಲ್ಲಿ ಸಿಗುತ್ತಿದ್ದವು. ಹೀಗಾಗಿ ಜನ ಔಷಧಿ ಮಳಿಗೆಗಳಿಂದ ಸಮಾಜದ ಬಡವರು, ಮಧ್ಯಮ ವರ್ಗದ ಜನರಿಗೆ ಭಾರಿ ಅನುಕೂಲವಾಗುತ್ತಿತ್ತು.
ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಯೋಜನೆ (PMBJP) ಅಡಿಯಲ್ಲಿ ಜನೌಷಧಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಜೆನೆರಿಕ್ ಔಷಧಿಗಳನ್ನು ಒದಗಿಸುವ ಗುರಿ ಹೊಂದಿದೆ. ಕರ್ನಾಟಕದಲ್ಲಿ ನೂರಾರು ಜನೌಷಧಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಸಾವಿರಾರು ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಅನುಕೂಲ ಕಲ್ಪಿಸಿವೆ.
ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಪ್ರಧಾನಮಂತ್ರಿ ಭಾರತೀಯ ಜನ ಔಷಧಿ ಕೇಂದ್ರಗಳನ್ನು ಕೂಡಲೇ ಸ್ಥಗಿತಗೊಳಿಸಲು ರಾಜ್ಯ ಸರ್ಕಾರ 2025 ರ ಮೇ ತಿಂಗಳಿನಲ್ಲಿ ಆದೇಶಿಸಿತ್ತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಶ್ರೀಪತಿ ಅವರು ಆದೇಶ ಹೊರಡಿಸಿದ್ದರು.
ರೋಗಿಗಳು ಯಾವುದೇ ಔಷಧವನ್ನು ಆಸ್ಪತ್ರೆಯ ಹೊರಗೆ ಖರೀದಿಸದಂತೆ ನೋಡಿಕೊಳ್ಳುವುದು ಸರ್ಕಾರದ ಆದ್ಯತೆಯಾಗಿದೆ. ಆದ್ದರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಜನೌಷಧ ಕೇಂದ್ರಗಳನ್ನು ಸ್ಥಗಿತಗೊಳಿಸಲು, ಅನುಮೋದನೆಗೆ ಬಾಕಿ ಇರುವ ಅರ್ಜಿಗಳನ್ನು ತಿರಸ್ಕರಿಸಲು ಆದೇಶದಲ್ಲಿ ತಿಳಿಸಲಾಗಿತ್ತು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು.
ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ 180 ಜನೌಷಧಿ ಕೇಂದ್ರಗಳನ್ನು ಮಾತ್ರ ಸ್ಥಗಿತಗೊಳಿಸಲಾಗಿದೆ ಮತ್ತು ಸರ್ಕಾರಿ ಆಸ್ಪತ್ರೆಗಳ ಹೊರಗೆ ಕಾರ್ಯನಿರ್ವಹಿಸುತ್ತಿರುವ ಕೇಂದ್ರಗಳು ಕಾರ್ಯನಿರ್ವಹಿಸುತ್ತಲೇ ಇರುತ್ತವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದರು.
ಎಲ್ಲಾ ಆಸ್ಪತ್ರೆಗಳು ಉಚಿತವಾಗಿ ಔಷಧಿಗಳನ್ನು ಒದಗಿಸಬೇಕು ಮತ್ತು ಆಸ್ಪತ್ರೆ ಆವರಣದಲ್ಲಿ ನಡೆಯುತ್ತಿರುವ ಎಲ್ಲಾ ಕೇಂದ್ರಗಳನ್ನು ಹಂತಹಂತವಾಗಿ ರದ್ದುಗೊಳಿಸುವ ಕ್ರಮವು ಅದನ್ನೇ ಖಚಿತಪಡಿಸುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಬಂದ್ ಮಾಡಲು ಕಾರಣವೇನು?
* ರಾಜ್ಯ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹೊರಗಡೆ ಸಲಹಾ ಚೀಟಿಗಳನ್ನ ಬರೆದು ಕೊಡುವಂತಿಲ್ಲ .
* ವೈದ್ಯರುಗಳು ಬ್ರಾಂಡೆಡ್ ಔಷಧಿಗಳನ್ನು ಹೊರಗಡೆಯಿಂದ ತರುವಂತೆ ರೋಗಿಗಳಿಗೆ ಚೀಟಿಗಳನ್ನು ನೀಡುವುದನ್ನು ಸರ್ಕಾರ ನಿಷೇಧಿಸಿದೆ
* ಸರ್ಕಾರಿ ಆಸ್ಪತ್ರೆಗಳು ರೋಗಿಗಳಿಗೆ ಯಾವುದೇ ತರಹದ ಔಷಧಿಗಳನ್ನು ಹೊರಗೆ ಖರೀದಿಸುವಂತೆ ಶಿಫಾರಸ್ಸು ಮಾಡದಂತೆ ನೋಡಿಕೊಳ್ಳುವುದು ಸರ್ಕಾರದ ನೀತಿ.
* ಈ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಜನ ಔಷಧಿ ಕೇಂದ್ರ ತೆರೆಯುವುದು ಸರ್ಕಾರದ ನೀತಿಗೆ ವಿರುದ್ಧವಾಗಿದೆ.
* ಈ ಕಾರಣದಿಂದ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿನ ಜನ ಔಷಧಿ ಕೇಂದ್ರಗಳನ್ನು ಬಂದ್ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಇದು ಜನರಿಗೆ ಎಷ್ಟು ಉಪಯೋಗ ಆಗ್ತಿದೆ ?
* ಬೇರೆ ಕಡೆಗಳಲ್ಲಿ ಔಷಧಿ ಖರೀದಿ ಮಾಡೋದು ಬಹಳ ಕಷ್ಟ
* ಇಲ್ಲಿ 50 ಪರ್ಸೆಂಟ್ ಡಿಸ್ಕೌಂಟ್ ನಲ್ಲಿ ಸಿಗ್ತಿರೋದು ಉಪಯೋಗ
* ಮಿಡಲ್ ಕ್ಲಾಸ್ ಮಂದಿಯಿಂದ ಎಲ್ಲರಿಗೂ ಇದರಿಂದ ಉಪಯೋಗ ಆಗ್ತಿದೆ
* ಸಾವಿರಾರು ರೂಪಾಯಿ ಕೊಟ್ಟು ಬ್ರಾಂಡೆಡ್ ಮಾತ್ರೆಗಳನ್ನ ಖರೀದಿ ಮಾಡೋಕೆ ಆಗಲ್ಲ
* ಸರ್ಕಾರಿ ಆಸ್ಪತ್ರೆಗಳಲ್ಲಿ ಕೇವಲ ಬೇಸಿಕ್ ಮಾತ್ರೆಗಳನ್ನ ಮಾತ್ರ ಕೊಡ್ತಾರೆ
* ಹೀಗಾಗಿ ಉಳಿದ ಔಷಧಿಗಳನ್ನು ಜನ ಔಷಧಿ ಮಳಿಗೆಗಳಲ್ಲಿ ಖರೀದಿ ಮಾಡಲಾಗುತ್ತೆ.
ಜನೌಷಧಿ ಕೇಂದ್ರಗಳನ್ನು ತೆರವುಗೊಳಿಸುವ ರಾಜ್ಯ ಸರ್ಕಾರದ ನಿರ್ಧಾರ ಕುರಿತು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದ ಕೇಂದ್ರ ಆರೋಗ್ಯ ಸಚಿವ ಜೆ.ಪಿ ನಡ್ಡಾ ಅವರಿಗೆ ಸ್ಪಷ್ಟನೆ ನೀಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಮಾತ್ರ ಜನೌಷಧಿ ಕೇಂದ್ರಗಳನ್ನ ನಿರ್ಬಂಧಿಸಲು ನಿರ್ಧರಿಸಲಾಗಿದೆ ಎಂದು ಪತ್ರ ಬರೆದಿದ್ದಾರೆ.
ಸಾರ್ವಜನಿಕರಿಗೆ ಕೈಗೆಟಕುವ ದರದಲ್ಲಿ ಗುಣಮಟ್ಟದ ಔಷಧಿಗಳು ಲಭ್ಯವಾಗುವಂತೆ ಮಾಡುವ ನಿಮ್ಮ ಕಾಳಜಿಯನ್ನು ನಾನು ಶ್ಲಾಘಿಸುತ್ತೇನೆ. ಕರ್ನಾಟಕ ಸರ್ಕಾರವು ಎಲ್ಲಾ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಅಗತ್ಯ ಔಷಧಗಳ ಪಟ್ಟಿಯ (EML) ಪ್ರಕಾರ ಎಲ್ಲಾ ಅಗತ್ಯ ಔಷಧಿಗಳನ್ನು ಉಚಿತವಾಗಿ ಪೂರೈಸುತ್ತಿದೆ ಎಂಬುದನ್ನು ನಾನು ಗೌರವಪೂರ್ವಕವಾಗಿ ಸ್ಪಷ್ಟಪಡಿಸಲು ಬಯಸುತ್ತೇನೆ" ಎಂದು ಸಚಿವ ದಿನೇಶ್ ಗುಂಡೂರಾವ್ ಅವರ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಗಳ ಆವರಣಗಳ ಹೊರಗೆ ಜನೌಷಧಿ ಕೇಂದ್ರಗಳ ಕಾರ್ಯನಿರ್ವಹಣೆಯನ್ನು ನಿರ್ಬಂಧಿಸುವುದಿಲ್ಲ. ರಾಜ್ಯದಲ್ಲಿ 1,417 ಜನೌಷಧಿ ಕೇಂದ್ರಗಳಲ್ಲಿ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ 184 ಜನೌಷಧಿ ಕೇಂದ್ರಗಳಿವೆ. ಉಳಿದವು ಸರ್ಕಾರಿ ಆಸ್ಪತ್ರೆಗಳ ಆವರಣದ ಹೊರಗೆ ಕಾರ್ಯನಿರ್ವಹಿಸುತ್ತಿವೆ. ನಾಗರಿಕರು ತಮ್ಮ ಆಯ್ಕೆಯಂತೆ ಖಾಸಗಿ ವಲಯದಲ್ಲಿ ಅವುಗಳನ್ನು ಪ್ರವೇಶಿಸಲು ಸ್ವತಂತ್ರರಾಗಿದ್ದಾರೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
/filters:format(webp)/newsfirstlive-kannada/media/media_files/2025/12/11/pm-jan-aushadi-kendra-1-2025-12-11-16-11-59.jpg)
ಜನ ಔಷಧಿ ಕೇಂದ್ರ ಆರಂಭವಾಗಿದ್ದು ಯಾವಾಗ?
ಭಾರತದಲ್ಲಿ 2008 ರಲ್ಲೇ ಜನ ಔಷಧಿ ಕೇಂದ್ರಗಳನ್ನು ಕೇಂದ್ರ ಸರ್ಕಾರ ಆರಂಭಿಸಿದೆ. 2016 ರಲ್ಲಿ ಇವುಗಳನ್ನು ಪ್ರಧಾನಮಂತ್ರಿ ಭಾರತೀಯ ಜನ ಔಷಧಿ ಕೇಂದ್ರಗಳು ಎಂದು ಮರು ನಾಮಕರಣ ಮಾಡಿ ಪುನಶ್ಚೇತನ ಮಾಡಲಾಗಿದೆ. ಬ್ರಾಂಡೆಡ್ ಔಷಧಿಗಳಿಗಿಂತ ಶೇ.50 ರಿಂದ 90 ರಷ್ಟು ಕಡಿಮೆ ಬೆಲೆಗೆ ಗುಣಮಟ್ಟದ ಜೆನರಿಕ್ ಔಷಧಗಳನ್ನು ರೋಗಿಗಳಿಗೆ ನೀಡಲಾಗುತ್ತಿದೆ.
ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಗುಣಮಟ್ಟದ ಔಷಧಿಗಳನ್ನು ಪೂರೈಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಜನೌಷಧಿ ಕೇಂದ್ರ ಯೋಜನೆಯಿಂದಾಗಿ ಕರ್ನಾಟಕದಲ್ಲಿ ಸಾಮಾನ್ಯ ಜನರಿಗೆ ಈ 2020 ರ ವರ್ಷದಲ್ಲಿ 500 ಕೋಟಿ ರೂಪಾಯಿಯಷ್ಟು ಉಳಿತಾಯವಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾಗಿದ್ದ ಸದಾನಂದ ಗೌಡ ಅವರು ತಿಳಿಸಿದ್ದರು.
ಖಾಸಗಿ ಔಷಧ ಅಂಗಡಿಗಳು ಮಾರಾಟ ಮಾಡುವ ಬ್ರಾಂಡೆಡ್ ಔಷಧಗಳ ಬೆಲೆಗೆ ಹೋಲಿಸಿದರೆ ಜನ ಔಷಧಿ ಕೇಂದ್ರಗಳಲ್ಲಿ ದೊರಕುತ್ತಿರುವ ಔಷಧಗಳ ಬೆಲೆ ಸರಾಸರಿ ನಾಲ್ಕರಿಂದ ಐದು ಪಟ್ಟು ರಿಯಾಯಿತಿ ದರದಲ್ಲಿದೆ. ಕರ್ನಾಟಕದಲ್ಲಿ ವಾರ್ಷಿಕವಾಗಿ ಮಾರಾಟವಾಗುವ ಜನೌಷಧಿ ಮೌಲ್ಯ ಅಂದಾಜು 125 ಕೋಟಿ ರೂಪಾಯಿ.
ಜನೌಷಧಿ ಕೇಂದ್ರಗಳಿಂದ ಸಾಮಾನ್ಯ ಜನರಿಗೆ ರಿಯಾಯಿತಿ ದರದಲ್ಲಿ ಔಷಧಗಳು ದೊರಕುತ್ತಿದೆ, ಈ ಮುನ್ನ ಜನರು ಸಂಪೂರ್ಣವಾಗಿ ಖಾಸಗಿ ಔಷಧಿ ಅಂಗಡಿಗಳ ಮೇಲೆ ಅವಲಂಬಿತರಾಗಿದ್ದರು. ಜನ ಔಷಧಿ ಕೇಂದ್ರಗಳಿಂದ ಜನಸಾಮಾನ್ಯರಿಗೆ ಅನುಕೂಲವಾಗಿದೆ. ಜನೌಷಧ ಕೇಂದ್ರಗಳಲ್ಲಿ ಗುಣಮಟ್ಟದ ಔಷಧಿಗಳು ರಿಯಾಯಿತಿದಲ್ಲಿ ದೊರಕುತ್ತಿದ್ದು, ಅಂತಾರಾಷ್ಟ್ರೀಯ ಮಾನದಂಡಕ್ಕೆ ಅನುಗುಣವಾಗಿ ಅವುಗಳ ಗುಣಮಟ್ಟವನ್ನು ಕಾಯ್ದುಕೊಳ್ಳಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
/filters:format(webp)/newsfirstlive-kannada/media/media_files/2025/12/13/jan-aushadi-kendra-2025-12-13-13-37-07.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us