/newsfirstlive-kannada/media/post_attachments/wp-content/uploads/2025/05/HYD_CAR.jpg)
ನವದೆಹಲಿ: ಐಷಾರಾಮಿ ಕಾರುಗಳನ್ನು ಅಮದು ಮಾಡಿಕೊಳ್ಳುವಾಗ 100 ಕೋಟಿ ರೂಪಾಯಿ ಕಸ್ಟಮ್ಸ್ ಸುಂಕ ವಂಚನೆಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಹೈದರಾಬಾದ್ನ ಶೋ ರೂಂ ಮಾಲೀಕನನ್ನು ಗುಜರಾತ್ನಲ್ಲಿ ಬಂಧಿಸಲಾಗಿದೆ.
ಹೈದರಾಬಾದ್ನ ಕಾರು ಲೌಂಜ್ ಶೋ ರೂಂನ ಮಾಲೀಕ ಬಷರತ್ ಖಾನ್ನನ್ನು ಅರೆಸ್ಟ್ ಮಾಡಲಾಗಿದೆ. ವಿದೇಶದಿಂದ ಭಾರತಕ್ಕೆ ಬರುತ್ತಿದ್ದ ಐಷಾರಾಮಿ ಕಾರುಗಳನ್ನು ಕಾನೂನು ಬಾಹಿರವಾಗಿ ಆಮದು ಮಾಡಿಕೊಳ್ಳಲಾಗುತ್ತಿತ್ತು. ಕಾರುಗಳ ನಿಜವಾದ ದರಗಳಿಗಿಂತ ಶೇಕಡಾ 50 ರಷ್ಟು ಕಡಿಮೆ ಬೆಲೆ ಅಂತ ಸರ್ಕಾರಕ್ಕೆ ತೋರಿಸುತ್ತಿದ್ದನು ಎಂದು ಹೇಳಲಾಗುತ್ತಿದೆ.
ಕಂದಾಯ ಗುಪ್ತಚರ ನಿರ್ದೇಶನಾಲಯ (DRI)ದ ಪ್ರಕಾರ ಬಷರತ್ ಖಾನ್, ನಕಲಿ ದಾಖಲೆಗಳು ಹಾಗೂ ಹೆಚ್ಚಿನ ಕಸ್ಟಮ್ಸ್ ಸುಂಕವನ್ನು ತಪ್ಪಿಸಲು ಕಡಿಮೆ ಮೌಲ್ಯದ ಇನ್‌ವಾಯ್ಸ್‌ಗಳು ಉಪಯೋಗಿಸಿರುವುದು ಕಂಡು ಬಂದಿದೆ. ಪ್ರಾಥಮಿಕ ಮಾಹಿತಿಯಂತೆ ಅಮೆರಿಕ ಹಾಗೂ ಜಪಾನ್ನಂತ ರಾಷ್ಟ್ರಗಳಿಂದ ದುಬಾರಿ ಬೆಲೆಯ ಕಾರುಗಳನ್ನು ಖರೀದಿ ಮಾಡಿ ಶ್ರೀಲಂಕಾ, ದುಬೈನಿಂದ ತಂದಿರುವಂತೆ ತೋರಿಸಲಾಗುತ್ತಿತ್ತು. ಇದಕ್ಕೆ ಅನುಗುಣವಾಗಿ ಎಡಕ್ಕೆ ಇರುತ್ತಿದ್ದ ಡ್ರೈವ್ ಸ್ಟೇರಿಂಗ್ ಅನ್ನು ಬಲಕ್ಕೆ ಬದಲಾವಣೆ ಮಾಡುತ್ತಿದ್ದರು. ಇದಾದ ಮೇಲೆ ನಕಲಿ ದಾಖಲೆ ಮೂಲಕ ಭಾರತದೊಳಕ್ಕೆ ವಾಹನಗಳನ್ನು ತರಲಾಗುತ್ತಿತ್ತು ಎನ್ನಲಾಗಿದೆ.
ಇದೇ ರೀತಿ ಸುಮಾರು 30 ಐಷಾರಾಮಿಗಳನ್ನು ಕಾನೂನು ಬಾಹಿರವಾಗಿ ಆಮದು ಮಾಡಿಕೊಳ್ಳಲಾಗಿದೆ. ಇದರಲ್ಲಿ ಹಮ್ಮರ್ ಇವಿ, ಕ್ಯಾಡಿಲಾಕ್ ಎಸ್ಕಲೇಡ್, ರೋಲ್ಸ್ ರಾಯ್ಸ್, ಲೆಕ್ಸಸ್, ಟೊಯೋಟಾ ಲ್ಯಾಂಡ್ ಕ್ರೂಸರ್ ಮತ್ತು ಲಿಂಕನ್ ನ್ಯಾವಿಗೇಟರ್ನಂತಹ ಕಾರುಗಳು ಸೇರಿವೆ. ಇನ್ನು ಬಷರತ್ ಖಾನ್ 10 ವರ್ಷಗಳಿಂದ ಹೈದರಾಬಾದ್ನಲ್ಲಿ ಐಷಾರಾಮಿ ಕಾರ್ ಶೋ ರೂಂ ನಡೆಸುತ್ತಿದ್ದಾರೆ. ಭಾರೀ ಬೆಲೆಯುಳ್ಳ 8 ಕಾರುಗಳನ್ನು ಇವರು ಆಮದು ಮಾಡಿಕೊಂಡಿರುವ ಆರೋಪ ಇದ್ದು ಇದರಿಂದ ಸರ್ಕಾರಕ್ಕೆ 7 ಕೋಟಿ ರೂಪಾಯಿಗಳು ನಷ್ಟವಾಗಿದೆ ಎಂದು ಹೇಳಲಾಗುತ್ತಿದೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ