ಜಡ್ಜ್​ ಮನೆಯಲ್ಲಿ ನೋಟಿನ ರಾಶಿಗೆ ಬೆಂಕಿ ಬಿದ್ದ ಕೇಸ್​; ತನಿಖಾ ಸಮಿತಿಯ ವರದಿಯಲ್ಲಿ ಏನಿದೆ?

author-image
Bheemappa
Updated On
ಜಡ್ಜ್​ ಮನೆಯಲ್ಲಿ ನೋಟಿನ ರಾಶಿಗೆ ಬೆಂಕಿ ಬಿದ್ದ ಕೇಸ್​; ತನಿಖಾ ಸಮಿತಿಯ ವರದಿಯಲ್ಲಿ ಏನಿದೆ?
Advertisment
  • ಸುಪ್ರೀಂ ಕೋರ್ಟ್​ಗೆ ಸಲ್ಲಿಸಿದ ಪೂರ್ಣ ವರದಿ ಇದೀಗ ಬಹಿರಂಗ ಆಗಿದೆ
  • ಜಡ್ಜ್ ಹುದ್ದೆಯಿಂದ ಯಶವಂತ್ ವರ್ಮಾರನ್ನ ತೆಗೆದು ಹಾಕಲು ಶಿಫಾರಸ್ಸು
  • ಮನೆ ಸ್ಟೋರ್​ ರೂಮ್​ಗೆ ಬೆಂಕಿ ಬಿದ್ದಾಗ 500 ರೂ. ನೋಟುಗಳ ಕಂತೆಗಳು

ದೆಹಲಿ ಹೈಕೋರ್ಟ್ ಜಡ್ಜ್ ಆಗಿದ್ದ ಯಶವಂತ್ ವರ್ಮಾ ಅವರ ದೆಹಲಿ ಮನೆಯಲ್ಲಿ ಹೋಳಿ ಹಬ್ಬದ ದಿನವೇ ಬೆಂಕಿ ಬಿದ್ದು ನೋಟಿನ ಕಂತೆಗಳು ಸುಟ್ಟು ಹೋಗಿದ್ದವು. ಬೆಂಕಿ ನಂದಿಸಲು ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ನೋಟಿನ ಕಂತೆಗೆ ಬೆಂಕಿ ಬಿದ್ದಿರುವುದನ್ನು ಕಂಡು ದಂಗಾಗಿದ್ದರು. ಈ ಕೇಸ್ ತನಿಖೆಗಾಗಿ ಸುಪ್ರೀಂಕೋರ್ಟ್, ಮೂವರು ಹೈಕೋರ್ಟ್ ನ್ಯಾಯಮೂರ್ತಿಗಳ ಸಮಿತಿ ರಚಿಸಿತ್ತು. ಈ ತನಿಖಾ ಸಮಿತಿಯು ಸುಪ್ರೀಂಕೋರ್ಟ್​​ಗೆ ಸಲ್ಲಿಸಿದ ಪೂರ್ತಿ ವರದಿ ಈಗ ಬಹಿರಂಗವಾಗಿದೆ. ಕೋಟಿ ಕೋಟಿ ಕಂತೆ ನೋಟುಗಳಿಗೆ ಹೈಕೋರ್ಟ್​ನ ಹಾಲಿ ಜಡ್ಜ್ ಮನೆಯಲ್ಲಿ ಬೆಂಕಿ ಬಿದ್ದ ಕೇಸ್ ಬಗ್ಗೆ ತನಿಖಾ ಸಮಿತಿ ಹೇಳಿದ್ದೇನು ಅಂತ ನೋಡಿದರೇ, ಶಾಕ್ ಆಗುತ್ತೆ.

ದೆಹಲಿ ಹೈಕೋರ್ಟ್ ಜಡ್ಜ್ ಯಶವಂತ್ ವರ್ಮಾ ಮನೆಯ ಕೊಠಡಿಯಲ್ಲಿ ನೋಟಿನ ಕಂತೆಗಳ ರಾಶಿಯೇ ಇತ್ತು ಅಂತ ಬಹಳಷ್ಟು ಮಂದಿ ತನಿಖಾ ಸಮಿತಿಯ ಮುಂದೆ ಸಾಕ್ಷ್ಯ ಹೇಳಿದ್ದಾರೆ. ಆದರೇ, ಇದರ ಬಗ್ಗೆ ಜಸ್ಟೀಸ್ ಯಶವಂತ್ ವರ್ಮಾ ಎಂದೂ ಕೂಡ ಪೊಲೀಸರಿಗೆ ದೂರು ನೀಡಿಲ್ಲ. ನ್ಯಾಯಾಂಗದ ಉನ್ನತಾಧಿಕಾರಿಗಳಿಗೂ ದೂರು ನೀಡಿಲ್ಲ. ಜಸ್ಟೀಸ್ ಯಶವಂತ್ ವರ್ಮಾ ನಡತೆಯೂ ಅಸ್ವಾಭಾವಿಕ ಅಂತ ಹೇಳಿದೆ. ಜಡ್ಜ್ ಹುದ್ದೆಯಿಂದ ಯಶವಂತ್ ವರ್ಮಾರನ್ನು ತೆಗೆದು ಹಾಕಲು ಸುಪ್ರೀಂಕೋರ್ಟ್​ಗೆ ಶಿಫಾರಸ್ಸು ಮಾಡಿದೆ. ಜಸ್ಟೀಸ್ ಯಶವಂತ್ ವರ್ಮಾ ವಿರುದ್ಧದ ಆರೋಪದಲ್ಲಿ ಸಾಕಷ್ಟು ಸತ್ಯಾಂಶ ಇದೆ. ಮನೆಯ ಕೊಠಡಿಯಲ್ಲಿ ನೋಟಿನ ಕಂತೆ ಪತ್ತೆಯಾಗಿದ್ದನ್ನು ನೋಡಿದ ಪ್ರತ್ಯಕ್ಷದರ್ಶಿ ಸಾಕ್ಷಿಗಳಿದ್ದಾರೆ. ನೋಟುಗಳು ಅರೆಬರೆ ಸುಟ್ಟಿದ್ದರ ವಿಡಿಯೋ ದೃಶ್ಯಗಳ ಸಾಕ್ಷಿ ಇದೆ ಎಂದು ತನಿಖಾ ಸಮಿತಿ ಹೇಳಿದೆ.

publive-image

ಮನೆಯಲ್ಲಿ 500 ರೂಪಾಯಿ ಮುಖಬೆಲೆಯ ನೋಟುಗಳ ರಾಶಿ  

ತನಿಖಾ ಸಮಿತಿಯು 55 ಸಾಕ್ಷಿಗಳನ್ನು ಭೇಟಿ ಮಾಡಿ ಮಾಹಿತಿ ಸಂಗ್ರಹಿಸಿದೆ. ಹಣದ ರಾಶಿ ಇದ್ದ ಕೊಠಡಿಗೆ ಬೆಂಕಿ ಬಿದ್ದಾಗ ಮನೆಯಲ್ಲಿದ್ದ ಜಸ್ಟೀಸ್ ಯಶವಂತ್ ವರ್ಮಾ ಮಗಳ ಹೇಳಿಕೆಯನ್ನು ಸಾಕ್ಷಿಯಾಗಿ ದಾಖಲಿಸಿಕೊಳ್ಳಲಾಗಿದೆ. ಮನೆಯ ಸ್ಟೋರ್ ರೂಮ್​​ನಲ್ಲಿ 500 ರೂಪಾಯಿ ಮುಖಬೆಲೆಯ ನೋಟುಗಳ ರಾಶಿಯೇ ಇತ್ತು ಅಂತ ಅಗ್ನಿಶಾಮಕ, ಪೊಲೀಸ್ ಇಲಾಖೆಯ ಸಿಬ್ಬಂದಿಯೂ ತನಿಖಾ ಸಮಿತಿಯ ಮುಂದೆ ಹೇಳಿಕೆ ನೀಡಿದ್ದಾರೆ. ವಿಡಿಯೋ ಮತ್ತು ಪೋಟೋದಲ್ಲಿ ಕಂಡು ಬಂದಿದ್ದನ್ನು ಸಾಕ್ಷಿಗಳ ಹೇಳಿಕೆಯು ಪುಷ್ಟೀಕರಿಸಿದೆ ಎಂದು ತನಿಖಾ ಸಮಿತಿ ಹೇಳಿದೆ.

ಒಬ್ಬ ಸಾಕ್ಷಿದಾರ, ನಾನು ನನ್ನ ಜೀವನದಲ್ಲೇ ಮೊದಲ ಭಾರಿಗೆ ಅಷ್ಟೊಂದು ದೊಡ್ಡ ಮಟ್ಟದ ನೋಟಿನ ರಾಶಿಯನ್ನು ನೋಡಿದೆ. ಇದರಿಂದ ನನಗೆ ಶಾಕ್ ಮತ್ತು ಅಚ್ಚರಿ ಆಯಿತು ಎಂದು ತನಿಖಾ ಸಮಿತಿ ಮುಂದೆ ಹೇಳಿಕೆ ನೀಡಿದ್ದಾರೆ.

ಇದರ ಹೊರತಾಗಿಯೂ ಜಸ್ಟೀಸ್ ಯಶವಂತ್ ವರ್ಮಾ ಅವರಾಗಲೀ, ಅವರ ಕುಟುಂಬದ ಸದಸ್ಯರಾಗಲೀ, ಈ ವಿಷಯವನ್ನು ಪೊಲೀಸರ ಗಮನಕ್ಕಾಗಲೀ, ನ್ಯಾಯಾಂಗ ಉನ್ನತಾಧಿಕಾರಿಗಳ ಗಮನಕ್ಕಾಗಲೀ ತಂದಿಲ್ಲ. ಸ್ಟೋರ್ ರೂಮ್​ನಲ್ಲಿ ನೋಟಿನ ರಾಶಿಯೇ ಇದ್ದಿದ್ದು ತಮ್ಮ ಗಮನಕ್ಕೆ ಬಂದಿಲ್ಲ ಎಂಬ ಜಡ್ಜ್ ಯಶವಂತ್ ವರ್ಮಾ ಹೇಳಿಕೆಯು ನಂಬಲು ಅಸಾಧ್ಯ. ಒಂದು ವೇಳೆ ಜಸ್ಟೀಸ್ ಯಶವಂತ್ ವರ್ಮಾ ವಿರುದ್ಧ ಯಾವುದೇ ಷಡ್ಯಂತ್ರ ನಡೆದಿದ್ದರೇ, ಆ ಬಗ್ಗೆ ಏಕೆ ದೂರು ದಾಖಲಿಸಲಿಲ್ಲ ಅಥವಾ ಹೈಕೋರ್ಟ್ ಸಿಜೆ ಅಥವಾ ಸುಪ್ರೀಂಕೋರ್ಟ್ ಸಿಜೆ ಗಮನಕ್ಕೆ ಏಕೆ ತರಲಿಲ್ಲ ಎಂದು ತನಿಖಾ ಸಮಿತಿ ಹೇಳಿದೆ.

ಜಸ್ಟೀಸ್ ಯಶವಂತ್ ವರ್ಮಾ ಮನೆಯ ಔಟ್ ಹೌಸ್​ನ ಕೊಠಡಿಯಲ್ಲಿ ನೋಟಿನ ರಾಶಿಗೆ ಬೆಂಕಿ ಬಿದ್ದಿದ್ದನ್ನ ದೆಹಲಿ ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಕಣ್ಣಾರೆ ನೋಡಿದ್ದಾರೆ. ಅವರೆಲ್ಲರ ಹೇಳಿಕೆಗಳನ್ನು ಸುಪ್ರೀಂಕೋರ್ಟ್​​ನಿಂದ ನೇಮಕವಾಗಿದ್ದ ತನಿಖಾ ಸಮಿತಿಯು ದಾಖಲಿಸಿಕೊಂಡಿದೆ.

ಯಾಱರು ಸಾಕ್ಷಿಗಳು?

ತನಿಖಾ ಸಮಿತಿಯು ಮುಂದೆ 10 ಮಂದಿ ಸಾಕ್ಷಿ ನುಡಿದಿದ್ದಾರೆ. ದೆಹಲಿ ಅಗ್ನಿಶಾಮಕ ದಳದ ಅಂಕಿತ್ ಸೆಹ್ವಾಗ್, ಪ್ರದೀಪ್ ಕುಮಾರ್, ಮನೋಜ್ ಮೆಹಲ್ವಾತ್, ಭನ್ವರ್ ಸಿಂಗ್, ಪರ್ವೀಂದರ್ ಮಲ್ಲಿಕ್, ಸುಮನ್ ಕುಮಾರ್ ಇನ್ನೂ ದೆಹಲಿಯ ತುಘಲಕ್ ರೋಡ್ ಪೊಲೀಸ್ ಸ್ಟೇಷನ್‌ನ ರಾಜೇಶ್ ಕುಮಾರ್, ಸುನೀಲ್ ಕುಮಾರ್, ಹೆಡ್ ಕಾನ್ಸಟೇಬಲ್ ರೂಪ್ ಚಂದ್, ಇನ್ಸ್ ಪೆಕ್ಟರ್ ಉಮೇಶ್ ಮಲ್ಲಿಕ್ ಸಾಕ್ಷಿಗಳಾಗಿ ಹೇಳಿಕೆ ನೀಡಿದ್ದಾರೆ.

ಇನ್ನೂ ನೋಟಿನ ರಾಶಿಗೆ ಬೆಂಕಿ ಬಿದ್ದ ಕೊಠಡಿಯು ಸಂಪೂರ್ಣವಾಗಿ ಜಸ್ಟೀಸ್ ಯಶವಂತ್ ವರ್ಮಾ ಹಾಗೂ ಅವರ ಕುಟುಂಬದ ನಿಯಂತ್ರಣದಲ್ಲೇ ಇತ್ತು. ಕುಟುಂಬದವರು ಮಾತ್ರ ರೂಮ್​ ಒಳಗೆ ಹೋಗಲು ಅವಕಾಶ ಇತ್ತು. ಕೊಠಡಿಗೆ ಬೆಂಕಿ ಬಿದ್ದ ಬಳಿಕ ಅದನ್ನು ಕ್ಲೀನ್ ಮಾಡಿ, ನೋಟ್​ಗಳನ್ನು ನಾಪತ್ತೆ ಮಾಡಲಾಗಿದೆ.

ಇದನ್ನೂ ಓದಿ:ಸಾವಿನಲ್ಲೂ ಸಾರ್ಥಕತೆ ಮೆರೆದ ಅಕ್ಷಯ್.. ಇಬ್ಬರಿಗೆ ನೇತ್ರದಾನ

publive-image

ಷಡ್ಯಂತ್ರ ಮಾಡಲಾಗಿದೆ ಎಂದಿರುವ ಯಶವಂತ್ ವರ್ಮಾ 

ಜಡ್ಜ್ ಅವರ ಖಾಸಗಿ ಕಾರ್ಯದರ್ಶಿ, ತಮ್ಮ ವರದಿಯಲ್ಲಿ ಕರೆನ್ಸಿ ನೋಟು ಸಿಕ್ಕಿದ್ದು, ಅದಕ್ಕೆ ಬೆಂಕಿ ಬಿದ್ದಿದ್ದನ್ನು ಉಲ್ಲೇಖಿಸದಂತೆ ಅಗ್ನಿಶಾಮಕ ದಳದ ಅಧಿಕಾರಿಗಳಿಗೆ ಸೂಚಿಸಿದ್ದರು. ಈ ವಿಷಯವನ್ನು ಮುಂದುವರಿಸದಂತೆ ಅಗ್ನಿಶಾಮಕ ದಳದ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸ್ ಅಧಿಕಾರಿಗಳ ಹೇಳಿಕೆಯನ್ನು ನಂಬದೇ ಇರಲು ಸಾಧ್ಯವಿಲ್ಲ. ಜಸ್ಟೀಸ್ ವರ್ಮಾ ಅವರು, ಇಡೀ ಎಪಿಸೋಡ್, ತಮ್ಮ ಇಮೇಜ್ ಹಾಳು ಮಾಡಲು ಮಾಡಿದ ಷಡ್ಯಂತ್ರ ಎಂದು ಹೇಳಿದ್ದನ್ನು ತನಿಖಾ ಸಮಿತಿಯು ತಿರಸ್ಕರಿಸಿದೆ. ಕರೆನ್ಸಿ ನೋಟುಗಳನ್ನು ಸಾಕಷ್ಟು ಮಂದಿ ಪ್ರತ್ಯಕ್ಷವಾಗಿ ನೋಡಿದ್ದಾರೆ. ಜಸ್ಟೀಸ್ ಯಶವಂತ್ ವರ್ಮಾರನ್ನು ಸಿಲುಕಿ ಹಾಕಿಸಲು ಕರೆನ್ಸಿ ನೋಟು ತಂದು ಹಾಕಿದ್ದಾರೆ ಎಂಬುದನ್ನು ನಂಬಲಾಗಲ್ಲ ಎಂದು ತನಿಖಾ ಸಮಿತಿ ಹೇಳಿದೆ. ಜಡ್ಜ್ ಖಾಸಗಿ ಕಾರ್ಯದರ್ಶಿ ರಾಜೀಂದರ್ ಸಿಂಗ್ ಕರ್ಕಿ, ಮಗಳು ದಿಯಾ ವರ್ಮಾ ಸಾಕ್ಷ್ಯ ನಾಶ ಮಾಡಿದ್ದಾರೆ. ಸ್ಥಳವನ್ನು ಕ್ಲೀನ್ ಮಾಡಿದ್ದಾರೆ ಎಂದು ತನಿಖಾ ಸಮಿತಿ ಹೇಳಿದೆ.

ಜಸ್ಟೀಸ್ ಯಶವಂತ್ ವರ್ಮಾ ಮನೆಯಲ್ಲಿ ಮಾರ್ಚ್ ತಿಂಗಳಲ್ಲಿ ನೋಟಿನ ರಾಶಿಗೆ ಬೆಂಕಿ ಬಿದ್ದಿದ್ದು ದೊಡ್ಡ ಸುದ್ದಿಯಾಗಿತ್ತು. ಮನೆಯ ಸ್ಟೋರ್ ರೂಮ್​ನಲ್ಲಿ ಒಂದೂವರೆ ಅಡಿ ಎತ್ತರದವರೆಗೂ ಕರೆನ್ಸಿ ನೋಟುಗಳನ್ನು ಜೋಡಿಸಿ ಇಡಲಾಗಿತ್ತು. ಸ್ಟೋರ್ ರೂಮ್​ಗೆ ಬೆಂಕಿ ಬಿದ್ದಾಗ, ಅಗ್ನಿಶಾಮಕ ದಳದ ಸಿಬ್ಬಂದಿ ಹೋಗಿ ಬೆಂಕಿ ನಂದಿಸಿದ್ದರು. ಬಳಿಕ ಅದನ್ನು ಪೋಟೋ, ವಿಡಿಯೋ ತೆಗೆದು ಹೈಕೋರ್ಟ್ ಸಿಜೆ ಗಮನಕ್ಕೆ ತಂದಿದ್ದರು. ಈ ಬಗ್ಗೆ ತನಿಖೆಗಾಗಿ ಸುಪ್ರೀಂಕೋರ್ಟ್, 3 ವಿವಿಧ ಹೈಕೋರ್ಟ್ ಜಡ್ಜ್​ಗಳ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿತ್ತು. ಈ ತನಿಖಾ ಸಮಿತಿಯ ವರದಿಯಲ್ಲಿ ಇದೆಲ್ಲವನ್ನೂ ಹೇಳಲಾಗಿದೆ.

ವಿಶೇಷ ವರದಿ:ಚಂದ್ರಮೋಹನ್,ನ್ಯೂಸ್ ಫಸ್ಟ್ (ನ್ಯಾಷನಲ್ ಬ್ಯೂರೋ)

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment