/newsfirstlive-kannada/media/post_attachments/wp-content/uploads/2025/04/KOHLI_SALT_KRUNAL.jpg)
2025ರ ಐಪಿಎಲ್​ ಟೂರ್ನಿಯಲ್ಲಿ ತವರಿನಲ್ಲಿ ನಡೆದ ಮೊಟ್ಟ ಮೊದಲ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆದ್ದುಕೊಂಡಿದೆ. ಹ್ಯಾಟ್ರಿಕ್​ ಸೋಲಿನ ಬಳಿಕ ರಜತ್ ಪಡೆ ಗೆಲುವು ಪಡೆದಿದೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ್​ ರಾಯಲ್ಸ್ ತಂಡದ ಕ್ಯಾಪ್ಟನ್​ ರಿಯಾನ್ ಪರಾಗ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿದರು. ಹೀಗಾಗಿ ಆರ್​ಸಿಬಿ ಮೊದಲ ಬ್ಯಾಟಿಂಗ್ ಮಾಡಿತು. ಆರ್​ಸಿಬಿ ಪರ ಓಪನರ್ಸ್​​​ ವಿರಾಟ್​ ಕೊಹ್ಲಿ ಹಾಗೂ ಫಿಲಿಪ್ ಸಾಲ್ಟ್​ ಆರಂಭ ಚೆನ್ನಾಗಿ ಇರಲಿಲ್ಲ. ಸಾಲ್ಟ್​ 26 ರನ್​ಗೆ ಕ್ಯಾಚ್ ಕೊಟ್ಟು ಹೊರ ನಡೆದರು. ಇವರ ನಂತರ ಬ್ಯಾಟಿಂಗ್​ಗೆ ಬಂದ ಕನ್ನಡಿಗ ದೇವದತ್ ಪಡಿಕ್ಕಲ್ ಬ್ಯಾಟಿಂಗ್​ನಲ್ಲಿ ಅಬ್ಬರಿಸಿದರು.
/newsfirstlive-kannada/media/post_attachments/wp-content/uploads/2025/04/Philip_Salt-1-1.jpg)
ಓಪನರ್​​ ಆಗಿ ಕ್ರೀಸ್​ಗೆ ಬಂದಿದ್ದ ಕಿಂಗ್ ಕೊಹ್ಲಿ ರಾಜಸ್ಥಾನ್ ವಿರುದ್ಧ ಅರ್ಧಶತಕ ಬಾರಿಸಿದರು. 32 ಎಸೆತಗಳಲ್ಲಿ 8 ಬೌಂಡರಿಗಳಿಂದ 51 ರನ್​ ಗಳಿಸಿದರು. ಪಂದ್ಯದಲ್ಲಿ ಒಟ್ಟು 42 ಬಾಲ್​ ಆಡಿದ ಕೊಹ್ಲಿ, 8 ಬೌಂಡರಿ, 2 ಅಮೋಘ ಸಿಕ್ಸರ್​ನಿಂದ 70 ರನ್​ ಗಳಿಸಿದರು. 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಪಡಿಕ್ಕಲ್ ಕೂಡ 26 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಇದರಲ್ಲಿ 4 ಫೋರ್ ಹಾಗೂ 3 ಸಿಕ್ಸರ್ ಸೇರಿವೆ. ಕ್ಯಾಪ್ಟನ್​ ರಜತ್ ಪಾಟಿದಾರ್ 1, ಟಿಮ್​ ಡೇವಿಡ್​ 23, ವಿಕೆಟ್​ ಕೀಪರ್​ ಜಿತೇಶ್ 20 ರನ್​ಗಳಿಂದ ಆರ್​ಸಿಬಿ 5 ವಿಕೆಟ್​ಗೆ 206 ರನ್​ಗಳ ದೊಡ್ಡ ಗುರಿ ನೀಡಿತ್ತು.
ಈ ಗುರಿ ಹಿಂದೆ ಬಿದ್ದ ರಾಜಸ್ಥಾನ್ ರಾಯಲ್ಸ್​ ಆರಂಭದಲ್ಲೇ ಆಘಾತಕ್ಕೆ ಸಿಲುಕಿತು. 14 ವರ್ಷದ ಯುವ ಆಟಗಾತ ವೈಭವ್ ಸೂರ್ಯವಂಶಿ 2 ಸಿಕ್ಸ್​​​ನಿಂದ 16 ರನ್​ಗೆ ಕ್ಲೀನ್ ಬೋಲ್ಡ್​ ಆದರು. ಬಳಿಕ ನಿತೀಶ್​ ರಾಣಾ ಬ್ಯಾಟಿಂಗ್​ಗೆ ಬಂದರು. ರಾಣಾ 28 ರನ್​ ಗಳಿಸಿ ಆಡುವಾಗ ಕ್ಯಾಚ್​​ಗೆ ಬಲಿಯಾದ್ರು. ಇನ್ನೊಂದಡೆ ಬಿರುಸಿನ ಬ್ಯಾಟಿಂಗ್​ ಮಾಡುತ್ತಿದ್ದ ಯಶಸ್ವಿ ಜೈಸ್ವಾಲ್​ ಆರ್​ಸಿಬಿ ಬೌಲರ್​​ಗಳಿಗೆ ಬಿಸಿ ಮುಟ್ಟಿಸಿದರು. ಕೇವಲ 19 ಎಸೆತದಲ್ಲಿ 7 ಬೌಂಡರಿ, 3 ಸಿಕ್ಸರ್​ನಿಂದ 49 ರನ್​ಗೆ ಔಟ್​ ಆಗಿ ಒಂದೇ ಒಂದು ರನ್​​ನಿಂದ ಅರ್ಧಶತಕ ಮಿಸ್ ಮಾಡಿಕೊಂಡರು. ನಾಯಕ ಪರಾಗ್ ಕೂಡ 22 ರನ್​ಗೆ ಆಟ ನಿಲ್ಲಿಸಿದ್ರು.
/newsfirstlive-kannada/media/post_attachments/wp-content/uploads/2025/04/Jaiswal.jpg)
ಶಿಮ್ರಾನ್ ಹೆಟ್ಮೆಯರ್ 11, ಶುಭಂ ದುಬೆ 12 ರನ್​ಗೆ ಬ್ಯಾಟಿಂಗ್ ಮುಗಿಸಿ ಪೆವಿಲಿಯನ್​ಗೆ ನಡೆದರು. ಧೃವ್ ಜುರೆಲ್ ಕೊನೆಯಲ್ಲಿ ಪಂದ್ಯವನ್ನು ಗೆಲ್ಲಿಸುವ ಪಣ ತೊಟ್ಟಿದ್ದರು. ಆದರೆ 3 ಫೋರ್, 3 ಸಿಕ್ಸರ್​​ನಿಂದ 47 ರನ್​ ಗಳಿಸಿ ಆಡುವಾಗ ಕೀಪರ್ ಕ್ಯಾಚ್​ ಆದರು. ಇದು ಆರ್​ಸಿಬಿಗೆ ದೊಡ್ಡ ತಿರುವು ತಂದುಕೊಟ್ಟಿತು. ಹೀಗಾಗಿ ಪಂದ್ಯದಲ್ಲಿ 11 ರನ್​ಗಳಿಂದ ಆರ್​ಸಿಬಿ ರೋಚಕ ಗೆಲುವನ್ನು ಪಡೆಯಿತು. ಪಂದ್ಯವಂತೂ ಕೊನೆವರೆಗೂ ಕುತೂಹಲವಾಗಿತ್ತು. ಇನ್ನು ಆರ್​ಸಿಬಿ ಪರ ಜೋಶ್ ಹ್ಯಾಜಲ್ವುಡ್ 4 ವಿಕೆಟ್​ ಉರುಳಿಸಿ ಸಂಭ್ರಮಿಸಿದರು.
ಚಿನ್ನಸ್ವಾಮಿಯಲ್ಲಿ ಆರ್​ಸಿಬಿ ಈ ಮೊದಲು ಮೂರು ಪಂದ್ಯಗಳನ್ನು ಸತತವಾಗಿ ಸೋತಿತ್ತು. ಮೊದಲ ಪಂದ್ಯ ಗುಜರಾತ್ ವಿರುದ್ಧ ಸೋಲು ಕಂಡಿತ್ತು. ಇದಾದ ಮೇಲೆ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಆರ್​ಸಿಬಿ ಭಾರೀ ಮುಖಭಂಗಕ್ಕೆ ಒಳಗಾಗಿತ್ತು. ಇನ್ನು ತವರಿನಲ್ಲಿ 3ನೇ ಪಂದ್ಯ ಪಂಜಾಬ್​ ಕಿಂಗ್ಸ್​ ಜೊತೆ ಮಳೆಯ ನಂತರ ನಡೆದ ಮ್ಯಾಚ್​ನಲ್ಲಿ ಸೋಲು ಕಂಡಿತ್ತು. ಇದೆಲ್ಲಾ ಆದ ಮೇಲೆ ಕೊನೆಗೆ ರಾಜಸ್ಥಾನ್​ ವಿರುದ್ಧ ಅಮೋಘವಾದ ಮೊದಲ ಗೆಲುವು ಪಡೆದು ಆರ್​ಸಿಬಿ ಸಂಭ್ರಮಿಸಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us