ಯೆಮೆನ್​​ನಲ್ಲಿ ಕೇರಳದ ಮಗಳಿಗೆ ಗಲ್ಲು.. ಕರುಳ ಕುಡಿ ಉಳಿಸಲು ತಾಯಿಂದ ರಕ್ತ ಹಣಕ್ಕಾಗಿ ಪರದಾಟ ಸಂಕಟ..!

author-image
Veena Gangani
Updated On
ಯೆಮೆನ್​​ನಲ್ಲಿ ಕೇರಳದ ಮಗಳಿಗೆ ಗಲ್ಲು.. ಕರುಳ ಕುಡಿ ಉಳಿಸಲು ತಾಯಿಂದ ರಕ್ತ ಹಣಕ್ಕಾಗಿ ಪರದಾಟ ಸಂಕಟ..!
Advertisment
  • ಹತ್ಯೆ ಉದ್ದೇಶವೇ ಇರಲಿಲ್ಲ, ಆದರೆ ಹತ್ಯೆಯೇ ನಡೆದುಹೋಯ್ತು
  • ಜೈಲಿನಲ್ಲಿಯೇ ನಿಮಿಷಾಗೆ ಸಿಕ್ಕಿತ್ತು ಚುಚ್ಚು ಮದ್ದು ಐಡಿಯಾ
  • ಕೂಲಿ ಮಾಡಿ ಮಗಳಿಗೆ ನರ್ಸಿಂಗ್‌ ಮಾಡಿಸಿದ್ರು ತಂದೆ ತಾಯಿ

ತಾಯಿ ಅಂದ್ರೆ ಕಣ್ಣಿಗೆ ಕಾಣುವ ಪ್ರತ್ಯಕ್ಷ ದೇವ್ರು. ಮುಕ್ಕೋಟಿ ದೇವ್ರು ಒಟ್ಟಾಗಿ ಬಂದ್ರೂ ತಾಯಿಗೆ ಸಮವಲ್ಲ. ತಾಯಿ ಯಾವತ್ತಿದ್ರೂ ಅವರೆಲ್ಲರಿಗಿಂತ ಮಿಗಿಲು. ಯಾವುದೋ ತಪ್ಪಿಗೆ, ಇಲ್ಲವೇ ಯಾವುದೋ ಕಾರಣಕ್ಕೆ ಇಡೀ ಜಗತ್ತು ನಮ್ಮ ವಿರುದ್ಧ ನಿಲ್ಲಬಹುದು. ನಿನ್ನ ಅಗತ್ಯ ಈ ಜಗತ್ತಿಗೇ ಇಲ್ಲ ಅಂತಾ ಹೇಳ್ಬಹುದು. ತಾಯಿ ಮಾತ್ರ ಯಾವತ್ತೂ ತನ್ನ ಹೆತ್ತ ಕರುಳನ್ನು ಬಿಟ್ಟುಕೊಡೋ ಮಾತೇ ಇಲ್ಲ. ಆಕೆ ತಾನು ಹೆತ್ತು ಹೊತ್ತ ಕರುಳಿನ ಬಳ್ಳಿಯ ರಕ್ಷಣೆಗಾಗಿ ಯಾರನ್ನು ಬೇಕಾದ್ರೂ ಎದುರುಹಾಕಿಕೊಳ್ಳುತ್ತಾಳೆ. ಎಂಥಾ ಯುದ್ಧವನ್ನು ಬೇಕಾದ್ರೂ ಸಾರುತ್ತಾಳೆ. ಹೀಗಾಗಿಯೇ ಪ್ರಪಂಚದಲ್ಲಿ ತಾಯಿಗಿಂತ ದೊಡ್ಡ ಯೋಧ ಮತ್ತೊಬ್ಬನಿಲ್ಲ ಅಂತಾ ಹೇಳೋದು. ಅಷ್ಟಕ್ಕೂ ನಾವು ತಾಯಿಯ ಹೋರಾಟದ ಬಗ್ಗೆ ಯಾಕಿಷ್ಟು ಮಾತಾಡ್ತಿದ್ದೇವೆ ಅಂದ್ರೆ ಅಂತಾದ್ದೇ ಒಂದು ಸ್ಟೋರಿ ಇಲ್ಲಿದೆ. ಮಗಳನ್ನು ನೇಣು ಕುಣಿಕೆಯಿಂದ ತಪ್ಪಿಸ್ಬೇಕು ಅಂತಾ ಆಕೆ ಮಾಡ್ತಿರೋ ಹೋರಾಟ ನಿಜಕ್ಕೂ ಹೃದಯ ಹಿಂಡುತ್ತೆ, ಕರುಳು ಕಿವುಚುತ್ತೆ.

publive-image

ಅದು 2017ನೇ ವರ್ಷ. ಕೇರಳದ ಪಾಲಕ್ಡಾಡ್‌ ಜಿಲ್ಲೆಯ ನರ್ಸ್‌ ನಿಮಿಷಾ ಪ್ರಿಯಾ ಭಾರತಕ್ಕೆ ಬರ್ಬೇಕು ಅಂತಾ ಪಾಸ್‌ಪೋರ್ಟ್‌ ಹಿಟ್ಕೊಂಡ್‌ ಯೆಮೆನ್‌ ದೇಶದ ಏರ್‌ಪೋರ್ಟ್‌ಗೆ ಬರುತ್ತಿದ್ದರು. ಅಷ್ಟರಲ್ಲಾಗಲೇ ಅಲ್ಲಿಗೆ ಎಂಟ್ರಿಕೊಟ್ಟಿದ್ದ ಅಲ್ಲಿನ ಪೊಲೀಸರು ಅರೆಸ್ಟ್‌ ಮಾಡ್ಕೊಂಡ್‌ ಸ್ಟೇಷನ್‌ಗೆ ಕರೆದುಕೊಂಡು ಹೋಗ್ತಾರೆ. ಕಾರಣ, ಮರ್ಡರ್‌ ಕೇಸ್‌. ಅದು ಯೆಮೆನ್‌ ಪ್ರಜೆ ತಲಾಲ್‌ ಅಬ್ದೋ ಮಹದಿ ಹತ್ಯೆ ಕೇಸ್‌. ಪ್ರಕರಣದಲ್ಲಿ ನಿಮಿಷಾ ಪ್ರಿಯಾ 2017 ರಲ್ಲಿಯೇ ಜೈಲು ಸೇರಿದ್ರು. ಅಲ್ಲಿಯ ಕೋರ್ಟ್‌ನಲ್ಲಿ ದೀರ್ಘಾವಧಿ ವಿಚಾರಣೆಯೂ ನಡೀತು. 2018ರಲ್ಲಿ ಕೊಲೆ ಅಪರಾಧಿ ಎಂದು ತೀರ್ಪು ನೀಡಲಾಗಿತ್ತು. ಅಂತಿವಾಗಿ 2023ರಲ್ಲಿ ಅಲ್ಲಿಯ ಸುಪ್ರೀಂ ಕೋರ್ಟ್‌ ಮರಣದಂಡನೆ ಶಿಕ್ಷೆ ಪ್ರಕಟಿಸಿ ಬಿಟ್ತು. ಯೆಮೆನ್‌ ಪ್ರಜೆಯೊಬ್ಬರನ್ನು ಬೇರೆ ದೇಶದ ವ್ಯಕ್ತಿ ಹತ್ಯೆ ಮಾಡಿದ್ರೆ ಅಲ್ಲಿಯ ಕೋರ್ಟ್‌ ಮರಣದಂಡನೆ ನೀಡುತ್ತದೆ.

ಕೋರ್ಟ್‌ ಮರಣ ದಂಡನೆ ಶಿಕ್ಷೆ ಕೊಟ್ಟ ಮೇಲೆ ಅಲ್ಲಿಯ ಅಧ್ಯಕ್ಷನ ಬಳಿ ಫೈಲ್‌ ಹೋಗುತ್ತೆ. ಅಧ್ಯಕ್ಷನಿಗೆ ಕ್ಷಮಾಪಣೆ ನೀಡುವ ಅವಕಾಶವೂ ಇರುತ್ತದೆ. ಬಟ್‌, ಕೇರಳದ ನರ್ಸ್‌ ಮೇಲ್ಮನವಿಯನ್ನು ಯೆಮನ್‌ ಅಧ್ಯಕ್ಷ ರಶದ್‌ ಅಲ್‌ ಅಲ್ಮಿನಿ ರಿಜೆಕ್ಟ್‌ ಮಾಡಿದ್ದಾರೆ. ಪರಿಣಾಮ ಇದೇ ಜುಲೈ 16ರಂದು ಕೂಲಿ ಕೆಲಸ ಮಾಡ್ತಿದ್ದ ತಂದೆ ತಾಯಿಗೆ ನೆರವಾಗಬೇಕು ಅಂತಾ 2008ರಲ್ಲಿ ಯೆಮನ್‌ಗೆ ಹೋಗಿದ್ದ ನಿಮಿಷಾ ಪ್ರಿಯಾ ಗಲ್ಲಿಗೇರ್ಬೇಕಾಗುತ್ತೆ. ತನ್ನ ಮಗಳನ್ನು ರಕ್ಷಣೆ ಮಾಡ್ಬೇಕು. ಗಲ್ಲು ಶಿಕ್ಷೆ ತಪ್ಪಿಸ್ಬೇಕು ಅಂತಾ ಆಕೆಯ ತಾಯಿ 57 ವರ್ಷದ ಪ್ರೇಮ ಕುಮಾರಿ ಹೋರಾಟ ವ್ಯರ್ಥವಾಗಿದೆ. ಜುಲೈ 16ರಂದು ನಿಮಿಷಾ ಪ್ರಿಯಾರನ್ನು ಗಲ್ಲಿಗೇರಿಸಲು ಯೆಮನ್ ಸರ್ಕಾರ, ಜೈಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಭಾರತೀಯ ಮಹಿಳೆ ನಿಮಿಷಾ ಪ್ರಿಯಾರನ್ನು ನೇಣು ಕುಣಿಕೆಯಿಂದ ರಕ್ಷಿಸುವ ಭಾರತ ಸರ್ಕಾರ, ಭಾರತೀಯರು, ನಿಮಿಷಾ ಪೋಷಕರ ಪ್ರಯತ್ನಗಳೆಲ್ಲಾ ವಿಫಲವಾಗಿವೆೆ.

publive-image

ಮರ್ಡರ್‌ ಕೇಸ್‌ನಲ್ಲಿ ಮಗಳು ನಿಮಿಷಾ ಯಾವಾಗ ಜೈಲು ಸೇರಿದ್ಲೋ ಆವಾಗಿಂದ ಆಕೆಯನ್ನ ಬಿಡಿಸಿಕೊಂಡು ಬರ್ಬೇಕು ಅಂತಾ ನಿರಂತರ ಹೋರಾಟ ಮಾಡ್ತಿದ್ದಾರೆ ತಾಯಿ ಪ್ರೇಮ ಕುಮಾರಿ. ಬಹುಶಃ ಇದಕ್ಕೆ ಇರ್ಬೇಕು ಉಪ್ಪಿಗಿಂತ ರುಚಿ ಇಲ್ಲ, ತಾಯಿಗಿಂತ ದೇವರಿಲ್ಲ ಅನ್ನೋದು. ಎಲ್ಲಿಯ ಕೇರಳದ ಪಾಲಕ್ಕಾಡ್‌ ಜಿಲ್ಲೆ? ಎಲ್ಲಿ ಯೆಮನ್‌? ಆದರೆ, ತನ್ನ ಮಗಳನ್ನು ರಕ್ಷಣೆ ಮಾಡ್ಬೇಕು ಅಂತಾ ಪ್ರೇಮ ಕುಮಾರಿ 2017ರಿಂದ ಇಲ್ಲಿಯವರೆಗೂ ಹೋರಾಟ ಮಾಡ್ತಾನೇ ಬರ್ತಿದ್ದಾರೆ. ದುರಾದೃಷ್ಟವಶಾತ್‌ ಆ ಹೋರಾಟಕ್ಕೆ ಜಯ ಸಿಕ್ಕಿಲ್ಲ ಅನ್ನೋದು ಸತ್ಯ. ಹಾಗಂತ ತನ್ನ ಕೈಯಲ್ಲಿ ಆಗಲ್ಲ ಅಂತಾ ಆ ತಾಯಿ ಯಾವತ್ತೂ ಕೈಕಟ್ಟಿ ಕುಳಿತ್ಕೊಳ್ಳಲಿಲ್ಲ. ಸುಪ್ರೀಂ ಕೋರ್ಟ್‌ನಿಂದ ಮರಣದಂಡನೆ ಶಿಕ್ಷೆಯಾಗಿದ್ರೂ? ಅಲ್ಲಿಯ ಅಧ್ಯಕ್ಷ ಮರಣ ದಂಡನೆಗೆ ಅಸ್ತು ಅಂತಾ ಹೇಳಿದ್ರೂ? ಮಗಳ ರಕ್ಷಣೆಗೆ ಪಣತೊಟ್ಟಿದ್ದಾಳೆ.

ತಾಯಿ ಅಲ್ಲದೇ ಬೇರೆಯಾರೇ ಆಗಿದ್ರೂ ಬಹುಶಃ ಕೇರಳದ ನರ್ಸ್‌ ನಿಮಿಷಾ ಪ್ರಿಯಾ ಅವ್ರನ್ನು ನಡು ನೀರಿನಲ್ಲಿ ಕೈಬಿಟ್ಟು ಬಿಡ್ತಾ ಇದ್ರೇನೋ? ನರ್ಸ್‌ ತಾಯಿ ಪ್ರೇಮ ಕುಮಾರಿ ಅವ್ರು ಈ ಕ್ಷಣದಲ್ಲಿಯೂ ಮಗಳನ್ನು ಗಲ್ಲು ಶಿಕ್ಷೆಯಿಂದ ಪಾರು ಮಾಡಲು ಹೋರಾಟ ಮಾಡ್ತಿದ್ದಾರೆ. ಸದ್ಯ ಅವರ ಮುಂದೆ ಇರೋ ಮಾರ್ಗ ಅಂದ್ರೆ ಅದು ಬ್ಲಡ್‌ ಮನಿ. ಅಂದ್ರೆ ರಕ್ತ ಹಣ. ಅದೇನು ಅಂದ್ರೆ, ಮುಸ್ಲಿಂ ರಾಷ್ಟ್ರವಾಗಿರೋ ಯೆಮನ್ ದೇಶದಲ್ಲಿ ಯಾರಾದ್ರೂ ಗಲ್ಲು ಶಿಕ್ಷೆಗೆ ಗುರಿಯಾಗಿದ್ರೆ ಅವ್ರಿಗೆ ಅದ್ರಿಂದ ಪಾರಾಗಲು ಇರೋ ಕೊನೆಯ ಅವಕಾಶ ಅಂದ್ರೆ ರಕ್ತ ಹಣ. ಅದು ಹೇಗಿರುತ್ತೆ ಅಂದ್ರೆ, ಯಾರು ಮರ್ಡರ್‌ ಆಗಿರ್ತಾರೋ? ಆತನ ತಂದೆ ತಾಯಿ ಇಲ್ಲವೇ ಕುಟುಂಬಸ್ಥರು ಹತ್ಯೆ ಮಾಡಿದವ್ರನ್ನು ಕ್ಷಮಿಸೋದು. ಜೊತೆಗೆ ಅವ್ರು ರಕ್ತ ಹಣ ಸ್ವೀಕಾರಕ್ಕೆ ಒಪ್ಪಿಕೊಳ್ಳುವುದು. ಹಾಗೇ ಅವ್ರು ಎಷ್ಟು ಹಣಕ್ಕೆ ಡಿಮ್ಯಾಂಡ್‌ ಮಾಡ್ತಾರೋ? ಅಷ್ಟು ಹಣವನ್ನು ಹತ್ಯೆ ಮಾಡಿದವರ ಕುಟುಂಬದವ್ರು ಕೊಡ್ಬೇಕು. ಅದು ಸಕ್ಸಸ್‌ ಆಯ್ತು ಅಂತಾದ್ರೆ ಮರಣದಂಡನೆ ಕ್ಯಾನ್ಸಲ್‌ ಆಗುತ್ತೆ. ಇದೀಗ ನಿಮಿಷಾ ತಾಯಿ ರಕ್ತ ಹಣಕ್ಕೆ ಪಣತೊಟ್ಟಿದ್ದಾರೆ. ಅದ್ಕಾಗಿಯೇ ಮಗಳ ಜೀವ ಉಳಿಸಲು ನೆರವಾಗಿ ಪ್ಲೀಸ್‌ ಅಂತಾ ಕಣ್ಣೀರಿಟ್ಟಿದ್ದಾರೆ.

ಹತ್ಯೆ ಕೇಸ್‌ನಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರೋ ಮಗಳ ರಕ್ಷಣೆಗಾಗಿ ಪಣತೊಟ್ಟಿರೋ ತಾಯಿ ಪ್ರೇಮ ಕುಮಾರಿ ಅವ್ರು ಡಿಸೆಂಬರ್‌ನಲ್ಲಿ ಯೆಮನ್‌ ರಾಜಧಾನಿ ಸನಾಗೆ ಭೇಟಿ ನೀಡಿದ್ದಾರೆ. ಯೆಮನ್‌ ಮೂಲದ ಅನಿವಾಸಿ ಭಾರತೀಯ ಸಾಮಾಜಿಕ ಕಾರ್ಯಕರ್ತರ ಗುಂಪು ನೆರವು ನೀಡುತ್ತಿದೆ. ಹತ್ಯೆಯಾದ ತಲಾಲ್‌ ಅಬ್ದೋ ಮಹದಿ ಕುಟುಂಬಸ್ಥರು ರಕ್ತಹಣ ಸ್ವೀಕಾರಕ್ಕೆ ಒಪ್ಪಿದ್ದಾರೋ ಇಲ್ವೋ? ಅನ್ನೋದು ಗೊತ್ತಿಲ್ಲ. ಒಮ್ಮೆ ಒಪ್ಪಿದ್ರೂ ಅದೆಷ್ಟು ಹಣವನ್ನು ಡಿಮ್ಯಾಂಡ್‌ ಮಾಡ್ತಾರೆ ಅನ್ನೋದ್‌ ಪಕ್ಕಾ ಆಗಿಲ್ಲ. ಅಂಥ ಪ್ರಯತ್ನ ನಡೀತಾ ಇದೆ. ಭಾರತ ಸರ್ಕಾರವೂ ನಿಮಿಷಾ ಪ್ರಿಯಾಗೆ ಗಲ್ಲು ಶಿಕ್ಷೆ ತಪ್ಪಿಸಲು ಎಲ್ಲಾ ರೀತಿಯಿಂದಲೂ ಪ್ರಯತ್ನ ನಡೆಸ್ತಿದೆ. ಹಾಗೇ ನೆರವು ನೀಡಿ ಅಂತಾ ನಿಮಿಷಾ ಪ್ರಿಯಾ ತಾಯಿ ಭಾವನಾತ್ಮಕವಾಗಿ ಮನವಿ ಮಾಡಿದ್ದಾರೆ. ನಿಮಿಷಾ ಪ್ರಿಯಾ ತಾಯಿಯ ಭಾವನಾತ್ಮಕ ಮನವಿಗೇ ಇಡೀ ದೇಶವೇ ಮಿಡಿಯುತ್ತಿದೆ. ಜನ ನೆರವು ನೀಡಲು ಸಿದ್ಧ ಅಂತಾ ಮುಂದೆ ಬರ್ತಿದ್ದಾರೆ. ಕೇಂದ್ರ ಸರ್ಕಾರವೂ ಎಲ್ಲಾ ಪ್ರಯತ್ನ ಮಾಡೋದಾಗಿ ಹೇಳ್ಕೊಂಡಿದೆ. ಈಗ ನಿಮಿಷಾ ಪ್ರಿಯಾ ಗಲ್ಲು ಶಿಕ್ಷೆಯಿಂದ ಪಾರಾಗ್ಬೇಕು ಅಂತಾದ್ರೆ ಮಹದಿ ಕುಟುಂಬಸ್ಥರು ರಕ್ತಹಣಕ್ಕೆ ಒಪ್ಪಿಕೊಳ್ಳಬೇಕು.

publive-image

ಹತ್ಯೆ ಸ್ಕೇಚ್‌ ಇರ್ಲೇ ಇಲ್ಲ, ಆದ್ರೂ ಮರ್ಡರ್‌ ಆಗಿ ಹೋಯ್ತು!

ಮಹದಿ ಮತ್ತು ನಿಮಿಷಾ ಪ್ರಿಯಾ ಇಬ್ಬರು ತುಂಬಾ ವರ್ಷಗಳ ಪರಿಚಯಸ್ಥರಾಗಿದ್ರು. ಇಬ್ಬರು ಸೇರಿ ಯೆಮನ್‌ನಲ್ಲಿ ಕ್ಲಿನಿಕ್‌ವೊಂದನ್ನು ನಡೆಸ್ತಿದ್ರು. ಅದು ಚೆನ್ನಾಗಿಯೇ ನಡೀತಾ ಇತ್ತು. ನಿಮಿಷಾ ಪಾಸ್‌ಪೋರ್ಟ್‌ ಮಹದಿ ಬಳಿ ಇತ್ತು. ಆತನಲ್ಲಿ ಅದೆಷ್ಟೇ ಕಾಡಿ ಬೇಡಿದ್ರೂ ಪಾಸ್‌ಪೋರ್ಟ್‌ ಕೊಡ್ತಾನೇ ಇರ್ಲಿಲ್ಲ. ಇನ್ನೊಂದು ಕಡೆ ಇವಳೇ ತನ್ನ ಹೆಂಡ್ತಿ ಅಂತಾನೇ ಪರಿಚಯಸ್ಥರಲ್ಲಿ ಹೇಳಿಕೊಳ್ತಿದ್ದ ಮಹದಿ. ಹಾಗೇ ಎಡಿಟ್‌ ಮಾಡಿರೋ ಫೋಟ್‌ಗಳನ್ನು ತೋರಿಸ್ತಿದ್ದ. ಇಷ್ಟೇ ಅಲ್ಲ, ನಿಮಿಷಾ ಬಳಿ ಇರೋ ಹಣವನ್ನೆಲ್ಲ ದೋಚಿ ಬಿಟ್ಟಿದ್ದ. ಇದೆಲ್ಲದ್ರಿಂದ ನಿಮಿಷಾ ರೋಷಿ ಹೋಗಿದ್ದಳು. ಇದೇ ವಿಚಾರವಾಗಿ ಅಲ್ಲಿಯ ಪೊಲೀಸ್‌ ಠಾಣೆಯ ಮೆಟ್ಟಿಲನ್ನು ಏರಿದ್ದಳು. ಅಲ್ಲಿಯ ಪೊಲೀಸರು ನಿಮಿಷಾ ಅವರದ್ದೇ ತಪ್ಪು ಅಂತಾ 6 ದಿನ ಜೈಲಲ್ಲಿ ಇಟ್ಟಿದ್ರು.

ಹಾಗೇ ಜೈಲಿನಿಂದ ಹೊರಬಂದ ನಿಮಿಷಾ ಅದು ಹೇಗಾದ್ರೂ ಪಾಸ್‌ಪೋರ್ಟ್‌ ತೆಗೆದುಕೊಂಡು ಭಾರತಕ್ಕೆ ಬರ್ಬೇಕು ಅಂತಾ ಸ್ಕೆಚ್‌ ಹಾಕಿದ್ದಾಳೆ. ಇದೇ ಕಾರಣಕ್ಕೆ ಮಹದಿಗೆ ಅರವಳಿಕೆ ಇಂಜೆಕ್ಷನ್‌ ಕೊಟ್ಟು ಪಾಸ್‌ಪೋರ್ಟ್‌ ತೆಗೆದ್ಕೊಂಡು ಏರ್‌ಪೋರ್ಟ್‌ಗೆ ಬಂದಿದ್ದಳು. ಅಷ್ಟರಲ್ಲಾಗಲೇ ಮಹದಿ ಸಾವು ಕಂಡಿದ್ದ. ಪೊಲೀಸ್ರಿಗೂ ಮಾಹಿತಿ ಹೋಗಿತ್ತು. ತಕ್ಷಣವೇ ಅವ್ರು ನಿಮಿಷಾ ಅರೆಸ್ಟ್‌ ಮಾಡ್ಕೊಂಡ್‌ ಜೈಲಿಗೆ ಹಾಕಿದ್ರು. ವಾದ-ಪ್ರತಿವಾದ ಆಲಿಸಿದ್ದ ಕೋರ್ಟ್‌ ಮರಣದಂಡನೆ ಶಿಕ್ಷೆ ಪ್ರಕಟಿಸಿತ್ತು. ಮತ್ತು ಬರೋ ಇಂಜೆಕ್ಷನ್‌ ಕೊಟ್ರೆ ಮಹದಿ ಸಾವನ್ನಪಿದ್ದು ಯಾಕೆ? ಆತನ ದುರುದೇಶ ಏನಾಗಿತ್ತು? ನಿಜಕ್ಕೂ ಅದು ಇಂಟ್ರೆಸ್ಟಿಂಗ್‌. ಹಾಗೇ 2008 ರಿಂದ 2023ರ ವರೆಗಿನ ನಿಮಿಷಾ ಲೈಫ್ ಜರ್ನಿ ಮನ ಮಿಡಿಯುವಂತಿದೆ.

ಕೂಲಿ ಮಾಡಿ ಮಗಳಿಗೆ ನರ್ಸಿಂಗ್‌ ಮಾಡಿಸಿದ್ರು ತಂದೆ ತಾಯಿ!

ಏನೋ ಮಾಡಲು ಹೋಗಿ ಇನ್ನೇನೋ ಆಗಿ ಹೋಯ್ತು ಅಂತಾರಲ್ಲ ಹಾಗೇ ಆಗಿತ್ತು ನರ್ಸ್‌ ನಿಮಿಷಾ ಪ್ರಿಯಾ ಕಥೆ. ಆಕೆಗೆ ನಿಜಕ್ಕೂ ಮಹದಿಯನ್ನು ಸಾಯಿಸ್ಬೇಕು ತಾನು ಭಾರತಕ್ಕೆ ಪರಾರಿಯಾಗ್ಬೇಕು ಅನ್ನೋದ್‌ ಇರ್ಲೇ ಇಲ್ಲ. ಅವಳ ಉದ್ದೇಶ ಆ ದುರಳನ ಕೈಯಿಂದ ತಪ್ಪಿಸ್ಕೊಂಡ್‌ ಬರೋದಾಗಿತ್ತು. ಜೈಲು ಸೇರುವಂತಾಯ್ತು. 6 ವರ್ಷಗಳ ಬಳಿಕ ಮರಣ ದಂಡನೆಗೆ ಗುರಿಯಾಗುವಂತೆಯೂ ಆಯ್ತು. ಅಲ್‌ರೆಡಿ ಮರಣ ದಂಡನೆ ತೀರ್ಪು ಬಂದಿರೋ ಹಿನ್ನೆಲೆಯಲ್ಲಿ ಇದೇ ಜುಲೈ 16 ರಂದು ಯೆಮನ್ ದೇಶದಲ್ಲೇ ನಿಮಿಷಾ ಪ್ರಿಯಾರನ್ನು ಗಲ್ಲಿಗೇರಿಸಲಾಗುತ್ತಿದೆ. ಗಲ್ಲಿಗೇರಿಸುವ ದಿನಾಂಕ ನಿಗದಿ ಮಾಡಿ, ನಿಮಿಷಾ ಪ್ರಿಯಾ ತಾಯಿಗೆ ಮಾಹಿತಿ ನೀಡಲಾಗಿದೆ. ಬ್ಲಡ್ ಮನಿ ನೀಡಿ ನಿಮಿಷಾ ಪ್ರಿಯಾ ಗಲ್ಲಿಗೇರುವುದನ್ನು ತಪ್ಪಿಸುವ ಪ್ರಯತ್ನ ವಿಫಲವಾಗಿದೆ.

ಕೂಲಿ ಮಾಡಿ ಮಗಳಿಗೆ ನರ್ಸಿಂಗ್‌ ಮಾಡಿಸಿದ್ರು ತಂದೆ ತಾಯಿ!

ನಿಮಿಷಾ ಮನೆಯಲ್ಲಿ ಬಡತನ ಇತ್ತು. ತಂದೆ-ತಾಯಿ ಇಬ್ಬರೂ ಕೂಲಿ ಮಾಡಿ ಜೀವನದ ಬಂಡಿ ಸಾಗಿಸ್ತಿದ್ದರು. ಅದೇ ಕಷ್ಟದಲ್ಲಿಯೇ ನಿಮಿಷಾ ಪ್ರಿಯಾಗೆ ನರ್ಸಿಂಗ್‌ ಮಾಡಿಸಿದ್ದರು. ಹಾಗೇ ನರ್ಸಿಂಗ್‌ ಕೋರ್ಸ್‌ ಕಂಪ್ಲೀಟ್‌ ಆದ್ಮೇಲೆ ಪಾಲಕ್ಕಾಡ್ ಜಿಲ್ಲೆಯ ಕೊಳಂಗೋಡ್‌ನ ನರ್ಸ್ ನಿಮಿಷಾ ಪ್ರಿಯಾ 2008ರಲ್ಲಿ ಪೋಷಕರ ನೆರವಿನೊಂದಿಗೆ ಯೆಮೆನ್ ಹೋಗಿದ್ದರು. ಅಲ್ಲಿಗೆ ಹೋದ್ಮೇಲೆ ಬೇರೆ ಬೇರೆ ಆಸ್ಪತ್ರೆಗಳಲ್ಲಿ ಉದ್ಯೋಗ ಮಾಡಿದ್ದರು. ನಂತರ 2011ರಲ್ಲಿ ಭಾರತಕ್ಕೆ ಮರಳಿ ಬರ್ತಾರೆ. ಕೇರಳದವ್ರೇ ಆಗಿರೋ ಟಾಮಿ ಥಾಮಸ್ ಅವರನ್ನು ವಿವಾಹವಾಗಿದ್ದರು. ಅನಂತರ ಪತಿ ಪತ್ನಿ ಇಬ್ಬರೂ 2012ರಲ್ಲಿ ಮತ್ತೆ ಯೆಮೆನ್‌ಗೆ ತೆರಳಿದ್ದರು. ನಿಮಿಷಾ ಮತ್ತೆ ಯೆಮೆನ್ ರಾಜಧಾನಿ ಸನಾದಲ್ಲಿ ನರ್ಸ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದರು. ಹಾಗೇ ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿದ್ರು. 2014ರಲ್ಲಿ ಯೆಮನ್‌ನಲ್ಲಿ ಏನಾಗುತ್ತೆ ಅಂದ್ರೆ ತೀವ್ರ ಆರ್ಥಿಕ ಮುಗ್ಗಟ್ಟು ಎದುರಾಗುತ್ತೆ. ನಿಮಿಷಾ ಪತಿ ಉದ್ಯೋಗವನ್ನು ಕಳೆದ್ಕೊಳ್ಳಬೇಕಾಗುತ್ತೆ. ಹೀಗಾಗಿ ಅವ್ರು ನೇರವಾಗಿ ಮಗಳನ್ನು ಕರೆದುಕೊಂಡು ಕೇರಳಕ್ಕೆ ವಾಪಸ್‌ ಬಂದುಬಿಟ್ಟಿದ್ದರು. ಅದೇ ಸಮಯದಲ್ಲಿ, ಯೆಮೆನ್‌ನಲ್ಲಿ ಅಂತರ್ಯುದ್ಧ ಪ್ರಾರಂಭವಾಯಿತು. ವೀಸಾಗಳನ್ನು ನಿಷೇಧಿಸಲಾಯಿತು. ಇದರಿಂದಾಗಿ ನಿಮಿಷಾ ಪತಿ ಯಮನ್‌ಗೆ ಹಿಂತಿರುಗಲು ಸಾಧ್ಯವಾಗಲಿಲ್ಲ.

ಜೈಲಿನಲ್ಲಿಯೇ ನಿಮಿಷಾಗೆ ಸಿಕ್ಕಿತ್ತು ಚುಚ್ಚುಮದ್ದು ಐಡಿಯಾ!

ನರ್ಸ್ ನಿಮಿಷಾ ಪ್ರಿಯಾ ಯೆಮೆನ್‌ನಲ್ಲಿ ತನ್ನದೇ ಆದ ಕ್ಲಿನಿಕ್ ತೆರೆಯಲು ಮುಂದಾಗಿದ್ದರು. ಯೆಮೆನ್ ನಿಯಮಗಳ ಪ್ರಕಾರ, ಅಲ್ಲಿ ಯಾವುದೇ ವ್ಯವಹಾರವನ್ನು ಪ್ರಾರಂಭಿಸಲು ಸ್ಥಳೀಯ ಜನರೊಂದಿಗೆ ಪಾಲುದಾರಿಕೆ ಅಗತ್ಯ. ಆದ್ದರಿಂದ, 2014 ರಲ್ಲಿ, ನಿಮಿಷಾ ಯೆಮೆನ್ ಪ್ರಜೆ ತಲಾಲ್ ಅಬ್ದೋ ಮಹದಿಯೊಂದಿಗೆ ಸಂಪರ್ಕಕ್ಕೆ ಬರ್ತಾಳೆ. 2015 ರಲ್ಲಿ, ನಿಮಿಷಾ ಮಹದಿ ಸಹಭಾಗಿತ್ವದಲ್ಲಿ ಕ್ಲಿನಿಕ್‌ವೊಂದು ತೆರೆದುಕೊಳ್ಳುತ್ತೆ. ಇನ್ನೊಂದು ವಿಚಾರ ಅಂದ್ರೆ, 2015ರಲ್ಲಿ ಕ್ಲಿನಿಕ್ ತೆರೆದ ಕೆಲವೇ ದಿನಗಳಲ್ಲಿ ನಿಮಿಷಾ ಕೇರಳಕ್ಕೆ ಬಂದಿದ್ರು. ನಿಮಿಷಾ ಜೊತೆ ಮಹದಿ ಕೂಡ ಬಂದಿದ್ದ. ಈ ಸಮಯದಲ್ಲಿ, ಮಹದಿ, ನಿಮಿಷಾ ಅವರ ಮದುವೆಯ ಫೋಟೋವನ್ನು ಅವಳ ಮನೆಯಿಂದ ಕದಿತಾನೆ. ಆ ಫೋಟೋಗಳನ್ನು ಎಡಿಟ್ ಮಾಡಿಸಿ ನಿಮಿಷಾ ಪತಿ ಇರೋ ಪ್ಲೇಸ್‌ನಲ್ಲಿ ತನ್ನ ಫೋಟೋ ಚಾಯಿಂಟ್‌ ಮಾಡಿಸ್ತಾನೆ. ನಿಮಿಷಾ ಪತಿ ತಾನೇ ಅಂತಾ ಹೇಳಿಕೊಂಡು ತಿರುಗಾಡಲು ಶುರು ಮಾಡ್ತಾನೆ. ಹಾಗೇ ಕ್ಲಿನಿಕ್‌ನ ದಾಖಲೆಗಳನ್ನು ತಿದ್ದುಪಡಿ ಮಾಡಿಸ್ತಾನೆ, ನಿಮಿಷಾ ಆದಾಯಕ್ಕೂ ಕನ್ನ ಹಾಕುತ್ತಾನೆ. ಆ ಸಂದರ್ಭದಲ್ಲಿ ನಿಮಿಷ ಪೊಲೀಸ್‌ ಠಾಣೆಯ ಮೆಟ್ಟಿಲು ಏರುತ್ತಾಳೆ.

ಮಹದಿ ನಿಮಿಷಾಗೆ ಕಿರುಕುಳ ನೀಡಲು ಶುರು ಮಾಡ್ತಾನೆ, ನಿಮಿಷಾ ಯೆಮನ್‌ ಬಿಟ್ಟು ಹೋಗ್ಬಾರದು ಅಂತಾ ಪಾಸ್‌ಪೋರ್ಟ್ ಕರಿಸಿದುಕೊಂಡು ಇರ್ತಾನೆ. ಪಾಸ್‌ಪೋರ್ಟ್‌ ಕೇಳಿದಾಗೆಲ್ಲ ಬೆದರಿಕೆ ಹಾಕಲು ಶುರು ಮಾಡ್ತಾನೆ. ಮಹದಿ ಕ್ಲಿನಿಕ್‌ನಲ್ಲಿದ್ದ ಎಲ್ಲಾ ಹಣ ಮತ್ತು ಚಿನ್ನಾಭರಣಗಳನ್ನು ದೋಚಿರುತ್ತಾನೆ. ಬಟ್‌, ನಿಮಿಷಾ ಪೊಲೀಸರಿಗೆ ದೂರು ನೀಡಿದಾಗ ಮಹದಿ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಪೊಲೀಸರು ನಿಮಿಷಾ ಅವರನ್ನು ಬಂಧಿಸ್ತಾರೆ. ಆರು ದಿನಗಳ ಕಾಲ ಜೈಲಿನಲ್ಲಿ ಇರಿಸಿದ್ದರು. ವಿಶೇಷ ಅಂದ್ರೆ ನಿಮಿಷಾ ಜೈಲಿನಿಂದ ಹೊರಬಂದಾಗ, ಮಹದಿಗೆ ಅರಿವಳಿಕೆ ಚುಚ್ಚುಮದ್ದು ನೀಡಿ ಪಾಸ್‌ಪೋರ್ಟ್‌ನೊಂದಿಗೆ ಹೋಗುವಂತೆ ಜೈಲು ವಾರ್ಡನ್ ಐಡಿಯಾ ಕೊಡ್ತಾನೆ. ಅದೇ ಐಡಿಯಾ ಪ್ರಯೋಗ ಮಾಡಲು ಹೋಗಿ ನಿಮಿಷಾ ಮರ್ಡರ್‌ ಕೇಸ್‌ನಲ್ಲಿ ತಗ್ಲಾಕಿಕೊಂಡಿದ್ದಳು.

ಮಹದಿಗೆ ಅರವಳಿಕೆ ಇಂಜೆಕ್ಷನ್, ಯಾಕೆ ಸಾವಿನ ಮನೆ ತೋರಿಸ್ತು ಅಂತ ನೋಡಿದರೆ ಮಹದಿ ಮಾದಕ ವ್ಯಸನಿಯಾಗಿದ್ದ, ಕಾರಣ ಆತನ ಮೇಲೆ ಚುಚ್ಚುಮದ್ದು ಯಾವುದೇ ಪರಿಣಾಮ ಬೀರಲಿಲ್ಲ. ಇದಾದ ಬಳಿಕ ನಿಮಿಷಾ ಹೆಚ್ಚಿನ ಔಷಧ ನೀಡಿದ್ದಾಳೆ. ಅದರ ಸೈಡ್‌ ಎಫೆಕ್ಟ್‌ನಿಂದಾಗಿ ಮಹದಿ ಸಾವನ್ನಪ್ಪಿದ್ದಾರೆ. ಬಳಿಕ ಯೆಮನ್‌ನಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾಗ ನಿಮಿಷಾ ಪೊಲೀಸರ ಬಂಧಿಯಾಗಿದ್ದಾರೆ. ಈಗ ಗಲ್ಲುಶಿಕ್ಷೆಗೆ ಗುರಿಯಾಗಿರುವ ನಿಮಿಷಾ ಪ್ರಿಯಾರನ್ನು ನೇಣಿನ ಕುಣಿಕೆಯಿಂದ ಪಾರು ಮಾಡುವ ಎಲ್ಲ ಪ್ರಯತ್ನಗಳು ವಿಫಲವಾಗಿವೆ. ಜುಲೈ 16ರಂದು ಯೆಮನ್ ಜೈಲಿನಲ್ಲಿ ನಿಮಿಷಾ ಪ್ರಿಯಾರನ್ನು ಗಲ್ಲಿಗೇರಿಸಲು ದಿನಾಂಕ, ಸಮಯ ನಿಗದಿಯಾಗಿದೆ. ಈ ಮಾಹಿತಿಯನ್ನು ಯೆಮನ್ ಜೈಲಿನ ಅಧಿಕಾರಿಗಳು ನಿಮಿಷಾ ಪ್ರಿಯಾ ತಾಯಿಗೆ ತಿಳಿಸಿದ್ದಾರೆ.

ವಿಶೇಷ ವರದಿ: ಮಂಜು ಮಳಗುಳಿ, ಸಿದ್ದಾಪುರ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment