/newsfirstlive-kannada/media/post_attachments/wp-content/uploads/2025/04/KL-RAHUL-3.jpg)
ನಿನ್ನೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್ನಂತೆಯೇ ಬೌಲಿಂಗ್ನಲ್ಲೂ ಆರಂಭದಲ್ಲಿ ಆರ್ಸಿಬಿಯದ್ದೇ ದರ್ಬಾರ್ ನಡೀತು. ಆದರೆ ಮನೆ ಮಗ ಕೆ.ಎಲ್.ರಾಹುಲ್ ಆರ್ಸಿಬಿ ಬೌಲರ್ಗಳ ಕಾಡಿದ್ರು. ಇದು ನನ್ನ ಜಾಗ.. ನಂದೇ ಹವಾ.. ಅನ್ನೋ ಸ್ಟೈಲ್ನಲ್ಲಿ ಚಿನ್ನಸ್ವಾಮಿ ಮೈದಾನದಲ್ಲಿ ಘರ್ಜಿಸಿದ ಕನ್ನಡಿಗ ಆರ್ಸಿಬಿಗೆ ಸೋಲಿನ ಶಾಕ್ ನೀಡಿದ್ರು. ಅಂದ್ಹಾಗೆ ರಾಹುಲ್ ಅಷ್ಟೆಲ್ಲಾ ಆರ್ಭಟಿಸಲು ಕಾರಣವಾಗಿದ್ದು ಆ ಒಂದು ಮಿಸ್ಟೇಕ್.
164 ರನ್ಗಳ ಟಾರ್ಗೆಟ್ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ಗೆ ಆರಂಭದಲ್ಲೇ ಶಾಕ್ ಎದುರಾಯ್ತು. ಪವರ್ ಪ್ಲೇನಲ್ಲಿ ಆರ್ಸಿಬಿ ಪವರ್ಫುಲ್ ಬೌಲಿಂಗ್ ಮಾಡಿತು. ಭುವನೇಶ್ವರ್ ಕುಮಾರ್, ಯಶ್ ದಯಾಳ್ ಬೆಂಕಿ ಬೌಲಿಂಗ್ ಮುಂದೆ ಡೆಲ್ಲಿ ಬ್ಯಾಟರ್ಸ್ ಪರದಾಡಿದ್ರು. 2ನೇ ಓವರ್ನಲ್ಲೇ ಯಶ್ ದಯಾಳ್ ಆರ್ಸಿಬಿ ಮಾಜಿ ಕ್ಯಾಪ್ಟನ್ ಫಾಫ್ ಡುಪ್ಲೆಸಿ ವಿಕೆಟ್ ಉರುಳಿಸಿದ್ರು.
ನೆಕ್ಸ್ಟ್ ಓವರ್ನಲ್ಲೇ ಭುವನೇಶ್ವರ್ ಕುಮಾರ್ ಮ್ಯಾಜಿಕ್ ಮಾಡಿದ್ರು. ಬಿಗ್ ಶಾಟ್ ಹೊಡೆಯಲು ಹೋಗಿ ಜೇಕ್ ಫ್ರೆಸರ್ ಮೆಕ್ಗುರ್ಕ್ ಯಡವಟ್ಟು ಮಾಡಿಕೊಂಡ್ರು. ಜಿತೇಶ್ ಶರ್ಮಾ ಹಿಡಿದ ಅದ್ಭುತ ಕ್ಯಾಚ್ಗೆ ಮೆಕ್ಗುರ್ಕ್ ವಿಕೆಟ್ ಒಪ್ಪಿಸಿದರು.
ಇದನ್ನೂ ಓದಿ: 3.5ನೇ ಓವರ್ನಲ್ಲಿ ನಡೆದ ಆ ಒಂದು ಘಟನೆ RCB ಸೋಲಿಗೆ ಕಾರಣ..!
ಅಭಿಷೇಕ್ ಪೊರೆಲ್ ಕೂಡ ಕುಸಿದ ಡೆಲ್ಲಿ ತಂಡಕ್ಕೆ ಆಸರೆಯಾಗಲಿಲ್ಲ. ಮೆಕ್ಗುರ್ಕ್ ರೀತಿಯಲ್ಲೇ ಬಿಗ್ ಶಾಟ್ ಪ್ಲೇ ಮಾಡಿ ಕೈ ಸುಟ್ಟುಕೊಂಡ್ರು. ಭುವನೇಶ್ವರ್ ಕುಮಾರ್ಗೆ 2ನೇ ಬಲಿಯಾದ್ರು. 30 ರನ್ಗಳಿಸುವಷ್ಟರಲ್ಲಿ ಡೆಲ್ಲಿ ಮೂವರು ಬ್ಯಾಟರ್ಸ್ ಪೆವಿಲಿಯನ್ ಸೇರಿದ್ರು.
4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ಕೆ.ಎಲ್ ರಾಹುಲ್ ಕೂಡ ಯಡವಟ್ಟು ಮಾಡಿದ್ರು. ಸಿಕ್ಕ ಅವಕಾಶವನ್ನ ಆರ್ಸಿಬಿ ಬಳಸಿಕೊಳ್ಳಲಿಲ್ಲ. 3.2ನೇ ಓವರ್ನಲ್ಲಿ ಆರ್ಸಿಬಿ ನಾಯಕ ಮಾಡಿದ ಯಡವಟ್ಟು ಪಂದ್ಯಕ್ಕೆ ಮತ್ತೆ ಟ್ವಿಸ್ಟ್ ನೀಡಿತು. ಅದು ಹಾಫ್ ಚಾನ್ಸ್ ಆಗಿತ್ತು ನಿಜ, ಆದರೆ ಕ್ಯಾಚ್ ಆಗಿ ಕನ್ವರ್ಟ್ ಮಾಡಿದ್ರೆ ಮ್ಯಾಚೇ ಗೆಲ್ಲಬಹುದಿತ್ತು ಅನ್ನೋದು ತಜ್ಞರ ಅಭಿಪ್ರಾಯ.
ಇನ್ನು ಕ್ಯಾಪ್ಟನ್ ಅಕ್ಷರ್ ಪಟೇಲ್ ಅವಸರಕ್ಕೆ ಬಿದ್ದು ಔಟಾದ್ರು. ಸಿಕ್ಕ ಜೀವದಾನ ಎರಡೂ ಕೈಗಳಲ್ಲಿ ಬಾಚಿಕೊಂಡ ಕೆ.ಎಲ್ ರಾಹುಲ್ ಹೋಮ್ಗ್ರೌಂಡ್ನಲ್ಲಿ ರನ್ಹೊಳೆ ಹರಿಸಿದ್ರು. ಮನೆಮಗನ ಆಟಕ್ಕೆ ಜೈ ಅನ್ನಬೇಕೋ, ಆರ್ಸಿಬಿ ಸೋಲುತ್ತೆ ಅಂತಾ ಬೇಸರ ಮಾಡ್ಕೋಬೇಕೋ ಅನ್ನೋ ಗೊಂದಲದಲ್ಲಿ ಅಭಿಮಾನಿಗಳಿದ್ದರು.
ಇದನ್ನೂ ಓದಿ: ಚಿನ್ನಸ್ವಾಮಿಯಲ್ಲಿ ಸತತ ಎರಡನೇ ಸೋಲು.. ಕ್ಯಾಪ್ಟನ್ ಪಾಟೀದಾರ್ ಹೊಣೆ ಮಾಡಿದ್ದು ಯಾರನ್ನ..?
ರಾಹುಲ್ಗೆ ಟ್ರಿಸ್ಟನ್ ಸ್ಟಬ್ಸ್ ಸಾಥ್ ನೀಡಿದ್ರು. ಎಚ್ಚರಿಕೆಯಿಂದ ಇನ್ನಿಂಗ್ಸ್ ಕಟ್ಟಿದ ಈ ಜೋಡಿ 11ನೇ ಓವರ್ನಿಂದ ಬೌಂಡರಿ, ಸಿಕ್ಸರ್ಗಳನ್ನೂ ಬಾರಿಸಿ ರನ್ ಡೀಲ್ ಮಾಡಿದ್ರು. ಅದ್ರಲ್ಲೂ ಜೋಷ್ ಹೇಜಲ್ವುಡ್ ಎಸೆದ 15ನೇ ಓವರ್ನಲ್ಲಿ ರಾಹುಲ್ 22 ರನ್ ಚಚ್ಚಿದ್ರು. ಈ ಓವರ್ನಲ್ಲೇ ಡೆಲ್ಲಿ ಗೆಲುವನ್ನೂ ಬಹುತೇಕ ಖಚಿತ ಮಾಡಿದ್ರು.
23 ಎಸೆತ ಎದುರಿಸಿದ ಟ್ರಿಸ್ಟನ್ ಸ್ಟಬ್ಸ್ 1 ಸಿಕ್ಸ್, 4 ಬೌಂಡರಿ ಸಹಿತ 38 ರನ್ಗಳಿಸಿದ್ರು. ಕ್ಲಾಸಿಕ್ ಆಟವಾಡಿದ ರಾಹುಲ್ 6 ಸಿಕ್ಸರ್, 7 ಬೌಂಡರಿ ಸಿಡಿಸಿ ಅಬ್ಬರಿಸಿದ್ರು. 53 ಎಸೆತಗಳಲ್ಲೇ ಅಜೇಯ 93 ರನ್ಗಳಿಸಿದ್ರು. 17ನೇ ಓವರ್ನ 5ನೇ ಎಸೆತವನ್ನ ಸಿಕ್ಸರ್ ಸಿಡಿಸಿದ ರಾಹುಲ್ ತಂಡವನ್ನ ಗೆಲುವಿನ ದಡ ಸೇರಿಸಿದ್ರು. ಇಷ್ಟೇ ಅಲ್ಲ, ಇದು ನನ್ನ ಜಾಗ.. ನನ್ನ ನೆಲ.. ನನ್ನ ಆಟನೇ ನಡೆಯೋದು ಅಂತಾ ಸೆಲಬ್ರೇಷನ್ ಮಾಡಿ ಸಂಭ್ರಮಿಸಿದ್ರು.
ಇದನ್ನೂ ಓದಿ: ಇದು ನನ್ನ ಮೈದಾನ, ನನ್ನ ಮನೆ -ಆರ್ಸಿಬಿ ಸೋಲಿಸಿ KL ರಾಹುಲ್ ಸ್ಫೋಟಕ ಹೇಳಿಕೆ..!
17.5 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿದ ಡೆಲ್ಲಿ ಕ್ಯಾಪಿಟಲ್ಸ್ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. 4ಕ್ಕೆ 4 ಪಂದ್ಯ ಗೆದ್ದು ಡೆಲ್ಲಿ ಅಜೇಯ ಓಟ ಮುಂದುವರೆಸಿದ್ರೆ ಆರ್ಸಿಬಿ ತವರಿನಲ್ಲಿ ಆಡಿದ ಎರಡನೇ ಪಂದ್ಯದಲ್ಲೂ ಮುಗ್ಗರಿಸಿ ಮುಖಭಂಗ ಅನುಭವಿಸಿತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ