/newsfirstlive-kannada/media/post_attachments/wp-content/uploads/2025/06/Siddaramaiah-6.jpg)
ಆರ್ಎಸ್ಎಸ್ನಿಂದ ಸಂವಿಧಾನದ ಪೀಠಿಕೆಯಲ್ಲಿರುವ ಸಮಾಜವಾದ, ಜಾತ್ಯಾತೀತ ಪದ ತೆಗೆಯಲು ಆಗ್ರಹ ಕೇಳಿ ಬಂದಿದೆ. ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಾಜವಾದ, ಜಾತ್ಯಾತೀತ ಪದಗಳನ್ನು ಸಂವಿಧಾನದ ಪೀಠಿಕೆಯಿಂದ ತೆಗೆದು ಹಾಕಬೇಕೆಂದು ಆಗ್ರಹಿಸಿದ್ದಾರೆ.
ಅವರು ದೇಶದ ಕ್ಷಮೆ ಕೇಳಿಲ್ಲ
ಕಾಂಗ್ರೆಸ್ ಪಕ್ಷದಿಂದ ತುರ್ತು ಪರಿಸ್ಥಿತಿ ವೇಳೆ 1975-76ರಲ್ಲಿ ಸಮಾಜವಾದ, ಜಾತ್ಯಾತೀತ ಪದಗಳನ್ನು ಸಂವಿಧಾನದ ಪೀಠಿಕೆಗೆ ಸೇರ್ಪಡೆ ಮಾಡಲಾಗಿದೆ. ಹೀಗಾಗಿ ಈಗ ಸಮಾಜವಾದ, ಜಾತ್ಯಾತೀತ ಪದಗಳನ್ನು ಪೀಠಿಕೆಯಿಂದ ತೆಗೆದು ಹಾಕಬೇಕೆಂದು ಆಗ್ರಹಿಸಿದ್ದಾರೆ. ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದಕ್ಕೆ ಕಾಂಗ್ರೆಸ್ ದೇಶದ ಕ್ಷಮೆ ಕೇಳಬೇಕೆಂದು ಕೂಡ ದತ್ತಾತ್ರೇಯ ಹೊಸಬಾಳೆ ಆಗ್ರಹಿಸಿದ್ದಾರೆ. 1975ರ ಜೂನ್ 25 ರಂದು ದೇಶದ ಮೇಲೆ ಹೇರಿದ್ದ ತುರ್ತು ಪರಿಸ್ಥಿತಿಯಿಂದಾಗಿ ಸಾವಿರಾರು ಮಂದಿ ಜೈಲುಪಾಲಾಗಿದ್ದರು. ನ್ಯಾಯಾಂಗ, ಮಾಧ್ಯಮಗಳು ಮೌನವಾಗಿದ್ದವು. ತುರ್ತು ಪರಿಸ್ಥಿತಿಯ ವೇಳೆ ಬಲವಂತವಾಗಿ ಜನರಿಗೆ ಸಂತಾನಶಕ್ತಿ ಹರಣ ಅಪರೇಷನ್ ಮಾಡಲಾಗಿತ್ತು. ಜನರನ್ನು, ನಾಯಕರನ್ನು ಜೈಲಿಗೆ ಹಾಕಿ ಕಿರುಕುಳ ನೀಡಲಾಗಿತ್ತು. ಇದನ್ನೆಲ್ಲಾ ಮಾಡಿದವರು ಈಗ ಸಂವಿಧಾನದ ಪ್ರತಿಯನ್ನು ಹಿಡಿದುಕೊಂಡು ತಿರುಗುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅವರು ದೇಶದ ಕ್ಷಮೆ ಕೇಳಿಲ್ಲ, ನಿಮ್ಮ ಪೂರ್ವಜರು ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದರು. ನೀವು ಈ ದೇಶಕ್ಕೆ ಕ್ಷಮೆ ಕೇಳಬೇಕೆಂದು ದತ್ತಾತ್ರೇಯ ಹೊಸಬಾಳೆ ಆಗ್ರಹಿಸಿದ್ದಾರೆ.
ಸಿದ್ದರಾಮಯ್ಯ ಖಂಡನೆ
ಆರ್.ಎಸ್.ಎಸ್ ಆಗ್ರಹಕ್ಕೆ ಕಾಂಗ್ರೆಸ್ನಿಂದ ಆಕ್ಷೇಪ ವ್ಯಕ್ತವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸರಣಿ ಟ್ವೀಟ್ ಮಾಡಿ ಹೇಳಿಕೆಯನ್ನು ಖಂಡಿಸಿದ್ದಾರೆ. ಸಂವಿಧಾನದ ಪೀಠಿಕೆಯಿಂದ "ಸಮಾಜವಾದಿ’’ ಮತ್ತು "ಜಾತ್ಯತೀತ" ಪದಗಳನ್ನು ಕಿತ್ತುಹಾಕಬೇಕೆಂದು ಆಎಸ್ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಹೇಳಿರುವುದು ಗಂಭೀರವಾಗಿ ಚರ್ಚೆ ನಡೆಯಬೇಕಾಗಿರುವ ಸಂಗತಿ. ಆಡಳಿತಾರೂಢ ಬಿಜೆಪಿಯ ‘’ಹೈಕಮಾಂಡ್" ನಿಂದಲೇ ಈ ಅಭಿಪ್ರಾಯ ವ್ಯಕ್ತವಾಗಿರುವುದರಿಂದ ಪ್ರಧಾನಿ ಮೋದಿ ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ದೇಶದ ಜನತೆಯ ಮುಂದಿಡಬೇಕೆಂದು 140 ಕೋಟಿ ಜನರ ಪರವಾಗಿ ಆಗ್ರಹಿಸುತ್ತೇನೆ ಎಂದಿದ್ದಾರೆ.
ಸಂವಿಧಾನದ ಪೀಠಿಕೆಯಿಂದ ‘’ಸಮಾಜವಾದಿ’’ ಮತ್ತು "ಜಾತ್ಯತೀತ" ಪದಗಳನ್ನು ಕಿತ್ತುಹಾಕಬೇಕೆಂದು ಆರ್ ಎಸ್ ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಹೇಳಿರುವುದು ಗಂಭೀರವಾಗಿ ಚರ್ಚೆ ನಡೆಯಬೇಕಾಗಿರುವ ಸಂಗತಿ. ಆಡಳಿತಾರೂಢ ಬಿಜೆಪಿಯ ‘’ಹೈಕಮಾಂಡ್" ನಿಂದಲೇ ಈ ಅಭಿಪ್ರಾಯ ವ್ಯಕ್ತವಾಗಿರುವುದರಿಂದ ಪ್ರಧಾನಿ @narendramodi ಅವರು ಈ ಬಗ್ಗೆ ತಮ್ಮ…
— Siddaramaiah (@siddaramaiah) June 27, 2025
ಕಾಂಗ್ರೆಸ್ ಪ್ರಧಾನ ವಕ್ತಾರ ಜೈರಾಮ ರಮೇಶ್ರಿಂದ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆರ್‌ಎಸ್‌ಎಸ್ ಎಂದೂ ಸಂವಿಧಾನವನ್ನು ಒಪ್ಪಿಕೊಂಡಿಲ್ಲ. ಆರ್‌ಎಸ್ಎಸ್, ಅಂಬೇಡ್ಕರ್, ನೆಹರು, ಸಂವಿಧಾನ ರಚನಾಕಾರರ ಮೇಲೆ ದಾಳಿ ಮಾಡಿದೆ. ಆರ್‌ಎಸ್‌ಎಸ್ ಹೇಳುವ ಪ್ರಕಾರ, ಸಂವಿಧಾನವು ಮನುಸ್ಮೃತಿಯಿಂದ ಸ್ಫೂರ್ತಿ ಪಡೆದಿಲ್ಲ . ಆರ್‌ಎಸ್‌ಎಸ್, ಬಿಜೆಪಿ ಪದೇ ಪದೆ ಹೊಸ ಸಂವಿಧಾನ ರಚನೆಗೆ ಕರೆ ಕೊಟ್ಟಿವೆ. ಸಂವಿಧಾನದ ಮೂಲಸ್ವರೂಪವನ್ನು ಬದಲಾಯಿಸುವ ಆರ್‌ಎಸ್ಎಸ್ ಬೇಡಿಕೆ ಮುಂದುವರಿದಿದೆ ಎಂದು ಜೈರಾಮ ರಮೇಶ್ ಇಂದು ಟ್ವೀಟ್ ಮಾಡಿದ್ದಾರೆ.
ಸಮಾಜವಾದ, ಜಾತ್ಯಾತೀತ ಪದಗಳನ್ನು ಸಂವಿಧಾನದ ಪೀಠಿಕೆಯಿಂದ ತೆಗೆದು ಹಾಕಬೇಕೆಂದು ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ 2024ರ ನವಂಬರ್ನಲ್ಲಿ ವಜಾ ಮಾಡಿದೆ ಎಂದು ಜೈರಾಮ ರಮೇಶ್ ಟ್ವೀಟರ್ ನಲ್ಲಿ ಹೇಳಿದ್ದಾರೆ. ಸುಪ್ರೀಂಕೋರ್ಟ್ನ ತೀರ್ಪಿನ ಪ್ರತಿಯನ್ನು ಜೈರಾಮ ರಮೇಶ್ ಟ್ವೀಟ್ ಮಾಡಿದ್ದಾರೆ. ಆರ್ಎಸ್ಎಸ್ನ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಆಗ್ರಹಕ್ಕೆ ಜೈರಾಮ ರಮೇಶ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಬೇರೆ ಬೇರೆ ನಾಯಕರಿಂದಲೂ ದತ್ತಾತ್ರೇಯ ಹೊಸಬಾಳೆ ಹೇಳಿಕೆಗೆ ಆಕ್ಷೇಪ ವ್ಯಕ್ತವಾಗಿದೆ. ಇನ್ನೂ ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಅವರು ಕೂಡ ದತ್ತಾತ್ರೇಯ ಹೊಸಬಾಳೆ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹರಿ ಪ್ರಸಾದ್ ಹೇಳಿದ್ದೇನು..?
ಸಂವಿಧಾನದ ಪ್ರಸ್ತಾವನೆಯ "ಜೀವಾಳ" ಹಾಗೂ "ಹೃದಯವೇ" ಆಗಿರುವ ಜಾತ್ಯಾತೀತ ಹಾಗೂ ಸಮಾಜವಾದಿ ಪದಗಳನ್ನು ತೆಗೆದು ಹಾಕಬೇಕೆಂದು ಆರ್ಎಸ್ಎಸ್ ಮತ್ತೆ ಒತ್ತಾಯಿಸಿದೆ. "ಸಂವಿಧಾನವನ್ನೆ ಬದಲಾಯಿಸುತ್ತೇವೆ", "ನಮ್ಮನ್ನ ಗೌರವಿಸುವ ಸಂವಿಧಾನ ಬೇಕು", "ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾಯಿಸಲು", "ಲೋಕಸಭಾ ಚುನಾವಣೆಯಲ್ಲಿ 400 ಸ್ಥಾನಗಳನ್ನ ಬಿಜೆಪಿ ಪಡೆದರೆ ಸಂವಿಧಾನ ಬದಲಾಯಿಸುವುದೇ ನಮ್ಮ ಗುರಿ" ಎಂದು ಸಂವಿಧಾನ ವಿರೋಧಿ ನಿಲುವುಗಳನ್ನು ವ್ಯಕ್ತಪಡಿಸಿದ್ದ ಬಿಜೆಪಿಯ ಮನಸ್ಥಿತಿಗಳ ಹಿಂದೆ ಸಂಘ ಪರಿವಾರ ಇರುವುದು ಸ್ಪಷ್ಟ. ನೆಹರೂ ಅವರು ಸಂವಿಧಾನವನ್ನು ರಚಿಸಲು ಬಾಬಾ ಸಾಹೇಬರಿಗೆ ಅವಕಾಶ ನೀಡಿದ ಕ್ಷಣದಿಂದ ಹಿಡಿದು ಈ ಕ್ಷಣದವರೆಗೂ ಸಂವಿಧಾನವನ್ನು ಸಂಘಪರಿವಾರ ಎಂದೂ ಒಪ್ಪಿಕೊಳ್ಳಲೇ ಇಲ್ಲ. ಅದಕ್ಕೆ ಇತಿಹಾಸವೇ ಸಾಕ್ಷಿ. ಸ್ವಾತಂತ್ರ್ಯ ಚಳವಳಿಯಲ್ಲಿ ಎಂದೂ ಭಾಗವಹಿಸದೆ, ಸ್ವಾತಂತ್ರ್ಯ ಸಂಗ್ರಾಮದ ವಿರುದ್ಧ ಪಿತೂರಿ ನಡೆಸುತ್ತಿದ್ದ ಸಂಘ ಪರಿವಾರ ದೇಶದ ಜನರೆದುರು ಕ್ಷಮೆ ಕೇಳುವ ನೈತಿಕತೆಯನ್ನು ಕಳೆದುಕೊಂಡಿದೆ. ನಮ್ಮ ಪೂರ್ವಜರ ತ್ಯಾಗ ಬಲಿದಾನದಿಂದ ಈ ದೇಶಕ್ಕೆ ನೀಡಿದ ಸ್ವಾತಂತ್ರ್ಯ ಹಾಗೂ ಸಂವಿಧಾನದ ಬಗ್ಗೆ ಮಾತನಾಡುವ ಯಾವ ಹಕ್ಕು ಸಂಘಪರಿವಾರಕ್ಕಿಲ್ಲ. ಸಂವಿಧಾನ ಬದಲಾಯಿಸುತ್ತೇವೆ ಎಂದು ಹೇಳುವ ಈ ಸಂವಿಧಾನ ವಿರೋಧಿಗಳು ಸಂವಿಧಾನಕ್ಕೆ ಪರ್ಯಾಯವಾಗಿ ಯಾವ ಸಿದ್ದಾಂತ ಅಳವಡಿಸಿಕೊಳ್ಳುತ್ತೇವೆ ಎಂದು ಹೇಳುವ ಧೈರ್ಯವಿಲ್ಲ. ಕನಿಷ್ಟ ಪಕ್ಷ ಸಂವಿಧಾನಕ್ಕೆ ಬದಲಾಗಿ ತಮ್ಮ ಮೂಲ ಸಿದ್ದಾಂತವಾದ ಮನುಸ್ಮೃತಿಯನ್ನು ಜಾರಿಗೆ ತರುತ್ತೇವೆ ಎಂದು ಹೇಳುವ ಧೈರ್ಯವೂ ಇಲ್ಲದ ಹೇಡಿಗಳು. ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆಯವರ ಈ ಬದಲಾವಣೆ ಹೇಳಿಕೆಗೂ ನನ್ನ ಸವಾಲಿದೆ. ಜಾತ್ಯಾತೀತ ಹಾಗೂ ಸಮಾಜವಾದಿ ಪದಗಳನ್ನು ಬದಲಾಯಿಸಿದರೆ ಅದರ ಜಾಗದಲ್ಲಿ ಯಾವುದನ್ನು ಸೇರಿಸುತ್ತೀರಿ ಎಂದು ಬಹಿರಂಗವಾಗಿ ಹೇಳುವ ಧೈರ್ಯ ಇದೆಯಾ? ಸಮಾಜವಾದಿ ಜಾಗದಲ್ಲಿ ಬಂಡವಾಳವಾದವನ್ನು, ಜಾತ್ಯಾತೀತ ಜಾಗದಲ್ಲಿ ಜಾತಿಶ್ರೆಷ್ಠವಾದವನ್ನು ಸೇರಿಸುತ್ತೇವೆ ಎಂದು ಹೇಳುವ ಧೈರ್ಯ ಇದೆಯಾ? ಸಂಘಪರಿವಾರದ ಗುರುಗಳಾದ ಗೋಲ್ವಾಲ್ಕರ್, ಹೆಡ್ಗೆವಾರ್, ಸಾವರ್ಕರ್ ರಿಂದ ಹಿಡಿದು ಈಗಿನ ಹೊಸಬಾಳೆ,ರಸಬಾಳೆವರೆಗೂ ಸಂವಿಧಾನವನ್ನು ವಿರೋಧಿಸುತ್ತಲೇ ಬಂದಿದ್ದಾರೆ. ಸಂವಿಧಾನವನ್ನು ಮುಟ್ಟಿದರೆ ರಕ್ತಕ್ರಾಂತಿಗೂ ಸರಿ ಸಂವಿಧಾನವನ್ನು ಉಳಿಸುವ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಕಾಂಗ್ರೆಸ್ ಪಕ್ಷ ಅಂತಹ ಯಾವ ಬೆಲೆ ತೆತ್ತಾದರೂ ಸರಿ ಸಂವಿಧಾನದ ಪೀಠಿಕೆಯನ್ನು ಬದಲಾಯಿಸಲು ಬಿಡುವುದಿಲ್ಲ. ಸಂವಿಧಾನವನ್ನು ರಕ್ಷಿಸಿದರೆ ಸಂವಿಧಾನ ನಮ್ಮನ್ನು ರಕ್ಷಿಸುತ್ತದೆ" ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಇಂದು ಟ್ವೀಟರ್ನಲ್ಲಿ ಟ್ವೀಟ್ ಮಾಡಿದ್ದಾರೆ.
ಸಂವಿಧಾನದ ಪ್ರಸ್ತಾವನೆಯ "ಜೀವಾಳ" ಹಾಗೂ "ಹೃದಯವೇ" ಆಗಿರುವ ಜಾತ್ಯಾತೀತ ಹಾಗೂ ಸಮಾಜವಾದಿ ಪದಗಳನ್ನು ತೆಗೆದು ಹಾಕಬೇಕೆಂದು ಆರ್ ಎಸ್ ಎಸ್ ಮತ್ತೆ ಒತ್ತಾಯಿಸಿದೆ.
"ಸಂವಿಧಾನವನ್ನೆ ಬದಲಾಯಿಸುತ್ತೇವೆ", "ನಮ್ಮನ್ನ ಗೌರವಿಸುವ ಸಂವಿಧಾನ ಬೇಕು", "ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾಯಿಸಲು", "ಲೋಕಸಭಾ ಚುನಾವಣೆಯಲ್ಲಿ 400… pic.twitter.com/UCtGMCiItU— Hariprasad.B.K. (@HariprasadBK2) June 27, 2025
ಸಂವಿಧಾನದ ಪೀಠಿಕೆಯ ಸಮಾಜವಾದ, ಜಾತ್ಯಾತೀತ ಪದಗಳನ್ನು ತೆಗೆಯಬೇಕು ಎಂದು ದತ್ತಾತ್ರೇಯ ಹೊಸಬಾಳೆ ಹೇಳಿದ್ದು ಕಾಂಗ್ರೆಸ್, ಬಿಜೆಪಿ ನಡುವೆ ವಾಕ್ಸಾಮರಕ್ಕೆ ಕಾರಣವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ