/newsfirstlive-kannada/media/post_attachments/wp-content/uploads/2025/04/DHONI_KOHLI.jpg)
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಕಾದಾಟ ಎಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಕುತೂಹಲ. ಹೈವೋಲ್ಟೇಜ್ ಪಂದ್ಯದಲ್ಲಿ ಚೆನ್ನೈ ತಂಡವನ್ನು ಸೋಲಿಸಿದರೆ ಆರ್ಸಿಬಿ ಫ್ಯಾನ್ಸ್ ಹಿರಿ ಹಿರಿ ಹಿಗ್ಗಿ ಬಿಡುತ್ತಾರೆ. ಮರುದಿನ ಪೂರ್ತಿ ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ವಾರ್ ಮುಗಿಲು ಮುಟ್ಟಿರುತ್ತೆ. ಇಂತಹ ಹೈವೋಲ್ಟೇಜ್ ಪಂದ್ಯದ ಮೊದಲ ಹಂತದ ಟಿಕೆಟ್ ಈಗಾಗಲೇ ಸೋಲ್ಡ್ಔಟ್ ಆಗಿವೆ ಎಂದು ಹೇಳಲಾಗುತ್ತಿದೆ.
ರಜತ್ ಪಾಟಿದಾರ್ ನೇತೃತ್ವದ ಆರ್ಸಿಬಿ ಹಾಗೂ ಎಂ.ಎಸ್ ಧೋನಿ ನಾಯಕತ್ವದ ಚೆನ್ನೈ ತಂಡದ ನಡುವಿನ ರಣರೋಚಕ ಪಂದ್ಯ ಮುಂದಿನ ತಿಂಗಳು ಅಂದರೇ, ಮೇ 3 ರಂದು ನಡೆಯಲಿದೆ. ಈ ಪಂದ್ಯ ಬೇರೆ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇರುವುದರಿಂದ ಆರ್ಸಿಬಿಗೆ ಪ್ರತಿಷ್ಠೆ ಆಗಿರುತ್ತದೆ. ಏಕೆಂದರೆ ತವರಲ್ಲಿ ಚೆನ್ನೈಯನ್ನು ಸೋಲಿಸಿ ವಾಪಸ್ ಕಳುಹಿಸಬೇಕು ಎನ್ನುವುದು ಅಭಿಮಾನಿಗಳ ಮಹಾದಾಸೆ. ಇದರಿಂದ ಈ ಪಂದ್ಯ ಆರ್ಸಿಬಿಗೆ ಪ್ರತಿಷ್ಠೆಯ ಗರಿ ಎಂದು ಹೇಳಬಹುದು.
17 ವರ್ಷದ ಬಳಿಕ ಎಂ.ಎ ಚಿದಂಬರಂ ಪಿಚ್ನಲ್ಲೇ ಚೆನ್ನೈ ತಂಡವನ್ನು ಆರ್ಸಿಬಿ 50 ರನ್ಗಳಿಂದ ಮಣಿಸಿ ವಿಜಯ ಪತಾಕೆ ಹಾರಿಸಿದೆ. ಅದರಂತೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುವ ಪಂದ್ಯದಲ್ಲಿ ಆರ್ಸಿಬಿ ಗೆದ್ದು ಬೀಗಿದರೆ ಅಭಿಮಾನಿಗಳಿಗೆ ಆಗುವ ಸಂತಸ ಮತ್ತೊಂದು ಇರುವುದಿಲ್ಲ. ತವರಿನಲ್ಲಿ ಈಗಾಗಲೇ ಎರಡು ಪಂದ್ಯಗಳನ್ನ ಸೋತಿರುವ ಆರ್ಸಿಬಿ ಗೆಲುವಿನ ಖಾತೆ ತೆರೆಯಬೇಕಿದೆ.
ಇದನ್ನೂ ಓದಿ:ನೀರಜ್ ಚೋಪ್ರಾ ಮತ್ತೆ ಪರಾಕ್ರಮ.. ಭರ್ಜರಿ ಚಿನ್ನದ ಬೇಟೆ! ಈ ಬಾರಿ ಎಷ್ಟು ಮೀಟರ್ ಜಾವೆಲಿನ್ ಎಸೆದ್ರು?
ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಾಳೆ ಅಂದರೆ ಏಪ್ರಿಲ್ 18 ರಂದು ಪಂಜಾಬ್ ಜೊತೆ, ಏಪ್ರಿಲ್ 24 ರಂದು ರಾಜಸ್ಥಾನ್ ಜೊತೆ ಹಾಗೂ ಮೇ 3 ರಂದು ಚೆನ್ನೈ ವಿರುದ್ಧ ಆರ್ಸಿಬಿ ಕಾದಾಡಲಿದೆ. ಈ ಮೂರು ಪಂದ್ಯಗಳಲ್ಲಿ ಚೆನ್ನೈ ವಿರುದ್ಧದ ಪಂದ್ಯವೇ ಅತ್ಯಂತ ಮುಖ್ಯವಾಗಿದೆ. ಆರ್ಸಿಬಿ ಜೊತೆ ತವರಿನಲ್ಲಿ ಅವಮಾನಕ್ಕೆ ಒಳಗಾದ ಚೆನ್ನೈ ಆ ಸೇಡನ್ನು ತೀರಿಸುಕೊಳ್ಳಲು ಬರುತ್ತಿದೆ. ಇದಕ್ಕೆ ರಜತ್ ಪಡೆ ಮತ್ತೊಮ್ಮೆ ಸರಿಯಾದ ಉತ್ತರ ಕೊಡಬೇಕಿದೆ.
ಇನ್ನು ಚೆನ್ನೈ ತಂಡದ ಜೊತೆ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುವ ಐಪಿಎಲ್ ಟಿಕೆಟ್ಗಳನ್ನ ನೀಡಲಾಗುತ್ತಿದೆ. ಆದರೆ ಮೊದಲ ಹಂತದ ಟಿಕೆಟ್ಗಳೆಲ್ಲಾ ಸೋಲ್ಡ್ ಆಗಿವೆ ಎನ್ನಲಾಗುತ್ತಿದೆ. ಟಿಕೆಟ್ಗಳನ್ನ ಪಡೆದಿರುವ ಅಭಿಮಾನಿಗಳೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ನನಗೂ ಟಿಕೆಟ್ ಸಿಕ್ಕಿವೆ ಎಂದು ಕಾಮೆಂಟ್ ಮಾಡುತ್ತಿರುವುದು ಕುತೂಹಲವಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ