/newsfirstlive-kannada/media/post_attachments/wp-content/uploads/2025/05/BrahMos.jpg)
ಲಕ್ನೋ: ಆಪರೇಷನ್ ಸಿಂಧೂರ ಕಾರ್ಯಾಚರಣೆ ಮೂಲಕ ವಿರೋಧಿ ಪಾಕಿಸ್ತಾನಕ್ಕೆ ದೊಡ್ಡ ಸಂದೇಶ ರವಾನೆ ಮಾಡಲಾಗಿದೆ. ಭಾರತದ ಭದ್ರತಾ ಪಡೆಗಳ ಘರ್ಜನೆ ಪಾಕ್ನಲ್ಲಿ ಕುತಂತ್ರ ರೂಪಿಸುವ ರಾವಲ್ಪಿಂಡಿ ನಗರದವರೆಗೆ ತಲುಪಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಹೇಳಿದ್ದಾರೆ.
ಉತ್ತರ ಪ್ರದೇಶದ ಲಕ್ನೋದಲ್ಲಿರುವ ಡಿಫೆನ್ಸ್ ಇಂಡಸ್ಟ್ರಿಯಲ್ ಕಾರಿಡಾರ್ನಲ್ಲಿ ಬ್ರಹ್ಮೋಸ್ ಸೂಪರ್ ಸಾನಿಕ್ ಮಿಸೈಲ್ ಪ್ರೊಡಕ್ಷನ್ ಯೂನಿಟ್ ಅನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟನೆ ಮಾಡಿದರು. ಬಳಿಕ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಈ ಆಪರೇಷನ್ ಸಿಂಧೂರ, ಭಾರತದ ರಾಜಕೀಯ ದೃಢಸಂಕಲ್ಪವಾಗಿದೆ. ನಮ್ಮ ಮಿಲಿಟರಿ ಪರಾಕ್ರಮ ಪಾಕಿಸ್ತಾನವನ್ನು ಮೂಲೆಗುಂಪು ಮಾಡಿದೆ. ಭಯೋತ್ಪಾದನೆಯ ಬಗ್ಗೆ ಯಾವುದೇ ರಾಜೀ ಇಲ್ಲ. ಅದನ್ನು ಬುಡ ಸಮೇತ ಕಿತ್ತು ಹಾಕಲಾಗುವುದು ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
ಭಾರತದ ಭದ್ರತಾ ಪಡೆಗಳ ಕಾರ್ಯಚರಣೆಯನ್ನು ಕೇವಲ ಪಾಕಿಸ್ತಾನದ ಗಡಿಗೆ ಸೀಮಿತ ಮಾಡಲಿಲ್ಲ. ನಮ್ಮ ಸೇನೆಯ ಘರ್ಜನೆ ಪಾಕಿಸ್ತಾನದ ರಾವಲ್ಪಿಂಡಿವರೆಗೆ ತಲುಪಿದೆ. ಈ ರಾವಲ್ಪಿಂಡಿಯಲ್ಲೇ ಭಾರತದ ವಿರುದ್ಧ ಪಾಕಿಸ್ತಾನ ಎಲ್ಲ ಕುತಂತ್ರ ಹೆಣೆಯುತ್ತದೆ. ಇಲ್ಲಿನ ಮುಖ್ಯ ಕಚೇರಿವರೆಗೆ ಸಂದೇಶ ರವಾನೆ ಆಗಿದೆ. ಏಪ್ರಿಲ್ 22 ರಂದು ಪಹಲ್ಗಾಮ್ನಲ್ಲಿ ಎಸಗಿದ ಕೃತ್ಯಕ್ಕೆ, ಮೇ 7 ರಂದು ಆಪರೇಷನ್ ಸಿಂಧೂರ ಕಾರ್ಯಾಚರಣೆಯಿಂದ ಪಾಕಿಸ್ತಾನ ಸರಿಯಾದ ಬೆಲೆ ತೆತ್ತಿದೆ ಎಂದು ಹೇಳಿದ್ದಾರೆ.
ವಿರೋಧಿ ರಾಷ್ಟ್ರಕ್ಕೆ ಆಪರೇಷನ್ ಸಿಂಧೂರ ಸ್ಪಷ್ಟವಾದ ಎಚ್ಚರಿಕೆಯಾಗಿದೆ. ಭಯೋತ್ಪಾದಕರ ನೆಲೆಗಳು ಎಲ್ಲೇ ಇರಲಿ, ಗಡಿಯಾಚೆಗೂ ಇದ್ದರೂ ಅದು ಭಾರತದ ಸೇನೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಈಗಾಗಲೇ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಇದ್ದಂತಹ 9 ಭಯೋತ್ಪಾದಕ ತಾಣಗಳನ್ನು ಗುರಿಯಾಗಿಸಿ ಸರ್ವನಾಶ ಮಾಡಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:IPL ಟೂರ್ನಿ ಪುನರಾರಂಭ ಯಾವಾಗ.. ಬೆಂಗಳೂರು ಸೇರಿ ಎಲ್ಲೆಲ್ಲಿ ಪಂದ್ಯಗಳು ನಡೆಯುತ್ತವೆ?
ಭಾರತದ ವಿರುದ್ಧ ಭಯೋತ್ಪಾದಕ ದಾಳಿಗೆ ಯತ್ನಿಸುವವರಿಗೆ ಸರಿಯಾದ ಪ್ರತ್ಯುತ್ತರ ನೀಡಲಾಗಿದೆ. ಈಗಾಗಲೇ ಇದು ಇಡೀ ಜಗತ್ತಿಗೆ ಗೊತ್ತಿದೆ. ಉರಿ ದಾಳಿಯ ನಂತರ, ಭಾರತದ ಭದ್ರತಾ ಪಡೆಗಳು ಪಾಕಿಸ್ತಾನದೊಳಗೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದವು. ಪುಲ್ವಾಮಾದ ನಂತರ, ಪಾಕಿಸ್ತಾನದ ಬಾಲಕೋಟ್ ಪ್ರದೇಶದ ಮೇಲೆ ವೈಮಾನಿಕ ದಾಳಿಯಿಂದ ಸರ್ವನಾಶ ಮಾಡಿತು. ಈಗ ಪಹಲ್ಗಾಮ್ನಲ್ಲಿ ಕೃತ್ಯ ಎಸಗಿದ್ದಕ್ಕೆ ಪಾಕಿಸ್ತಾನದೊಳಗೆ ನುಗ್ಗಿ ಅನೇಕ ದಾಳಿಗಳನ್ನು ಭಾರತ ನಡೆಸುತ್ತಿರುವುದನ್ನು ವಿಶ್ವ ಗಮನಿಸುತ್ತದೆ ಎಂದು ರಕ್ಷಣಾ ಸಚಿವರು ಹೇಳಿದ್ದಾರೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ