/newsfirstlive-kannada/media/post_attachments/wp-content/uploads/2025/06/RISHABH_PANT_GILL.jpg)
ಮೊನ್ನೆ ಮೊನ್ನೆ ಮುಗಿದಿರುವ ಐಪಿಎಲ್ ಸೀಸನ್ 18ರಲ್ಲಿ ರಿಷಭ್ ಪಂತ್ ಬ್ಯಾಟಿಂಗ್ ಪರ್ಫಾಮೆನ್ಸ್ ಅಷ್ಟೇನೂ ಉತ್ತಮವಾಗಿರಲಿಲ್ಲ. ಕೊನೆ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಶತಕ ಸಿಡಿಸಿದ್ದ ಪಂತ್ ಟೀಮ್ ಇಂಡಿಯಾದ ಟೆಸ್ಟ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡರು. ಐಪಿಎಲ್ ಮುಗಿದ ಬೆನ್ನಲ್ಲೇ ಇಂಗ್ಲೆಂಡ್ಗೆ ಹಾರಿರುವ ಪಂತ್ ಸದ್ಯ ಗಾಯಕ್ಕೆ ಒಳಗಾಗಿದ್ದಾರೆ ಎನ್ನುವುದು ಬಹಿರಂಗಗೊಂಡಿದೆ.
ರಿಷಭ್ ಪಂತ್ ಸದ್ಯ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಮಾತ್ರವಲ್ಲ, ಜೊತೆಗೆ ತಂಡದ ಉಪನಾಯಕನೂ ಆಗಿದ್ದಾರೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ನಿವೃತ್ತಿಯಿಂದ ತೆರವಾದ ಸ್ಥಾನಗಳಿಗೆ ಯುವ ಆಟಗಾರರಲ್ಲಿ ಭರ್ಜರಿ ಪೈಪೋಟಿ ನಡೆದಿದೆ. ರಿಷಭ್ ಪಂತ್ ತಂಡದಲ್ಲಿ ಮಹತ್ವದ ಜವಾಬ್ದಾರಿ ನೀಡಿರುವ ಸಂದರ್ಭದಲ್ಲೇ ಅವರು ಗಾಯಕ್ಕೆ ತುತ್ತಾಗಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ:IPL ಗೆಲುವಿನೊಂದಿಗೆ ಕಿಂಗ್ ಕೊಹ್ಲಿ ಅಪರೂಪದ ಸಾಧನೆ.. ವಿರಾಟ್ ಮುತ್ತಿಟ್ಟ ಟ್ರೋಫಿಗಳು!
ಇಂಗ್ಲೆಂಡ್ ವಿರುದ್ಧ ಜೂನ್ 20 ರಿಂದ ಆರಂಭಗೊಳ್ಳುವ ಟೆಸ್ಟ್ ಸರಣಿಗೂ ಮೊದಲು ಟೀಮ್ ಇಂಡಿಯಾ ಆಟಗಾರರು ಭರ್ಜರಿ ಅಭ್ಯಾಸ ನಡೆಸುತ್ತಿದ್ದರು. ಈ ವೇಳೆ ರಿಷಭ್ ಪಂತ್ ಅವರ ಎಡಗೈಗೆ ಚೆಂಡು ಬಲವಾಗಿ ತಾಗಿದೆ. ಇದರಿಂದ ನೋವಿನಿಂದ ಬಳಲುತ್ತಿದ್ದ ಪಂತ್ಗೆ ತಕ್ಷಣ ವೈದ್ಯರು ಕೈಗೆ ಬ್ಯಾಂಡೇಜ್ ಸುತ್ತಿ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಐಸ್ ಪ್ಯಾಕ್ ಕೂಡ ಇಟ್ಟಿದ್ದರು ಎಂದು ಹೇಳಲಾಗಿದೆ.
ಗಾಯಕ್ಕೆ ಒಳಗಾಗಿರುವ ರಿಷಭ್ ಪಂತ್ ಅಭ್ಯಾಸವನ್ನು ಅರ್ಧಕ್ಕೆ ಬಿಟ್ಟು ವಿಶ್ರಾಂತಿಗೆ ತೆರಳಿದರು. ಒಂದು ವೇಳೆ ಗಾಯ ಗಂಭೀರವಾಗಿ ಪರಿಣಮಿಸಿದ್ರೆ, ಟೆಸ್ಟ್ ಪಂದ್ಯದಲ್ಲಿ ವಿಕೆಟ್ ಕೀಪರ್ ಸ್ಥಾನವನ್ನು ಧೃವ್ ಜುರೇಲ್ ಅವರು ನಿರ್ವಹಿಸುವ ಸಾಧ್ಯತೆ ಇದೆ. ಐಪಿಎಲ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕನಾಗಿದ್ದ ರಿಷಭ್ ಪಂತ್ ಕೊನೆಯ ಪಂದ್ಯದಲ್ಲಿ ಶತಕ ಬಾರಿಸಿದ್ದರು. ಆದರೆ ಈ ಪಂದ್ಯದಲ್ಲಿ ಆರ್ಸಿಬಿ ಜಯ ದಾಖಲಿಸಿದ್ದರಿಂದ ಪಂತ್ ಶತಕ ವ್ಯರ್ಥವಾಗಿತ್ತು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ