/newsfirstlive-kannada/media/post_attachments/wp-content/uploads/2025/04/KRUNAL_PANDYA_KOHLI-1.jpg)
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 6 ವಿಕೆಟ್ಗಳಿಂದ ಭರ್ಜರಿ ಗೆಲವು ಸಾಧಿಸುವ ಮೂಲಕ ಈ ಹಿಂದೆ ತವರಿನಲ್ಲಿ ಸೋತ ಸೇಡನ್ನು ತೀರಿಸಿಕೊಂಡಿದೆ. ಕಿಂಗ್ ಕೊಹ್ಲಿ ಹಾಗೂ ಕೃನಾಲ್ ಪಾಂಡ್ಯರ ಅಬ್ಬರದ ಬ್ಯಾಟಿಂಗ್ನಿಂದ ಆರ್ಸಿಬಿ ಜಯಭೇರಿ ಬಾರಿಸಿತು.
ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಡಬಲ್ ಹೆಡ್ಡರ್ನ 2ನೇ ಪಂದ್ಯದಲ್ಲಿ ಆರ್ಸಿಬಿ ಕ್ಯಾಪ್ಟನ್ ರಜತ್ ಪಾಟಿದಾರ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಇದರಿಂದ ತವರಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಬ್ಯಾಟಿಂಗ್ ಮಾಡಿತು. ಡೆಲ್ಲಿ ಪರವಾಗಿ ಓಪನರ್ ಆಗಿ ಕ್ರೀಸ್ಗೆ ಅಗಮಿಸಿದ ಫಾಫ್ ಡುಪ್ಲೆಸ್ಸಿಸ್ 22 ಹಾಗೂ ಅಭಿಷೇಕ್ ಪೊರೆಲ್ 28 ರನ್ಗೆ ವಿಕೆಟ್ ಒಪ್ಪಿಸಿದರು. ಕನ್ನಡಿಗ ಕರುಣ್ ನಾಯರ್ ಕೇವಲ 4 ರನ್ಗೆ ಯಶ್ ದಯಾಳ್ ಬೌಲಿಂಗ್ನಲ್ಲಿ ಔಟ್ ಆದರು.
ಡೆಲ್ಲಿ ತಂಡದ ಸ್ಟಾರ್ ಕೆ.ಎಲ್ ರಾಹುಲ್ ಕೆಲ ಹೊತ್ತು ಬೌಲರ್ಗಳನ್ನ ಕಾಡಿದರು. 39 ಬಾಲ್ಗಳನ್ನು ಎದುರಿಸಿದ್ದ ಕೆ.ಎಲ್ ರಾಹುಲ್ 3 ಬೌಂಡರಿ ಸಮೇತ 41 ರನ್ ಗಳಿಸಿ ಆಡುವಾಗ ಭುವನೇಶ್ವರ್ ಬೌಲಿಂಗ್ನಲ್ಲಿ ಕ್ಯಾಚ್ಗೆ ಬಲಿಯಾದರು. ಇನ್ನು ನಾಯಕ ಅಕ್ಷರ್ ಪಟೇಲ್ 15, ಅಶುತೋಷ್ ಶರ್ಮಾ 2, ವಿಪ್ರಜ್ ನಿಗಮ್ 12 ರನ್ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್ಗಳಲ್ಲಿ 8 ವಿಕೆಟ್ಗೆ 163 ರನ್ಗಳ ಗುರಿ ನೀಡಿತ್ತು.
ಈ ಗುರಿ ಹಿಂದೆ ಬಿದ್ದಿದ್ದ ಆರ್ಸಿಬಿ ಆರಂಭದಲ್ಲೇ ದೊಡ್ಡ ಆಘಾತಕ್ಕೆ ಒಳಗಾಗಿತ್ತು. ಏಕೆಂದರೆ ವಿರಾಟ್ ಕೊಹ್ಲಿ ಜೊತೆ ಆರಂಭಿಕರಾಗಿ ಕ್ರೀಸ್ಗೆ ಆಗಮಿಸಿದ್ದ ಜಾಕೋಬ್ ಬೆಥೆಲ್ ಕೇವಲ 12 ರನ್ಗೆ ವಿಕೆಟ್ ಕಳೆದುಕೊಂಡರು. ಇವರ ನಂತರ ಬಂದ ದೇವದತ್ ಪಡಿಕ್ಕಲ್ ಡಕೌಟ್ ಆಗಿ ಹೊರನಡೆದ್ರೆ, ಇವರ ಬೆನ್ನ ಹಿಂದೆಯೇ ನಾಯಕ ರಜತ್ ಪಾಟಿದಾರ್ ಕೂಡ 6 ರನ್ಗೆ ರನೌಟ್ ಆದರು. ಈ ಮೂರು ವಿಕೆಟ್ಗಳು ಬ್ಯಾಕ್ ಟು ಬ್ಯಾಕ್ ಹೋಗಿದ್ದರಿಂದ ಆರ್ಸಿಬಿ ಸಂಕಷ್ಟದಲ್ಲಿ ಸಿಲುಕಿತ್ತು.
ಇದನ್ನೂ ಓದಿ:RCBಗೆ ಆರಂಭಿಕ ಬ್ಯಾಟಿಂಗ್ ವಿಘ್ನ.. ಯಂಗ್ ಬ್ಯಾಟರ್ ಬೆನ್ನಲ್ಲೇ ಕನ್ನಡಿಗ, ಕ್ಯಾಪ್ಟನ್ ಬ್ಯಾಕ್ ಟು ಬ್ಯಾಕ್ ಔಟ್
ಆದರೆ ಈ ವೇಳೆ ಬೆಂಗಳೂರು ತಂಡಕ್ಕೆ ಆಸರೆಯಾಗಿದ್ದು ವಿರಾಟ್ ಕೊಹ್ಲಿ ಹಾಗೂ ಕೃನಾಲ್ ಪಾಂಡ್ಯ ಬ್ಯಾಟಿಂಗ್. ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶನ ಮಾಡಿದ ಕೃನಾಲ್ ಪಾಂಡ್ಯ, ಡೆಲ್ಲಿ ಬೌಲರ್ಗಳಿಗೆ ಮನ ಬಂದಂತೆ ಚಚ್ಚಿದರು. ಇದರಿಂದ ಕೇವಲ 38 ಎಸೆತಗಳಲ್ಲಿ 2 ಬೌಂಡರಿ ಹಾಗೂ 4 ಮುಗಿಲೆತ್ತರದ ಸಿಕ್ಸರ್ಗಳಿಂದ ಹಾಫ್ ಸೆಂಚುರಿ ಪೂರ್ಣಗೊಳಿಸಿದರು.
ತಂಡದಲ್ಲಿ ಬ್ಯಾಕ್ ಟು ಬ್ಯಾಕ್ ವಿಕೆಟ್ಗಳು ಉರುಳಿದ್ದರಿಂದ ತಾಳ್ಮೆಯ ಬ್ಯಾಟಿಂಗ್ ಮಾಡಿದ ಕಿಂಗ್ ಕೊಹ್ಲಿ ಮತ್ತೊಂದು ಅರ್ಧಶತಕ ಸಿಡಿಸಿದರು. 45 ಬಾಲ್ಗಳನ್ನು ಎದುರಿಸಿದ ಕೊಹ್ಲಿ ಸಿಕ್ಸರ್ ಬಾರಿಸದೇ 4 ಬೌಂಡರಿಗಳಿಂದ 50 ರನ್ಗಳನ್ನು ಬಾರಿಸಿದರು. ಕೊನೆಯಲ್ಲಿ ಆರ್ಸಿಬಿ ಗೆಲುವಿನ ಸನಿಹದಲ್ಲಿದ್ದಾಗ ಕೊಹ್ಲಿ, ಮಿಚೆಲ್ ಸ್ಟಾರ್ಕ್ಗೆ ಕ್ಯಾಚ್ ಕೊಟ್ಟು ಪೆವಿಲಿಯನ್ ಸೇರಿದರು.
ಆದರೆ ಇನ್ನೊಂದೆಡೆ ಸಿಡಿಲಬ್ಬರದ ಬ್ಯಾಟಿಂಗ್ ಮುಂದುವರೆಸಿದ್ದ ಕೃನಾಲ್ ಪಾಂಡ್ಯ ಡೆಲ್ಲಿ ಬೌಲರ್ಗಳಿಗೆ ಬೆವರಿಳಿಸಿದರು. ಆರಂಭದಿಂದಲೂ ಚುರುಕಿನ ಬ್ಯಾಟಿಂಗ್ ಮಾಡಿದ ಕೃನಾಲ್ ಪಾಂಡ್ಯ ಪಂದ್ಯದಲ್ಲಿ ಔಟ್ ಆಗದೇ ಕೇವಲ 47 ಎಸೆತಗಳಲ್ಲಿ 5 ಬೌಂಡರಿ, 4 ಬಿಗ್ ಸಿಕ್ಸರ್ನಿಂದ 73 ರನ್ ಸಿಡಿಸಿದರು. ಕೊನೆಯಲ್ಲಿ ಬ್ಯಾಟಿಂಗ್ಗೆ ಬಂದ ಟಿಮ್ ಡೇವಿಡ್ ಕೂಡ ಡೆಲ್ಲಿಗೆ ಸರಿಯಾದ ಪೆಟ್ಟು ಕೊಟ್ಟರು. ಕೇವಲ 5 ಬಾಲ್ನಲ್ಲಿ 19 ರನ್ ಬಾರಿಸಿದರು. ಇದರಿಂದ ಆರ್ಸಿಬಿ 18.3 ಓವರ್ನಲ್ಲಿ 4 ವಿಕೆಟ್ಗೆ 165 ರನ್ ಗಳಿಸಿ ಜಯಭೇರಿ ಬಾರಿಸಿತು.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಮೋಘ ಗೆಲುವು ಸಾಧಿಸುವ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಟಾಪ್ಗೆ ಹೋಗಿದೆ. ಈ ಟೂರ್ನಿಯಲ್ಲಿ ಇದುವರೆಗೆ 10 ಪಂದ್ಯಗಳನ್ನು ಆಡಿರುವ ಆರ್ಸಿಬಿ 7 ಪಂದ್ಯದಲ್ಲಿ ಭರ್ಜರಿಯಾಗಿ ಗೆದ್ದು 3 ರಲ್ಲಿ ಮಾತ್ರ ಸೋತಿದೆ. ಇದರಿಂದ ಒಟ್ಟು 14 ಅಂಕಗಳನ್ನು ಪಡೆಯುವ ಮೂಲಕ ಪಾಯಿಂಟ್ ಟೇಬಲ್ನಲ್ಲಿ ಅಗ್ರಸ್ಥಾನದಲ್ಲಿದೆ. 2ನೇ ಸ್ಥಾನದಲ್ಲಿ ಗುಜರಾತ್ ಇದ್ದು 3ನೇ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್ ತಂಡವಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ