/newsfirstlive-kannada/media/post_attachments/wp-content/uploads/2024/12/Vinod-Kambli-And-Sachin-Tendulkar.jpg)
ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಹಾಗೂ ವಿನೋದ್ ಕಾಂಬ್ಳಿ ಬಾಲ್ಯದಿಂದಲೇ ಅದ್ಭುತ ಗೆಳೆಯರು. ಒಂದೇ ಗುರುವಿನ ಗರಡಿಯಲ್ಲಿ ಬೆಳೆದ ಆಟಗಾರರು. ಒಬ್ಬರು ಕ್ರಿಕೆಟ್ ಜಗತ್ತಿನಲ್ಲಿ ವಿಂದ್ಯಪರ್ವತದ ಎತ್ತರಕ್ಕೆ ಬೆಳೆದರೆ, ಮತ್ತೊಬ್ಬ ಬೆಳೆದು, ಬೆಳಗುವ ಮುನ್ನವೇ ಆರಿ ಹೋದ ಪ್ರಭೆ. ಸದ್ಯ ಕಾಂಬ್ಳಿ ಮತ್ತೆ ಸುದ್ದಿಯಲ್ಲಿದ್ದಾರೆ. ಅವರ ಗುರು ರಮಾಕಾಂತ್ ಅಚ್ರೆಕರ್ ಅವರ ಸ್ಮಾರಕ ಅನಾವರಣದ ಸಂದರ್ಭದಲ್ಲಿ ಈ ಜೋಡಿ ಒಂದಾಗಿತ್ತು. ಇಬ್ಬರು ಕೈ ಕೈ ಕುಲುಕಿ ಹಳೆಯ ನೆನಪನ್ನು ಕಣ್ಣೆದುರಿಗೆ ತಂದುಕೊಂಡರು.
ಕಾಂಬ್ಳಿ ಬದುಕು, ಕಾಲ ಬೀಸಿದ ಬಿರಾಗಳಿಯಲ್ಲಿ ಛಿದ್ರ ಛಿದ್ರವಾಗಿ ಹೋಯ್ತು. ಹೇಗೋ ಇರಬೇಕಾದ ಬದುಕು ಇನ್ನೇನೋ ಆಗಿಹೋಯ್ತು. ಕಾಂಬ್ಳಿ ಸದ್ಯ ಅನೇಕ ಆರೋಗ್ಯ ಸಮಸ್ಯೆಯಲ್ಲಿದ್ದಾರೆ. ಅನೇಕ ಸಂಕಷ್ಟಗಳ ನಡುವೆಯೇ ಬದುಕನ್ನು ತಳ್ಳುತ್ತಿದ್ದಾರೆ. ಈ ವಿಚಾರವಾಗಿ ಸಚಿನ್ ಮೇಲೆ ಅನೇಕ ಪ್ರಶ್ನೆಗಳನ್ನು ನೆಟ್ಟಿಗರು ಮಾಡಿದ್ದರು. ಸಚಿನ್ ಬಳಿ ಕಾಂಬ್ಳಿ ಸಮಸ್ಯೆಯನ್ನು ನೀಗಿಸಲು ಸಾಧ್ಯವಿಲ್ಲದಷ್ಟು ಹಣದ ಕೊರತೆ ಇದೆಯೇ ಎಂಬೆಲ್ಲಾ ಪ್ರಶ್ನೆಗಳು ಸಾಮಾಜಿಕ ಜಾಲತಾಣಗಳಲ್ಲಿ ತೂರಿ ಬಂದವು. ಸಚಿನ್ ಸಹಾಯದ ಬಗ್ಗೆ ಮೊದಲ ಬಾರಿ ವಿನೋದ್ ಕಾಂಬ್ಳಿ ಮೌನ ಮುರಿದಿದ್ದಾರೆ. ಸಚಿನ್ ಸದಾಕಾಲ ನನ್ನ ಆಪತ್ತಿನ ಸಮಯದಲ್ಲಿ ಬೆನ್ನೆಲುಬಾಗಿ ನಿಂತ ಆಪ್ತಮಿತ್ರ ಎಂದು ಹೇಳಿದ್ದಾರೆ.
ಇತ್ತೀಚೆಗೆ ನಡೆದ ಒಂದು ಖಾಸಗಿ ಸಂದರ್ಶನದಲ್ಲಿ ಕಾಂಬ್ಳಿ ಸಚಿನ್ ಸಹಾಯವನ್ನು ಶ್ಲಾಘಿಸಿದ್ದಾರೆ. ನನ್ನ ಅತ್ಯಂತ ಕಠಿಣ ಸಮಯದಲ್ಲಿ ಸಚಿನ್ ನನಗೆ ಹೆಗಲಾಗಿ ನಿಂತಿದ್ದಾರೆ. ನನಗೆ ಇಲ್ಲಿಯವರೆಗೂ ಎರಡು ಬಾರಿ ಹೃದಯಾಘಾತವಾಗಿದೆ. ಒಂದು ಬಾರಿ ನನ್ನ ಪತ್ನಿ ನನ್ನನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಿದ್ದರು. ಆಗ ನನಗೆ ಬೆನ್ನೆಲುಬಾಗಿ ನಿಂತಿದ್ದು ಇದೇ ನನ್ನ ಆಪ್ತಮಿತ್ರ ಸಚಿನ್ ತೆಂಡೂಲ್ಕರ್. ಎರಡು ಬಾರಿ ಶಸ್ತ್ರ ಚಿಕಿತ್ಸೆ ಆದಗಲೂ ಕೂಡ ಸಚಿನ್ ಮುಂದೆ ನಿಂತು ಅದನ್ನು ಮಾಡಿಸಿಕೊಟ್ಟಿದ್ದು ಎಂದು ಹೇಳಿದ್ದಾರೆ. ಒಂದು ಸಮಯದಲ್ಲಿ ನನಗೆ ಸಚಿನ್ ಏನೂ ಮಾಡಲಿಲ್ಲ ಎಂದು ನಾನೇ ಹೇಳಿದ್ದೇನೆ. ಅದು ನಾನು ಹತಾಶೆಗೊಂಡ ದಿನಗಳಲ್ಲಿ ಹೇಳಿದ ಮಾತುಗಳು. ಆದ್ರೆ ಸಚಿನ್ ನನಗೋಸ್ಕರ್ ತುಂಬಾ ಮಾಡಿದ್ದಾರೆ. ಎಲ್ಲವನ್ನೂ ಮಾಡಿದ್ದಾರೆ. ನಮ್ಮ ಬಾಲ್ಯದ ಸ್ನೇಹ ಇಂದಿಗೂ ಕೂಡ ಅಷ್ಟೇ ಗಟ್ಟಿಯಾಗಿದೆ. ಎಲ್ಲಿಯೂ ಕೂಡ ಇಂಚು ಬಿರುಕು ಕೂಡ ಬಿಟ್ಟಿಲ್ಲ ಎಂದು ವಿನೋದ್ ಕಾಂಬ್ಳಿ ಹೇಳಿದ್ದಾರೆ.
ರಮಾಕಾಂತ ಅಚ್ರೇಕರ್ ಅವರ ಸ್ಮಾರಕ ಅನಾವರಣದ ವೇಳೆ ಜೊತೆಯಾಗಿದ್ದ ಈ ಜೋಡಿಯನ್ನು ನೋಡಿದ ಜನರು ಸಚಿನ್ ಬೆಳೆದ ಎತ್ತರವನ್ನು, ಕಾಂಬ್ಳಿ ಕುಸಿದ ಆಳವನ್ನು ಅಳತೆಗೋಲಿಟ್ಟು ನೋಡಿದರು. ಕಾಂಬ್ಳಿ ಸ್ಥಿತಿ ಕಂಡು ಇಡೀ ದೇಶವೇ ಮರುಗಿತು. ಅಸಮಾನ್ಯ ಪ್ರತಿಭೆಯೊಂದು ನೂರೆಂಟು ಸಮಸ್ಯೆಗಳನ್ನು ತಾನೇ ಸ್ವಯಂ ಎಳೆದುಕೊಂಡು ಯಾವ ಮಟ್ಟಕ್ಕೆ ಕುಸಿದು ಬಿತ್ತು ಎಂದು ಮರುಕಪಟ್ಟರು. ಇದಾದ ಬಳಿಕ 1983ರ ವರ್ಲ್ಡ್​ಕಪ್ ಗೆದ್ದ ಕ್ರಿಕೆಟ್ ಆಟಗಾರರು ನಾನು ಕಾಂಬ್ಳಿ ಸಹಾಯಕ್ಕೆ ನಿಲ್ಲುತ್ತೇನೆ ಅಂದರು. ಅದರಲ್ಲಿ ಮೊದಲು ಸುನೀಲ್ ಗವಾಸ್ಕರ್ ಕಾಂಬ್ಳಿ ನನಗೆ ಮಗನಿದ್ದಂತೆ ಅವನಿಗೆ ಅಗತ್ಯವಿರುವ ಸಹಾಯವನ್ನು ನಾನು ಮಾಡುತ್ತೇನೆ ಎಂದರು. ಆಮೇಲೆ ಕಪೀಲ್ ಕೂಡ ಕಾಂಬ್ಳಿ ಸಹಾಯಕ್ಕೆ ಮುಂದಾದರು. ಕಾಂಬ್ಳಿಯನ್ನು ರಿಹ್ಯಾಬ್​ ಸೇರಿಸುವ ಕುರಿತು ಮಾತುಗಳು ಕೂಡ ಬಂದವು. ಸದ್ಯ ಕಾಂಬ್ಳಿ ನಾನು ಬದುಕಿನೊಂದಿಗೆ ಒಂದಲ್ಲ ಒಂದು ಯುದ್ಧವನ್ನು ಮಾಡುತ್ತಲೇ ಬಂದಿದ್ದೇನೆ. ನನಗೆ ಕುಟುಂಬ ಹಾಗೂ ಸ್ನೇಹಿತರ ಅಪಾರ ಬೆಂಬಲಿವಿದೆ. ನಾನು ರಿಹ್ಯಾಬ್​ಗೆ ಹೋಗಲು ಸಿದ್ಧನಿದ್ದೇನೆ. ನನ್ನ ಸಹಾಯಕ್ಕೆ ನಿಂತ ಎಲ್ಲರಿಗೂ ನಾನು ಸದಾ ಚಿರಋಣಿಯಾಗಿರುತ್ತೇನೆ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us