/newsfirstlive-kannada/media/post_attachments/wp-content/uploads/2023/08/yogi.jpg)
ಲಖನೌ: ಉತ್ತರಪ್ರದೇಶ ಅಂದ್ರೆ ಅದು ಇಡೀ ದೇಶದ ರಾಜಕೀಯವನ್ನೇ ನಿರ್ಧಾರ ಮಾಡುವ ಪಡಸಾಲೆ. ಇಲ್ಲಿ ಗೆದ್ದು ಬೀಗಿದವನು ದೆಹಲಿಯ ಗದ್ದುಗೆ ಹಿಡಿಯುವ ಹಾದಿಯನ್ನು ಸುಗಮಗೊಳಿಸಿಕೊಳ್ಳುತ್ತಾನೆ.. ಕಳೆದ ಹತ್ತು ವರ್ಷಗಳಿಂದ ಉತ್ತರಪ್ರದೇಶದಲ್ಲಿ ಕೇಸರಿ ಪತಾಕೆ ನಿರಂತರವಾಗಿ ಪಟಪಟಿಸುತ್ತಲೇ ಇತ್ತು. ಆದ್ರೆ ಒಂದು ದಶಕದ ನಿರಂತರ ಗೆಲುವಿನ ಓಟ.. ನರೇಂದ್ರ ಮೋದಿ ಮತ್ತು ಯೋಗಿ ಆದಿತ್ಯನಾಥ ಎಂಬ ಗೆಲ್ಲುವ ಕುದುರೆಗಳು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ತಮ್ಮದೇ ರೇಸ್​ ಟ್ರ್ಯಾಕ್​ನಲ್ಲಿ ಮುಗ್ಗರಿಸಿದವು. ರಾಮಮಂದಿರ ನಿರ್ಮಾಣದಂತಹ ಭಾವನಾತ್ಮಕ ವಿಷಯ.
ಮಾಫಿಯಾವನ್ನು ಮಣ್ಣಲ್ಲಿ ಮಣ್ಣು ಮಾಡುತ್ತೇನೆ ಎಂಬ ಶಪಥವನ್ನು ಪೂರ್ಣಗೊಳಿಸಿದಂತ ಗಟ್ಟಿ ನಿರ್ಧಾರ. ಅಯೋಧ್ಯೆಯನ್ನು ಸುಂದರ ನಗರಿಯನ್ನಾಗಿ ನವನಿರ್ಮಾಣ ಮಾಡಿದ ಕೀರ್ತಿ ಇದ್ಯಾವುದು ಲೋಕಸಭಾ ಚುನಾವಣೆಯಲ್ಲಿ ಈ ಎರಡು ಕೇಸರಿ ನಕ್ಷತ್ರಗಳನ್ನು ಕೈ ಹಿಡಿಯಲಿಲ್ಲ. ಕಳೆದ ಬಾರಿ 62 ಸೀಟ್ ಗೆದ್ದಿದ್ದ ಬಿಜೆಪಿ ಈ ಬಾರಿ ಹೆಚ್ಚು ಕಡಿಮೆ ಅರ್ಧದಷ್ಟು ಸೀಟ್​ಗಳನ್ನು ಉತ್ತರ ಪ್ರದೇಶದಲ್ಲಿ ಕಳೆದುಕೊಂಡಿತು. ಈ ಎಲ್ಲಾ ಬೆಳವಣಿಗಳು ಈಗ ಉತ್ತರಪ್ರದೇಶದ ಕೇಸರಿ ಪಾಳಯದಲ್ಲಿ ಬೇಗುದಿಯನ್ನು ಸೃಷ್ಟಿಸಿದೆ. ಅಹಂಕಾರ, ಏಕಚಕ್ರಾಧಿಪತಿ ಮನಸ್ಥಿತಿ ಬಿಜೆಪಿಯನ್ನು ಉತ್ತರಪ್ರದೇಶದಲ್ಲಿ ಈ ಸ್ಥಿತಿಗೆ ತಂದಿವೆ ಅನ್ನೋ ಮಾತುಗಳು ಕಮಲಪಡೆಯಲ್ಲಿಯೇ ಶುರುವಾಗಿವೆ. ಬಂಡಾಯದ ಬೇಗುದಿ, ಯೋಗಿ ಆದಿತ್ಯನಾಥ ವಿರುದ್ಧ ಅಸಮಾಧಾನ ಸ್ವತಃ ಯುಪಿ ಬಿಜೆಪಿಯಲ್ಲಿಯೇ ಮೆಲ್ಲಗೆ ಮೇಲೇಳುತ್ತಿದೆ.
ಅತಿಯಾದ ಆತ್ಮವಿಶ್ವಾಸವೇ ನಮಗೆ ಮುಳುವಾಯ್ತು: ಯೋಗಿ ವಿರುದ್ಧ ಗುಡುಗಿದ ಕೇಶವ ಮೌರ್ಯ
/newsfirstlive-kannada/media/post_attachments/wp-content/uploads/2024/07/BeFunky-design-1.jpg)
ಸದ್ಯ ಯುಪಿಯ ಬಿಜೆಪಿಯಲ್ಲೊಂದು ಬಂಡಾಯದ ಬಾವುಟ ಹಾರಾಡುವ ಸಮಯ ಶುರುವಾಗಿದೆ. ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಡಿಸಿಎಂ ಕೇಶವ ಪ್ರಸಾದ್ ಮೌರ್ಯ ಹಾಗೂ ಉತ್ತರಪ್ರದೇಶದ ಬಿಜೆಪಿ ರಾಜ್ಯಾಧ್ಯಕ್ಷ ಭೂಪೇಂದ್ರ ಸಿಂಗ್ ಚೌದರಿ ಮುನಿಸಿಕೊಂಡಿದ್ದಾರೆ. ಬಿಜೆಪಿಯಲ್ಲಿ ಸಂಘಟನೆ ಮೊದಲು ಎಂಬ ತತ್ವ ಮೊದಲಿನಿಂದಲೂ ಚಾಲ್ತಿಯಲ್ಲಿದೆ. ಆದ್ರೆ ಇತ್ತೀಚೆಗೆ ಅದು ಮರೆಯಾಗುತ್ತಿದೆ. ಸಂಘಟನೆಯ ಬದಲು ಆತಿಯಾದ ಆತ್ಮವಿಶ್ವಾಸಗಳು ಮುನ್ನೆಲೆಗೆ ಬರುತ್ತಿದ್ದು, ಇದು ಬಿಜೆಪಿಗೆ ಮಗ್ಗಲು ಮುಳ್ಳಾಗಿ ಕಾಡುತ್ತಿದೆ. ಎಂದು ಇತ್ತೀಚೆಗೆ ನಡೆದ ಪಕ್ಷದ ಸಭೆಯಲ್ಲಿಯೇ ಹೇಳಿದ್ದರು. ಇದು ಬಿಜೆಪಿಯಲ್ಲಿ ಭುಗಿಲೆದ್ದಿರುವ ಬೇಗುದಿಗೆ ಹಿಡಿದ ಕೈಗನ್ನಡಿಯಾಗಿತ್ತು. ಇದೇ ವಿಚಾರವಾಗಿಯೇ ಡಿಸಿಎಂ ಕೇಶವ ಪ್ರಸಾದ್ ಶರ್ಮಾ ಹಾಗೂ ಭೂಪೇಂದ್ರ ಸಿಂಗ್ ಚೌದರಿ ದೆಹಲಿಗೆ ತೆರಳಿ ಪಿಎಂ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಬಂದಿದ್ದಾರೆ. ಅಷ್ಟು ಮಾತ್ರವಲ್ಲ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರನ್ನು ಡಿಸಿಎಂ ಕೇಶವ ಪ್ರಸಾದ್ ಮೌರ್ಯ ಹಾಗೂ ಭೂಪೇಂದ್ರ ಸಿಂಗ್ ಚೌದರಿ ಪ್ರತ್ಯೇಕವಾಗಿ ಭೇಟಿ ಮಾಡಿದ್ದರು.
ಇದನ್ನೂ ಓದಿ: ಕಣ್ತಪ್ಪಿಸಿ ಓಡಾಡಲು ಶಾಸಕ ಬಸನಗೌಡ ದದ್ದಲ್ ಹರಸಾಹಸ; ಸಿಎಂ ಜೊತೆ ಮಹತ್ವದ ಚರ್ಚೆ; ಹೇಳಿದ್ದೇನು?
/newsfirstlive-kannada/media/post_attachments/wp-content/uploads/2024/07/BeFunky-design-2.jpg)
ರಾಜ್ಯಪಾಲರನ್ನು ಭೇಟಿಯಾಗಿದ್ದೇಕೆ ಸಿಎಂ ಯೋಗಿ ಆದಿತ್ಯನಾಥ
ಉತ್ತರಪ್ರದೇಶದ ಬಿಜೆಪಿಯಲ್ಲಿ ಕಳೆದ ಹತ್ತು ವರ್ಷಗಳಿಂದ ಯಾವುದೇ ಭಿನ್ನಾಭಿಪ್ರಾಯಗಳು ಕಂಡು ಬಂದಿರಲಿಲ್ಲ. ಯುಪಿಯ ರಾಜಕೀಯ ಇತಿಹಾಸದಲ್ಲಿ ಮೊದಲ ಬಾರಿಗೆ ಯೋಗಿ ಆದಿತ್ಯನಾಥ್ ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಏರಿದ್ದರು. 2017 ರಲ್ಲಿ ಭಾರೀ ಬಹುಮತದೊಂದಿಗೆ ಅಧಿಕಾರಕ್ಕೆ ಏರಿದ ಬಿಜೆಪಿ ಯೋಗಿ ಆದಿತ್ಯನಾಥರನ್ನು ಸಿಎಂ ಸ್ಥಾನಕ್ಕೆ ತಂದು ಕೂರಿಸಿತು. ಬಳಿಕ 2022ರಲ್ಲಿ ನಡೆದ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿತ್ತು. ಅಲ್ಲಿಯವರೆಗೂ ಎಲ್ಲಾ ಸರಿಯಿದ್ದ ಕಮಲಪಾಳಯದ ಮನೆಯ ಗೋಡೆಯಲ್ಲಿ ಲೋಕಸಬಾ ಚುನಾವಣೆಯ ಹೀನಾಯ ಸೋಲಿನ ಬಳಿಕ ಅಲ್ಲಲ್ಲಿ ಬಿರುಕು ಬಿಡಲು ಶುರುವಾದವು. ಡಿಸಿಎಂ ಕೇಶವ ಪ್ರಸಾದ್ ಶರ್ಮಾ ಸಿಎಂ ಯೋಗಿ ಆದಿತ್ಯನಾಥ ನಡುವಿನ ಶೀತಲ ಸಮರ ದೆಹಲಿಯ ಹೈಕಮಾಂಡ್ ಬಾಗಿಲವರೆಗೂ ತಲುಪಿತು. ಇದರ ಮಧ್ಯೆಯೇ ಯೋಗಿ ಆದಿತ್ಯನಾಥ್ ಯುಪಿಯ ರಾಜ್ಯಪಾಲರಾದ ಆನಂದಿ ಬೆನ್ ಪಟೇಲರನ್ನು ಭೇಟಿಯಾಗಿದ್ದು ಮತ್ತಷ್ಟು ಕುತೂಹಲವನ್ನು ಸೃಷ್ಟಿಸಿದೆ. ಅವರ ಭೇಟಿಯ ವೇಳೆ ನಡೆದ ಚರ್ಚೆಗಳ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಆಚೆ ಬಂದಿಲ್ಲವಾದ್ರೂ, ಕುತೂಹಲವಂತೂ ಇನ್ನೂ ಜಾರಿಯಲ್ಲಿದೆ.
ಸಂಘಟನೆಯೇ ಮೊದಲು, ನಾನು ಮೊದಲು ಕಾರ್ಯಕರ್ತ ಆ ನಂತರ ಡಿಸಿಎಂ ಎಂಬ ಕೇಶವ ಮೌರ್ಯ ಅವರ ಹೇಳಿಕೆಯಿಂದಾಗಿ ಈಗ ಉತ್ತಪ್ರದೇಶದ ಬಿಜೆಪಿ ಪಾಳಯದಲ್ಲಿ ಒಂದು ದೊಡ್ಡ ಸಂಚಲನ ಸೃಷ್ಟಿಸಿದೆ. ಅದರಲ್ಲೂ ಚೌದರಿ ಭೂಪೇಂದ್ರ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದು ಮತ್ತಷ್ಟು ಗೊಂದಲಗಳನ್ನು ಸೃಷ್ಟಿಸಿದೆ. ಈಗಾಗಲೇ ಭೂತ್ ಮಟ್ಟದಲ್ಲಿ ಗಟ್ಟಿಯಿದ್ದ ಬಿಜೆಪಿ ಪಡೆ ಲೋಕಸಭಾ ಚುನಾವಣೆಯಲ್ಲಿ ಕಸುವು ಕಳೆದುಕೊಂಡು ಹೀನಾಯ ಸೋಲು ಅನುಭವಿಸಿತ್ತು..ಸದ್ಯದಲ್ಲಿಯೇ ಉತ್ತರಪ್ರದೇಶದಲ್ಲಿ ಒಟ್ಟು 10 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಇದೇ ವೇಳೆ ಬಿಜೆಪಿ ಪಾಳಯದಲ್ಲಿ ಸಿಎಂ ಯೋಗಿ ಆದಿತ್ಯನಾಥ ನಾಯಕತ್ವದ ಬಗ್ಗೆ ಪ್ರಶ್ನೆಗಳು ಏಳುತ್ತಿವೆ. ಪಕ್ಷವನ್ನು ಮರಳಿ ಸಂಘಟನಾಕಾರರ ಪಕ್ಷವನ್ನಾಗಿ ಮಾಡಬೇಕು. ಸಂಘಟನೆಯಿಂದ ಪಕ್ಷ ಬೆಳೆಯುತ್ತದೆಯೇ ಹೊರತು ಸರ್ಕಾರ ನಡೆಸುವುದರಿಂದ ಅಲ್ಲ ಅನ್ನೋ ಮಾತುಗಳು ಕೇಳಿ ಬರುತ್ತವೆ. ಹೀಗಾಗಿ ಮುಂಬರುವ ಉಪಚುನಾವಣೆಯಲ್ಲಿ ಬಿಜೆಪಿ ಬೌನ್ಸ್ ಬ್ಯಾಕ್ ಮಾಡುತ್ತದೆಯೋ ಇಲ್ಲ ಬಂಡಾಯದ ಬೇಗುದಿ ಮತ್ತೊಂದು ಬಾರಿ ಬಿಜೆಪಿಯನ್ನು ನುಂಗಿ ಹಾಕುತ್ತದೆಯೋ ಅನ್ನೋ ಕುತೂಹಲ ಸೃಷ್ಟಿಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us