/newsfirstlive-kannada/media/post_attachments/wp-content/uploads/2025/01/R_ASHOK.jpg)
ಎಲ್ಲಾ ಜಾಲಿ ಜಾಲಿ ಅಂತ ಹೊಸ ವರ್ಷದ ಹೊನಲಲ್ಲಿ ತೇಲಾಡಿದ್ದ ರಾಜ್ಯದ ಜನರಿಗೆ ವರ್ಷಾರಂಭದಲ್ಲೇ ಸರ್ಕಾರ ಶಾಕ್ ಕೊಡಲು ಸಜ್ಜಾಗಿದೆ. ಕೊಟ್ಟವನು ಕೋಡಂಗಿ ಇಸ್ಕೊಂಡವನು ಈರಭದ್ರ ಅನ್ನೋ ಹಾಗೆ ಜನರಿಗೆ ಗ್ಯಾರಂಟಿ ಗಮ್ಮತ್ತು ತೋರಿಸಿದ್ದ ಸರ್ಕಾರ ಸದ್ಯ ಬೆಲೆ ಏರಿಕೆ ಬರೆ ಎಳೆಯಲು ಪ್ಲಾನ್ ಮಾಡಿದೆ.. ರಾಜ್ಯ ಸರ್ಕಾರದ ಬಸ್ ದರ ಏರಿಕೆ ನಿರ್ಧಾರ ರಾಜಕೀಯ ಕೆಸರೆರಚಾಟಕ್ಕೂ ವೇದಿಕೆಯಾಗಿದೆ.
ಮಹದೇವಪ್ಪ ನಿಂಗೂ ಫ್ರೀ.. ಕಾಕಾ ಪಾಟೀಲ್ ನಿಂಗೂ ಫ್ರೀ ಅಂತ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ರಾಜ್ಯದ ಜನತೆಗೆ ಬೆಲೆ ಏರಿಕೆಯ ಶಾಕ್ ಕೊಡುತ್ತಿದೆ. ಗ್ಯಾರಂಟಿ.. ಗ್ಯಾರಂಟಿ.. ಗ್ಯಾರಂಟಿ ಅಂತ ರಾಜ್ಯದ ಜನರಿಗೆ ಭಾಗ್ಯಗಳನ್ನ ಕರುಣಿಸಿದ್ದ ಹಸ್ತಪಡೆ ಜನರ ಬದುಕನ್ನೇ ದುಬಾರಿ ಮಾಡ ಹೊರಟಿದೆ. ಒಂದೊಂದೇ ವಸ್ತುಗಳ ಬೆಲೆಯನ್ನ ದುಬಾರಿ ಮಾಡಿ, ಜನರ ಬದುಕಿನ ಜೊತೆ ಸರ್ಕಾರ ಚೆಲ್ಲಾಟವಾಡ್ತಿದೆ.. ಹೆಣ್ಮಕ್ಕಳಿಗೆ ಫ್ರೀ ಶಕ್ತಿ ಕೊಡ್ತಿರೋ ಸರ್ಕಾರ ಗಂಡ್ಮಕ್ಕಳ ಬಜೆಟ್‌ಗೆ ಬರೆಹಾಕಲು ನಿರ್ಧರಿಸಿದೆ. ಸದ್ಯ ಇದೇ ವಿಚಾರ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ.
ಬಸ್ ದರ ಹೆಚ್ಚಳಕ್ಕೆ ಸಚಿವ ಸಂಪುಟ ಅಸ್ತು
ರಾಜ್ಯದ 4 ಸಾರಿಗೆ ನಿಗಮಗಳ ಬಸ್ ದರ ಹೆಚ್ಚಳಕ್ಕೆ ಸಚಿವ ಸಂಪುಟ ಅಸ್ತು ಎಂದಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ವಾಯುವ್ಯ ಕರ್ನಾಟಕ ಸಾರಿಗೆ, ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್‌ಗಳ ದರ ಏರಿಕೆ ಆಗಲಿದೆ. 2020ರಿಂದಲೂ ರಾಜ್ಯದಲ್ಲಿ ಬಸ್ ಪ್ರಯಾಣ ದರ ಏರಿಕೆ ಆಗಿಲ್ಲ. ಹೀಗಾಗಿ ಈ ಬಾರಿ ಬಸ್ ಪ್ರಯಾಣ ದರ ಪರಿಷ್ಕರಣೆಗೆ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಪರಿಣಾಮ ಶೇಕಡ 15ರಷ್ಟು ರಾಜ್ಯದ ಸಾರಿಗೆ ಬಸ್ ಟಿಕೆಟ್ ದರ ಏರಿಕೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
‘ಹೆಂಡತಿಗೆ ಫ್ರೀ.. ಗಂಡನಿಗೆ ಡಬಲ್.. ಇದು ಟ್ಯೂಬ್ ಲೈಟ್ ಸರ್ಕಾರ’
ಸರ್ಕಾರ ಬಸ್ ದರ ಏರಿಕೆ ಮಾಡೋ ನಿಲುವಿಗೆ ವಿಪಕ್ಷ ನಾಯಕ ಆರ್. ಅಶೋಕ್ ಗರಂ ಆಗಿದ್ದಾರೆ. ಬಸ್ ಪ್ರಯಾಣ ಹೆಂಡತಿಗೆ ಫ್ರೀ ನೀಡಿ ಗಂಡನಿಗೆ ಟಿಕೆಟ್ ದರ ಡಬಲ್ ಮಾಡಿ ಈ ಸರ್ಕಾರ ಟ್ಯೂಬ್ ಲೈಟ್ ಸರ್ಕಾರ ಆಗ್ತಿದೆ ಅಂತ ಅಶೋಕ್ ಕೆಂಡಕಾರಿದ್ದಾರೆ.. ಹಿಮಾಚಲ ಪ್ರದೇಶ ಸರ್ಕಾರ ಯಾವ ರೀತಿ ಪಾಪರ್ ಆಯಿತೋ ಆ ರೀತಿ ಕರ್ನಾಟಕದಲ್ಲಿ ಆಗುತ್ತಿದೆ ಅನಿಸುತ್ತಿದೆಂದು ವಾಗ್ದಾಳಿ ನಡೆಸಿದ್ದಾರೆ.
‘ಇದು ಟ್ಯೂಬ್ ಲೈಟ್ ಸರ್ಕಾರ’
ಪುರುಷರಿಗೆ ಬೆಲೆ ಏರಿಕೆ ಮಾಡಿ, ಮಹಿಳೆಯರಿಗೆ ಉಚಿತ ಎಂದು ಹೇಳಿದರೆ ಈ ಸರ್ಕಾರ ಟ್ಯೂಬ್ಲೈಟ್ ಸರ್ಕಾರ ಅಂತ ಆಯಿತು. ಜನರು ಇದನ್ನು ಅರ್ಥ ಮಾಡಿಕೊಳ್ಳುತ್ತಾರೆ. ಸಿದ್ದರಾಮಯ್ಯ ಅವರು ಬರುತ್ತ ಬರುತ್ತ ಟ್ಯೂಬ್ಲೈಟ್ ಆಗುತ್ತಿದ್ದಾರೆ. ಹೆಂಡತಿಗೆ ಫ್ರೀ ಕೊಟ್ಟು, ಗಂಡನಿಗೆ ಡಬಲ್ ಮಾಡಿದರೆ ಸರ್ಕಾರದಿಂದ ಜನರಿಗೆ ಏನು ಉಪಯೋಗ.
ಹಿಮಾಚಲ ಪ್ರದೇಶ ಪಾಪರ್ ಆಗಿದೆ. ಹೀಗಾಗಿ ಅಲ್ಲಿನ ಸಿಎಂ ನಾನು ಗ್ಯಾರಂಟಿ ಯೋಜನೆಗಳನ್ನು ಬಿಟ್ಟು ಬಿಡುತ್ತೇನೆ. ನೀವು ಬಿಟ್ಟು ಬಿಡಿ ಎಂದು ಹೇಳಿದ್ದಾರೆ. ಕೆಟ್ಟ ಸರ್ಕಾರ ಇದು. ಇತಿಹಾಸದಲ್ಲಿ ಇಂತಹ ಸರ್ಕಾರವನ್ನು ನೋಡಲು ಸಾಧ್ಯವಿಲ್ಲ. ಪೆಟ್ರೋಲ್, ಹಾಲಿನ ದರ, ತೆರಿಗೆ ಸೇರಿ ಈಗ ಬಸ್ ದರ ಏರಿಕೆ ಮಾಡಿದೆ ಎನ್ನುವುದು ನೋಡಿದರೆ ಸರ್ಕಾರ ಪಾಪರ್ ಆಗಿದೆ ಎನ್ನುವುದು ಇದರಿಂದ ಗೊತ್ತಾಗುತ್ತೆ. ದರ ಏರಿಕೆ ಮಾಡಿರುವುದರ ವಿರುದ್ಧ ನಾವು ಹೋರಾಟ ಮಾಡುತ್ತೇವೆ.
ಆರ್. ಅಶೋಕ್, ವಿಪಕ್ಷನಾಯಕ
ಇದನ್ನೂ ಓದಿ:1500 ಅಡಿ ಆಳಕ್ಕೆ ಬಿದ್ದ ಬಸ್.. ಪ್ರಯಾಣಿಕರ ರಕ್ಷಣೆಗೆ ಹರಸಾಹಸ
ಇನ್ನೂ ರಾಜ್ಯ ಸರ್ಕಾರ ಬಸ್ ದರ ಏರಿಕೆ ಮಾಡಿದ್ದೇ ಆದ್ರೆ ಬಿಜೆಪಿಯಿಂದ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡ್ಬೇಕಾಗುತ್ತೆ ಅಂತ ಆರ್ ಅಶೋಕ್ ಎಚ್ಚರಿಕೆ ಸಹ ನೀಡಿದ್ದಾರೆ. ಈ ಬಗ್ಗೆ ಎಲ್ಲಾ ನಾಯಕರ ಜೊತೆ ಚರ್ಚೆ ನಡೆಸೋದಾಗಿ ಸಹ ಅಶೋಕ್ ತಿಳಿಸಿದ್ದಾರೆ.
ಸರ್ಕಾರ ಜನರಿಗೆ ಫ್ರೀ ಕೊಡ್ತಿದ್ದೇವೆ ಎನ್ನುತ್ತಾ ಮತ್ತೊಂದು ಕಡೆ ದರ ಏರಿಕೆ ಬರೆ ಹಾಕುತ್ತಿದೆ.. ಆದ್ರೂ ಹೊಸ ವರ್ಷದಲ್ಲೇ ಸರ್ಕಾರಗಳು ಕೊಡುತ್ತಿರುವ ಶಾಕ್‌ಗೆ ಜನರು ಥಂಡಾ ಹೊಡೆದಿದ್ದಾರೆ. ದುಬಾರಿ ದುನಿಯಾದಲ್ಲಿ ಹೇಗಪ್ಪ ಜೀವನ ನಡೆಸೋದು ಅಂತ ಚಿಂತಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ