/newsfirstlive-kannada/media/post_attachments/wp-content/uploads/2025/04/RAIN-1.jpg)
ರಾಜ್ಯದ ಹಲವೆಡೆ ನಿನ್ನೆ ಸುರಿದ ಮಳೆ ಇಳೆಯನ್ನ ತಂಪಾಗಿಸಿದೆ. ಮಳೆರಾಯನ ಆಗಮನದಿಂದ ಅನ್ನದಾತರ ಮೊಗದಲ್ಲಿ ಮಂದಹಾಸ ಮೂಡಿದೆ. ನೆರೆ ರಾಜ್ಯಗಳಲ್ಲೂ ವರುಣನ ದರ್ಶನವಾಗಿದ್ದು, ಕೆಲವೆಡೆ ಅವಾಂತರಗಳು ಸೃಷ್ಟಿಯಾಗಿದೆ.
ಹಲವೆಡೆ ಪೂರ್ವ ಮುಂಗಾರು ಆರ್ಭಟ
ಬಿರು ಬೇಸಿಗೆ.. ರಣ ಬಿಸಿಲು.. ಒಣ ಗಾಳಿ.. ಬಿಸಿ ತಾಪಕ್ಕೆ ವರುಣ ತಂಪೆರೆದಿದ್ದಾನೆ.. ಕಾದು ಕೆಂಡವಾಗಿದ್ದ ಕರುನಾಡು ಪೂರ್ವ ಮುಂಗಾರಿನ ಹನಿಗಳಿಂದ ತಂಪಾಗಿದೆ. ಬಿಸಿಲಿನ ಜಳಕ್ಕೆ ಬಾಡಿ ಬೆಂಡಾಗಿದ್ದ ಗಿಡ-ಮರಗಳಿಗೆ ಜೀವ ಕಳೆ ಬಂದಿದೆ. ಕೆಲವೆಡೆ ಮಳೆಯಿಂದ ಅವಾಂತರವೂ ಸೃಷ್ಟಿಯಾಗಿದೆ.
ಇದನ್ನೂ ಓದಿ: ವಕ್ಫ್ ತಿದ್ದುಪಡಿ ಮಸೂದೆ ಸ್ವಾಗತಿಸಿದ ದೇವೇಗೌಡ.. ಬಿಜೆಪಿ ಮೈತ್ರಿ ಪಕ್ಷ ಜೆಡಿಯುನ ಹಿರಿಯ ನಾಯಕ ರಾಜೀನಾಮೆ..!
ಚಿಕ್ಕಮಗಳೂರು
ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಭಾರೀ ಮಳೆಯಾಗಿದ್ದು, ಒಂದು ಗಂಟೆಗೂ ಹೆಚ್ಚುಕಾಲ ವರುಣ ಭೂರಮೆಯನ್ನ ತಣಿಸಿದ್ದಾನೆ.. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಬಣಕಲ್, ಬಾಳೂರು, ಚಾರ್ಮಾಡಿಘಾಟಿಯಲ್ಲಿ ಮಳೆರಾಯ ಅಬ್ಬರಿಸಿದ್ದು, ಕಾದು ಕೆಂಡವಾಗಿದ್ದ ಭೂಮಿಯನ್ನ ಕೂಲ್ ಕೂಲ್ ಮಾಡಿದ್ದಾನೆ.
ಹಾಸನದಲ್ಲೂ ಮಳೆ ರೌದ್ರನರ್ತನ..
ಹಾಸನ ಜಿಲ್ಲೆಯ ಹಲವು ಭಾಗಗಳಲ್ಲೂ ಧಾರಾಕಾರ ಮಳೆಯಾಗಿದೆ.. ಭಾರೀ ಮಳೆಗೆ ಹಾಸನ ರೈಲ್ವೆ ನಿಲ್ದಾಣದಲ್ಲಿ ನೀರು ಸೋರಿ ಪ್ರಯಾಣಿಕರು ಪರದಾಡಿದ್ರು.. ಮಳೆ ನೀರಿನಿಂದ ಜಲಾವೃತವಾದ ರೈಲ್ವೆ ನಿಲ್ದಾಣದಲ್ಲಿ ಓಡಾಡಲು ಜನರು ಹರಸಾಹಸ ಪಟ್ಟ ದೃಶ್ಯಗಳು ಕಂಡು ಬಂದ್ವು.. ಮಳೆ ಎಫೆಕ್ಟ್ನಿಂದ ಹಾಸನ ನಗರದ ಹಲವು ರಸ್ತೆಗಳು.. ಕರೆಗಳಂತಾಗಿ ವಾಹನ ಸವಾರರು ಪರದಾಡಿದ್ರು..
ಮಳೆರಾಯನ ಅಬ್ಬರಕ್ಕೆ ಅನ್ನದಾತರ ಬದುಕು ದುಸ್ತರ!
ಕೊಪ್ಪಳದಾದ್ಯಂತ ಸುರಿದ ಗಾಳಿ ಮತ್ತು ಗುಡುಗು ಸಹಿತ ಭಾರೀ ಮಳೆಗೆ ಭತ್ತದ ಬೆಳೆಗೆ ನೆಲಲಕಚ್ಚಿದೆ. ಹಿಟ್ನಾಳ್ ವ್ಯಾಪ್ತಿಯ ಶಿವಪುರ, ಹುಲಿಗಿ, ಬಂಡಿಹರ್ಲಾಪುರ ಗ್ರಾಮದಲ್ಲಿ ಮಳೆಗೆ ಭತ್ತದ ಬೆಳೆ ನಾಶವಾಗಿದೆ.. ಕಟಾವಿಗೆ ಬಂದಿದ್ದ ಭತ್ತದ ಬೆಳೆ ನೆಲಕಚ್ಚಿರೋದ್ರಿಂದ ಅನ್ನದಾತರು ಕಂಗಾಲಾಗಿದ್ದಾರೆ. ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಭತ್ತದ ತೆನೆ ಉದುರಿ ಫಸಲು ಮಣ್ಣು ಪಾಲಾಗಿದೆ.
ಇದನ್ನೂ ಓದಿ: ಒಂದೇ ಮಳೆಗೆ ತತ್ತರಿಸಿದ ಬೆಂಗಳೂರು ವಾಹನ ಸವಾರರು.. ಎಲ್ಲೆಲ್ಲಿ ಭಾರೀ ಅನಾಹುತ? ಮುಂದೇನು?
ರಾಜಧಾನಿಯಲ್ಲಿ ಇನ್ನೂ ಮೂರು ದಿನ ಮಳೆಯ ಎಚ್ಚರಿಕೆ
ಬಿಸಿಲಿನಿಂದ ಬೆಂದು ಹೋಗಿದ್ದ ಬೆಂದಕಾಳೂರು, ಸಣ್ಣ ಮಳೆಗೆ ತಪ್ಪಾಂಗಿದೆ. ಜೊತೆಗೆ ಅವಾಂತರವನ್ನು ಸೃಷ್ಟಿಸಿದೆ. ಬಿರುಗಾಳಿ ಸಹಿತ ಅಬ್ಬರಿಸಿದ ಮಳೆಯಿಂದ ರಾಜಾಜಿನಗದಲ್ಲಿ ಬೃಹತ್ ಮರ ಉರುಳಿಬಿದ್ದು ಎರಡು ಕಾರು ಮತ್ತು ಬೈಕ್‌ನ ಜಖಂಗೊಳಿಸಿದೆ.. ಇತ್ತ ಕೋರಮಂಗಲ, ಹೆಚ್ಎಸ್ಆರ್ ಲೇಔಟ್, ಆಡುಗೋಡಿ ಸುತ್ತಮುತ್ತ ಧಾರಕಾರ ಮಳೆಗೆ ರಸ್ತೆಗಳು ಕರೆಯಂತಾಗಿದ್ರಿಂದ ವಾಹನ ಸವಾರರು ಪರದಾಡಿದ್ರು... ಬೆಂಗಳೂರಿನಲ್ಲಿ ಇನ್ನೂ ಮೂರು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಹವಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಜನರು ಎಚ್ಚರಿಕೆಯಿಂದ ಇರಬೇಕು..
ತಮಿಳುನಾಡಲ್ಲೂ ಧಾರಾಕಾರ ಮಳೆ!
ಇದು ಕರುನಾಡಿನ ಮಳೆರಾಯನ ಕಥೆಯಾದ್ರೆ.. ಮಹಾರಾಷ್ಟ್ರ ತೆಲಂಗಾಣ, ತಮಿಳುನಾಡಿನಲ್ಲೂ ವರುಣ ಅಬ್ಬರಿಸಿದ್ದಾನೆ. ಮಹಾರಾಷ್ಟ್ರದ ಪುಣೆಯಲ್ಲೂ ಮಳೆಯಾಗಿದ್ದು ಮಳೆ ನೀರು ರಸ್ತೆ ಮೇಲೆ ಹರಿದಿದ್ರಿಂದ ವಾಹನ ಸವಾರರು ಪರದಾಡಿದ್ದಾರೆ.. ತಮಿಳುನಾಡಿನ ರಾಮೇಶ್ವರಂನಲ್ಲೂ ಧಾರಕಾರ ಮಳೆಯಾಗಿದ್ದು ಮಳೆಯಿಂದ ಹಲವು ರಸ್ತೆಗಳು ಜಲಾವೃತವಾಗಿವೆ.
ತೆಲಂಗಾಣದ ಹೈದರಾಬಾದ್ನಲ್ಲೂ ಗಾಳಿ ಸಹಿತ ಭಾರೀ ಮಳೆಯಾಗಿದೆ. ಮಳೆಯಿಂದಾಗಿ ಹೈದರಾಬಾದ್ನ ದಿಲ್ ಸುಖ್ ನಗರ ಮತ್ತು ಚೈತನ್ಯಪುರಿಯಲ್ಲಿ ಪ್ರದೇಶದಲ್ಲಿ ರಸ್ತೆಗಳು ಜಲಾವೃತವಾಗಿದ್ವು ಭಾರೀ ಟ್ರಾಫಿಕ್ ಜಾಮ್ ಸಹ ಉಂಟಾಗಿತ್ತು. ಒಟ್ನಲ್ಲಿ ಬೇಸಿಗೆ ರಣ ಬಿಸಿಲಿಗೆ ಪೂರ್ವ ಮುಂಗಾರು ತಂಪೆರೆದಿದೆ. ಕರ್ನಾಟಕದಲ್ಲಿ ಇನ್ನೂ ಮೂರು ದಿನ ಮಳೆಯಾಗುವ ಮುನ್ಸೂಚನೆ ಇದ್ದು, ಜನರೂ ಕೂಡ ಜಾಗೃಕರಾಗಿ ಇರಬೇಕು.
ಇದನ್ನೂ ಓದಿ: ಅಬ್ ಕಿ ಬಾರ್ 300 ಎಂದ ತಂಡಕ್ಕೆ ಹ್ಯಾಟ್ರಿಕ್ ಸೋಲು.. IPL ಇತಿಹಾಸದಲ್ಲಿ ಕೆಟ್ಟ ದಾಖಲೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ