/newsfirstlive-kannada/media/post_attachments/wp-content/uploads/2025/02/BABY_ABD_1.jpg)
ಐಪಿಎಲ್ ಸೀಸನ್ 18ಕ್ಕೆ ಆರ್ಸಿಬಿಯಲ್ಲಿ ಭರ್ಜರಿ ಸಿದ್ಧತೆ ನಡೀತಿದೆ. ನಾಯಕನಾಗಿ ರಜತ್ ಪಾಟಿದಾರ್ ನೇಮಿಸಿದ ಬೆನ್ನಲ್ಲೇ, ಹೊಸ ಆಟಗಾರನ ಖರೀದಿಗೆ ಆರ್ಸಿಬಿ ಮುಂದಾಗಿದೆ. ಲಾಯಲ್ ಅಭಿಮಾನಿಗಳ ಬಹು ಕಾಲದ ಬೇಡಿಕೆ ಈ ಬಾರಿ ಈಡೇರುವ ಸಾಧ್ಯತೆ ದಟ್ಟವಾಗಿದೆ. ಅಷ್ಟಕ್ಕೂ ಆ ಆಟಗಾರ ಯಾರು?.
ಮಿಸ್ಟರ್ 360 ಅಂದ್ರೆ ಸಾಕು.. ಆರ್ಸಿಬಿ ಅಭಿಮಾನಿಗಳಿಗೆ ಥಟ್ಟಂತ ನೆನಪಾಗೋ ಹೆಸರು ಎಬಿ ಡಿವಿಲಿಯರ್ಸ್. ಈ ಎಬಿ ಬ್ಯಾಟಿಂಗ್ ಅಂದ್ರೆ ನೋಡೋಕೆ ಹಬ್ಬ. 22 ಯಾರ್ಡ್ನಲ್ಲಿ ಗಾಳಿಯಲ್ಲಿ ಹಾರಿ ಚೆಂಡನ್ನ ಹೊಡೆಯೋ ಕಲೆಗಾರಿಕೆ, ಕ್ರೀಸ್ನಲ್ಲಿ ಗಿರಗಿಟ್ಲೆಯಂತೆ ತಿರುಗಿ ಬ್ಯಾಟ್ ಬೀಸುವ ಪರಿ. ಕನಸಲ್ಲೂ ಕಲ್ಪಿಸಿಕೊಳ್ಳಲು ಅಸಾಧ್ಯ ಬಿಡಿ. ಎಬಿಡಿ ಕ್ರಿಸ್ನಲ್ಲಿ ಬ್ಯಾಟ್ ವಿನೂತನ ಶಾಟ್ಗಳನ್ನ ಬಾರಿಸ್ತಿದ್ರೆ, ಅಭಿಮಾನಿಗಳು ಹುಚ್ಚೆದ್ದು ಕುಣೀತಿದ್ರು.
RCBಗೆ ‘ಎಬಿಡಿ’ ಕಮ್ಬ್ಯಾಕ್ಗೆ ಕೌಂಟ್ಡೌನ್.!
ಈ ಕಲೆಗಾರ ಎಬಿಡಿ ಆರ್ಸಿಬಿಯ ರಿಯಲ್ ಟ್ರಬಲ್ ಶೂಟರ್ ಆಗಿದ್ರು. 11 ವರ್ಷಗಳ ಕಾಲ ರೆಡ್ ಆರ್ಮಿಯ ಆಪತ್ಭಾಂದವರಾಗಿದ್ರು. ಈ ಸಂಕಷ್ಟಹರ ಆರ್ಸಿಬಿಯಿಂದ ಮರೆಯಾಗಿ ಬರೋಬ್ಬರಿ 4 ಸೀಸನ್ಗಳು ಕಳೆದಿವೆ. ಆದ್ರೆ, ಫ್ಯಾನ್ಸ್ ಮಾತ್ರ ಎಬಿಡಿಯ ಕನವರಿಕೆಯಲ್ಲೇ ಇದ್ದಾರೆ. ಇದೀಗ ಮತ್ತೊಮ್ಮೆ ಆರ್ಸಿಬಿಗೆ ಎಬಿಡಿಯ ಆಗಮನಕ್ಕೆ ವೇದಿಕೆ ಸಜ್ಜಾಗಿದೆ. ಆದ್ರೆ, ಈಗ ಬರ್ತಿರೋದು ಸೀನಿಯರ್ ಎಬಿಡಿಯಲ್ಲ.. ಜೂನಿಯರ್ ಎಬಿಡಿ.
ಜೇಕಬ್ ಬೆತೆಲ್ಗೆ ಇಂಜುರಿ..! ಐಪಿಎಲ್ಗೆ ಡೌಟ್.!
ಈ ಬಾರಿಯ ಮೆಗಾ ಆಕ್ಷನ್ನಲ್ಲಿ ಆರ್ಸಿಬಿ ತಂಡ ಖರೀದಿಸಿದ ಇಂಗ್ಲೆಂಡ್ನ ಆಲ್ರೌಂಡರ್ ಜೇಕಬ್ ಬೆತೆಲ್ ಇಂಜುರಿಗೆ ತುತ್ತಾಗಿದ್ದಾರೆ. ಭಾರತದ ವಿರುದ್ಧದ ಏಕದಿನ ಸರಣಿಯಲ್ಲಿ ಗಾಯಕ್ಕೆ ತುತ್ತಾದ ಬೆತೆಲ್, ಮುಂಬರೋ ಐಪಿಎಲ್ ವೇಳೆಗೆ ಫಿಟ್ ಆಗೋದು ಡೌಟ್. ಹೀಗಾಗಿ ರಿಪ್ಲೇಸ್ಮೆಂಟ್ ಆಟಗಾರನ ಹುಡುಕಾಟ ಆರ್ಸಿಬಿ ಫ್ರಾಂಚೈಸಿಯಲ್ಲಿ ಜೋರಾಗಿದೆ. ಹೀಗೆ ಹೊಸ ಆಟಗಾರನ ಹುಡುಕಾಟದಲ್ಲಿರೋ ಆರ್ಸಿಬಿ ಕಣ್ಣಿಗೆ ಬೇಬಿ ಡಿವಿಲಿಯರ್ಸ್, ಡೆವಾಲ್ಡ್ ಬ್ರೇವಿಸ್ ಬಿದ್ದಿದ್ದಾರೆ.
ಹೊಡೆದಿದ್ದೆಲ್ಲಾ ಕ್ಲೀನ್ ಹಿಟ್. ಅದ್ಭುತವಾದ ಶಾಟ್ ಸೆಲೆಕ್ಷನ್. ಘಟಾನುಘಟಿ ಬೌಲರ್ಗಳನ್ನ ಈ ಯಂಗ್ಸ್ಟರ್ ಹಿಮ್ಮೆಟ್ಟಿಸ್ತಾ ಘರ್ಜಿಸಿರೋ ಶುರುವಿಟ್ಟುಕೊಂಡ್ರೆ, ಫ್ಯಾನ್ಸ್ಗೆ ಭರ್ಜರಿ ಬಾಡೂಟ ಫಿಕ್ಸ್. ಈತನ ಆಟ ನೋಡಿದ್ರೆ, ನಿಮಗೆ ಎಬಿ ಡಿವಿಲಿಯರ್ಸ್ ನೆನಪಾಗದೇ ಇರಲ್ಲ. ಥೇಟ್ ಡಿವಿಲಿಯರ್ಸ್ರಂತೆ ಆಟ. ಈ ಮರಿ ಎಬಿಡಿಯನ್ನ ಕರೆ ತರೋಕೆ ಸರ್ವ ಪ್ರಯತ್ನ ಆರ್ಸಿಬಿ ಮ್ಯಾನೇಜ್ಮೆಂಟ್ ವಲಯದಲ್ಲಿ ಸದ್ದಿಲ್ಲದೇ ಶುರುವಾಗಿದೆ.
ಐಪಿಎಲ್ನಲ್ಲಿ ಅನ್ಸೋಲ್ಡ್.. SAT20ಯಲ್ಲಿ ಶೈನ್.!
ಕಳೆದ 2 ಸೀಸನ್ಗಳಲ್ಲಿ ಮುಂಬೈ ಪರ ಆಡಿದ್ದ ಡೆವಾಲ್ಡ್ ಬ್ರೆವಿಸ್ನ ಈ ಬಾರಿಯ ಮೆಗಾ ಹರಾಜಿಗೂ ಮುನ್ನ ರಿಲೀಸ್ ಮಾಡಲಾಗಿತ್ತು. ಮೆಗಾ ಹರಾಜಿನಲ್ಲಿ ಅಚ್ಚರಿಯ ರೀತಿಯಲ್ಲಿ ಪ್ರತಿಭಾವಂತ ಯುವ ಕ್ರಿಕೆಟಿಗನನ್ನ ಬಿಡ್ ಮಾಡೋಕೆ ಯಾವ ಫ್ರಾಂಚೈಸಿ ಕೂಡ ಮುಂದಾಗಲಿಲ್ಲ. ಆಕ್ಷನ್ನಲ್ಲಿ ಅನ್ಸೋಲ್ಡ್ ಆದ ಬೇಬಿ ಎಬಿಡಿ, ಆನಂತರ ನಡೆದ SAT20 ಟೂರ್ನಿಯಲ್ಲಿ ಧೂಳೆಬ್ಬಿಸಿದ್ರು. 184ರ ಸ್ಟ್ರೈಕ್ರೇಟ್ನಲ್ಲಿ ಘರ್ಜಿಸಿದ ಬ್ರೆವಿಸ್ 48.50ರ ಸರಾಸರಿಯಲ್ಲಿ ರನ್ ಕೊಳ್ಳೆ ಹೊಡೆದರು.
ಸದ್ಯ ರೆಡ್ ಹಾಟ್ ಫಾರ್ಮ್ನಲ್ಲಿರೋ ಡೆವಾಲ್ಡ್ ಬ್ರೇವಿಸ್ ಆರ್ಸಿಬಿಗೆ ಸೂಟಬಲ್ ಪ್ಲೇಯರ್. ಚಿನ್ನಸ್ವಾಮಿಯಂತ ಚಿಕ್ಕ ಸ್ಟೇಡಿಯಂನಲ್ಲಿ ಎದುರಾಳಿಗಳ ಗೇಮ್ಪ್ಲಾನ್ ಧ್ವಂಸ ಮಾಡೋ ಸಾಮರ್ಥ್ಯ ಬ್ರೆವಿಸ್ಗಿದೆ. ಒತ್ತಡ ಸಮಯದಲ್ಲೂ ನಿರ್ಭಿತಿಯಿಂದ ಆಡೋ ಕ್ವಾಲಿಟಿಯಿದೆ. ಭವಿಷ್ಯದ ಸ್ಟಾರ್ ಆಗಿ ಕೂಡ ಬ್ರೆವಿಸ್ ಬೆಳೆಸಬಹುದು. ಈ ಎಲ್ಲಾ ಆ್ಯಂಗಲ್ನಲ್ಲಿ ಯೋಚಿಸಿದ ಮೇಲೆಯೇ ಆರ್ಸಿಬಿ ಫ್ರಾಂಚೈಸಿ ರಿಪ್ಲೇಸ್ಮೆಂಟ್ ಪ್ಲೇಯರ್ ಆಗಿ ಕರೆತರಲು ಚಿಂತಿಸಿದೆ.
ಇದನ್ನೂ ಓದಿ: ಮ್ಯೂಸಿಕ್ ಡೈರೆಕ್ಟರ್ಗೆ ಐಷಾರಾಮಿ ಕಾರು ಗಿಫ್ಟ್ ನೀಡಿದ ಟಾಲಿವುಡ್ ಸ್ಟಾರ್ ಬಾಲಕೃಷ್ಣ.. ಯಾಕೆ?
ಎಬಿ ಡಿವಿಲಿಯರ್ಸ್ ಗರಡಿಯಲ್ಲಿ ಕ್ರಿಕೆಟ್‌ನ ಪಾಠ.!
ಡೆವಾಲ್ಡ್ ಬ್ರೆವಿಸ್ ಎಬಿಡಿಯ ಗರಡಿಯಲ್ಲಿ ಬೆಳೆದ ಪ್ರತಿಭೆ. ಈತನ ಟ್ಯಾಲೆಂಟ್ಗೆ ಕ್ಲೀನ್ಬೋಲ್ಡ್ ಆಗಿದ್ದ ಎಬಿಡಿ, ಆರಂಭದಿಂದ ತಿದ್ದಿ ತೀಡಿ ಬೆಳೆಸಿದ್ದಾರೆ. ಆನ್ಫೀಲ್ಡ್ನಲ್ಲಿ ಥೇಟ್ ಎಬಿಡಿಯಂತೆ ಬ್ಯಾಟಿಂಗ್ ಬೀಸೋದ್ರ ಹಿಂದಿನ ಸೀಕ್ರೆಟ್ ಇದೆ. ಜೊತೆಗೆ ಬ್ರೆವಿಸ್ಗೂ ಕೂಡ ಆರ್ಸಿಬಿ ಕೂಡ ಅಚ್ಚುಮೆಚ್ಚು. ಆರ್ಸಿಬಿ ಪರ ಆಡೋಕೆ ಚಿಕ್ಕಂದಿನಿಂದಲೇ ಕನಸು ಕಂಡಿದ್ದಾರೆ. ಇಂತಾ ಡೆವಾಲ್ಡ್ ಬ್ರೆವಿಸ್ಗೆ ಆರ್ಸಿಬಿಗೆ ಬಂದ್ರೆ ಲಾಯಲ್ ಫ್ಯಾನ್ಸ್ ಮತ್ತಷ್ಟು ಖುಷ್ ಆಗೋದಂತೂ ಪಕ್ಕಾ.
ಡೆವಾಲ್ಡ್ ಬ್ರೆವಿಸ್ ಒಬ್ಬ ಫ್ಯೂಚರ್ ಸ್ಟಾರ್, ವಿಧ್ವಂಸಕಾರಿ ಬ್ಯಾಟ್ಸ್ಮನ್, ಎಬಿಡಿಯ ಪಡಿಯಚ್ಚು ಎಲ್ಲವೂ ಸರಿ. ಆದ್ರೆ, ಇಂಡಿಯನ್ ಪಿಚ್ನಲ್ಲಿ ಈತನ ಆಟ ನಡೆಯುತ್ತಾ ಅನ್ನೋದು ಈಗ ಪ್ರಶ್ನೆಯಾಗಿದೆ. ಈ ಹಿಂದೆ ಮುಂಬೈ ಇಂಡಿಯನ್ಸ್ ಪರ ಆಡಿದಾಗ ಇಂಪ್ರೆಸ್ ಮಾಡುವಲ್ಲಿ ಫೇಲ್ ಆಗಿದ್ದಾರೆ. ಈ ಒಂದು ವಿಚಾರ ಸದ್ಯ ಹಿನ್ನಡೆಯಾಗಿ ಪರಿಣಮಿಸಿದ್ರೂ, ಆರ್ಸಿಬಿ ಮ್ಯಾನೇಜ್ಮೆಂಟ್ ಬ್ರೆವಿಸ್ಗೆ ಗಾಳ ಹಾಕೋ ಎಲ್ಲಾ ಯತ್ನ ಮಾಡ್ತಿದೆ. ಅಂತಿಮ ನಿರ್ಧಾರ ಯಾವಾಗಾಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ