/newsfirstlive-kannada/media/post_attachments/wp-content/uploads/2024/10/Reliance-Industries-ltd-1.jpg)
ಮುಂಬೈ: ಜುಲೈನಿಂದ ಸೆಪ್ಟೆಂಬರ್ ಅವಧಿಯ ಎರಡನೇ ತ್ರೈಮಾಸಿಕದ ಹಣಕಾಸು ಫಲಿತಾಂಶವನ್ನು ರಿಲಯನ್ಸ್ ಇಂಡಸ್ಟ್ರೀಸ್ ಘೋಷಣೆ ಮಾಡಿದೆ. ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ ಈ ಬಾರಿ ನಿವ್ವಳ ಲಾಭವು ಶೇಕಡಾ 9.4ರಷ್ಟು ಏರಿಕೆಯಾಗಿ 16,563 ಕೋಟಿ ರೂಪಾಯಿ ತಲುಪಿದೆ. ಭಾರತದ ಅತ್ಯಂತ ಮೌಲ್ಯಯುತ ಕಂಪನಿ ಎನಿಸಿಕೊಂಡಿರುವ ರಿಲಯನ್ಸ್ ಇಂಡಸ್ಟ್ರೀಸ್, ಪ್ರಸಕ್ತ ತ್ರೈಮಾಸಿಕದಲ್ಲಿ ಕಾರ್ಯಾಚರಣೆ ಮೂಲಕ ಗಳಿಸಿರುವ ಆದಾಯವು 2.35 ಲಕ್ಷ ಕೋಟಿಗಳಾಗಿದ್ದು, ಕಳೆದ ತ್ರೈಮಾಸಿಕದಲ್ಲಿ ಆದಾಯವು 2.36 ಲಕ್ಷ ಕೋಟಿ ರೂಪಾಯಿಗಳಿತ್ತು.
ಜಿಯೋ ಪ್ಲಾಟ್ ಫಾರ್ಮ್
ರಿಲಯನ್ಸ್ ಕಂಪನಿಯ ಡಿಜಿಟಲ್ ಸೇವೆ ವ್ಯವಹಾರದ ಅಂಗವಾದ ಜಿಯೋ ಪ್ಲಾಟ್ ಫಾರ್ಮ್ಸ್ ಜುಲೈನಿಂದ ಸೆಪ್ಟೆಂಬರ್ ಕೊನೆ ತನಕದ ತ್ರೈಮಾಸಿಕದಲ್ಲಿ ದಾಖಲೆಯ 6,536 ಕೋಟಿ ರೂಪಾಯಿ ಲಾಭ ಗಳಿಸಿದೆ. ವರ್ಷದಿಂದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ 23.2ರಷ್ಟು ಬೆಳವಣಿಗೆ ಕಂಡಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಜಿಯೋ 5,058 ಕೋಟಿ ರೂಪಾಯಿ ವರದಿ ಮಾಡಿತ್ತು. ಕಂಪನಿಯ ಆದಾಯವು ವರ್ಷದಿಂದ ವರ್ಷಕ್ಕೆ ಶೇ 14.5ರಷ್ಟು ಏರಿಕೆ ಕಂಡು, 28,338 ಕೋಟಿ ರೂಪಾಯಿ ತಲುಪಿದೆ.
ಇದನ್ನೂ ಓದಿ: ಅಂಬಾನಿ ಫ್ಯಾಮಿಲಿ ಒಟ್ಟು ಆಸ್ತಿ ₹25750000000000; ಈ 3 ಫ್ಯಾಮಿಲಿಗಳೇ ಭಾರತದ ಟಾಪ್ ಶ್ರೀಮಂತರು!
ಡಿಜಿಟಲ್ ಸೇವೆಯಲ್ಲಿನ ಬೆಳವಣಿಗೆಗೆ ಮುಖ್ಯ ಕಾರಣ ನೋಡುವುದಾದರೆ ಪ್ರತಿ ಬಳಕೆದಾರರಿಂದ ಬರುವ ಸರಾಸರಿ ಆದಾಯದಲ್ಲಿನ ಹೆಚ್ಚಳ ಹಾಗೂ ಗ್ರಾಹಕರು ತೊಡಗಿಕೊಳ್ಳುವ ಪ್ರಮಾಣದಲ್ಲಿನ ಸುಧಾರಣೆಯಿಂದ ನಮ್ಮ ಸೇವೆಗಳಲ್ಲಿ ಪ್ರಬಲವಾದ ಮೌಲ್ಯ ಸೇರ್ಪಡೆಯಾಗಿದೆ ಎಂದು ಕಂಪನಿಯ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಮುಕೇಶ್ ಅಂಬಾನಿ ಹೇಳಿದ್ದಾರೆ.
ಜಿಯೋದ ತಿಂಗಳ ಎಆರ್‌ಪಿಯು (ಪ್ರತಿ ಬಳಕೆದಾರರಿಂದ ಬರುವಂಥ ಸರಾಸರಿ ಆದಾಯ) ವರ್ಷದಿಂದ ವರ್ಷಕ್ಕೆ ಶೇಕಡಾ 7.4ರಷ್ಟು ಏರಿಕೆಯಾಗಿ, 195.1 ರೂಪಾಯಿ ತಲುಪಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಸರಾಸರಿ ಆದಾಯವು 181.70 ರೂಪಾಯಿ ಇತ್ತು. ಇನ್ನು ಮುಂದಿನ ಎರಡು- ಮೂರು ತ್ರೈಮಾಸಿಕದಲ್ಲಿ ದರ ಏರಿಕೆಯ ಪೂರ್ಣ ಪ್ರಮಾಣದ ಪ್ರಭಾವ ತಿಳಿಯಲಿದೆ ಎಂದು ಕಂಪನಿ ಹೇಳಿದೆ. 5ಜಿ ಸೇವೆಯ ವಿಚಾರದಲ್ಲಿ ಮಾರುಕಟ್ಟೆಯಲ್ಲಿ ಜಿಯೋ ನಾಯಕತ್ವದ ಸ್ಥಾನದಲ್ಲಿದೆ. ಒಟ್ಟಾರೆ ಜಿಯೋ 5ಜಿ ಬಳಕೆದಾರರ ಸಂಖ್ಯೆ 14.8 ಕೋಟಿ ತಲುಪಿದೆ. ರಿಲಯನ್ಸ್ ಜಿಯೋದ ಒಟ್ಟಾರೆ ವೈರ್ ಲೆಸ್ ಡೇಟಾ ದಟ್ಟಣೆಯ ಶೇಕಡಾ 34ರಷ್ಟು ಈ ಸೆಗ್ಮೆಂಟ್ ನಿಂದ ಬಂದಿದೆ. ಇನ್ನು ಸದ್ಯದಲ್ಲೇ ಜಿಯೋ ಕ್ಲೌಡ್ ಬೀಟಾ ಜಿಯೋದಿಂದ ಆರಂಭವಾಗಲಿದೆ.
ಜಿಯೋದ ವ್ಯಾಪಕ ಶ್ರೇಣಿ ಕೊಡುಗೆಗಳು ಭಾರತದ ಪ್ರತಿ ಹಳ್ಳಿ, ಪಟ್ಟಣ ಮತ್ತು ನಗರಗಳನ್ನು ಡಿಜಿಟಲ್ ಆಗಿ ಸಶಕ್ತಗೊಳಿಸಲು, ಹಾಗೆಯೇ ದೇಶದ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳನ್ನು ಸಹ ಸಕ್ರಿಯಗೊಳಿಸುತ್ತದೆ. ಡಿಜಿಟಲ್ ಸೇವೆಗಳ ವ್ಯವಹಾರವು ರಾಷ್ಟ್ರೀಯ ಮಟ್ಟದಲ್ಲಿ ನವೀನ ಡೀಪ್-ಟೆಕ್ ಸಲ್ಯೂಷನ್ ಗಳ ಮೇಲೆ ಕೇಂದ್ರೀಕರಿಸುವುದನ್ನು ಮುಂದುವರಿಸಿದೆ ಮತ್ತು ಎಲ್ಲ ಭಾರತೀಯರಿಗೆ ಕೃತಕ ಬುದ್ಧಿಮತ್ತೆಯ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಪ್ರಯೋಜನಗಳನ್ನು ತಲುಪಿಸುವ ಹಾದಿಯಲ್ಲಿದೆ ಎಂದು ಮುಕೇಶ್ ಅಂಬಾನಿ ಹೇಳಿದರು.
ಜಿಯೋ ಪ್ಲಾಟ್‌ಫಾರ್ಮ್‌ಗಳ ಅಧ್ಯಕ್ಷ ಕಿರಣ್ ಥಾಮಸ್ ಮಾತನಾಡಿ, ಕಂಪನಿಯ ಗೃಹ ಬಳಕೆಯ ಬ್ರಾಡ್‌ಬ್ಯಾಂಡ್ ವಿಭಾಗವು ಗಮನಾರ್ಹ ಬೆಳವಣಿಗೆ ದರವನ್ನು ಕಂಡಿದೆ. ಕಳೆದ ನಾಲ್ಕು ತ್ರೈಮಾಸಿಕಗಳಲ್ಲಿ ಮೂರು ಪಟ್ಟು ಹೆಚ್ಚಾಗಿದೆ ಎಂದರು. ಪ್ರತಿ ತಿಂಗಳು ತಮ್ಮ ಬ್ರಾಡ್‌ಬ್ಯಾಂಡ್ ಸೇವೆಗೆ 1 ಮಿಲಿಯನ್, ಅಂದರೆ ಹತ್ತು ಲಕ್ಷ ಹೊಸ ಮನೆಗಳನ್ನು ತಲುಪುವುದು ಮಹತ್ವಾಕಾಂಕ್ಷೆಯ ಗುರಿಯಾಗಿದೆ ಎಂದು ಅವರು ಒತ್ತಿ ಹೇಳಿದರು.
ರೀಟೇಲ್ ವೆಂಚರ್ಸ್
ರಿಲಯನ್ಸ್ ರೀಟೇಲ್ ವೆಂಚರ್ಸ್ ತೆರಿಗೆ ನಂತರದ ಲಾಭವು 2,935 ಕೋಟಿ ರೂಪಾಯಿ ಬಂದಿದೆ. ಕಳೆದ ತ್ರೈಮಾಸಿಕಕ್ಕೆ ಹೋಲಿಕೆ ಮಾಡಿದರೆ ಇದು ಶೇ 20ರಷ್ಟಕ್ಕೆ ಹತ್ತಿರವಾಗುತ್ತದೆ. ಈ ರೀಟೇಲ್ ಘಟಕದ ಕಾರ್ಯಾಚರಣೆ ಮೂಲಕದ ಆದಾಯವು 66,502 ಕೋಟಿ ರೂಪಾಯಿ ಬಂದಿದೆ. ಕಳೆದ ತ್ರೈಮಾಸಿಕದಲ್ಲಿ ಇದು 66,260 ಕೋಟಿ ರೂಪಾಯಿ ಬಂದಿತ್ತು. ರೀಟೇಲ್ ಸೆಗ್ಮೆಂಟ್ ತನ್ನ ಗ್ರಾಹಕರ ನೆಲೆಯನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿಕೊಂಡಿದೆ. ಆನ್ ಲೈನ್ ಅಥವಾ ಆಫ್ ಲೈನ್ ಹೀಗೆ ಎಲ್ಲ ಚಾನೆಲ್ ಗಳಲ್ಲೂ ಪರಿಣಾಮಕಾರಿಯಾಗಿ ಗ್ರಾಹಕರನ್ನು ತಲುಪಿ, ಅವರ ಅಗತ್ಯಗಳ ಎಲ್ಲ ಮಾದರಿ ಉತ್ಪನ್ನಗಳನ್ನು ತಲುಪಿಸಲಾಗುತ್ತಿದೆ ಎಂದು ಅಂಬಾನಿ ತಿಳಿಸಿದ್ದಾರೆ.
ತೈಲ ಹಾಗೂ ಅನಿಲ
ರಿಲಯನ್ಸ್ ಇಂಡಸ್ಟ್ರೀಸ್ ತೈಲ ಹಾಗೂ ಅನಿಲ ವ್ಯವಹಾರದಲ್ಲಿ EBITDA ವರ್ಷದಿಂದ ವರ್ಷಕ್ಕೆ ಶೇಕಡಾ 11ರಷ್ಟು ಹೆಚ್ಚಳವಾಗಿ 5290 ಕೋಟಿ ರೂಪಾಯಿ ಮುಟ್ಟಿದೆ. ಕಳೆದ ವರ್ಷ EBITDA 4760 ಕೋಟಿ ರೂಪಾಯಿ ಇತ್ತು. ಇನ್ನೂ ಮುಖ್ಯ ಸಂಗತಿ ಏನೆಂದರೆ, ವರ್ಷದಿಂದ ವರ್ಷಕ್ಕೆ EBITDA ಮಾರ್ಜಿನ್ ಶೇ.72ರಿಂದ ಶೇ 85ಕ್ಕೆ ತಲುಪಿದೆ.
Mukesh D. Ambani, Chairman and Managing Director, Reliance Industries Limited on #RILResults Q2 FY2024-25 pic.twitter.com/RJMQaOBMCj
— Reliance Industries Limited (@RIL_Updates)
Mukesh D. Ambani, Chairman and Managing Director, Reliance Industries Limited on #RILResults Q2 FY2024-25 pic.twitter.com/RJMQaOBMCj
— Reliance Industries Limited (@RIL_Updates) October 14, 2024
">October 14, 2024
ಇದೇ ವೇಳೆ, ಕಂಪನಿಯ ನ್ಯೂ ಎನರ್ಜಿ ಗಿಗಾ-ಫ್ಯಾಕ್ಟರಿಗಳ ಪ್ರಗತಿಯ ಬಗ್ಗೆ ಮುಕೇಶ್ ಅಂಬಾನಿ ಗಮನ ಸೆಳೆದರು. ನಮ್ಮ ಮೊದಲ ನ್ಯೂ ಎನರ್ಜಿ ಗಿಗಾ-ಕಾರ್ಖಾನೆಗಳು ಈ ವರ್ಷದ ಅಂತ್ಯದ ವೇಳೆಗೆ ಸೌರ ಪಿವಿ ಮಾಡ್ಯೂಲ್‌ಗಳ ಉತ್ಪಾದನೆಯನ್ನು ಪ್ರಾರಂಭಿಸುವ ಹಾದಿಯಲ್ಲಿದೆ. ನವೀಕರಿಸಬಹುದಾದ ಸಮಗ್ರ ಶ್ರೇಣಿಯೊಂದಿಗೆ ಸೌರಶಕ್ತಿ, ಇಂಧನ ಶೇಖರಣಾ ವ್ಯವಸ್ಥೆಗಳು, ಹಸಿರು ಜಲಜನಕ, ಜೈವಿಕ ಶಕ್ತಿ ಮತ್ತು ಪವನ ಸೇರಿದಂತೆ ಸೆಲ್ಯೂಷನ್‌ಗಳು, ನ್ಯೂ ಎನರ್ಜಿ ವ್ಯವಹಾರವು ಜಾಗತಿಕ ಸ್ವಚ್ಛ ಇಂಧನ ಪರಿವರ್ತನೆಗೆ ಗಮನಾರ್ಹ ಕೊಡುಗೆ ನೀಡಲು ಸಿದ್ಧವಾಗಿದೆ, ಎಂದು ಅವರು ಹೇಳಿದರು.
ಒಟ್ಟಾರೆ ಹಣಕಾಸು ಫಲಿತಾಂಶದ ಬಗ್ಗೆ ತೃಪ್ತಿಯನ್ನು ವ್ಯಕ್ತಪಡಿಸಿದ ಮುಕೇಶ್ ಅಂಬಾನಿ, ರಿಲಯನ್ಸ್ ಇಂಡಸ್ಟ್ರೀಸ್‌ನ ವೈವಿಧ್ಯಮಯವಾದ ವ್ಯವಹಾರಗಳ ಪೋರ್ಟ್ ಫೋಲಿಯೋಗೆ ಇರುವಂಥ ಸಾಮರ್ಥ್ಯದ ಬಗ್ಗೆ ಒತ್ತಿ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ