/newsfirstlive-kannada/media/post_attachments/wp-content/uploads/2025/04/SALT_RAJATH.jpg)
ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಳೆ ತವರಿನಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಬಲಿಷ್ಠ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ತನ್ನ ನೆಲವೇ ಆರ್ಸಿಬಿಗೆ ಮಗ್ಗಲು ಮುಳ್ಳಾಗಿ ಕಾಡುತ್ತಿದೆ. ಸೀಸನ್-18ರಲ್ಲಿ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಹೇಗಾದರೂ ಮಾಡಿ ಗೆಲುವು ಪಡೆಯಲು ನೂರೆಂಟು ಪ್ರಯತ್ನ ಮಾಡುತ್ತಿದೆ. ಆದ್ರೆ ಇದಕ್ಕೆ ಪಂಜಾಬ್ ಕಿಂಗ್ಸ್ನಲ್ಲಿರುವ ಆರ್ಸಿಬಿಯ ಮಾಜಿ ಪ್ಲೇಯರ್ಗಳು ಗೆಲುವಿಗೆ ಅಡ್ಡಿಯಾಗವ ಸಂಭವ ಹೆಚ್ಚಿದೆ.
ರಜತ್ ಪಾಟಿದಾರ್ ಇದೇ ಮೊದಲ ಬಾರಿಗೆ ಆರ್ಸಿಬಿ ನಾಯಕನಾಗಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಅದರಂತೆ ಶ್ರೇಯಸ್ ಅಯ್ಯರ್ ಟೀಮ್ ಇಂಡಿಯಾದಲ್ಲೂ ಯಶಸ್ಸಿನ ಆಟಗಾರ. ಜೊತೆಗೆ ಕೆಕೆಆರ್ ತಂಡದ ನಾಯಕನಾಗಿದ್ದಾಗ ಟ್ರೋಫಿ ಎತ್ತಿಡಿದ ಛಲದಂಕ. ಕಳೆದ ಋತುವಿನಂತೆ ಪಂಜಾಬ್ ಕಿಂಗ್ಸ್ ಇಲ್ಲ. ಈ ಸಲ ಬಲಿಷ್ಠವಾಗಿದೆ. ಹೀಗಾಗಿ ಆರ್ಸಿಬಿ ತನ್ನ ನೆಲದಲ್ಲೇ ಗೆಲ್ಲುವುದು ಕೊಂಚ ಕಠಿಣವಾಗಬಹುದು.
ಯಜುವೇಂದ್ರ ಚಹಲ್ ಹಾಗೂ ಮ್ಯಾಕ್ಸ್ವೆಲ್ ಈ ಮೊದಲು ಆರ್ಸಿಬಿ ತಂಡದಲ್ಲಿ ಆಡಿದ್ದಾರೆ. ಇವರಿಗೆ ಚಿನ್ನಸ್ವಾಮಿ ಮೈದಾನದ ಅಣು ಅಣು ಕೂಡ ಚೆನ್ನಾಗಿ ತಿಳಿದಿರುತ್ತದೆ. ಪಂದ್ಯ ವೇಳೆ ಚಹಲ್ ಹಾಗೂ ಮ್ಯಾಕ್ಸಿ, ಆರ್ಸಿಬಿ ಬ್ಯಾಟ್ಸ್ಮನ್ಗಳ ಮೇಲೆ ಎರಗಬಹುದು. ಏಕೆಂದರೆ ರಜತ್ ನೇತೃತ್ವದ ಆರ್ಸಿಬಿ ಬ್ಯಾಟರ್ಸ್ ಸ್ಪಿನ್ನರ್ಗಳನ್ನ ಎದುರಿಸುವಲ್ಲಿ ಈಗಾಗಲೇ ಸೋತಿದ್ದಾರೆ. ನಿಧಾನಗತಿ ಬೌಲಿಂಗ್ಗೆ ಬಾರಿಸುವಾಗ ಎಡವಿದ್ದೇ ಹೆಚ್ಚು.
ಇದನ್ನೂ ಓದಿ:46ನೇ ವಯಸ್ಸಿಗೆ ಮೊದಲ ಮಗುವಿಗೆ ಅಪ್ಪನಾದ ಮಾಜಿ ಕ್ರಿಕೆಟರ್ ಜಹೀರ್ ಖಾನ್.. ಇಟ್ಟ ಹೆಸರೇನು?
ಈ ಹಿಂದೆ ಆರ್ಸಿಬಿ ವಿರುದ್ಧ ಗುಜರಾತ್ ಟೈಟಾನ್ಸ್ ತಂಡದ ಸ್ಪಿನ್ನರ್ ಸಾಯಿ ಕಿಶೋರ್ ಕೇವಲ 22 ರನ್ಗೆ 2 ವಿಕೆಟ್ ಉರುಳಿಸಿದ್ದರು. ಡೆಲ್ಲಿಯ ಕುಲ್ದೀಪ್ ಯಾದವ್ ಕೂಡ 17 ರನ್ಗೆ 2 ವಿಕೆಟ್ ಪಡೆದಿದ್ದರು. ವಿಪ್ರಜ್ ನಿಗಮ್ ಕೂಡ 18 ರನ್ ನೀಡಿ 2 ಪ್ರಮುಖ ವಿಕೆಟ್ ಉರುಳಿಸಿ ತಂಡದ ಗೆಲುವಿಗೆ ಕಾರಣವಾಗಿದ್ದರು. ಇವೆಲ್ಲಾ ಆರ್ಸಿಬಿ ಬ್ಯಾಟರ್ಗಳು ಸ್ಪಿನ್ನರ್ಗಳ ಮುಂದೆ ಏನೂ ಆಡಲ್ಲ ಎನ್ನುವುದನ್ನು ಹೇಳುತ್ತವೆ. ನಾಳೆ ನಡೆಯುವ ಪಂದ್ಯದಲ್ಲಿ ಪಂಜಾಬ್ನ ಮ್ಯಾಕ್ಸ್ವೆಲ್ ಹಾಗೂ ಚಹಲ್ ಮುಖ್ಯ ಪಾತ್ರ ವಹಿಸುವ ಸಾಧ್ಯತೆ ಇದೆ. ಇವರ ಸ್ಪಿನ್ ಬೌಲಿಂಗ್ ಆರ್ಸಿಬಿಗೆ ಮಾರಕವಾಗಬಹುದು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ