/newsfirstlive-kannada/media/post_attachments/wp-content/uploads/2024/06/dboss25.jpg)
ದುಡ್ಡಿನ ವಿಚಾರದಲ್ಲಿ ದರ್ಶನ್ ಸ್ವಲ್ಪ ಕಟ್ಟು ನಿಟ್ಟು. ಅವರಿಗೆ ಲೆಕ್ಕ ಪಕ್ಕಾ ಇರ್ಬೇಕು. ಇಲ್ಲದಿದ್ರೆ, ರಾಂಗ್ ಆಗಿಬಿಡುತ್ತಾರೆ. ಆದ್ರೆ, ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಮಾಡಿರೋ 70 ಲಕ್ಷದ ವ್ಯವಹಾರ ಸದ್ಯ ಟಾಕ್ ಆಫ್ ದಿ ಟೌನ್ ಆಗ್ಬಿಟ್ಟಿದೆ. ದರ್ಶನ್ ಕೋಟಿ ಕೋಟಿ ವ್ಯವಹಾರ ಮಾಡಿರಬಹುದು. ಲಾಭನೂ ಮಾಡಿಕೊಂಡಿರಬಹದು. ಆದ್ರೆ, ಈ 70 ಲಕ್ಷ ಇದ್ಯಾಲ್ಲಾ! ಇದು ಪ್ರಾಫಿಟ್ ಅಲ್ಲ, ಪೀಕಲಾಟಕ್ಕೆ ಸಿಲುಕಿಸಿದೆ. ಈ 70 ಲಕ್ಷದ ಟ್ರಾನ್‌ಜಾಕ್ಷನ್, ದರ್ಶನ್‌ಗೆ ಮುಳುವಾಗೋ ಸಾಧ್ಯತೆ ದಟ್ಟವಾಗಿದೆ.
ಇದನ್ನೂ ಓದಿ:HDK ವಿರುದ್ಧ ನಾಲಿಗೆ ಹರಿಬಿಟ್ಟ ದರ್ಶನ್ ಮಹಿಳಾ ಅಭಿಮಾನಿಗೆ ಸಂಕಷ್ಟ; ಆಗಿದ್ದೇನು?
ದರ್ಶನ್ ಅಂಥಾ ಸೂಪರ್‌ಸ್ಟಾರ್‌ಗೆ ಬಹುಶಃ 70 ಲಕ್ಷ ರೂಪಾಯಿ ಏನೇನೂ ಅಲ್ಲ. ಹಾಗಂತಾ ದರ್ಶನ್ ಹಣವನ್ನೂ ಬೇಕಾಬಿಟ್ಟಿ ಖರ್ಚಂತೂ ಮಾಡಿಲ್ಲ. ಅವರೇ ಹೇಳಿರೋ ಪ್ರಕಾರ, ನನ್ನ ಕೈಯಲ್ಲಿ ದುಡ್ಡು ನಿಲ್ಲಲ್ಲೋ. ಹಾಗಾಗಿ, ಪ್ರಾಪರ್ಟಿ ಮೇಲೆ ಇನ್‌ವೆಸ್ಟ್ ಮಾಡಿಬಿಡ್ತೀನಿ ಅಂತಾ ಹೇಳಿರೋದು ಉಂಟು. ನಟ ದರ್ಶನ್ ಇಲ್ಲಿಯವರೆಗೂ ಕೋಟಿ ಕೋಟಿ ದುಡಿದಿರಬಹುದು. ಕೋಟಿ ಕೋಟಿ ಖರ್ಚು ಮಾಡಿರಬಹುದು. ಆದ್ರೆ, ಅವರ ಲೈಫ್ ಟೈಮ್‌ನಲ್ಲಿ ಈ 70 ಲಕ್ಷದ ಟ್ರಾನ್‌ಜಾಕ್ಷನ್ ಎಂದೂ ಮರೆಯೋಕೆ ಆಗಲ್ಲ. ಯಾಕಂದ್ರೆ, ಇದು ಅಂತಿಂಥಾ ವ್ಯವಹಾರವಲ್ಲ. ಕೊಲೆಯನ್ನ ಮುಚ್ಚಿ ಹಾಕಲು, ಕೊಲೆ ಮಾಡಿರುವುದಾಗಿ ಒಪ್ಪಿಕೊಳ್ಳಲು ಬಳಸಿಕೊಂಡಿರೋ ಬೆಚ್ಚಿಬೀಳುವ ಅಂಶ. ಅಂದ್ಹಾಗೇ, ಇದು ಊಹಾಪೋಹದ ವಿಚಾರವಲ್ಲ. ಪೊಲೀಸರ ತನಿಖೆಯಲ್ಲಿಯೇ ಬಯಲಾಗಿರೋ ಮಾಹಿತಿ. ಪೊಲೀಸರೇ, ರಿಮ್ಯಾಂಡ್ ಅರ್ಜಿಯಲ್ಲಿ ಉಲ್ಲೇಖ ಮಾಡಿರೋ ಶಾಕಿಂಗ್ ನ್ಯೂಸ್.
ಏನಿದು 70 ಲಕ್ಷ ರೂಪಾಯಿಯ ಸೀಕ್ರೆಟ್?
ಇಡೀ ಕೇಸ್ ದಿಕ್ಕನೇ ಬದಲಿಸೋದು ಇದೇ 70 ಲಕ್ಷ ರೂಪಾಯಿ. ಒಂದು ವೇಳೆ ದರ್ಶನ್ ಪ್ಲಾನ್ ಮಾಡಿದಂತೆಯೇ ನಡೆದಿದ್ದಿದ್ರೆ, ಬಹುಶಃ ಈ 70 ಲಕ್ಷ ದರ್ಶನ್ ಅವರನ್ನ ಉಳಿಸಿಬಿಡ್ತಿತ್ತು. ಬಟ್ ಇವರು ಅಂದುಕೊಂಡಂತೆ ನಡೆದೇ ಇಲ್ಲ. ಅಂದ್ಹಾಗೇ, ಕೊಲೆಯಾದ ನಂತರ ನಟ ದರ್ಶನ್ ಮೊದಲು ಮಾಡುವುದೇ ಪ್ರಕರಣ ಮುಚ್ಚಿ ಹಾಕೋ ಕೆಲಸ. ನನ್ನ ಹೆಸರು ಇಲ್ಲಿ ಎಲ್ಲಿಯೂ ಬರಬಾರ್ದು ಅಂತಾ ಪ್ಲಾನ್ ಮಾಡ್ತಾರೆ. ಹಾಗಾಗಿ, ಕೃತ್ಯದಲ್ಲಿ ಭಾಗಿಯಾಗದ ಯುವಕರನ್ನ ಭಾಗಿಯಾಗಿರುವುದಾಗಿ ಬಿಂಬಿಸುತ್ತಾರೆ. ಜೊತೆಗೆ ಪೊಲೀಸ್ ಸ್ಟೇಷನ್‌ಗೆ ಸರೆಂಡರ್ ಮಾಡಿಸುತ್ತಾರೆ. ಇದು ಇಡೀ ತಂಡ ಮಾಡಿರೋ ಕೃತ್ಯ ಅನ್ನೋದು ತನಿಖೆಯಿಂದ ಗೊತ್ತಾಗಿದೆ. ರಿಮ್ಯಾಂಡ್ ಅರ್ಜಿಯಲ್ಲಿ ಇರುವಂತೆ, ಎ2 ಆರೋಪಿ ದರ್ಶನ್ ಪೊಲೀಸರ ಮುಂದೆ ನೀಡಿದ್ದ ಮರು ಹೇಳಿಕೆಯಲ್ಲಿ ತಪ್ಪೊಪ್ಪಿಕೊಂಡಿದ್ದಾರೆ. ಅಂದ್ಹಾಗೇ, ರಿಮ್ಯಾಂಡ್ ಅರ್ಜಿಯಲ್ಲಿ ಪೊಲೀಸರು ಹಲವು ಅಂಶ ಉಲ್ಲೇಖಿಸಿದ್ದಾರೆ. ಅದರಲ್ಲಿ ಪ್ರಮುಖವಾದ್ದದ್ದು ಹೀಗಿದೆ. ಮುಂದಿನ ದಿನಗಳಲ್ಲಿ ದರ್ಶನ್ ವಿರುದ್ಧ ಎದುರಾಗುವ ವ್ಯತಿರಿಕ್ತ ಕಾನೂನು ಕ್ರಮಗಳಿಂದ ಪಾರಾಗಲು ಒಳಸಂಚು ರೂಪಿಸಿದ್ದರು. ಜೊತೆಗೆ ಆರೋಪಿಗಳ ಒಳಸಂಚು ಮತ್ತು ಸಾಕ್ಷಿನಾಶದ ವಿಷಯವನ್ನು ಮುಚ್ಚಿ ಹಾಕಲು 40 ಲಕ್ಷ ರೂಪಾಯಿ ಪಡೆದುಕೊಂಡು ಆರ್.ಆರ್.ನಗರದ ನಿವಾಸದಲ್ಲಿ ಇರಿಸಿದ್ದರು ಎಂದು ಬರೆದಿದ್ದಾರೆ. ಅಷ್ಟಕ್ಕೂ ನಟ ದರ್ಶನ್ 40 ಲಕ್ಷ ರೂಪಾಯಿ ಪಡೆದದ್ದು ಯಾರಿಂದ ಗೊತ್ತಾ? ಅದುವೆ ಮೋಹನ್ ರಾಜು.
ಅಂದ್ಹಾಗೇ, ಈ ಮೋಹನ್ ರಾಜು ಯಾರು ಗೊತ್ತಾ? ಬೊಮ್ಮನಹಳ್ಳಿ ವಾರ್ಡ್‌ನ ಬಿಜೆಪಿ ಕಾರ್ಪೋರೇಟರ್. ಅಷ್ಟೇ ಅಲ್ಲ, 2019ರಲ್ಲಿ ಬಿಬಿಎಂಪಿ ಉಪ ಮೇಯರ್ ಆಗಿರ್ತಾರೆ. ಇವರು ನಟ ದರ್ಶನ್‌ರ ಕ್ಲೋಸ್ ಫ್ರೆಂಡ್ ಎನ್ನಲಾಗ್ತಿದೆ. ವಿಚಾರಣೆ ವೇಳೆ ನಟ ದರ್ಶನ್ ಮೋಹನ್ ರಾಜು ಹೆಸರು ಬಾಯಿ ಬಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಈಗ ದುಡ್ಡಿನ ಮೂಲದ ಬಗ್ಗೆ ತನಿಖೆ ಶುರು ಮಾಡಿದ್ದಾರೆ. ಅಂದ್ಹಾಗೇ, ಮೋಹನ್ ರಾಜು ಅವರಿಂದ ಪಡೆದಿದ್ದ ಹಣವನ್ನ ದರ್ಶನ್ ತಮ್ಮ ಮನೆಯಲ್ಲಿಯೇ ಇರಿಸಿದ್ದರು. ಯಾವಾಗ ಈ ಹೇಳಿಕೆಯನ್ನ ಕನ್ಫರ್ಮ್ ಮಾಡ್ಕೊಂಡ್ರೋ, ಪೊಲೀಸರು ಸೀದಾ ದರ್ಶನ್ ಮನೆಗೆ ಹೋಗಿ ಸೀಜ್ ಮಾಡಿರ್ತಾರೆ. 40 ಲಕ್ಷದ ಪೈಕಿ 37 ಲಕ್ಷದ 40 ಸಾವಿರ ರೂಪಾಯಿ ದರ್ಶನ್ ಅವರು ತಮ್ಮ ಮನೆಯಲ್ಲಿ ಪುಮಾ ಹೆಸರಿನ ಮಿಲಿಟರಿ ಗ್ರಿನ್ ಬಣ್ಣದ ಬ್ಯಾನ್‌ನಲ್ಲಿ ಇರಿಸಿದ್ದರು. ಪೊಲೀಸರು 19ನೇ ತಾರೀಖು ದರ್ಶನ್ ಮನೆಗೆ ತೆರಳಿ ಈ ಹಣವನ್ನ ಸೀಜ್ ಮಾಡಿಬಿಟ್ಟಿದ್ದಾರೆ.
ಇದನ್ನೂ ಓದಿ:VIDEO: ‘ಆ ಗರ್ಭಿಣಿ ತಾಯಿಗೆ ಹೇಗೆ ಸಮಾಧಾನ ಮಾಡ್ಬೇಕು’- ದರ್ಶನ್ ಅರೆಸ್ಟ್ ಬಗ್ಗೆ ಲಹರಿ ವೇಲು ಹೇಳಿದ್ದೇನು?
ಇನ್ನು, ಇದೊಂದೇ ಅಲ್ಲ, ಇನ್ನೂ ಮೂರು ಲಕ್ಷ ರೂಪಾಯಿಯ ಕಥೆ ಬೇರೇಯೇ ಇದೇ. ಯಾಕಂದ್ರೆ, ಕೊಲೆಯ ನಂತರ ನಟ ದರ್ಶನ್ ಡೆವಿಲ್ ಸಿನಿಮಾದ ಶೂಟಿಂಗ್‌ಗೆ ಅಂತಾ ಹೋಗಿರ್ತಾರೆ. ಮೈಸೂರಿನ ಱಡಿಸನ್ ಹೋಟೆಲ್‌ನಲ್ಲಿ ತಂಗಿರ್ತಾರೆ. ಈ ಟೈಮ್‌ನಲ್ಲಿ ದರ್ಶನ್ ಬಳಿ 3 ಲಕ್ಷ ರೂಪಾಯಿ ಕ್ಯಾಶ್ ಇರುತ್ತದೆ. ಜೊತೆಗೆ ಕೆಲವೊಂದು ವಸ್ತುಗಳು ಕೂಡ ಇರುತ್ತವೆ . ಯಾವಾಗ ದರ್ಶನ್ ಅರೆಸ್ಟ್ ಆಗ್ತಾರೋ, ಆಗ ಮೇಕಪ್ ಮ್ಯಾನ್‌ಗೆ 3 ಲಕ್ಷ ನಗದು ಮತ್ತು ವಸ್ತುಗಳನ್ನ ಪತ್ನಿ ವಿಜಯಲಕ್ಷ್ಮೀಗೆ ನೀಡುವಂತೆ ಸೂಚಿಸಿರುತ್ತಾರೆ. ದರ್ಶನ್ ಸೂಚನೆಯ ಮೇರೆಗೆ, ಪತ್ನಿ ವಿಜಯಲಕ್ಷ್ಮೀ ಅವರಿಗೆ ನೀಡಿರ್ತಾರೆ. ಯಾವಾಗ ವಿಚಾರಣೆ ವೇಳೆ ನಟ ದರ್ಶನ್ ಪೊಲೀಸರ ಮುಂದೆ ಈ ಮಾಹಿತಿಯನ್ನ ನೀಡಿದರೋ, ಪೊಲೀಸರು, 18ನೇ ತಾರೀಖು ಪತ್ನಿ ವಿಜಯಲಕ್ಷ್ಮೀಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡ್ತಾರೆ. ಅದರಂತೆ ವಿಜಯಲಕ್ಷ್ಮೀ ಅವರು ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಗೆ ಕರೆಸಲಾಗಿತ್ತು. ಜೊತೆಗೆ ಠಾಣೆಗೆ ಬಂದ ಸಂದರ್ಭದಲ್ಲಿ ವಿಜಯಲಕ್ಷ್ಮೀ ಅವರು, ಮೇಕಪ್ ಮ್ಯಾನ್ ನೀಡಿದ್ದ ಹಣವನ್ನ ಪೊಲೀಸರಿಗೆ ನೀಡಿದ್ದಾರೆ.
ಬಹುಶಃ ದರ್ಶನ್ ಬಾಯ್ಬಿಟ್ಟ ಮೊದಲ ಸತ್ಯ ಅನ್ಸುತ್ತೆ. ವಿಚಾರಣೆಗೆ ಸ್ಪಂದಿಸದೇ ಇರ್ತಿದ್ದ ದರ್ಶನ್, 12ನೇ ತಾರೀಖು, ವಿಚಾರಣೆ ವೇಳೆ ಭಯಾನಕ ವಿಚಾರವನ್ನ ಪೊಲೀಸರ ಮುಂದೆ ಹೇಳುತ್ತಾರೆ. ಅದೇನಂದ್ರೆ, ಕೊಲೆಯಾದ ವ್ಯಕ್ತಿಯನ್ನು ವಿಲೇವಾರಿ ಮಾಡಿ, ಇದರಲ್ಲಿ ತನ್ನ ಹೆಸರು ಎಲ್ಲಿಯೂ ಬರದಂತೆ ಮಾಡಲು, ಪೊಲೀಸ್ ಲಾಯರ್ ಮತ್ತು ಶವವನ್ನು ಸಾಗಿಸಲು ವ್ಯಕ್ತಿಗಳಿಗೆ ತಗಲುವ ವೆಚ್ಚವನ್ನ ಭರಿಸಲು ಎ14 ಆರೋಪಿ ಪ್ರದೋಶ್‌ಗೆ ನಟ ದರ್ಶನ್ 30 ಲಕ್ಷ ರೂಪಾಯಿ ನೀಡಿರೋದಾಗಿ, ತಮ್ಮ ಸ್ವ-ಇಚ್ಛಾ ಹೇಳಿಕೆ ನೀಡಿರುತ್ತಾರೆ. ಈ ಮಾಹಿತಿಯ ಪ್ರಕಾರ, ಪೊಲೀಸರು ಗಿರಿನಗರದಲ್ಲಿರುವ ಆರೋಪಿ ಪ್ರದೋಶ್ ಮನೆಗೆ ತೆರಳಿ ಹಣವನ್ನ ಜಪ್ತಿ ಮಾಡಿದ್ದಾರೆ. ಒಟ್ಟಾರೆ, ಪೊಲೀಸರು ಎ2 ಆರೋಪಿ ದರ್ಶನ್ ಅವರು ಕೊಟ್ಟಿದ್ದ 70 ಲಕ್ಷ ರೂಪಾಯಿನ್ನ ಜಪ್ತಿ ಮಾಡಿದ್ದಾರೆ. ಇದಿಷ್ಟೇ ಅಲ್ಲ, ರಿಮ್ಯಾಂಡ್ ಅಪ್ಲಿಕೇಷನ್‌ನಲ್ಲಿ ಪೊಲೀಸರು ಎ2 ಆರೋಪಿ ದರ್ಶನ್ ಕೊಲೆಯಲ್ಲಿ ಭಾಗಿಯಾಗಿರುವುದು ದೃಢಪಟ್ಟಿದೆ ಎಂದು ಉಲ್ಲೇಖಿಸಿದ್ದಾರೆ. ಆ ಕಂಪ್ಲೀಟ್ ಮಾಹಿತಿ ಕೇಳಿದರೆ, ನಿಜಕ್ಕೂ ಭಯ ಹುಟ್ಟಿಸುವಂತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ