ವಿಶ್ವ ಜಲ ದಿನ: ಭಾರತದಲ್ಲಿ ಹೆಚ್ಚಾಗುತ್ತಿದೆ ನೀರಿನ ಸಮಸ್ಯೆ.. ಏನು ಮಾಡಬೇಕು? ಇಲ್ಲಿದೆ ವಿಶೇಷ ಮಾಹಿತಿ!

author-image
Bheemappa
Updated On
ವಿಶ್ವ ಜಲ ದಿನ: ಭಾರತದಲ್ಲಿ ಹೆಚ್ಚಾಗುತ್ತಿದೆ ನೀರಿನ ಸಮಸ್ಯೆ.. ಏನು ಮಾಡಬೇಕು? ಇಲ್ಲಿದೆ ವಿಶೇಷ ಮಾಹಿತಿ!
Advertisment
  • ಜಗತ್ತಿನ ತಾಜಾ ನೀರಿನ ಶೇ.70ರಷ್ಟು ಕೃಷಿ ಚಟುವಟಿಕೆಗಳಿಗೆ ಬಳಕೆ
  • ನೀರನ್ನು ಸಂರಕ್ಷಣೆ ಮಾಡಲು ಅದರ ಮೇಲಿನ ದರ ಹೆಚ್ಚಿಸಬೇಕು
  • ನೀರಿನ ಸಮಸ್ಯೆ ನೀಗಿಸಲು ಉತ್ತಮ ನೀತಿ ಅವಶ್ಯಕ

ನೀರಿನ ಸಮಸ್ಯೆ ಇದೀಗ ಜಾಗತಿಕ ಸಮಸ್ಯೆಯಾಗಿ ಬೆಳೆದು ನಿಂತಿದೆ. ಅಸಮರ್ಪಕ ನಿರ್ವಹಣೆ, ಅತಿಯಾದ ಬಳಕೆ, ನೀರು ಪೋಲು ಮತ್ತು ಹವಾಮಾನ ಬದಲಾವಣೆ ಇತ್ಯಾದಿ ಕಾರಣಗಳಿಂದ ನೀರಿನ ಕೊರತೆ ಹೆಚ್ಚಾಗುತ್ತಿದೆ. ಇದರಿಂದ ಕೈಗಾರಿಕೆ, ಕೃಷಿ ಮತ್ತು ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಉಂಟಾಗುತ್ತಿದೆ. ವಿಶ್ವ ಸಂಪನ್ಮೂಲ ಸಂಸ್ಥೆಯ ವಾಟರ್ ರಿಸ್ಕ್ ಅಟ್ಲಾಸ್ ವರದಿಯ ಪ್ರಕಾರ ಅತಿ ಹೆಚ್ಚು ನೀರಿನ ಸಮಸ್ಯೆ ಎದುರಿಸುತ್ತಿರುವ ಜಗತ್ತಿನ 17 ದೇಶಗಳಲ್ಲಿ ಭಾರತ 13ನೇ ಸ್ಥಾನ ಪಡೆದುಕೊಂಡಿರುವುದು ಈ ಸಮಸ್ಯೆಯ ತೀವ್ರತೆ ತಿಳಿಸುತ್ತದೆ. 2050ರ ವೇಳೆಗೆ ಶೇ.20-25ರಷ್ಟು ನೀರಿನ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ.

ಸಮರ್ಪಕ ನೀರು ನಿರ್ವಹಣೆ ಅವಶ್ಯ

ನೀರಿನ ಬೇಡಿಕೆ ಮತ್ತು ಪೂರೈಕೆಯ ನಡುವೆ ವ್ಯತ್ಯಯವಾದಾಗ ಜನ ಸಾಮಾನ್ಯರಿಗೆ ಸೂಕ್ತ ಪ್ರಮಾಣದ ನೀರನ್ನು ವಿತರಿಸಲು ಜಲಸಂಪನ್ಮೂಲಗಳ ಪರಿಣಾಮಕಾರಿ ನಿರ್ವಹಣೆಯ ಅಗತ್ಯವಿದೆ. ಸುಸ್ಥಿರ ಬಳಕೆ ಮತ್ತು ನೀರಿನ ವ್ಯವಸ್ಥೆಗಳ ರಕ್ಷಣೆ ಪ್ರಮುಖ ಪಾತ್ರ ವಹಿಸುತ್ತವೆ. ನೀರಿನ ಬಳಕೆಯ ಮೇಲೆ ನಿಗಾವಹಿಸುತ್ತಾ, ಇಂಧನ ದಕ್ಷ ತಂತ್ರಜ್ಞಾನಗಳನ್ನು ಅಳವಡಿಸುವುದರ ಜೊತೆಗೆ ಹೆಚ್ಚುತ್ತಿರುವ ಬೇಡಿಕೆಗೆ ಪೂರಕವಾದ ವ್ಯವಸ್ಥೆಯನ್ನು ರಚಿಸುವ ಮೂಲಕ ನೀರಿನ ಸಮಸ್ಯೆಯನ್ನು ಸರಿಯಾಗಿ ನಿಭಾಯಿಸಬಹುದು.

publive-image

ಸಮಗ್ರ ಜಲ ಸಂಪನ್ಮೂಲ ನಿರ್ವಹಣೆ
ವಿವಿಧ ವಲಯಗಳಲ್ಲಿ ನೀರಿನ ಬಳಕೆಯನ್ನು ವರ್ಧಿಸಲು, ನೀರನ್ನು ಸಮರ್ಪಕವಾಗಿ ಬಳಕೆ ಮಾಡಲು ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಜೊತೆಗೆ ಹವಾಮಾನ ಬದಲಾವಣೆಯನ್ನು ನಿಭಾಯಿಸಲು ಅದಕ್ಕೆ ಪೂರಕವಾದ ವರ್ತಿಸುವುದು, ಪ್ರಾದೇಶಿಕ ಸಮಸ್ಯೆಗಳನ್ನು ಮೀರಿ ಮುಂದಿನ ಜನಾಂಗಕ್ಕೆ ನೀರು ದೊರೆಯುವಂತೆ ಮಾಡುವುದು ಕೂಡ ಅವಶ್ಯವಾಗಿದೆ. ಈ ವಿಚಾರದಲ್ಲಿ ಇಂಟಿಗ್ರೇಟೆಡ್ ವಾಟರ್ ರಿಸೋರ್ಸ್ ಮ್ಯಾನೇಜ್ಮೆಂಟ್ (Integrated Water Resource Management (IWRM)) ನಂತಹ ನೀತಿಗಳು ಬಹಳ ಮುಖ್ಯ ಪಾತ್ರ ವಹಿಸುತ್ತವೆ. ಈ ರೀತಿಯ ಸಮಗ್ರ ವಿಧಾನಗಳು ಭೂಮಿ, ನೀರು ಮತ್ತು ಇತರ ನೈಸರ್ಗಿಕ ಸಂಪನ್ಮೂಲಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡುವುದನ್ನು ಕಲಿಸುತ್ತವೆ.

ಭಾರತದಲ್ಲಿ ಪ್ರಸ್ತಾವಿತ Integrated Water Resource Management ಮಸೂದೆಯ ಜಲಭದ್ರತೆಯನ್ನು ಖಾತ್ರಿಪಡಿಸಲು ದೇಶ ತೆಗೆದುಕೊಂಡಿರುವ ಮಹತ್ವದ ಯೋಜನೆ ಆಗಿದೆ. ಮೇಲ್ಮೈಯಲ್ಲಿರುವ ನೀರು, ಅಂತರ್ಜಲ, ಪ್ರವಾಹ ಪೀಡಿತ ಪ್ರದೇಶಗಳ ಸಂರಕ್ಷಣೆ ಮತ್ತು ನದಿಗಳ ರಕ್ಷಣೆಯನ್ನು ನಿರ್ವಹಿಸಲು ಸಮರ್ಪಕವಾದ ವ್ಯವಸ್ಥೆ ರಚಿಸುವ ಉದ್ದೇಶ ಹೊಂದಿದೆ.

IWRM ರಾಜ್ಯ ಮಟ್ಟದಲ್ಲಿ ಕಾರ್ಯ ನಿರ್ವಹಿಸಲಿದ್ದು, ಪ್ರಾದೇಶಿಕ ಅಗತ್ಯಗಳಿಗೆ ತಕ್ಕಂತೆ ಸೂಕ್ತವಾದ ನೀರು ನಿರ್ವಹಣಾ ತಂತ್ರಗಳನ್ನು ಒದಗಿಸುತ್ತದೆ. ಪ್ರಸ್ತುತ ಈ ಕರಡು ಮಸೂದೆ ರಾಜ್ಯಗಳ ಒಪ್ಪಿಗೆಗಾಗಿ ಕಳುಹಿಸಲಾಗಿದೆ.

publive-image

ನೀರಿನ ದರ ನಿಯಮಗಳ ಬದಲಾವಣೆ ಮತ್ತು ಸಹಕಾರ ತತ್ವ
ಕಾವೇರಿ ಕುಡಿಯುವ ನೀರಿನ ದರದ ಹೆಚ್ಚಳಕ್ಕೆ ಕರ್ನಾಟಕ ಸರ್ಕಾರ ನಿರ್ಧರಿಸವುದು ಸ್ವಾಗತಾರ್ಹ ನಿರ್ಧಾರವಾಗಿದೆ. ಇದರಿಂದ ಎಲ್ಲರಿಗೂ ಸಮಾನವಾಗಿ ನೀರು ದೊರೆಯಬಹುದಾಗಿದೆ ಮತ್ತು ಜಲ ಸಂರಕ್ಷಣೆ ಸಾಧ್ಯವಾಗಲಿದೆ.

ಇದರ ಜೊತೆಗೆ ಇಡೀ ರಾಷ್ಟ್ರದಲ್ಲಿ ಶ್ರೇಣೀಕೃತ ದರ ನಿಗದಿ ಮಾಡಬೇಕು. ದರ ನಿಗದಿ ಮಾಡುವುದರಿಂದ ನೀರಿನ ಸಮರ್ಪಕ ಬಳಕೆ ಮಾಡುವ ಹಾಗೆ ಸರ್ಕಾರ ನೋಡಿಕೊಳ್ಳಬಹುದು. ಜೊತೆಗೆ ಮೂಲಸೌಕರ್ಯ ಸುಧಾರಣೆಗಳಿಗಾಗಿ ಹಣ ಕೂಡ ಸಂಗ್ರಹಿಸಬಹುದು.

ನೀರಿನ ಸಮಸ್ಯೆ ಒಂದು ರಾಷ್ಟ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ನೀರಿನ ಸಮಸ್ಯೆ ಜಾಗತಿಕ ಸಮಸ್ಯೆ ಆಗಿದೆ. ಹಾಗಾಗಿ ರಾಜ್ಯಗಳು ಮತ್ತು ರಾಷ್ಟ್ರಗಳ ನಡುವೆ ಅದರಲ್ಲೂ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ನದಿ ಹರಿಯುವ ಪ್ರದೇಶಗಳಲ್ಲಿ ಜಲ ಸಂಪನ್ಮೂಲಗಳನ್ನು ಸೂಕ್ತ ರೀತಿಯಲ್ಲಿ ಹಂಚಿಕೊಳ್ಳುವಂತೆ ಮಾಡಲು ನೀರಿನ ಸಹಕಾರ ವ್ಯವಸ್ಥೆಯನ್ನು ರೂಪಿಸುವುದು ಬಹಳ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಇತ್ತೀಚಿಗೆ ನಡೆದ ಒನ್ ಪ್ಲಾನೆಟ್ ಸಮಾವೇಶದಲ್ಲಿ ವಿಶ್ವಬ್ಯಾಂಕ್ ಪ್ರಸ್ತಾಪಿಸಿದ ವಿಶ್ವ ಜಲ ಕಾರ್ಯತಂತ್ರವು ಹಳೆಯ ಅಡೆತಡೆಗಳನ್ನು ನಿವಾರಿಸುವ ಉದ್ದೇಶವನ್ನು ಹೊಂದಿದೆ. ಈ ಕಾರ್ಯತಂತ್ರವು ನೀರಿನ ಸಮರ್ಪಕ ಬಳಕೆ, ನೈರ್ಮಲ್ಯ ಸಾಧಿಸುವುದು, ಹವಾಮಾನ ಬದಲಾವಣೆ ತಡೆಯುವಂತಹ ದೃಢವಾದ ನೀರಿನ ವ್ಯವಸ್ಥೆ ರೂಪಿಸುವುದು ಮತ್ತು ಕೃಷಿ ನೀರಿನ ಬಳಕೆ ಉತ್ತಮಗೊಳಿಸುವುದು ಮತ್ತು ತ್ಯಾಜ್ಯ ಕಡಿಮೆ ಮಾಡುವುದು ಹೀಗೆ ಹಲವು ಕ್ರಮಗಳ ಕುರಿತು ಗಮನ ಹರಿಸಲಿದೆ.

ಯಶಸ್ವಿ ನೀರು ನಿರ್ವಹಣಾ ನೀತಿಗಳಿಗೆ ಉತ್ತಮ ಉದಾಹರಣೆಗಳು
ನೀರಿನ ಸಂರಕ್ಷಣೆಗೆ ಹಲವು ಹಸ್ತಕ್ಷೇಪಗಳ ಸಂಯೋಜನೆಯ ಅಗತ್ಯವಿದೆ ಎಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಬೆಂಗಳೂರು (IIMB) ಯ ಇತ್ತೀಚಿಗಿನ ಅಧ್ಯಯನದಲ್ಲಿ ಕಂಡುಬಂದಿದೆ. ಬೆಲೆಯನ್ನು ಸಮಂಜಸವಾಗಿ ಹೆಚ್ಚಿನ ಮಟ್ಟದಲ್ಲಿ ಇರಿಸುವುದರ ಜೊತೆಗೆ ಬೆಲೆಯೇತರ ಮಾರ್ಪಾಡುಗಳನ್ನು ಜಂಟಿಯಾಗಿ ಜಾರಿಗೊಳಿಸುವುದರಿಂದ ನೀರಿನ ಸಂರಕ್ಷಣೆಯಲ್ಲಿ ಬದಲಾವಣೆ ಸಾಧ್ಯ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ನೀರಿನ ಸುಂಕವನ್ನು ಹೆಚ್ಚಿಸುವುದರಿಂದ ಬಳಕೆಯನ್ನು ಮೊಟಕುಗೊಳಿಸಬಹುದು ಎಂಬ ಜನಪ್ರಿಯ ನಂಬಿಕೆಗೆ ವಿರುದ್ಧವಾಗಿ ಬಿಂಬಿತವಾದ ಈ ಅಧ್ಯಯನವು, ಸಕಲ ರೀತಿಯ ನೀತಿ ನಿಯಮಗಳ ಅಗತ್ಯವಿದೆ ಎಂದು ಸಾರಿ ಹೇಳುತ್ತದೆ.

ನೀರಿನ ಸಮರ್ಪಕ ಬಳಕೆ ಸಾಧ್ಯವಾಗುವಂತೆ ಮಾಡಲು ವಿಶ್ವಾದ್ಯಂತ ಹಲವು ನೀತಿ ನಿಯಮಗಳನ್ನು ರೂಪಿಸಲಾಗಿದೆ. ಅದರಲ್ಲಿ ಕೆಲವು ನಿಯಮ ಭಾರತದಲ್ಲಿ ಸುಲಭವಾಗಿ ಅಳವಡಿಸಿಕೊಳ್ಳಬಹುದಾಗಿದೆ. ಅವುಗಳಲ್ಲಿ ಕೆಲವು ನಿಯಮಗಳನ್ನು ಇಲ್ಲಿ ಉಲ್ಲೇಖಿಸುವುದಾದರೆ- ಕ್ಯಾಲಿಫೋರ್ನಿಯಾದ ಕ್ವಾಂಟಿಫಿಕೇಶನ್ ಸೆಟ್ಲ್ ಮೆಂಟ್ ಅಗ್ರಿಮೆಂಟ್ ಮತ್ತು ಸಸ್ಟೇನೇಬಲ್ ಗ್ರೌಂಡ್ ವಾಟರ್ ಮ್ಯಾನೇಜ್ಮೆಂಟ್ ಆಕ್ಟ್ ಅನ್ನು ಗಮನಿಸಬಹುದು. ಈ ನಿಯಮವು ಸುಸ್ಥಿರ ಜಲ ಹಂಚಿಕೆ ಮತ್ತು ಸುಸ್ಥಿರ ಅಂತರ್ಜಲ ಪದ್ಧತಿಗಳನ್ನು ಪಾಲಿಸುವ ಕಡೆಗೆ ಗಮನ ಹರಿಸುತ್ತದೆ. ಇನ್ನೊಂದು ಕೇಪ್ ಟೌನ್ ನಿಮಯಗಳನ್ನೂ ಗಮನಿಸಬಹುದು. ಅಲ್ಲಿ ಸಾರ್ವಜನಿಕ ಶಿಕ್ಷಣ ಮತ್ತು ಮೂಲಸೌಕರ್ಯ ಹೂಡಿಕೆಗಳ ಮೂಲಕ ನೀರಿನ ಸಮಸ್ಯೆ ಪರಿಹರಿಸುವ ಕಾರ್ಯ ನಡೆಯುತ್ತಿದೆ.

publive-image

ಸಮರ್ಪಕ ನೀರಿನ ಬಳಕೆ ಹೆಚ್ಚಿಸುವಲ್ಲಿ ತಂತ್ರಜ್ಞಾನದ ಪಾತ್ರ
ತಂತ್ರಜ್ಞಾನವು ಈಗ ಎಲ್ಲಾ ಕ್ಷೇತ್ರದಲ್ಲಿಯೂ ಮೇಲುಗೈ ಸಾಧಿಸಿದೆ. ನೀರಿನ ಸಮರ್ಪಕ ಬಳಕೆ ವಿಚಾರದಲ್ಲಿಯೂ ತಂತ್ರಜ್ಞಾನ ಮಹತ್ವದ ಪಾತ್ರ ವಹಿಸಲಿದೆ. ಸ್ಮಾರ್ಟ್ ಇರಿಗೇಷನ್ ಸಿಸ್ಟಮ್​ಗಳು ಮತ್ತು ದತ್ತಾಂಶ ವಿಶ್ಲೇಷಣೆ ಮೂಲಕ ಕೃಷಿ ನೀರಿನ ಬಳಕೆಯನ್ನು ಉತ್ತಮಗೊಳಿಸಬಹುದಾಗಿದೆ. ಯುನೆಸ್ಕೋ ಪ್ರಕಾರ ಜಗತ್ತಿನ ತಾಜಾ ನೀರಿನ ಶೇ.70ರಷ್ಟು ಪ್ರಮಾಣವು ಕೃಷಿ ಚಟುವಟಿಕೆಗಳಿಗೆ ಬಳಕೆಯಾಗುತ್ತದೆ.

ಹಾಗಾಗಿ ಈ ನಿಟ್ಟಿನಲ್ಲಿ ತಂತ್ರಜ್ಞಾನ ಬಳಕೆ ಅವಶ್ಯವಾಗಿದೆ. ರಿಮೋಟ್ ಸೆನ್ಸಿಂಗ್ ಮತ್ತು ಐಓಟಿ ಸಾಧನಗಳಂತಹ ತಂತ್ರಜ್ಞಾನಗಳು ನೀರಿನ ಬಳಕೆ ಮೇಲೆ ಸದಾ ನಿಗಾ ವಹಿಸಲು, ನೀರು ಸರಬರಾಜು ವ್ಯವಸ್ಥೆಯಲ್ಲಿ ಸೋರಿಕೆ ಪತ್ತೆ ಹಚ್ಚಲು ಮತ್ತು ಇನ್ನಿತರ ಸಮಸ್ಯೆಯನ್ನು ತಿಳಿಸಲು ಸಹಾಯ ಮಾಡುತ್ತವೆ.

ಅಂತರಾರಾಷ್ಟ್ರೀಯ ಜಲಪ್ರಬಂಧನಾ ಸಂಸ್ಥೆಯ ನೀರಿನ ಉತ್ಪನ್ನತೆ ಅಟ್ಲಾಸ್ ನಂತಹ ಯೋಜನೆಗಳು ಭಾರತದ ವಿವಿಧ ಜಿಲ್ಲೆಗಳಲ್ಲಿನ ನೀರಿನ ಬಳಕೆ ಕುರಿತು ಒಳನೋಟ ಒದಗಿಸುತ್ತವೆ. ಈ ಮೂಲಕ ನೀರಿನ ಹಂಚಿಕೆಯ ಬಗ್ಗೆ ವ್ಯವಸ್ಥಿತ ನಿರ್ಧಾರಗಳನ್ನು ಕೈಗೊಳ್ಳಲು ಅನುಮತಿಸುತ್ತದೆ. ಅದೇ ಥರ ಅಟಲ್ ಭೂ ಜಲ ಯೋಜನೆ (ಅಟಲ್ ಜಲ) ಯು ಸುಸ್ಥಿರ ಅಂತರ್ಜಲ ನಿರ್ವಹಣೆಗಾಗಿ ರೂಪಿಸಿರುವ ಒಂದು ಮಹತ್ವದ ಯೋಜನೆಯಾಗಿದೆ. ಈ ಯೋಜನೆಗಾಗಿಯೇ ರಾಜ್ಯಕ್ಕೆ 4,600 ಕೋಟಿ ಪ್ರೋತ್ಸಾಹಧನ ನೀಡಲಾಗುತ್ತದೆ. ಈ ಸಹಾಯಧನಗಳು ಜಲ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಕೆ ಮಾಡಲು ಮತ್ತು ನೀರಿನ ಬೇಡಿಕೆಯನ್ನು ಸೂಕ್ತ ರೀತಿಯಲ್ಲಿ ಪರಿಹರಿಸಲು ಪ್ರೋತ್ಸಾಹ ನೀಡುವ ಕೆಲಸ ಮಾಡಬಹುದಾಗಿದೆ.

ಇದನ್ನೂ ಓದಿ:4 ವರ್ಷದ ಬಾಲಕನ ಜೀವ ತೆಗೆದ 12 ವರ್ಷದ ಬಾಲಕಿ.. ಇದು ಸಾಧ್ಯನಾ?; 50 ಪೊಲೀಸರಿಂದ ತನಿಖೆ, ಸಿಕ್ಕಿದ್ದು ಹೇಗೆ?

publive-image

ಸುಸ್ಥಿರ ಮತ್ತು ದೃಢ ಭವಿಷ್ಯ ನಿರ್ಮಾಣ
ಭಾರತವು ನೀರಿನ ಭಯವನ್ನು ಎದುರಿಸುತ್ತಿದ್ದು, ಇದರ ಜೊತೆಯಲ್ಲಿ ಪ್ರವಾಹ ಸನ್ನಿವೇಶಗಳನ್ನು ನಿಭಾಯಿಸುತ್ತಿದೆ. ಕಳೆದ ಬೇಸಿಗೆಯಲ್ಲಿ ಬೆಂಗಳೂರು ಜಲ ಸಮಸ್ಯೆಯನ್ನು ಎದುರಿಸಿತ್ತು. ತದನಂತರ ಕೃತಕ ನೆರೆ ಪರಿಸ್ಥಿತಿಯನ್ನು ಕಂಡಿತ್ತು. ಈ ಎರಡೂ ಸಮಸ್ಯೆಗಳನ್ನು ನಿಭಾಯಿಸಲು ಎಲ್ಲಾ ವಲಯಗಳು ಸಂಘಟಿತವಾಗಿ ಶ್ರಮಿಸಬೇಕಾಗಿದೆ. ನವೀನ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ, ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ ಮತ್ತು ಸೂಕ್ತ ರೀತಿಯಲ್ಲಿ ತೊಡಗಿಸಿಕೊಳ್ಳಲು ಸಮಾಜವನ್ನು ಪ್ರೋತ್ಸಾಹಿಸುವ ಮೂಲಕ ಮುಂದಿನ ಪೀಳಿಗಿಗೆ ಉತ್ತಮ ಭವಿಷ್ಯವನ್ನು ನಿರ್ಮಿಸಬಹುದಾಗಿದೆ.

ಹೊಸ ನೀತಿ ನಿಯಮಗಳನ್ನು ರೂಪಿಸುವುದರಿಂದ ಹಿಡಿದು ತಳಮಟ್ಟದ ಯೋಜನೆಗಳವರೆಗೆ ಎಲ್ಲಾ ಕ್ರಮಗಳು ಕೂಡ ಜಲ ಸುರಕ್ಷಿತ ಮತ್ತು ಪ್ರವಾಹ ನಿರೋಧಕ ಭಾರತವನ್ನು ನಿರ್ಮಾಣ ಮಾಡುವಲ್ಲಿ ಬಹಳ ಮಹತ್ವದ ಪಾತ್ರವನ್ನು ವಹಿಸಲಿವೆ. ಸವಾಲುಗಳು ದೊಡ್ಡದಿದೆ. ಅದೇ ರೀತಿ ತಂತ್ರಜ್ಞಾನ, ನಾವೀನ್ಯತೆ ಮತ್ತು ಪರಿಣತಿಯನ್ನು ಸರಿಯಾಗಿ ಬಳಸುವುದರಿಂದ ಆ ಸವಾಲುಗಳನ್ನು ಸೂಕ್ತವಾಗಿ ನಿಭಾಯಿಸುವ ಸಾಮರ್ಥ್ಯ ಕೂಡ ನಮಗಿದೆ.

ವಿಶೇಷ ವರದಿ:ರಘುನಂದನ್ ಪ್ರಸಾದ್, ವ್ಯವಸ್ಥಾಪಕ ನಿರ್ದೇಶಕರು, ಕೋನಾರಕ್ ಮೀಟರ್ಸ್

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment