ಮುಂದುವರೆದ ಮಳೆಯ ನರ್ತನ.. ಈ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

author-image
Bheemappa
Updated On
ಮುಂದುವರೆದ ಮಳೆಯ ನರ್ತನ.. ಈ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
Advertisment
  • ಮೂಡಿಗೆರೆಯ ಕೂಡಿಗೆ ಸಂಗಮದಲ್ಲಿ ಕಣ್ಣು ಹಾಯಿಸಿದಷ್ಟೂ ನೀರು
  • ಅಪರೂಪಕ್ಕೆ ದೊಡ್ಡ ಗಾತ್ರದ ಮೀನುಗಳು ಬಲೆಗೆ ಬಿದ್ದಿದ್ದರಿಂದ ಖುಷಿ
  • ಮಲೆನಾಡ ಮಳೆಗೆ ಅಬ್ಬಿಕಲ್ಲು ಜಲಪಾತಕ್ಕೆ ಜೀವಕಳೆ ಮೇಳೈಸಿದೆ

ಮುಂಗಾರು.. ಅದೊಂಥರ ಪುಳಕ.. ಆ ಪರಿಮಳವನ್ನು ಅನುಭವಿಸಿಯೇ ತೀರಬೇಕು. ಎಂಥ ಸೋತ ಮನಸ್ಸನ್ನೂ ಒಲವಿನ ಒಳಗುಡಿಗೆ ತಂದು ನಿಲ್ಲಿಸುವ ಸಾಮರ್ಥ್ಯ ಈ ಮಳೆಗಿದೆ. ರಾಜ್ಯದಲ್ಲಿ ಮುಂಗಾರಿನ ಆವೇಶ, ಆರ್ಭಟ ಜೋರಾಗಿದೆ. ಮಾಯದಂಥಾ ಮಳೆ ಬಂದು ಕೆರೆ, ತೊರೆ, ಹಳ್ಳ-ಕೊಳ್ಳಗಳನ್ನು ತುಂಬಿಸಿದ್ದು ಅವಾಂತರಗಳನ್ನು ತಂದೊಡ್ಡಿದೆ.

ಮುಂಗಾರಿನ ಸಂಭ್ರಮ.. ಭೂರಮೆಗೆ ರಮ್ಯ ಚೈತ್ರಕಾಲ.. ನವಿಲು ಗರಿ ಬಿಚ್ಚಿ ನರ್ತಿಸುವಂತೆ ಪ್ರಕೃತಿ ಹಸಿರ ರಾಶಿ ಹೊದ್ದು ಚೆಲುವಿನ ನಗೆ ಬೀರಿದೆ. ಮಾನ್ಸೂನ್ ಮಳೆಯ ಸೊಬಗು ಮನಸ್ಸಿಗೆ ಮುದ ನೀಡ್ತಿದೆ. ಆದ್ರೆ ತೊಯ್ದು ತೊಪ್ಪೆಯಾದ ಇಳೆ. ಅವಾಂತರಗಳ ಸರಮಾಲೆಗಳು ಇವೆ.

publive-image

‘ಮಳೆ’ನಾಡಲ್ಲಿ ವರುಣನ ಚೆಲ್ಲಾಟ.. ಜನರ ಪರದಾಟ

ಕಾಫಿನಾಡು ಸದ್ಯ ಮಳೆನಾಡಾಗಿದೆ. ಸಂಜೆ ಹೊತ್ತಿಗೆ ಹಾಜರಿ ಕೊಡೋ ವರುಣ, ಗಾಳಿ ಜೊತೆ ಸೇರಿ ಗಂಡಾಂತರ ಮಾಡ್ತಿದ್ದಾನೆ. ಮೂಡಿಗೆರೆಯ ಬಕ್ಕಿ ಗ್ರಾಮಕ್ಕೆ ತೆರಳುವ ಸೇತುವೆಗೆ ಮಳೆ ಹೊಳೆ ಹರಿಸಿದೆ. ರಸ್ತೆಯ ಮೇಲೆಲ್ಲಾ ಜಲರಾಶಿ ವಾಹನ ಸವಾರರನ್ನು ಅಲುಗಾಡುವಂತೆ ಮಾಡಿದೆ. ಪರದಾಟ ಮುಂದುವರಿಸಿದೆ. ಕೆಲವೆಡೆ ರಸ್ತೆಗೆ ಮಣ್ಣು ಗುಡ್ಡಗಳು ಕುಸಿತವಾಗಿವೆ.

ಮಲೆನಾಡ ಮಳೆ.. ಅಬ್ಬಿಕಲ್ಲು ಜಲಪಾತಕ್ಕೆ ಜೀವಕಳೆ!

ಧರೆಗೆ ಮುತ್ತಿಕ್ಕಿದ ಆರಿದ್ರಾ ಮಳೆ ಜಲಧಾರೆಯಾಗಿದೆ. ಮಲೆನಾಡ ಮಳೆಗೆ ಅಬ್ಬಿಕಲ್ಲು ಜಲಪಾತಕ್ಕೆ ಜೀವಕಳೆ ಮೇಳೈಸಿದೆ. ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿದೆ. ಮೇರುತಿ ಗುಡ್ಡದ ಮೇಲಿಂದ ಧುಮ್ಮಿಕ್ಕುತ್ತಿರೋ ಜಲವೈಭವ ಕಣ್ಣಿಗೆ ಹಬ್ಬ. ಅಂದಹಾಗೆ ಮೇರುತಿಗುಡ್ಡ ಕರ್ನಾಟಕದ 2ನೇ ಅತ್ಯಂತ ಎತ್ತರದ ಶಿಖರ. ಕೊಪ್ಪ ತಾಲೂಕಿನ ಬಸರೀಕಟ್ಟೆಯನ್ನು ತಬ್ಬಿರುವ ಅಬ್ಬಿಕಲ್ಲು ಜಲಪಾತ ಹಾಲ್ನೊರೆಯಂತೆ ಧರೆಗಿಳಿಯುತ್ತಿದ್ರೆ ಜಲಪಾತದ ಸೊಬಗಿಗೆ ಪ್ರವಾಸಿಗರು ಮೂಕವಿಸ್ಮಿತರಾಗ್ತಿದ್ದಾರೆ.

ಮಲೆನಾಡಲ್ಲಿ ಸದ್ಯ ನಿರಂತರ ಮಳೆಯಿಂದ ಮೀನು ಶಿಕಾರಿಗೆ ವರ್ಚಸ್ಸು ಕುಗ್ಗಿದೆ. ಮೀನುಗಳಿಗೂ ಕೊಂಚ ಬರ ಬಂದಿದೆ. ಹೀಗಿದ್ರೂ ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ಮೀನು ಮಾರುಕಟ್ಟೆಯಲ್ಲಿ ಮಳೆಯ ನಡುವೆ ಅಪರೂಪಕ್ಕೆ ದೊಡ್ಡ ಗಾತ್ರದ ಮೀನುಗಳು ಸಿಕ್ಕಿರುವುದರಿಂದ ಗ್ರಾಹಕರು ಮುಗಿಬಿದ್ದು ಖರೀದಿಸುತ್ತಿದ್ದಾರೆ.

ಮೂಡಿಗೆರೆಯ ಕೂಡಿಗೆ ಸಂಗಮದಲ್ಲಿ ಜಲಸಿರಿ!

ಚಿಕ್ಕಮಗಳೂರು ಜಿಲ್ಲೆಯಲ್ಲಿ ವರ್ಷರಾಜನ ಕಾಯಕಕ್ಕೆ ವಿರಾಮ ಇಲ್ಲದಂತಾಗಿದೆ. ಮೂಡಿಗೆರೆಯ ಕೂಡಿಗೆ ಸಂಗಮ ಕಣ್ಣು ಹಾಯಿಸಿದಷ್ಟೂ ಜಲರಾಶಿ ಚೆಲುವಿನ ಚಿತ್ತಾರವಾಗಿದೆ. ಜಪಾವತಿ ಹೇಮಾವತಿ, ಗುಪ್ತಗಾಮಿನಿಯ ಸಂಗಮವಾಗೋ ಸ್ಥಳ ಕೂಡಿಗೆ ಸಂಗಮ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಮಲೆನಾಡು ಭಾಗದಲ್ಲಿ ನವದಂಪತಿಗೆ ದೃಷ್ಟಿ ತೆಗೆಯುವ ಸ್ಥಳವಾಗಿಯೂ ಖ್ಯಾತಿಗೊಂಡಿದೆ.

ಇದನ್ನೂ ಓದಿ: ವಿಜೃಂಭಣೆಯ ಪುರಿ ಜಗನ್ನಾಥ ರಥೋತ್ಸವದಲ್ಲಿ ಕಾಲ್ತುಳಿತ.. 600ಕ್ಕೂ ಹೆಚ್ಚು ಭಕ್ತರಿಗೆ ಗಾಯ, ಹಲವರು ಗಂಭೀರ!

publive-image

ಉತ್ತರ ಕನ್ನಡ ಜಿಲ್ಲೆಯಲ್ಲಿ ಜೀವನದಿಗಳ ಅಬ್ಬರ!

ಹಚ್ಚ ಹಸಿರ ವನರಾಶಿ.. ಪ್ರಶಾಂತ ಪರಿಸರ.. ಜಲಪಾತಗಳಿಂದ ಸುತ್ತುವರಿದಿರುವ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಇಳೆ ಮಳೆಯಿಂದ ತೊಯ್ದು ತೊಪ್ಪೆಯಾಗಿದೆ. ಘಟ್ಟಪ್ರದೇಶಗಳಿಂದ ಹರಿದು ಬರುವ ಅಘನಾಶಿನಿ, ಬೇಡ್ತಿ, ವರದಾ ನದಿಗಳು ಭೋರ್ಗರೆಯುತ್ತಿವೆ.. ಜನರಿಗೆ ಮುನ್ನೆಚ್ಚರಿಕೆ ಕ್ರಮಕ್ಕೆ ಸೂಚಿಸಲಾಗಿದೆ.

ಇತ್ತ ಮಂಜಿನನಗರಿ ಕೊಡಗು ಭಾಗದಲ್ಲಿ ಮುಂದುವರಿದಿದೆ. ಇಂದು ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದ್ದು ಅಂಗನವಾಡಿ ಹಾಗೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮುಂಗಾರಿನ ಮುದ ಮಹದಾನಂದ. ಆದ್ರೆ, ಮಳೆ ಹೆಚ್ಚಾದ್ರೆ ರಗಳೆ ಗ್ಯಾರಂಟಿ. ಮಳೆ ಅವಾಂತರಗಳನ್ನು ಅನುಭವಿಸದೇ ಬೇರೆ ದಾರಿ ಇಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment