/newsfirstlive-kannada/media/post_attachments/wp-content/uploads/2024/09/Narendra-modi.jpg)
ನವದೆಹಲಿ: ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ರಾತ್ರಿ 8 ಗಂಟೆಗೆ ಮಾತನಾಡುತ್ತಿದ್ದಾರೆ. ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆ ಬಳಿಕ ಪ್ರಧಾನಿ ಮೋದಿ ಅವರು ಮೊದಲ ಬಾರಿಗೆ ಮಾತನಾಡುತ್ತಿರೋದು ಕುತೂಹಲ ಕೆರಳಿಸಿದೆ.
ಭಾರತ, ಪಾಕಿಸ್ತಾನದ ಮಧ್ಯೆ 4 ದಿನದ ಸಂಘರ್ಷದ ಬಳಿಕ ಕದನ ವಿರಾಮ ಘೋಷಣೆಯಾಗಿದೆ. ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆ ಪರಾಕ್ರಮ ಪ್ರದರ್ಶನವಾಗಿದೆ. ಕದನ ವಿರಾಮದ ಬಳಿಕ ದೇಶದ ಜನತೆಯನ್ನುದ್ದೇಶಿಸಿ ಪ್ರಧಾನಿ ಮೋದಿ ಅವರು ಮಾತನಾಡುತ್ತಿದ್ದಾರೆ.
ಕಳೆದ ಏಪ್ರಿಲ್ 22ರ ಪಹಲ್ಗಾಮ್ ಉಗ್ರರ ದಾಳಿಯ ಬಳಿಕ ಮೇ 7ರಂದು ಆಪರೇಷನ್ ಸಿಂಧೂರ ಕಾರ್ಯಾಚರಣೆ ಆರಂಭವಾಗಿತ್ತು. 26 ಮಂದಿ ನಾಗರಿಕರ ಸಾವಿಗೆ ಭಾರತೀಯ ಸೇನೆ ಉಗ್ರ ಸ್ವರೂಪವನ್ನ ತಾಳಿ ಪಾಕಿಸ್ತಾನದ ಉಗ್ರರ ನೆಲೆಗಳನ್ನೇ ಧ್ವಂಸ ಮಾಡಿದೆ.
ಪಹಲ್ಗಾಮ್ ಉಗ್ರರ ದಾಳಿಯ ಹಿಂದೆ ಪಾಕಿಸ್ತಾನದ ಬೆಂಬಲ ಇರೋದು ಎಲ್ಲರಿಗೂ ಗೊತ್ತಿರುವ ಸತ್ಯ. ಭಯೋತ್ಪಾದನೆಯನ್ನ ಭಾರತ ಎಂದಿಗೂ ಸಹಿಸಿಕೊಳ್ಳುವುದಿಲ್ಲ ಅನ್ನೋ ಸ್ಪಷ್ಟ ಸಂದೇಶವನ್ನ ಆಪರೇಷನ್ ಸಿಂಧೂರ ಕಾರ್ಯಾಚರಣೆ ಸಾರಿ, ಸಾರಿ ಹೇಳಿದೆ. ಆಪರೇಷನ್ ಸಿಂಧೂರ ಅನ್ನೋ ಹೆಸರು ನೀಡಿದ್ದು ಖುದ್ದು ಪ್ರಧಾನಿ ಮೋದಿ ಅವರೇ ಎನ್ನಲಾಗಿದೆ.
ಇದನ್ನೂ ಓದಿ: ಪಾಕ್‌ಗೆ ನುಗ್ಗಿ ಹೊಡೆದಿದ್ದೇವೆ.. ಸಾಕ್ಷಿ ಸಮೇತ ರೋಚಕ ಕಾರ್ಯಾಚರಣೆಯ ಮಾಹಿತಿ ಬಿಚ್ಚಿಟ್ಟ DGMO
ಪಹಲ್ಗಾಮ್ ದಾಳಿಯ ಬಳಿಕ ಭಾರತ, ಉಗ್ರರು ಹಾಗೂ ಪಾಕಿಸ್ತಾನದ ವಿರುದ್ಧ ಕಠಿಣ ನಿಲುವುಗಳನ್ನ ತೆಗೆದುಕೊಂಡಿದೆ. ಸಿಂಧೂ ನದಿ ನೀರು ಒಪ್ಪಂದ, ಶಿಮ್ಲಾ ಒಪ್ಪಂದ ಅಮಾನತು ಮಾಡಿದೆ. ಪಾಕಿಸ್ತಾನ ಪ್ರಜೆಗಳನ್ನ ದೇಶ ಬಿಟ್ಟು ಹೋಗುವಂತೆ ಸೂಚನೆ ನೀಡಿತ್ತು. ಇದಾದ ಬಳಿಕ ಆಪರೇಷನ್ ಸಿಂಧೂರ ನಡೆಸಿದ ಭಾರತೀಯ ಸೇನೆ ಸುಮಾರು 100ಕ್ಕೂ ಹೆಚ್ಚು ಉಗ್ರರನ್ನ ಸದೆಬಡಿದಿದೆ.
ಪಾಕಿಸ್ತಾನದ ಮೋಸ್ಟ್ ವಾಟೆಂಡ್ ಉಗ್ರರ ಸಂಹಾರದ ಬಳಿಕ ಪಾಕ್ ಕದನ ವಿರಾಮಕ್ಕೆ ಒಪ್ಪಿಕೊಂಡಿದೆ. ಈ ಎಲ್ಲಾ ಬೆಳವಣಿಗೆಯ ಹಿನ್ನೆಲೆಯಲ್ಲಿ ಇಂದು ರಾತ್ರಿ 8ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣ ಇಡೀ ದೇಶದ ಗಮನ ಸೆಳೆಯುವಂತೆ ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ