/newsfirstlive-kannada/media/post_attachments/wp-content/uploads/2024/10/Rajasthan-Devmali.jpg)
ಈ ಗ್ರಾಮದಲ್ಲಿ ಯಾರೂ ಮಾಂಸ, ಮೀನು, ಮದ್ಯ ಸೇವಿಸುವುದಿಲ್ಲ. ಅಷ್ಟೇ ಅಲ್ಲ ಬೇವಿನ ಮರವನ್ನು ಸುಡುವುದು, ಸೀಮೆಎಣ್ಣೆ ಬಳಸುವುದನ್ನೂ ನಿಷೇಧಿಸಲಾಗಿದೆ. ಈ ಗ್ರಾಮದಲ್ಲಿ ಭಗವಾನ್ ದೇವನಾರಾಯಣ ವಾಸಿಸುತ್ತಾನೆ ಅಂತ ಗ್ರಾಮಸ್ಥರು ಭಾವಿಸಿದ್ದಾರೆ. ಈ ಗ್ರಾಮ ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಇದನ್ನೂ ಓದಿ:9 ದಿನಗಳ ಕಾಲ ಕಠಿಣ ವ್ರತ ಕೈಗೊಂಡ ಬಾಬಾ; ಕುತ್ತಿಗೆವರೆಗೂ ತಮ್ಮನ್ನು ತಾವು ಹೂತುಕೊಂಡು ಉಪವಾಸ
ಇದು ರಾಜಸ್ಥಾನದ ಬೇವಾರ್ ಜಿಲ್ಲೆಯಲ್ಲಿರುವ ದೇವಮಾಲಿ ಗ್ರಾಮ ಅತ್ಯುತ್ತಮ ಪ್ರವಾಸಿ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಲ್ಲಿನ ಜನ ಆರ್ಥಿಕವಾಗಿ ಶ್ರೀಮಂತರಾಗಿದ್ರೂ ತಮಗಾಗಿ ಒಂದು ಕಾಂಕ್ರೀಟ್ ಮನೆ ಸಹ ನಿರ್ಮಿಸಿಕೊಂಡಿಲ್ಲ. ಗ್ರಾಮಸ್ಥರು ಇಂದಿಗೂ ಹುಲ್ಲು ಛಾವಣಿಯ ಮನೆಯಲ್ಲಿಯೇ ಬದುಕುತ್ತಿದ್ದಾರೆ. ಮಣ್ಣಿನ ಒಲೆಗಳನ್ನೇ ಬಳಸುತ್ತಾರೆ. ಇಲ್ಲಿನ ಗ್ರಾಮದ ಯಾರ ಹೆಸರಿಗೂ ಭೂಮಿ ಇಲ್ಲವೇ ಇಲ್ಲ. ಇಡೀ ಗ್ರಾಮದಲ್ಲಿ 1800 ಎಕರೆಗೂ ಹೆಚ್ಚು ಭೂಮಿ ಗ್ರಾಮಸ್ಥರ ಬಳಿಯಿದೆ. ಇಲ್ಲಿನ ಎಲ್ಲಾ ಭೂಮಿ ದೇವನಾರಾಯಣ ದೇವರಿಗೆ ಸೇರಿದ್ದು ಅಂತ ಜನ ನಂಬುತ್ತಾರೆ. ಹೀಗಾಗಿ ಇಲ್ಲಿನ ಜನರಲ್ಲಿ ಪರಸ್ಪರ ನಂಬಿಕೆ ಇದೆ. ಇಲ್ಲಿನ ಮನೆಗಳಿಗೆ ಬೀಗವೇ ಹಾಕುವುದಿಲ್ಲ. ವಿಶೇಷವೆಂದರೆ ಇಲ್ಲಿ ಯಾವುದೇ ಕಳ್ಳತನ, ಅಥವಾ ದರೋಡೆಯಂತಹ ಘಟನೆ ನಡೆದೇ ಇಲ್ಲ.
ಸುಮಾರು 300 ಕುಟುಂಬಗಳು ದೇವಮಾಲಿ ಗ್ರಾಮದಲ್ಲಿವೆ. 2 ಸಾವಿರದಷ್ಟು ಜನಸಂಖ್ಯೆ ಹೊಂದಿರುವ ಈ ದೇವಮಾಲಿ ಗ್ರಾಮದಲ್ಲಿರುವ ಎಲ್ಲಾ ಜನ ಗುರ್ಜರ್ ಸಮುದಾಯಕ್ಕೆ ಸೇರಿದವರು. ಈ ಗ್ರಾಮದ ಎಲ್ಲಾ ಭೂಮಿ ದೇವನಾರಾಯಣನಿಗೆ ಸಮರ್ಪಣೆ ಅಂತಾರೆ ಗ್ರಾಮಸ್ಥರು. ಹಲವು ವರ್ಷಗಳಿಂದ ವಾಸವಿದ್ದರೂ ಗ್ರಾಮಸ್ಥರ ಬಳಿ ಜಮೀನಿನ ಮಾಲೀಕತ್ವದ ಯಾವುದೇ ದಾಖಲೆಯೇ ಇಲ್ಲ. ದೇವಮಾಲಿ ಗ್ರಾಮದ ಜನ ದೇವರ ಮೇಲೆ ಅಪಾರ ಭಕ್ತಿ ಹೊಂದಿದ್ದಾರೆ. ಇಲ್ಲಿ ಯಾರಿಗೂ ಪಕ್ಕಾ ಮನೆಗಳಿಲ್ಲ.
ಅಷ್ಟೇ ಅಲ್ಲ ಸರ್ಕಾರದಿಂದಲೂ ಯಾವುದೇ ಮನೆ ಸಹ ನಿರ್ಮಾಣ ಮಾಡಿಲ್ಲ. ಆದರೆ ಬೆಟ್ಟದ ಮೇಲೆ ದೇವನಾರಾಯಣನಿಗೆ ಸುಂದರ ದೇಗುಲ ನಿರ್ಮಿಸಿದ್ದಾರೆ. ಇಲ್ಲಿ ಕಟ್ಟಡಗಳು ಅಂದರೆ ಸರ್ಕಾರಿ ಕಟ್ಟಡ, ದೇವಸ್ಥಾನಗಳು ಮಾತ್ರ. ಸ್ಥಳೀಯರು ಹೇಳುವಂತೆ ದೇವನಾರಾಯಣ ದೇವರು ಈ ಗ್ರಾಮಕ್ಕೆ ಆಗಮಿಸಿದ್ದನಂತೆ. ಇಲ್ಲಿ ಇರಲು ಸ್ಥಳ ಕೇಳಿದ್ದನಂತೆ. ಗ್ರಾಮಸ್ಥರು ದೇವರಿಗೆ ಜಾಗ ನೀಡಿದ್ದರಂತೆ. ಆಗ ದೇವನಾರಾಯಣನು ವರ ಕೇಳುವಂತೆ ಗ್ರಾಮಸ್ಥರಿಗೆ ಹೇಳಿದ್ದನಂತೆ. ಗ್ರಾಮಸ್ಥರು ಯಾವುದೇ ವರ ಕೇಳದಿದ್ದಾಗ ಹೊರಡುವಾಗ ನೀವು ಶಾಂತಿಯಿಂದ ಬದುಕಲು ಛಾವಣಿಯ ಮನೆ ನಿರ್ಮಿಸಬೇಡಿ ಅಂತ ಹೇಳಿದ್ದನಂತೆ. ಆರ್ಥಿಕವಾಗಿ ಅನುಕೂಲಸ್ಥರಾಗಿರುವ ಗ್ರಾಮಸ್ಥರು ಕಾಂಕ್ರೀಟ್ ಮನೆ ನಿರ್ಮಿಸುವಾಗ ಅಹಿತಕರ ಘಟನೆ ನಡೆದವಂತೆ. ಹೀಗಾಗಿ ಮಣ್ಣು, ಹುಲ್ಲಿನ ಮನೆಗಳಲ್ಲೇ ವಾಸಿಸುತ್ತಾರೆ. ಈ ದೇವಮಾಲಿ ಇಡೀ ಗ್ರಾಮವೇ ಸಸ್ಯಹಾರಿ ಗ್ರಾಮ ಎನಿಸಿದೆ. ಇಲ್ಲಿ ಮದುವೆಯಲ್ಲಿ ವರನನ್ನು ಕುದುರೆ ಮೇಲೆ ಕೂರಿಸುವುದಿಲ್ಲ. ಹಾಗೇ ವರ ಕುದುರೆ ಮೇಲೆ ಕೂತರೆ ಮದುವೆ ಬಳಿಕ ಅಪಘಾತವಾಗುತ್ತದೆ ಎಂಬ ನಂಬಿಕೆ ಇಲ್ಲಿನ ಜನರದ್ದು. ಇಲ್ಲಿ ಕರೆಂಟ್ ಹೋದರೆ ಜನ ಸೀಮೆ ಎಣ್ಣೆ ಸಹ ಬಳುಸುವುದಿಲ್ಲ. ಎಳ್ಳೆಣ್ಣೆ ಹಾಕಿ ದೀಪ ಹಚ್ಚುತ್ತಾರೆ.
ಭಾದ್ರಪದ ಮಾಸದಲ್ಲಿ ಜಾತ್ರೆ
ದೇವನಾರಾಯಣನ ಜಾತ್ರೆ ಭಾದ್ರಪದ ಮಾಸದಲ್ಲಿ ನಡೆಯುತ್ತದೆ. ರಾಜಸ್ಥಾನದ ಹಲವು ಜಿಲ್ಲೆಗಳಿಂದ ಪ್ರವಾಸಿಗರು ಇಲ್ಲಿಗೆ ಕಾಲ್ನಡಿಗೆಯಲ್ಲಿ ಬರುತ್ತಾರೆ. ಈ ಗ್ರಾಮದ ವಿಶಿಷ್ಟ ಸಾಂಸ್ಕೃತಿಕ ಪರಂಪರೆ ಗುರುತಿಸಿ ಕೇಂದ್ರ ಸರ್ಕಾರ ಅತ್ಯುತ್ತಮ ಪ್ರವಾಸಿ ಗ್ರಾಮವೆಂದು ಘೋಷಿಸಿದೆ. ನವೆಂಬರ್ 27ರಂದು ದೆಹಲಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದೆ.
ವಿಶೇಷ ವರದಿ: ವಿಶ್ವನಾಥ್ ಜಿ.