ವೀರ ಯೋಧರಿಗೆ ಸಲಾಂ ಎಂದ ಕ್ರಿಕೆಟಿಗರು.. ಕೊಹ್ಲಿ, KL ರಾಹುಲ್ ಸೇರಿ ಸ್ಟಾರ್ ಆಟಗಾರರು ಏನಂದ್ರು?

author-image
Bheemappa
Updated On
ವೀರ ಯೋಧರಿಗೆ ಸಲಾಂ ಎಂದ ಕ್ರಿಕೆಟಿಗರು.. ಕೊಹ್ಲಿ, KL ರಾಹುಲ್ ಸೇರಿ ಸ್ಟಾರ್ ಆಟಗಾರರು ಏನಂದ್ರು?
Advertisment
  • ಭಾರತೀಯ ಸೇನೆಯ ಶ್ರಮ ಶ್ಲಾಘಿಸಿದ ನಾಯಕ ರೋಹಿತ್​ ಶರ್ಮಾ
  • ಇಂಡಿಯನ್ ಆರ್ಮಿಗೆ ಸೆಲ್ಯೂಟ್​ ಮಾಡಿದ ಕ್ರಿಕೆಟ್​ ಆಟಗಾರರು
  • ನಮ್ಮನ್ನು ರಕ್ಷಣೆ ಮಾಡ್ತಿರುವುದಕ್ಕೆ ಸೇನೆಗೆ ಧನ್ಯವಾದಗಳು- ಕನ್ನಡಿಗ

ಕಾಲು ಕೆರೆದು ಯುದ್ಧಕ್ಕೆ ಬಂದಿದ್ದ ಪಾಪಿಸ್ತಾನ ಕಥೆ ಉತ್ತರಕುಮಾರನ ಪೌರುಷದಂತೆ ಆಗಿದೆ. ಭಾರತೀಯ ಸೇನೆಯ ವೀರಾವೇಷದ ಮುಂದೆ ಪಾಕ್​ ಕಂಗಾಲಾಗಿ ಹೋಗಿದೆ. ಇಡೀ ಭಾರತ ನಮ್ಮ ಹೆಮ್ಮೆಯ ಸೇನೆಯ ಸಾಹಸ, ಧೈರ್ಯ, ಶೌರ್ಯಕ್ಕೆ ಸಲಾಂ ಅಂತಿದೆ. ಸದ್ಯ ಭಾರತ ಮತ್ತು ಪಾಕಿಸ್ತಾನ ಕದನ ವಿರಾಮ ಘೋಷಣೆ ಆಗಿದೆ. ಇದರ ನಡುವೆ ಭಾರತೀಯ ಕ್ರಿಕೆಟ್​ ಆಟಗಾರರು ಕೂಡ ನಮ್ಮ ಆರ್ಮಿಗೆ ಸೆಲ್ಯೂಟ್​ ಹೊಡೆದಿದ್ದಾರೆ.

ಭಾರತ- ಪಾಕಿಸ್ತಾನ ನಡುವೆ ಸಂಘರ್ಷ ತೀವ್ರ ಮಟ್ಟಕ್ಕೇರಿತ್ತು. ಪಾಪಿಸ್ತಾನ್​ ಭಾರತದ ಮೇಲೆ ವಿಫಲ ದಾಳಿ ಯತ್ನ ಮಾಡಿ ಕೈ ಸುಟ್ಟುಕೊಂಡಿದೆ. ಕುತಂತ್ರಿ ಪಾಕಿಸ್ತಾನದ ದಾಳಿಯನ್ನ ಹೆಡೆಮುರಿ ಕಟ್ಟಿರುವ ಭಾರತೀಯ ಸೇನೆ ಪಾಕ್​ ಎಲ್ಲ ದಾಳಿಯನ್ನ ವಿಫಲಗೊಳಿಸಿದೆ. ಕಾಲು ಕೆರೆದುಕೊಂಡು ಬಂದ ಪಾಕ್​ ಮುಟ್ಟಿ ನೋಡಿಕೊಳ್ಳುವಂತೆ ನಮ್ಮ ಸೇನೆ ಆನ್ಸರ್​ ಕೊಟ್ಟಿದೆ. ಇಷ್ಟೇ ಅಲ್ಲ, ಇಡೀ ವಿಶ್ವಕ್ಕೆ ನಮ್ಮ ಸೇನೆಯ ತಾಕತ್ತು ಏನು ಅನ್ನೋದು ಅರ್ಥವಾಗಿದೆ.

publive-image

ಭಾರತೀಯ ಕ್ರಿಕೆಟ್​​ ನಿಯಂತ್ರಣ ಮಂಡಳಿ ಕೂಡ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಭಾರತ ಸರ್ಕಾರದ ಬೆಂಬಲಕ್ಕೆ ನಿಂತಿತ್ತು. ಆಟಕ್ಕಿಂತ ದೇಶ ಹಾಗೂ ಭಾರತೀಯ ಸೇನೆ ಮೊದಲು ಎಂದಿರೋ ಬಿಸಿಸಿಐ ಸದ್ಯ ನಡಿತೀರೋ ಐಪಿಎಲ್​ ಟೂರ್ನಿಯನ್ನ 1 ವಾರಗಳ ಕಾಲ ಪೋಸ್ಟ್​ಪೋನ್​ ಮಾಡಿದೆ. ಅಧಿಕೃತ ಪ್ರಕಟಣೆ ಹೊರಡಿಸಿರೋ ಬಿಸಿಸಿಐ ಭಾರತೀಯ ಸೇನೆ ಜೊತೆ ನಾವಿದ್ದೇವೆ ಎಂಬ ಸಂದೇಶ ಸಾರಿದೆ. ಟೀಮ್​ ಇಂಡಿಯಾದ ಕ್ರಿಕೆಟರ್ಸ್​ ಕೂಡ ಭಾರತೀಯ ಸೇನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಭಾರತೀಯ ಸೇನೆಗೆ ಸೆಲ್ಯೂಟ್​ ಎಂದ ವಿರಾಟ್​ ಕೊಹ್ಲಿ.!

ಆಪರೇಷನ್​ ಸಿಂಧೂರ ಬಗ್ಗೆ ಟೀಮ್​ ಇಂಡಿಯಾ ಬ್ಯಾಟ್ಸ್​ಮನ್​ ವಿರಾಟ್​ ಕೊಹ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಭಾರತ-ಪಾಕಿಸ್ತಾನದ ಉದ್ವಿಗ್ನತೆಯ ನಡುವೆ ದೇಶದ ರಕ್ಷಣೆಗಾಗಿ ನಿಂತಿರುವ ಸೈನಿಕರನ್ನ ಶ್ಲಾಘಿಸಿದ್ದಾರೆ. ಕಷ್ಟದ ಸಮಯದಲ್ಲಿ ನಮ್ಮ ದೇಶವನ್ನು ರಕ್ಷಿಸುವ ಸೇನೆಗೆ ಸೆಲ್ಯೂಟ್​ ಎಂದು ವಿರಾಟ್​ ಸಂದೇಶ ಸಾರಿದ್ದಾರೆ.

‘ಭಾರತೀಯ ಸೇನೆಗೆ ಸೆಲ್ಯೂಟ್​’

‘ಈ ಕಷ್ಟದ ಸಮಯದಲ್ಲಿ ನಮ್ಮ ದೇಶವನ್ನು ರಕ್ಷಿಸುತ್ತಿರುವುದಕ್ಕಾಗಿ ಭಾರತೀಯ ಸೇನೆಗೆ ಸೆಲ್ಯೂಟ್. ನಾವು ನಮ್ಮ ಸಶಸ್ತ್ರ ಪಡೆಗಳೊಂದಿಗೆ ಒಗ್ಗಟ್ಟಿನಿಂದ ಇರುತ್ತೇವೆ. ನಮ್ಮ ವೀರ ಯೋಧರ ಅಚಲ ಧೈರ್ಯ, ಅವರು ಮತ್ತು ಅವರ ಕುಟುಂಬದವರು ನಮ್ಮ ದೇಶಕ್ಕಾಗಿ ಮಾಡುವ ತ್ಯಾಗಗಳಿಗೆ ನಾವು ಸದಾ ಕೃತಜ್ಞ’

ವಿರಾಟ್​​ ಕೊಹ್ಲಿ, ಕ್ರಿಕೆಟಿಗ

ಸೇನೆಯ ಶ್ರಮ ಶ್ಲಾಘಿಸಿದ ರೋಹಿತ್​ ಶರ್ಮ.!

ಟೀಮ್​ ಇಂಡಿಯಾ ಏಕದಿನ ತಂಡದ ನಾಯಕ ರೋಹಿತ್​ ಶರ್ಮಾ ಕೂಡ ಭಾರತೀಯ ಸೇನೆಯ ಶ್ರಮವನ್ನ ಶ್ಲಾಘಿಸಿದ್ದಾರೆ. ಪ್ರತಿ ಕ್ಷಣವೂ, ನಮ್ಮ ಭಾರತೀಯ ಸೇನೆ, ಭಾರತೀಯ ವಾಯುಪಡೆ ಮತ್ತು ಭಾರತೀಯ ನೌಕಾಪಡೆಯು ನಮ್ಮ ರಕ್ಷಣೆಗೆ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರಗಳ ಬಗ್ಗೆ ನನಗೆ ತುಂಬಾ ಹೆಮ್ಮೆ ಅನಿಸುತ್ತದೆ. ನಮ್ಮ ಯೋಧರು ನಮ್ಮ ರಾಷ್ಟ್ರದ ಹೆಮ್ಮೆಗಾಗಿ ಎತ್ತರವಾಗಿ ನಿಂತಿದ್ದಾರೆ. ಎಲ್ಲರೂ ಸುರಕ್ಷಿತವಾಗಿರಿ ಎಂದು ರೋಹಿತ್ ಶರ್ಮಾ ಟ್ವೀಟ್ ಮಾಡಿದ್ದಾರೆ.

ನಮ್ಮ ಸೇನೆಗೆ ನಾನು ಎಂದಿಗೂ ಖುಣಿ ಎಂದ ಬೂಮ್ರಾ.!

ಟೀಮ್​ ಇಂಡಿಯಾ ವೇಗಿ ಜಸ್​​ಪ್ರಿತ್​ ಬೂಮ್ರಾ ನಮ್ಮ ಸೇನೆ ಹಾಗೂ ಸೈನಿಕರ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ್ದಾರೆ. ನಮ್ಮ ಸೇನೆಯ ಧೈರ್ಯ ಮತ್ತು ಶೌರ್ಯಕ್ಕೆ ಕೃತಜ್ಞ ಎಂದಿರೋ ಬೂಮ್ರಾ, ನಮ್ಮ ಸುರಕ್ಷತೆಗಾಗಿ ಅವರು ಮಾಡುವ ಎಲ್ಲಕ್ಕೂ ನಾವು ಶಾಶ್ವತವಾಗಿ ಋಣಿ ಎಂದು ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ:ಭಾರತದ ಬಗ್ಗೆ ಪಾಕ್​​ ಏನೇನು ಸುಳ್ಳು ಹೇಳಿದೆ..? ಸತ್ಯ ಬಿಚ್ಚಿಟ್ಟ ಸೋಫಿಯಾ ಖುರೇಷಿ, ವ್ಯೋಮಿಕಾ ಸಿಂಗ್

publive-image

ಟೀಮ್​ ಇಂಡಿಯಾ ಕ್ರಿಕೆಟಿಗ, ಕನ್ನಡಿಗ ಕೆ.ಎಲ್​ ರಾಹುಲ್​ ಭಾರತೀಯ ಸೇನೆಯ ಕಾರ್ಯಚರಣೆಗೆ ಸಲಾಂ ಎಂದಿದ್ದಾರೆ. ಸೇನೆಯ ಪ್ರತಿಯೊಬ್ಬ ಸೈನಿಕರು ಹಾಗೂ ಅವರ ಕಟುಂಬವರ್ಗದವರ ನಿಮಗೆ ನಮ್ಮ ಸೆಲ್ಯೂಟ್. ದೇಶವಾಗಿ ನಾವು ನಿಮ್ಮ ಬೆನ್ನಿಗೆ ಸದಾ ನಿಲ್ತೀವಿ. ನಮ್ಮನ್ನ ರಕ್ಷಿಸುತ್ತಿರುವುದಕ್ಕೆ ಧನ್ಯವಾದ ಎಂದಿದ್ದಾರೆ.

ಯುವ ಆಟಗಾರ ಶುಭ್​ಮನ್​ ಗಿಲ್​ ಕೂಡ ಸೇನೆಗೆ ಸಲಾಂ ಎಂದಿದ್ದಾರೆ. ಈ ಸಮಯದಲ್ಲಿ ರಾಷ್ಟ್ರವು ಎಲ್ಲಕ್ಕಿಂತ ಮಿಗಿಲು. ದೇಶಕ್ಕಾಗಿ ತ್ಯಾಗ ಮಾಡಿ ನಮಗೆ ಸುರಕ್ಷತೆಯನ್ನು ನೀಡೋ ನಮ್ಮ ಸೈನಿಕರಿಗೆ ಮತ್ತು ಅವರ ಕುಟುಂಬದವರಿಗಾಗಿ ಪ್ರಾರ್ಥಿಸುತ್ತೇವೆ ಎಂದು ಬರೆದುಕೊಂಡಿದ್ದಾರೆ.

ಇವರಿಷ್ಟೇ ಅಲ್ಲ.. ಟೀಮ್​ ಇಂಡಿಯಾದ ಇನ್ನೂ ಹಲವು ಮಾಜಿ ಹಾಗೂ ಹಾಲಿ ಕ್ರಿಕೆಟರ್ಸ್​​ ಭಾರತೀಯ ಸೇನೆಯ ಶ್ರಮವನ್ನ ಶ್ಲಾಘಿಸಿದ್ದಾರೆ. ವೀರ ಯೋಧರಿಗೆ ಸಲಾಂ ಎಂದಿರುವ ಕ್ರಿಕೆಟಿಗರು ನಾಗರಿಕರಿಗೆ ಸುರಕ್ಷತೆರಾಗಿರುವಂತೆಯೂ ಕೋರಿ, ಒಗ್ಗಟ್ಟಿನ ಮಂತ್ರವನ್ನ ಜಪಿಸಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment