/newsfirstlive-kannada/media/post_attachments/wp-content/uploads/2025/01/RAJASTHAN.jpg)
ಡಿಸೆಂಬರ್ 23.. ಈ ಘಟನೆ ನಡೆದು ಸುಮಾರು 10 ದಿನಗಳೇ ಕಳೆದಿದೆ. 10 ದಿನಗಳ ಹಿಂದೆ ರಾಜಸ್ಥಾನದ ಕೋಟ್‌ಪುಟ್ಲಿಯಲ್ಲಿ ಮೂರು ವರ್ಷದ ಬಾಲಕಿ ಚೇತನಾ 700 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದಿದ್ದಳು. ಚೇತನಾ ಬದುಕಿ ಬರಲಿ ಅಂತಾ ಕೈ ಮುಗಿಯದ ದೇವರಿಲ್ಲ. ಹರಕೆ ಹೊರದ ದಿನವಿಲ್ಲ. ಮಗುವಿಗಾಗಿ ಲಕ್ಷಾಂತರ ಜನರ ಮಾಡಿದ್ದ ಪ್ರಾರ್ಥನೆ ಕೊನೆಗೂ ಫಲಿಸಲಿಲ್ಲ.
ಡಿಸೆಂಬರ್ 23 ರಂದು ರಾಜಸ್ಥಾನದ ಕೊಟ್‌ಪುಟ್ಲಿ-ಬೆಹ್ರೋರ್ ಜಿಲ್ಲೆಯ ಸರುಂಡ್ ಪೊಲೀಸ್ ಠಾಣೆ ವ್ಯಾಪ್ತಿಯ ಬಾಡಿಯಾಲಿ ಧನಿಯಲ್ಲಿ.. ತನ್ನ ತಂದೆಯ ಕೃಷಿ ಜಮೀನಿನಲ್ಲಿ ಆಟವಾಡುತ್ತಿದ್ದಾಗ ಚೇತನಾ ಬೋರ್‌ವೆಲ್‌ಗೆ ಬಿದ್ದಿದ್ದಾಳೆ. ಅವಳನ್ನ ಹೊರತೆಗೆಯಲು ಬಳಸಿದ ಆರಂಭಿಕ ರಕ್ಷಣಾ ಪ್ರಯತ್ನಗಳು ವಿಫಲವಾದ್ವು. ಎರಡು ದಿನಗಳ ವಿಫಲ ಯತ್ನಗಳ ನಂತರ, ಪೈಲಿಂಗ್ ಯಂತ್ರವನ್ನು ತರಲಾಗಿತ್ತು. ರಕ್ಷಣಾ ಕಾರ್ಯಾಚರಣೆಗೆ ಸಹಾಯ ಮಾಡಲು ಪಕ್ಕದಲ್ಲೇ ಹೊಂಡ ಕೂಡ ಅಗೆಯಲಾಗಿತ್ತು. ವಿಧಿಯಾಟ ಬೇರೆಯೇ ಇತ್ತು.
ಇದನ್ನೂ ಓದಿ:ಕರ್ನಾಟಕದಲ್ಲಿ ಇಂದಿನಿಂದ 2 ದಿನ ಭರ್ಜರಿ ಮಳೆ; ನೀವು ಮನೆಯಿಂದ ಹೊರ ಬರೋ ಮುನ್ನ ಓದಲೇಬೇಕಾದ ಸ್ಟೋರಿ!
ಅಧಿಕಾರಿಗಳು 160 ಗಂಟೆಗಳ ಕಾಲ ಹಗಲಿರುಳು ಕೆಲಸ ಮಾಡಿ, 100 ಟನ್ ಸಾಮರ್ಥ್ಯದ ಕ್ರೇನ್ ಬಳಸಿ ಸುರಂಗ ಅಗೆದ್ರು. ಮಳೆ ನಡುವೆ.. ಅಡ್ಡ ಸಿಕ್ಕ ಬೃಹತ್ ಬಂಡೆಯನ್ನ ಸೀಳಿ.. ತುಂಬಾ ಸವಾಲುಗಳನ್ನ ಎದುರಿಸಿದ ಎನ್‌ಡಿಆರ್‌ಎಫ್ ತಂಡ ಕೊನೆಗೆ ನಿನ್ನೆ ಮಗುವನ್ನ ರಕ್ಷಣೆ ಮಾಡ್ತು. ಬಾಲಕಿಯನ್ನ ಬೋರ್‌ವೆಲ್‌ನಿಂದ ಹೊರತೆಗೆದು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಷ್ಟುಹೊತ್ತಿಗಾಗಲೇ ಬಾಲಕಿಯ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಮಗು ಜೀವಬಿಟ್ಟ ಬಗ್ಗೆ ವೈದ್ಯರು ಖಚಿತಪಡಿಸಿದ್ರು.
ಬಾಲಕಿಯ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಬಾಲಕಿಗೆ ಆಹಾರ ಮತ್ತು ಆಮ್ಲಜನಕವನ್ನು ಒದಗಿಸಲು ಸಾಧ್ಯವಾಗಿರಲಿಲ್ಲ. ಇದರಿಂದ ಆಕೆಯ ಸ್ಥಿತಿ ಹದಗೆಟ್ಟಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅದೇನೆ ಇರಲಿ, ಕಣ್ಣ ಮುಂದೆ ಆಟವಾಡೋ ಮಗು ಅಸುನೀಗಿದೆ ಅನ್ನೊದು ಕುಟುಂಬಕ್ಕೆ ನುಂಗರಾದ ತುತ್ತಾಗಿದೆ.
ಇದನ್ನೂ ಓದಿ:ಭಾರತೀಯರು ದಿನಕ್ಕೆ ಎಷ್ಟು ಬಾರಿ ಊಟ ಮಾಡಬೇಕು? ನಮ್ಮ ಪುರಾತನ ಆಹಾರ ಕ್ರಮ ಹೇಗಿತ್ತು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ