/newsfirstlive-kannada/media/post_attachments/wp-content/uploads/2025/05/SHREYAS_IYER_RCB.jpg)
ಐಪಿಎಲ್ನ ಹೊಸ ಅಧಿಪತಿ ಯಾರು..? ಈ ಸಿಂಹಾಸನ ಪಟ್ಟಕ್ಕೆ ಇಂದು ನಮೋ ಮೈದಾನದಲ್ಲಿ ಬಿಗ್ ಫೈಟ್ ನಡೆಯಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಸಲ ಕಪ್ ನಮ್ದೇ ಎಂಬ ಆತ್ಮವಿಶ್ವಾಸದಲ್ಲಿದ್ರೆ, ಪಂಜಾಬ್ ಕಿಂಗ್ಸ್ ನಾವ್ ಒಂದು ಕೈ ನೋಡೆ ಬಿಡೋಣ ಎಂಬ ಸವಾಲ್ ಎಸೆಯುತ್ತಿದೆ. ರೆಡ್ ಆರ್ಮಿಗಳ ನಡುವಿನ ಮೆಗಾ ಫೈನಲ್ ಮೇಲೆ ಕ್ರಿಕೆಟ್ ಲೋಕದ ಕಣ್ಣು ನೆಟ್ಟಿದೆ.
ಸೀಸನ್-18ರ ಕಲರ್ಫುಲ್ ಟೂರ್ನಿ ಕ್ಲೈಮ್ಯಾಕ್ಸ್ ಹಂತ ತಲುಪಿದೆ. 70 ರೋಚಕ ಲೀಗ್ ಮ್ಯಾಚ್ಗಳು, ಮೂರು ಹೈಟೆನ್ಶನ್ ಪ್ಲೇ-ಆಫ್ ಪಂದ್ಯಗಳ ಕಾದಾಟ. ಒಂದು ರಣರೋಚಕ ಫೈನಲ್. ಬರೋಬ್ಬರಿ ಮೂರು ತಿಂಗಳ ಮನರಂಜನೆಯ ಜಾತ್ರೆಗೆ ಇಂದು ಅದ್ಧೂರಿ ತೆರೆ ಬೀಳಲಿದೆ. ಮಿಲಿಯನ್ ಡಾಲರ್ ಟೂರ್ನಿಯ ನಯಾ ಚಾಂಪಿಯನ್ ಯಾರ್ ಆಗ್ತಾರೆ ಎಂಬ ಕ್ಯೂರಿಯಾಸಿಟಿ ಫ್ಯಾನ್ಸ್ ವಲಯದಲ್ಲಿ ಹೆಚ್ಚಾಗ್ತಿದೆ.
ಐಪಿಎಲ್ ಫೈನಲ್ಸ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿ ಆಗ್ತಿದ್ದು, ರಣಕಣದಲ್ಲಿ ಕಪ್ ಗೆಲ್ಲಲು ಪಣತೊಟ್ಟಿವೆ. ಇದಕ್ಕಾಗಿ ಇನ್ನಿಲ್ಲದ ಗೇಮ್ ಪ್ಲಾನ್, ಸ್ಟ್ರಾಟರ್ಜಿಗಳನ್ನೇ ರೂಪಿಸಿಕೊಂಡಿರುವ ಉಭಯ ತಂಡಗಳು, ಅಹ್ಮದಬಾದ್ನ ನಮೋ ಸಾಲಿಡ್ ಪರ್ಫಾಮೆನ್ಸ್ ನೀಡೋ ಲೆಕ್ಕಾಚಾರದಲ್ಲಿವೆ.
18 ವರ್ಷಗಳ ಟ್ರೋಫಿ ವನವಾಸಕ್ಕೆ ಬೀಳುತ್ತಾ ಬ್ರೇಕ್..?
ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಚೊಚ್ಚಲ ಐಪಿಎಲ್ ಟ್ರೋಫಿ ಗೆಲುವಿನ ಕನಸಿನಲ್ಲಿದೆ. ಇದಕ್ಕೆ ತಕ್ಕಂತ ಬಲಿಷ್ಠ ಪಡೆಯನ್ನೇ ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಓಪನರ್ಗಳಾದ ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್ ಸ್ಪೋಟಕ ಓಪನಿಂಗ್ ನೀಡಿದ್ರೆ, ಅರ್ಧ ಮ್ಯಾಚ್ ಗೆದ್ದಂತೆಯೇ.
ಪ್ರಸಕ್ತ ಸೀಸನ್ನಲ್ಲಿ ಕೊಹ್ಲಿ-ಸಾಲ್ಟ್ ಜುಗಲ್ಬಂದಿ
ಪ್ರಸಕ್ತ ಟೂರ್ನಿಯಲ್ಲಿ 12 ಪಂದ್ಯಗಳಲ್ಲಿ ಇನ್ನಿಂಗ್ಸ್ ಓಪನ್ ಮಾಡಿರುವ ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, 547 ರನ್ ದಾಖಲಿಸಿದ್ದಾರೆ. 45.58ರ ಅವರೇಜ್ನಲ್ಲಿ ರನ್ ಗಳಿಸಿರುವ ಇವರಿಬ್ಬರು, 6 ಬಾರಿ ಅರ್ಧಶತಕಕ್ಕೂ ಹೆಚ್ಚು ರನ್ಗಳ ಜೊತೆಯಾಟವಾಡಿದ್ದಾರೆ.
ಕೊಹ್ಲಿ V/S ಶ್ರೇಯಸ್.. ಹೇಜಲ್ವುಡ್ V/S ಆರ್ಷ್ದೀಪ್..!
ಉಭಯ ತಂಡಗಳ ಪಾಲಿನ ಮ್ಯಾಚ್ ವಿನ್ನರ್ಗಳೇ ಇವತ್ತಿನ ಐಪಿಎಲ್ ಬ್ಯಾಟಲ್ನ ಸೆಂಟರ್ ಆಫ್ ಅಟ್ರಾಕ್ಷನ್ ಅನಿಸಿದ್ದಾರೆ. ವಿರಾಟ್ ಕೊಹ್ಲಿ ವರ್ಸಸ್ ಶ್ರೇಯಸ್ ಅಯ್ಯರ್, ಜೋಶ್ ಹೇಜಲ್ವುಡ್ ವರ್ಸಸ್ ಆರ್ಷ್ದೀಪ್ ಸಿಂಗ್, ಇವರಲ್ಲಿ ಯಾರು ಮೇಲುಗೈ ಸಾಧಿಸ್ತಾರೋ ಅವರಿಗೆ ಕಪ್.!
14 ಪಂದ್ಯಗಳಿಂದ ವಿರಾಟ್, 614 ರನ್ ಕೊಳ್ಳೆ ಹೊಡೆದಿದ್ರೆ. ಪಂಜಾಬ್ ಪರ ಶ್ರೇಯಸ್ ಅಯ್ಯರ್, 16 ಪಂದ್ಯಗಳಿಂದ 603 ರನ್ ಸಿಡಿಸಿದ್ದಾರೆ. ಆರ್ಸಿಬಿ ಪರ ಜೋಶ್ ಹೇಜಲ್ವುಡ್ 11 ಪಂದ್ಯಗಳಿಂದ 21 ವಿಕೆಟ್ ಬೇಟೆಯಾಡಿದ್ರೆ, ಪಂಜಾಬ್ ಪರ ಅರ್ಶ್ದೀಪ್ ಸಿಂಗ್ 18 ವಿಕೆಟ್ ಕಬಳಿಸಿದ್ದಾರೆ.
ಟಿಮ್ ಡೇವಿಡ್ ಬ್ಯಾಕ್.. ಡೆಡ್ಲಿ ಕ್ಯಾಮಿಯೋ ನಡೆಯುತ್ತಾ..?
ಇಂಜುರಿ ಕಾರಣಕ್ಕೆ ಕೆಲ ಪಂದ್ಯಗಳಿಂದ ಬೆಂಚ್ ಕಾದಿರುವ ಟಿಮ್ ಡೇವಿಡ್, ಫುಲ್ ಫಿಟ್ ಆಗಿದ್ದಾರೆ. ಈ ಕಾರಣಕ್ಕೆ ಇವತ್ತಿನ ಪಂದ್ಯದಲ್ಲಿ ಕಣಕ್ಕಿಳಿಯೋದು ಫಿಕ್ಸ್. ಟೀಮ್ ಡೇವಿಡ್ ಜೊತೆ ದೈತ್ಯ ರೊಮರಿಯೊ ಶೆಫರ್ಡ್ ಸಿಡಿದ್ರೆ, ನಮೋ ಮೈದಾನದಲ್ಲಿ ಪಂಜಾಬ್ ಬೌಲರ್ಗಳ ಮಾರಣಹೋಮ ನಡೆಯಲಿದೆ.
ಇದನ್ನೂ ಓದಿ:RCB ಫೈನಲ್ನಲ್ಲಿ ಗೆದ್ದರೇ ಎಷ್ಟು ಕೋಟಿ ದುಡ್ಡು ಸಿಗುತ್ತೆ..? ರನ್ನರ್ ಅಪ್ಗೂ ಭಾರೀ ಹಣ!
ಕ್ವಾಲಿಫೈಯರ್-1 ಸೇಡಿನ ತವಕದಲ್ಲಿ ಶ್ರೇಯಸ್ ಅಯ್ಯರ್!
ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್, ಆರ್ಸಿಬಿ ಎದುರಿನ 3 ಪಂದ್ಯಗಳ ಪೈಕಿ 2ರಲ್ಲಿ ಸೋತಿರಬಹುದು. ಆದ್ರೆ, ಅಷ್ಟೇ ಅಪಾಯಕಾರಿ ಟೀಮ್ ಅನ್ನೋದನ್ನ ಮರೆಯುವಂತಿಲ್ಲ. ಅದಕ್ಕೆ ಬೆಸ್ಟ್ ಎಕ್ಸಾಂಪಲ್ ಮುಂಬೈ ಇಂಡಿಯನ್ಸ್ ಎದುರಿನ ಕ್ವಾಲಿಫೈಯರ್ ಮ್ಯಾಚ್.. ಹೀಗಾಗಿ ಪಂಜಾಬ್ ಕಿಂಗ್ಸ್ ಎದುರು ಎಚ್ಚರಿಕೆಯ ಆಟವಾಡೋದು ಮೋಸ್ಟ್ ಇಂಪಾರ್ಟೆಂಟ್.
ಇದಿಷ್ಟೇ ಅಲ್ಲ.! ಶ್ರೇಯಸ್ ಅಯ್ಯರ್ಗೆ ಕಳೆದೊಂದು ವರ್ಷದಿಂದ ಲಕ್ ಫ್ಯಾಕ್ಟರ್ ಸಖತ್ ವರ್ಕ್ ಆಗ್ತಾ ಇದೆ. 2024ರ ಐಪಿಎಲ್ ಸೇರಿದಂತೆ ಡೊಮೆಸ್ಟಿಕ್ ಕ್ರಿಕೆಟ್ನಲ್ಲಿ ಆಡಿದ ಫೈನಲ್ಗಳಲ್ಲಿ ಎಲ್ಲಾ ಟ್ರೋಫಿಗೆ ಮುತ್ತಿಟ್ಟಿದ್ದಾರೆ. 18 ವರ್ಷಗಳಿಂದ ಟ್ರೋಫಿ ಗೆಲುವಿನ ಕನಸು ಕಾಣ್ತಿರುವ ಈ ಉಭಯ ತಂಡಗಳು, ಇವತ್ತು ರಣಕಣದಲ್ಲಿ ಮುಖಾಮುಖಿಯಾಗ್ತಿವೆ. ಗೆಲುವಿಗಾಗಿ ನಾನಾ ರಣತಂತ್ರಗಳನ್ನ ರೂಪಿಸಿವೆ. ಯಾರ ಕನಸು ನನಸಾಗುತ್ತೆ ಜಸ್ಟ್ ವೇಯ್ಟ್ ಆ್ಯಂಡ್ ಸೀ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ