/newsfirstlive-kannada/media/post_attachments/wp-content/uploads/2025/05/RCB_TEAM_NEW.jpg)
18 ವರ್ಷಗಳ ಕಾಯುವಿಕೆ, ಟ್ರೋಫಿ ಗೆಲ್ಲದ ಬರ, ಕೊರಗು ಪ್ರಸಕ್ತ ವರ್ಷ ನೀಗುತ್ತೆ ಎಂಬ ನಂಬಿಕೆ ಕೋಟ್ಯಾಂತರ ಆರ್ಸಿಬಿ ಅಭಿಮಾನಿಗಳಲ್ಲಿದೆ. ಇಷ್ಟು ದಿನ ಕಪ್ ನಮ್ದೇ ನಮ್ದೇ ಅಂತಿದ್ದ ಫ್ಯಾನ್ಸ್, ಕಪ್ ನಮ್ದೇ ಎಂದು ಮಾರ್ದನಿಸಲು ಜಸ್ಟ್ 3 ದಿನಗಳಷ್ಟೇ ಬಾಕಿಯಿದೆ. ಆದ್ರೆ, ಈ ಕಪ್ ಗೆಲುವಿನ ಕನಸು ನಿಜಕ್ಕೂ ನನಸಾಗುತ್ತಾ?.
ಈ ಸಲ ಕಪ್ ನಮ್ದೇ, ಪ್ರತಿ ಬಾರಿಯ ಐಪಿಎಲ್ ಶುರುವಾದಾಗ್ಲೂ, ಆರ್ಸಿಬಿ ಅಭಿಮಾನಿಗಳು ಸ್ಲೋಗನ್ ಶುರು ಮಾಡ್ತಾರೆ. ಜೈಕಾರ ಹಾಕಿ, ಹಾಡು ಹಾಡಿ, ಡ್ಯಾನ್ಸ್ ಮಾಡಿ ತಂಡಕ್ಕೆ ಜೋಶ್ ತುಂಬ್ತಾರೆ. ಆದ್ರೆ, ಸೀಸನ್ ಕೊನೆಯಲ್ಲಿ ಸೋತು ನಿರಾಸೆ ಮೂಡಿಸುತ್ತೆ. ಆದ್ರೀಗ ಸೀಸನ್-18ರ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಸೀಬು ಬದಲಾಗುವ ಭರವಸೆ ಹುಟ್ಟಿಹಾಕಿದೆ.
ಸೀಸನ್-18ರ ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮೊದಲ ಕ್ವಾಲಿಫೈಯರ್ನಲ್ಲಿ ಪಂಜಾಬ್ ಕಿಂಗ್ಸ್ಗೆ ಪಂಚ್ ನೀಡಿ ಫೈನಲ್ಗೆ ಲಗ್ಗೆ ಇಟ್ಟಿದೆ. ಅಷ್ಟೇ ಅಲ್ಲ, ಮೊದಲ ಬಾರಿಗೆ ಐಪಿಎಲ್ ಟ್ರೋಫಿಗೆ ಮುತ್ತಿಡುವ ನಿರೀಕ್ಷೆ ಹೆಚ್ಚಿಸಿದೆ. ಆದ್ರೆ, ಪ್ರಶಸ್ತಿಯ ಬ್ಯಾಟಲ್ಗೂ ಮುನ್ನ ಈ ಸಲನಾದ್ರೂ, ಕಪ್ ಗೆಲ್ಲುತ್ತಾ ಎಂಬ ಪ್ರಶ್ನೆ ಕಾಡ್ತಿದೆ.
18 ಸೀಸನ್ಗಳ ಪೈಕಿ 3 ಸಲ ಕೈತಪ್ಪಿದ ಐಪಿಎಲ್ ಕಪ್..!
ಒಂದಲ್ಲ, ಎರಡಲ್ಲ ಬರೋಬ್ಬರಿ 18 ಸೀಸನ್ಗಳಿಂದ ಮೂರು ಬಾರಿ ಐಪಿಎಲ್ನಲ್ಲಿ ಫೈನಲ್ ಪ್ರವೇಶಿಸಿರುವ ಆರ್ಸಿಬಿ, ಒಮ್ಮೆಯೂ ಟ್ರೋಫಿ ಗೆಲ್ಲುವ ಕನಸು ಈಡೇರಿಸಿಕೊಳ್ಳಲಿಲ್ಲ. 2009ರ ಐಪಿಎಲ್ ಸೀಸನ್ನಲ್ಲೇ ಕಪ್ ಗೆಲ್ಲುವ ಅವಕಾಶ ಹೊಂದಿದ್ದ ಅನಿಲ್ ಕುಂಬ್ಳೆ ನಾಯಕತ್ವದ ಆರ್ಸಿಬಿ, ಅಂದು ಫೈನಲ್ನಲ್ಲಿ ಡೆಕ್ಕನ್ ಚಾರ್ಚಸ್ ಎದುರು ಮುಗ್ಗರಿಸಿ ಟ್ರೋಫಿ ಕೈಚೆಲ್ಲಿತ್ತು.
2011ರ ಐಪಿಎಲ್ ಸೀಸನ್ನಲ್ಲಿ ಜಬರ್ದಸ್ತ್ ಆಟವಾಡಿದ್ದ ಆರ್ಸಿಬಿ, ಕ್ರಿಸ್ ಗೇಲ್ ರಣಾರ್ಭಟಕ್ಕೆ ಟ್ರೋಫಿ ಗೆಲ್ಲೋದು ಫಿಕ್ಸ್ ಎಂಬ ಭರವಸೆ ಹುಟ್ಟಿಹಾಕಿತ್ತು. ಆದ್ರೆ, ಚೆನ್ನೈ ಎದುರು ಫೈನಲ್ನಲ್ಲಿ 58 ರನ್ಗಳ ಸೋಲು ಅನುಭವಿಸಿದ ಆರ್ಸಿಬಿ, 2ನೇ ಬಾರಿಗೆ ಕಪ್ ಗೆಲ್ಲುವ ಕನಸು ನುಚ್ಚುನೂರು ಮಾಡಿಕೊಂಡಿತ್ತು.
2016ರ ಐಪಿಎಲ್ ಉದ್ದಕ್ಕೂ ಕಿಂಗ್ ಕೊಹ್ಲಿ ರಣಾರ್ಭಟಕ್ಕೆ ಫೈನಲ್ಗೇರಿದ್ದ ಆರ್ಸಿಬಿ, ಚಿನ್ನಸ್ವಾಮಿಯಲ್ಲೇ ಸನ್ ರೈಸರ್ಸ್ ಎದುರು ಗೆಲ್ಲೋ ಚಾನ್ಸ್ ದಟ್ಟವಾಗಿತ್ತು. ಆದ್ರೆ, ಲೋವರ್ ಆರ್ಡರ್ನ ವೈಫಲ್ಯಕ್ಕೆ ಬೆಲೆ ತೆತ್ತು ಟ್ರೋಫಿ ಗೆಲ್ಲೋ ಚಾನ್ಸ್ ಮಿಸ್ ಮಾಡಿಕೊಂಡಿತ್ತು.
5 ವರ್ಷ, 4 ಬಾರಿ ಆರ್ಸಿಬಿ ಪ್ಲೇ ಆಪ್ಗೆ ಎಂಟ್ರಿ.!
2008ರಿಂದ 2016ರ ಅವಧಿಯಲ್ಲಿ ಮೂರು ಸಲ ಟ್ರೋಫಿ ಗೆಲ್ಲೋ ಚಾನ್ಸ್ ಮಿಸ್ ಮಾಡಿಕೊಂಡಿದ್ದ ಆರ್ಸಿಬಿ, ಕಳೆದ 5 ವರ್ಷಗಳಿಂದ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನವನ್ನೇ ನೀಡಿದೆ. 2023ರ ಸೀಸನ್ನಲ್ಲಿ ಲೀಗ್ನಿಂದ ಹೊರಬಿದ್ದಿದ್ದು ಬಿಟ್ರೆ, ಉಳಿದೆಲ್ಲಾ ಸೀಸನ್ ರೆಡ್ ಆರ್ಮಿ ಡೇಂಜರಸ್ ಆಟವೇ ಆಡಿದೆ.
- 2020- ಎಲಿಮಿನೇಟರ್- SRH ಎದುರು ಸೋಲು
- 2021- ಎಲಿಮಿನೇಟರ್- KKR ಎದುರು ಮುಖಭಂಗ
- 2022- ಕ್ವಾಲಿಫೈಯರ್-2- RR ಎದುರು ಸೋಲು
- 2024- ಎಲಿಮಿನೇಟರ್- RR ಎದುರು ಸೋಲು
ಸೀಸನ್-18 ಐಪಿಎಲ್ ಆರ್ಸಿಬಿಗೆ ತರುತ್ತಾ ಲಕ್..?
ಸೀಸನ್-18ರ ಐಪಿಎಲ್.. ಆರ್ಸಿಬಿ ಸೀಸನ್ ಅಂತಾನೇ ಕರೆಯಲಾಗ್ತಿದೆ. ವಿರಾಟ್ ಕೊಹ್ಲಿಯ ಜರ್ಸಿ ನಂಬರ್ ಜೊತೆ ಹೋಲಿಸಿ, ಆರ್ಸಿಬಿ ಟ್ರೋಫಿ ಗೆಲ್ಲೋದು ಫಿಕ್ಸ್ ಎಂಬ ಭವಿಷ್ಯವನ್ನೇ ಫ್ಯಾನ್ಸ್ ನುಡಿಯುತ್ತಿದ್ದಾರೆ. ಇದಕ್ಕೆ ತಕ್ಕಂತೆಯೇ ಟೂರ್ನಿಯುದ್ದಕ್ಕೂ ಡಾಮಿನೇಟಿಂಗ್ ಪರ್ಫಾಮೆನ್ಸ್ ನೀಡಿರುವ ಆರ್ಸಿಬಿ, ಫೈನಲ್ಗೆ ಎಂಟ್ರಿ ನೀಡಿದೆ. ಅಷ್ಟೇ ಅಲ್ಲ.! ಟ್ರೋಫಿ ಗೆಲ್ಲೋ ಭರವಸೆಯನ್ನು ದುಪ್ಪಟಾಗಿಸಿದೆ.
ಇದನ್ನೂ ಓದಿ: Qualifier- 2ರಲ್ಲಿ ಯಾರಿಗೆ ಯಾರು ಚೆಕ್ಮೇಟ್ ಕೊಡ್ತಾರೆ..? ಫೈನಲ್ ಟಿಕೆಟ್ಗಾಗಿ ಬಿಗ್ ಫೈಟ್
ಈ ಸಲ ಕಪ್ ಗೆಲ್ಲದಿದ್ರೆ, ಭವಿಷ್ಯದಲ್ಲಿ ಕಪ್ ಗೆಲ್ಲೋದು ಡೌಟೇ..!
ಪ್ರಸಕ್ತ ಸೀಸನ್ನಲ್ಲಿ ಫೈನಲ್ಗೆ ಎಂಟ್ರಿ ನೀಡಿರುವ ಆರ್ಸಿಬಿ, ಅದೃಷ್ಟದ ಲೆಕ್ಕಾಚಾರದಲ್ಲಿ ಪ್ರತಿ ಮ್ಯಾಚ್, ಪ್ರತಿ ಕಂಡೀಷನ್ಸ್ನಲ್ಲಿ ಅದ್ಭುತ ಆಟವಾಡಿದೆ. ಬ್ಯಾಟಿಂಗ್, ಬೌಲಿಂಗ್ನಲ್ಲಿ ಚಮತ್ಕಾರವನ್ನೇ ಮಾಡಿರುವ ಆರ್ಸಿಬಿ, ಟ್ರೋಫಿ ಗೆಲ್ಲೋ ಹಾಟ್ ಫೇವರಿಟ್ ಎನಿಸಿದೆ. ಇನ್ಫ್ಯಾಕ್ಟ್_ ಇದಕ್ಕೆ ತಕ್ಕಂತೆ ಪ್ರತಿ ಆಟಗಾರ, ನೂರಕ್ಕೆ ನೂರರಷ್ಟು ಕಮಿಟ್ಮೆಂಟ್ ತೋರಿಸ್ತಿದ್ದಾರೆ. ಶತಯ ಗತಯ ಟ್ರೋಫಿ ಗೆಲ್ಲಬೇಕೆಂಬ ಛಲದಲ್ಲಿ ಆನ್ಫೀಲ್ಡ್ನಲ್ಲಿ ಹೋರಾಡ್ತಿದ್ದಾರೆ. ಹೀಗಾಗಿ ಕಪ್ ಗೆಲ್ಲುವ ಸುವರ್ಣಾವಕಾಶ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಂದಿದೆ. ಈ ಸುವರ್ಣವಕಾಶವನ್ನು ಆರ್ಸಿಬಿ ಕೈಚೆಲ್ಲಿದ್ರೆ, ಭವಿಷ್ಯದಲ್ಲಿ ಇನ್ಯಾವತ್ತು ಟ್ರೋಫಿ ಗೆಲ್ಲುವ ಅವಕಾಶ ಸಿಗುತ್ತೋ ಆ ದೇವರಬಲ್ಲ.
ಟೂರ್ನಿ ಆರಂಭದಿಂದಲೂ ಅದ್ಭುತ ಆಟವಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ನಿರೀಕ್ಷೆಯಂತೆ ಫೈನಲ್ಗೆ ಎಂಟ್ರಿ ನೀಡಿದೆ. ಆದ್ರೀಗ ಆ ಸುವರ್ಣವಕಾಶ ಸದ್ಬಳಕೆ ಮಾಡಿಕೊಂಡು ಟ್ರೋಫಿ ಗೆಲುವಿನ ಬರ ನೀಗಿಸಿಕೊಳ್ಳಲಿ ಅನ್ನೋದೆ ಕೋಟ್ಯಾಂತರ ಅಭಿಮಾನಿಗಳ ಆಶಯ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ