/newsfirstlive-kannada/media/post_attachments/wp-content/uploads/2024/10/aravana-Payasa.jpg)
ತಿರುಪತಿಯ ಲಡ್ಡು ಪ್ರಸಾದದಲ್ಲಿ ಪ್ರಾಣಿ ಕೊಬ್ಬು ಬಳಕೆ ವಿಚಾರ ಭಾರೀ ಸದ್ದು ಮಾಡಿತ್ತು. ಆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
ಕೇರಳದ ಪ್ರಸಿದ್ಧ ಶಬರಿ ಮಲೆ ಅಯ್ಯಪ್ಪ ದೇಗುಲದ ಪ್ರಸಾದದಲ್ಲಿ ಕಳೆದ ವರ್ಷ ಕೀಟನಾಶಕ ಅಂಶ ಹೊಂದಿರುವ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಗೆ ಆದೇಶ ನೀಡಲಾಗಿತ್ತು. ಈ ವಿಚಾರ ಸುಪ್ರೀಂಕೋರ್ಟ್ವರೆಗೂ ಹೋಗಿದ್ದು ಆರೋಪ ಸಾಬೀತಾಗದೇ ಸುಪ್ರೀಂಕೋರ್ಟ್ ಕೀಟನಾಶಕದ ಆರೋಪದ ಅರ್ಜಿ ವಜಾ ಮಾಡಿತ್ತು. ಆದರೆ ಕಳೆದ 1 ವರ್ಷದಿಂದ ಸಂಗ್ರಹಿಸಿ ಇಡಲಾಗಿದ್ದ ಪ್ರಸಾದ ಭಕ್ತರಿಗೆ ಹಂಚದೇ ಅದನ್ನು ಭಕ್ತರ ಭಾವನೆಗಳಿಗೆ ಧಕ್ಕೆಯಾಗದಂತೆ ನಾಶ ಮಾಡಲು ತಿರುವಾಂಕೂರು ದೇವಸ್ವಂ ಟ್ರಸ್ಟ್ ನಿರ್ಧರಿಸಿದೆ.
ಶಬರಿಮಲೆ ಅಯ್ಯಪ್ಪ ದೇಗುಲದ 6.65 ಲಕ್ಷ ಕಂಟೈನರ್ಗಳಲ್ಲಿರುವ ಸಂಗ್ರಹಿಸಿದ್ದ 5.5 ಕೋಟಿ ಮೌಲ್ಯದ ಅರವಣ ಪ್ರಸಾದದಲ್ಲಿ ಕೀಟನಾಶಕ ಪ್ರಮಾಣವಿದೆ ಎಂಬ ಆರೋಪ ಕೇಳಿ ಬಂದಿತ್ತು. ಅರವಣ ಪ್ರಸಾದಕ್ಕೆ ಬಳಸುವ ಏಲಕ್ಕಿಯಲ್ಲಿ ಕೀಟನಾಶಕದ ಪ್ರಮಾಣವು ನಿಗದಿತ ಮಟ್ಟಕ್ಕಿಂತ ಹೆಚ್ಚಾಗಿದೆ ಎಂಬ ಆರೋಪ ಹಿನ್ನೆಲೆ 2023ರ ಜನವರಿ 11 ರಂದು ಪ್ರಸಾದ ಮಾರಾಟಕ್ಕೆ ಹೈಕೋರ್ಟ್ ನಿರ್ಬಂಧಿಸಿತ್ತು. ಈ ಹಿನ್ನೆಲೆ ಕಳೆದ 1 ವರ್ಷದಿಂದ ಬಳಕೆಯಾಗದೇ ಮಲಿಕಪ್ಪುರಂ ದೇವಸ್ಥಾನದ ಬಳಿಯ ದೊಡ್ಡ ಸಭಾಂಗಣದಲ್ಲಿ ಇಡಲಾಗಿತ್ತು.
ಇದನ್ನೂ ಓದಿ: Mysore Dasara 2024: ಯುವ ದಸರಾದಲ್ಲಿ ಗಾಯಕಿ ಶ್ರೇಯಾ ಘೋಷಾಲ್ ಕಮಾಲ್.. ಇಂದು ಏನಿದೆ ಗೊತ್ತಾ?
ಅರವಣ ಪ್ರಸಾದ ಸೇವನೆಗೆ ಸುರಕ್ಷಿತವೆಂದು ನಂತರ ಕಂಡು ಬಂದರೂ ದೇಗುಲದ ಆಡಳಿತ ಮಂಡಳಿ ತಿರುವಾಂಕೂರು ದೇವಸ್ವಂ ಟ್ರಸ್ಟ್ 5.5 ಕೋಟಿ ಮೌಲ್ಯದ ಪ್ರಸಾದ ವಿಲೇವಾರಿಗೆ ನಿರ್ಧರಿಸಿತ್ತು. ‘ಅರವಣ’ ಈಗ ಗೊಬ್ಬರವಾಗಿ ಪರಿವರ್ತನೆಯಾಗಲಿದೆ.
ಪ್ರಸಾದದ ವಿಚಾರಕ್ಕೆ ಇತರ ಹಲವು ಆಯ್ಕೆ ಪರಿಗಣಿಸಲಾಗಿತ್ತು. ಇದನ್ನು ಅರಣ್ಯದಲ್ಲಿ ವಿಲೇವಾರಿ ಮಾಡಲು ವಿರೋಧ ವ್ಯಕ್ತವಾಗಿತ್ತು. ಭಕ್ತರ ಭಾವನೆಗೆ ಧಕ್ಕೆಯಾಗದಂತೆ ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿಗೆ ತಿರುವಾಂಕೂರು ದೇವಸ್ವಂ ಟ್ರಸ್ಟ್ ನಿರ್ಧರಿಸಿತ್ತು, ಹೀಗಾಗಿ ಪ್ರಸಾದ ವಿಲೇವಾರಿಗೆ ದೇಗುಲದ ಮಂಡಳಿ ಟೆಂಡರ್ ಕರೆದಿತ್ತು. ಕೇರಳ ಮೂಲದ ಇಂಡಿಯನ್ ಸೆಂಟ್ರಿಫ್ಯೂಜ್ ಎಂಜಿನಿಯರಿಂಗ್ ಸೊಲ್ಯೂಷನ್ಸ್ (ಐಸಿಇಎಸ್) ಟೆಂಡರ್ ವಹಿಸಿಕೊಂಡಿದೆ ಅಂತ ದೇಗುಲದ ಮಂಡಳಿ ಅಧ್ಯಕ್ಷ ಪಿಎಸ್ ಪ್ರಶಾಂತ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಐವರು ಸಾವು, 200ಕ್ಕೂ ಹೆಚ್ಚು ಜನ ಆಸ್ಪತ್ರೆಗೆ.. ಚೆನ್ನೈ ಏರ್ ಶೋದಲ್ಲಿ ಆಗಿದ್ದೇ ಬೇರೆ!
ಅಕ್ಕಿ ಮತ್ತು ಬೆಲ್ಲದಿಂದ ಮಾಡುವ 'ಅರವಣ' ಪ್ರಸಾದವು ಅಯ್ಯಪ್ಪ ದೇಗುಲಕ್ಕೆ ಆದಾಯದ ಪ್ರಮುಖ ಮೂಲಗಳಲ್ಲಿ ಒಂದಾಗಿದೆ. ಕಳೆದ ಬಾರಿ ‘ಅರವಣ ಪ್ರಸಾದ’ ಮಾರಾಟದಿಂದ ಬಂದ ಆದಾಯ ರೂ. 147 ಕೋಟಿ. ಇದು ದೇವಾಲಯದ ಒಟ್ಟು ಆದಾಯದ ಸುಮಾರು 40 ಪ್ರತಿಶತ.
ಈ ಪ್ರಸಾದ ನಾಶದಿಂದ ದೇವಸ್ವಂ ಮಂಡಳಿಗೆ 7.80 ಕೋಟಿ ನಷ್ಟವಾಗಲಿದೆ. ಪ್ರಸಾದ ನಾಶಕ್ಕೆ ಐಸಿಇಎಸ್ ಸಂಸ್ಥೆಗೆ 1.15 ಕೋಟಿ ರೂ. ಮೌಲ್ಯದ ಟೆಂಡರ್ಗೆ ದೇಗುಲದ ಆಡಳಿತ ಮಂಡಳಿ ಅನುಮೋದನೆ ನೀಡಿದೆ. ಐಸಿಇಎಸ್ ಸಂಸ್ಥೆ ಹೈದ್ರಾಬಾದ್ಗೆ ಕೊಂಡೊಯ್ದು ಅಲ್ಲಿ ವೈಜ್ಞಾನಿಕ ರೀತಿಯಲ್ಲಿ ಗೊಬ್ಬರವಾಗಿ ಪರಿವರ್ತಿಸಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ