/newsfirstlive-kannada/media/post_attachments/wp-content/uploads/2024/11/Girls-AI-Image.jpg)
ವಾರಣಾಸಿ: ಉತ್ತರ ಪ್ರದೇಶದ ರಾಮನಾ ಗ್ರಾಮ ಪಂಚಾಯತ್ನ ಮಲ್ಹಿಯಾ ಗ್ರಾಮದ ಬಾಲಕಿಯರಿಗೆ ದೀಪಾವಳಿ ಹಬ್ಬದಂದು ಬಂದ ಸಂದೇಶವೊಂದು ಆಘಾತ ಉಂಟು ಮಾಡಿದೆ. ಸಂದೇಶ ಓದಿದ ಹುಡುಗಿಯರು ಬೆಚ್ಚಿ ಬಿದ್ದಿದ್ದಾರೆ. ಇದು ಅವರ ಕುಟುಂಬದ ಸದಸ್ಯರಿಗೂ ಅಚ್ಚರಿ ಮೂಡಿಸಿದೆ. ಈ ವಿಚಾರ ಗ್ರಾಮದಿಂದ ಜಿಲ್ಲಾಡಳಿತದವರೆಗೂ ತಲುಪಿದ್ದು ಜಿಲ್ಲಾ ಮಟ್ಟದ ಅಧಿಕಾರಿಗಳಲ್ಲಿ ತಲ್ಲಣ ಉಂಟಾಗಿದೆ. ಘಟನೆ ಬಗ್ಗೆ ತಕ್ಷಣ ತನಿಖೆಗೆ ಆದೇಶಿಸಿದ್ದಾರೆ.
ಏನದು ಸಂದೇಶ?
ದೀಪಾವಳಿ ಹಬ್ಬದಂದು ಸಂಭ್ರಮದಲ್ಲಿದ್ದ ಬಾಲಕಿಯರ ಮೊಬೈಲ್ಗೆ ಬಂದ ಸಂದೇಶ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿದೆ. ಅದು ಒಬ್ಬಿಬ್ಬರಲ್ಲ. ಮಲ್ಹಿಯಾ ಗ್ರಾಮದ ಬರೋಬ್ಬರಿ 35ಕ್ಕೂ ಹೆಚ್ಚು ಹುಡುಗಿಯರಿಗೆ ಬಂದ ಸಂದೇಶವದು. ಸಂದೇಶ ನೋಡಿದ ಹುಡುಗಿಯರ ಕುಟುಂಬದಲ್ಲಿ ಸಂಚಲನವೇ ಉಂಟಾಗಿದೆ. ತಕ್ಷಣ ಗ್ರಾಮದ ಮುಖಂಡರೆಲ್ಲ ಸಭೆ ಸೇರಿ ಮುಖ್ಯ ಅಭಿವೃದ್ಧಿ ಅಧಿಕಾರಿಗೆ(ಸಿಡಿಒ)ಗೆ ದೂರು ನೀಡಿದ್ದಾರೆ. ತನಿಖೆ ಆರಂಭಿಸಿದವರಿಗೆ ಇದು ಅಂಗನವಾಡಿ ಕಾರ್ಯಕರ್ತೆಯ ತಪ್ಪಿನಿಂದಾಗಿ 35ಕ್ಕೂ ಹೆಚ್ಚು ಬಾಲಕಿಯರಿಗೆ ಈ ಸಂದೇಶ ರವಾನೆಯಾಗಿದ್ದು ಪತ್ತೆಯಾಗಿದೆ.
ದೀಪಾವಳಿ ದಿನ ಬೆಳ್ಳಂಬೆಳಗ್ಗೆ ಹುಡುಗಿಯರ ಮೊಬೈಲ್ಗೆ ಬಂದ ಸಂದೇಶ 35ಕ್ಕೂ ಹೆಚ್ಚು ಹುಡುಗಿಯರನ್ನು ಗರ್ಭಿಣಿ ಎಂದು ಘೋಷಿಸಿದೆ. ಅದು ಉತ್ತರ ಪ್ರದೇಶದ ಮಹಿಳಾ ಮತ್ತು ಮಕ್ಕಳ ಕುಟುಂಬದ ಇಲಾಖೆಯಿಂದ ಬಂದ ಸಂದೇಶ. ನೀವು ಗರ್ಭಿಣಿಯರು, ಪೌಷ್ಠಿಕಾಂಶ ಪೋರ್ಟಲ್ನಲ್ಲಿ ಯಶಸ್ವಿಯಾಗಿ ನೋಂದಾಯಿಸಲ್ಪಟ್ಟಿದ್ದೀರಿ. ಗರ್ಭಿಣಿಯಾದ ನೀವು ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಬಿಸಿ ಬಿಸಿಯಾದ ಊಟ ಅಥವಾ ಪಡಿತರ, ಸಮಾಲೋಚನೆ, ಮಕ್ಕಳ ಆರೋಗ್ಯದ ಮೇಲ್ವಿಚಾರಣೆ ಮತ್ತು ಸ್ತನ್ಯಪಾನ ದಂತಹ ಮಾಹಿತಿ ಜೊತೆ ಆರೋಗ್ಯ ಸೇವೆ ಪಡೆಯಬಹುದು. ಹೆಚ್ಚಿನ ಮಾಹಿತಿ ಅಥವಾ ಸಹಾಯಕ್ಕಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 14408 ಕ್ಕೆ ಕರೆ ಮಾಡಿ ಮಾಹಿತಿ ಪಡೆಯಬಹುದು ಎಂಬ ಸಂದೇಶ ಬಂದಿದೆ.
ಇದನ್ನೂ ಓದಿ: ಬಾಲಿವುಡ್ ನಟ ಅಕ್ಷಯ್ ಕುಮಾರ್ ಜೀವನ ಶೈಲಿ ನಿಮ್ಮದಾಗಿಸಿಕೊಳ್ಳಿ; ಹಲವು ಆರೋಗ್ಯದ ಪ್ರಯೋಜನಗಳನ್ನು ಪಡೆಯಿರಿ
ಸಂದೇಶ ಓದಿದ ಹುಡುಗಿಯರು ತಮ್ಮ ಮನೆಯವರ ಗಮನಕ್ಕೆ ತಂದಿದ್ದಾರೆ. ಸಭೆ ಸೇರಿದ ಊರ ಮುಖಂಡರು ಅಧಿಕಾರಿಗೆ ದೂರು ನೀಡಿದ್ದಾರೆ. ತನಿಖೆ ವೇಳೆ ಇದು ಅಂಗನವಾಡಿ ಕಾರ್ಯಕರ್ತೆ ಮಾಡಿದ ಯಡವಟ್ಟು ಎಂದು ಅರಿವಾಗಿದೆ.
ಅಸಲಿಗೆ ಆಗಿದ್ದೇನು?
ಅಂಗನವಾಡಿ ಕಾರ್ಯಕರ್ತೆಯರು ಗರ್ಭಿಣಿಯರು, ಚಿಕ್ಕಮಕ್ಕಳಿಗೆ ಪೌಷ್ಠಿಕ ಆಹಾರ ವಿತರಿಸಲು ಮನೆ ಮನೆಗೆ ತೆರಳಿ ನೋಂದಣಿ ಮಾಡುತ್ತಿದ್ದರು. ಇದೇ ವೇಳೆ ಅವರಿಗೆ ಗುರುತಿನ ಚೀಟಿ ಪರಿಷ್ಕರಣೆ ಮತ್ತು 18 ವರ್ಷ ತುಂಬಿದವರಿಗೆ ಮತದಾರರ ನೋಂದಣಿ ಕೂಡ ನಡೆದಿತ್ತು. ಎರಡೂ ಕೆಲಸ ಆರಂಭಿಸಿದ ಅಂಗನವಾಡಿ ಕಾರ್ಯಕರ್ತೆಯರು ಆಧಾರ್ ಕಾರ್ಡ್ ಮತ್ತು ಫಾರ್ಮ್ 6 ಅನ್ನು ಸಂಗ್ರಹಿಸಿದ್ದಾರೆ. ಎರಡೂ ರೀತಿಯ ಫಾರ್ಮ್ಗಳನ್ನು ಮಿಶ್ರಣ ಮಾಡಿದ್ದೇ ಯಡವಟ್ಟಿಗೆ ಕಾರಣವಾಗಿದೆ. ಮತದಾರರಾಗಿ ನೊಂದಾಯಿಸುವ ಬದಲು ಗರ್ಭಿಣಿ ಎಂದು ಪೋರ್ಟಲ್ನಲ್ಲಿ ನೋಂದಾಯಿಸಿದ್ದಾರೆ. ಬಳಿಕ 35ಕ್ಕೂ ಹೆಚ್ಚು ಹುಡುಗಿಯರಿಗೆ ಗರ್ಭಿಣಿ ಎಂದು ಸಂದೇಶ ಹೋಗಿದೆ. ಇದರ ಅರಿವಾದ ಬಳಿಕ ಪೋರ್ಟಲ್ನಲ್ಲಿದ್ದ ಬಾಲಕಿಯರ ದಾಖಲಾತಿ ಮತ್ತು ಡೇಟಾ ಡಿಲೀಟ್ ಮಾಡಲಾಗಿದೆ. ಸದ್ಯ ಅಂಗನವಾಡಿ ಕಾರ್ಯಕರ್ತೆಯರಿಗೆ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ