/newsfirstlive-kannada/media/post_attachments/wp-content/uploads/2025/07/saif_ali_khan.jpg)
ಬಾಲಿವುಡ್ ನಟ ಸೈಫ್ ಅಲಿ ಖಾನ್ ಹಾಗೂ ತಾಯಿ ಶರ್ಮಿಳಾ ಪಟೌಡಿ, ಸೋದರಿಯರಾದ ಸೋಹಾ, ಸಬಾ ಅವರಿಗೆ ಕಾನೂನು ಹೋರಾಟದಲ್ಲಿ ಮಧ್ಯಪ್ರದೇಶದ ಹೈಕೋರ್ಟ್​​ನಲ್ಲಿ ಭಾರೀ ಹಿನ್ನಡೆ ಆಗಿದೆ. ಬರೋಬ್ಬರಿ 15 ಸಾವಿರ ಕೋಟಿ ರೂಪಾಯಿ ಮೌಲ್ಯದ ಆಸ್ತಿಗೆ ಸಂಬಂಧಿಸಿದ ಕಾನೂನು ಹೋರಾಟದಲ್ಲಿ ಸೈಫ್ ಅಲಿ ಖಾನ್ ಹಾಗೂ ಕುಟುಂಬಕ್ಕೆ ಭಾರಿ ಹಿನ್ನಡೆಯಾಗಿದೆ.
ಮಧ್ಯಪ್ರದೇಶ ಹೈಕೋರ್ಟ್, ಸೈಫ್ ಅಲಿ ಖಾನ್ ಹಾಗೂ ಕುಟುಂಬ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದೆ. ಮಧ್ಯಪ್ರದೇಶದ ಭೋಪಾಲ್ ಹಾಗೂ ಸುತ್ತಮುತ್ತ ಪಟೌಡಿ ಫ್ಯಾಮಿಲಿಯು ಈ ಹಿಂದೆ ಭಾರಿ ಆಸ್ತಿಪಾಸ್ತಿ ಹೊಂದಿತ್ತು. ಈ ಆಸ್ತಿಗಳನ್ನೆಲ್ಲಾ ಮಧ್ಯಪ್ರದೇಶ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಎನಿಮಿ ಪ್ರಾಪರ್ಟಿ ಎಂದು ಘೋಷಿಸಿ ತನ್ನ ವಶಕ್ಕೆ ತೆಗೆದುಕೊಳ್ಳಲು ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿದ್ದ ಸೈಫ್ ಅಲಿ ಖಾನ್ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಜೊತೆಗೆ 2000ನೇ ಇಸವಿಯಲ್ಲಿ ಕೆಳ ನ್ಯಾಯಾಲಯವು ಮಧ್ಯಪ್ರದೇಶದಲ್ಲಿರುವ ಪಟೌಡಿ ಕುಟುಂಬದ ಆಸ್ತಿಗೆ ಸೈಫ್ ಅಲಿಖಾನ್, ಸೋಹಾ, ಸಬಾ, ತಾಯಿ ಶರ್ಮಿಳಾ ಉತ್ತರಾಧಿಕಾರಿಗಳು ಎಂದು ಘೋಷಿಸಿದ್ದ ಆದೇಶ ರದ್ದುಪಡಿಸಿದೆ. ಆದರೇ, ಪ್ರಾಪರ್ಟಿಯ ಉತ್ತರಾಧಿಕಾರ ವಿವಾದವನ್ನು ಮತ್ತೆ ಹೊಸದಾಗಿ ವಿಚಾರಣೆ ನಡೆಸುವಂತೆ ಕೆಳ ನ್ಯಾಯಾಲಯಕ್ಕೆ ಹೈಕೋರ್ಟ್ ಸೂಚಿಸಿದೆ.
ದಿ ಎನಿಮಿ ಪ್ರಾಪರ್ಟಿ ಆ್ಯಕ್ಟ್ 1968ರಡಿ ಕೇಂದ್ರ ಸರ್ಕಾರಕ್ಕೆ ದೇಶ ವಿಭಜನೆಯ ಬಳಿಕ ಪಾಕಿಸ್ತಾನಕ್ಕೆ ವಲಸೆ ಹೋದವರ ಆಸ್ತಿಗಳನ್ನು ಎನಿಮಿ ಪ್ರಾಪರ್ಟಿ ಎಂದು ಘೋಷಿಸಿ ತನ್ನ ವಶಕ್ಕೆ ತೆಗೆದುಕೊಳ್ಳಲು ಅಧಿಕಾರ ಇದೆ. ಈ ಕಾಯಿದೆಯ ಅಂಶಗಳನ್ನು ಬಳಸಿಕೊಂಡು ಕೇಂದ್ರ ಸರ್ಕಾರ ಭೋಪಾಲ್, ರೈಸೆನ್ ಸುತ್ತಮುಚ್ಚ ಇದ್ದ ಭಾರಿ ಪ್ರಮಾಣದ ಆಸ್ತಿಗಳನ್ನು ಎನಿಮಿ ಪ್ರಾಪರ್ಟಿ ಎಂದು ಘೋಷಿಸಿ ತನ್ನ ವಶಕ್ಕೆ ತೆಗೆದುಕೊಂಡಿದೆ.
ಪಟೌಡಿ ಫ್ಯಾಮಿಲಿಯು ಭೋಪಾಲ್, ರೈಸೆನ್​ನಲ್ಲಿ ಭೂಮಿಯನ್ನು ಹೊಂದಿತ್ತು. ಜೊತೆಗೆ ಕೋಫಿಜಾ ಫ್ಲಾಗ್ ಹೌಸ್, ಅಹಮದಾಬಾದ್ ಪ್ಯಾಲೇಸ್, ಕೋತಿ ಮತ್ತು ಚಿಕ್ಕಲೋಡ್, ರೈಸೆನ್ ನಲ್ಲಿ ಅರಣ್ಯ ಭೂಮಿಯನ್ನು ಹೊಂದಿತ್ತು. ನೂರ್ ಇ ಸಬಾ, ಫ್ಲಾಗ್ ಹೌಸ್, ದರ್ ಉಸ್ ಸಲಾಂ, ಪೋರ್ ಕ್ವಾರ್ಟಸ್, ನ್ಯೂ ಕ್ವಾರ್ಟಸ್, ಫಾರ್ಸ್ ಖಾನಾ , ಕೋಫೀಜಾ ಮತ್ತು ಅಹಮದಾಬಾದ್ ಪ್ಯಾಲೇಸ್ ತಮಗೆ ಸೇರಿದ್ದು ಎಂದು ಪಟೌಡಿ ಫ್ಯಾಮಿಲಿಯ ಸೈಫ್ ಅಲಿ ಖಾನ್, ತಾಯಿ ಶರ್ಮಿಳಾ, ಸಬಾ, ಸೋಹ ವಾದಿಸುತ್ತಿದ್ದಾರೆ.
ಸೈಫ್ ಅಲಿ ಖಾನ್ ಅವರ ಅಜ್ಜ ಇಫ್ತಿಕಾರ್ ಅಲಿ ಖಾನ್ ಪಟೌಡಿ
1947 ರಲ್ಲಿ ಭೋಪಾಲ್ ಕೂಡ ಭಾರತದಲ್ಲಿ ಒಂದು ರಾಜರ ಸಂಸ್ಥಾನವಾಗಿತ್ತು. ಕೊನೆಯ ನವಾಬ್ ಆಗಿದ್ದ ನವಾಬ್ ಹಮೀದುಲ್ಲಾ ಖಾನ್ ಅವರು ಸೈಫ್ ತಂದೆ ಮನ್ಸೂರ್ ಅಲಿ ಖಾನ್ ಪಟೌಡಿ ಅವರ ತಾತ ಆಗಿದ್ದರು. ನವಾಬ್ ಹಮೀದುಲ್ಲಾ ಖಾನ್​ಗೆ ಮೂವರು ಹೆಣ್ಣು ಮಕ್ಕಳು, ಹಿರಿಯ ಮಗ ಅಬಿದಾ ಸುಲ್ತಾನ್. ಅಬೀದಾ ಸುಲ್ತಾನ್, 1950ರಲ್ಲಿ ಪಾಕಿಸ್ತಾನಕ್ಕೆ ವಲಸೆ ಹೋದರು. ನವಾಬ್ ಹಮೀದುಲ್ಲಾ ಖಾನ್ 2ನೇ ಮಗಳು, ಸಜೀದಾ ಸುಲ್ತಾನಾ ಭಾರತದಲ್ಲೇ ಉಳಿದುಕೊಂಡು ನವಾಬ್ ಇಫ್ತಿಕಾರ್ ಅಲಿ ಖಾನ್ ಪಟೌಡಿಯನ್ನು ಮದುವೆಯಾದರು. ಈ ಇಫ್ತಿಕಾರ್ ಅಲಿ ಖಾನ್ ಪಟೌಡಿಯೇ ಸೈಫ್ ಅಲಿ ಖಾನ್ ತಾತ. ಹೀಗಾಗಿ ಈ ಆಸ್ತಿಗಳಿಗೆಲ್ಲಾ ನಾವು ಕಾನೂನು ಬದ್ದ ಉತ್ತರಾಧಿಕಾರಿಗಳು ಎಂದು ಸೈಫ್ ಅಲಿ ಖಾನ್ ಫ್ಯಾಮಿಲಿ ಈಗ ಕೋರ್ಟ್​​​ನಲ್ಲಿ ವಾದಿಸುತ್ತಿದೆ.
ಭೋಪಾಲ್ ರಾಜ ಮನೆತನದ ಬೇಗಂ ಸೂರಯಾ ರಶೀದ್, ಬೇಗಂ ಮೆಹರ್ ತಾಜ್, ಸಜೀದಾ ಸುಲ್ತಾನಾ, ನವಾಬ್‌ಜಾದಿ ಖಮರ್ ತಾಜ್ ರಬೀಯಾ ಸುಲ್ತಾನಾ, ನವಾಬ್ ಮೆಹರ್ ತಾಜ್ ಸಜೀದಾ ಸುಲ್ತಾನಾ ಮತ್ತು ಇತರರು 2000ನೇ ಇಸವಿಯಲ್ಲಿ ಹೈಕೋರ್ಟ್​​ನಲ್ಲಿ 2 ಮೇಲ್ಮನವಿ ಸಲ್ಲಿಸಿದ್ದರು. ಭೋಪಾಲ್ ಜಿಲ್ಲಾ ನ್ಯಾಯಾಲಯವು 2000ನೇ ಇಸವಿಯಲ್ಲಿ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಈ 2 ಮೇಲ್ಮನವಿಗಳನ್ನು ಸಲ್ಲಿಸಿದ್ದರು.
ನವಾಬ್ ಹಮೀದುಲ್ಲಾ ವಿಶೇಷ ಹಕ್ಕುಗಳು ವಿಲೀನ
ನವಾಬ್ ಹಮೀದುಲ್ಲಾ ಖಾನ್ 1960ರ ಫೆಬ್ರವರಿ 4 ರಂದು ಸಾವನ್ನಪ್ಪಿದ್ದರು. ಮಧ್ಯಪ್ರದೇಶ ರಾಜ್ಯವು 1949ರ ಏಪ್ರಿಲ್ 30 ರಂದು ಭಾರತದ ಒಕ್ಕೂಟದಲ್ಲಿ ಲಿಖಿತ ಒಪ್ಪಂದದ ಮೂಲಕ ವಿಲೀನವಾಯಿತು. ಆದರೇ, ನವಾಬ್ ಹಮೀದುಲ್ಲಾ ಖಾನ್​ಗೆ ಇದ್ದ ಸ್ಪೆಷಲ್ ಹಕ್ಕುಗಳು ವೀಲಿನದ ಬಳಿಕವೂ ಮುಂದುವರೆದವು. ನವಾಬ್ ಹಮೀದುಲ್ಲಾ ಖಾನ್​ರ ವೈಯಕ್ತಿಕ ಆಸ್ತಿಗಳ ಉತ್ತರಾಧಿಕಾರವು ಭೋಪಾಲ್ ಸಿಂಹಾಸನ ಉತ್ತರಾಧಿಕಾರ ಕಾಯಿದೆ, 1947 ರಡಿ ಆಗಬೇಕು ಎಂದು ಹೈಕೋರ್ಟ್​​ಗೆ ಮೇಲ್ಮನವಿ ಸಲ್ಲಿಸಿದ್ದರು.
ನವಾಬ್ ಹಮೀದುಲ್ಲಾ ಖಾನ್ ಸಾವಿನ ನಂತರ ಸಜೀದಾ ಸುಲ್ತಾನಾರನ್ನು ನವಾಬ್ ಎಂದು ಘೋಷಿಸಲಾಗಿತ್ತು. ಸರ್ಕಾರವು 1962ರ ಜನವರಿ 10 ರಂದು ಪಿತ್ರಾರ್ಜಿತ ಆಸ್ತಿಯನ್ನು ಉಲ್ಲೇಖಿಸಿ ಸಂವಿಧಾನದ ವಿಧಿ 366(22)ರಡಿ ಪತ್ರ ನೀಡಿದೆ.
ಅರ್ಜಿ ತಿರಸ್ಕಾರ ಮಾಡಿರುವುದು ಏಕೆ?
ನವಾಬ್ ಹಮೀದುಲ್ಲಾ ಖಾನ್ ನಿಧನದ ನಂತರ ಅವರ ವೈಯಕ್ತಿಕ ಆಸ್ತಿಯು ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ, ಅರ್ಜಿದಾರರು ಮತ್ತು ಪ್ರತಿವಾದಿಗಳ ಮಧ್ಯೆ ಇಬ್ಬಾಗ ಆಗಬೇಕು. ಹೀಗಾಗಿ ಇದರ ಬಗ್ಗೆ ಭೋಪಾಲ್ ಜಿಲ್ಲಾ ನ್ಯಾಯಾಲಯದಲ್ಲಿ ಆಸ್ತಿಯ ಉತ್ತರಾಧಿಕಾರ ಅರ್ಜಿಯನ್ನು ಸಲ್ಲಿಸಲಾಗಿತ್ತು. ಆದರೇ, ಅಲಹಾಬಾದ್ ಹೈಕೋರ್ಟ್ ತೀರ್ಮಾನದ ಆಧಾರದ ಮೇಲೆ ಜಿಲ್ಲಾ ನ್ಯಾಯಾಲಯವು ಅರ್ಜಿಯನ್ನು ತಿರಸ್ಕರಿಸಿದೆ ಎಂದು ಹೈಕೋರ್ಟ್​ಗೆ ಸಲ್ಲಿಸಿದ್ದ ಮೇಲ್ಮನವಿಯಲ್ಲಿ ಹೇಳಲಾಗಿದೆ.
ಇದನ್ನೂ ಓದಿ: ಕೊಡವ ಸಮಾಜದಿಂದ ನಾನೇ ಮೊದಲ ಹೀರೋಯಿನ್.. ರಶ್ಮಿಕಾ ಮಂದಣ್ಣ ಎಡವಟ್ಟು​!​
ಈಗ ಮಧ್ಯಪ್ರದೇಶ ಹೈಕೋರ್ಟ್, ತನ್ನ ಆದೇಶದಲ್ಲಿ ಜಿಲ್ಲಾ ನ್ಯಾಯಾಲಯವು ಅಲಹಾಬಾದ್ ಹೈಕೋರ್ಟ್, ಕೇಸ್ ಅನ್ನು ಸರಿಯಾಗಿ ಪರಿಗಣಿಸದೇ ನೀಡಿದ ತೀರ್ಮಾನದ ಕಾರಣದಿಂದ ಅರ್ಜಿಯನ್ನು ಈ ಹಿಂದೆ ತಿರಸ್ಕರಿಸಿತ್ತು. ಜಿಲ್ಲಾ ನ್ಯಾಯಾಲಯವು ಸಿಂಹಾಸನ ಉತ್ತರಾಧಿಕಾರ ಕಾಯಿದೆಯನ್ನು ಪರಿಗಣಿಸಲು ವಿಫಲವಾಗಿದೆ. ಸ್ವಾತಂತ್ರ್ಯ ಪೂರ್ವದ ರಾಜ್ಯಗಳ ವಿಲೀನದ ಬಳಿಕದ ಸಿಂಹಾಸನ ಉತ್ತರಾಧಿಕಾರ ಕಾಯಿದೆಯನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದೆ ಎಂದು ಈಗ ಮಧ್ಯಪ್ರದೇಶ ಹೈಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.
ಸರ್ಕಾರಿ ಆಸ್ತಿಗಳೆೆಂದು ಘೋಷಣೆ
ಮನ್ಸೂರ್ ಅಲಿ ಖಾನ್ ಪಟೌಡಿ, ಅವರ ಪತ್ನಿ ಶರ್ಮಿಳಾ ಠಾಗೋರ್, ಮಗ ಸೈಫ್ ಅಲಿ ಖಾನ್, ಹೆಣ್ಣು ಮಕ್ಕಳಾದ ಸಬಾ, ಸೋಹಾ, ಅರ್ಜಿಯಲ್ಲಿ ಪ್ರತಿವಾದಿಗಳಾಗಿದ್ದರು. 2015ರಲ್ಲಿ ಮುಂಬೈನಲ್ಲಿನ ಎನಿಮಿ ಪ್ರಾಪರ್ಟಿ ಕಸ್ಟೋಡಿಯನ್ ಆಫೀಸ್, ಭೋಪಾಲ್ ನವಾಬ್​ಗೆ ಸೇರಿದ್ದ ಆಸ್ತಿಗಳನ್ನ ಸರ್ಕಾರಿ ಆಸ್ತಿಗಳೆೆಂದು ಘೋಷಿಸಿತ್ತು. ಇದಾದ ಬಳಿಕ ಪಟೌಡಿ ಕುಟುಂಬ ಕೋರ್ಟ್ ಮೆಟ್ಟಿಲೇರಿತ್ತು.
2019 ರಲ್ಲಿ ಕೋರ್ಟ್, ಸಾಜೀದಾ ಸುಲ್ತಾನಾರನ್ನು ಕಾನೂನು ಉತ್ತರಾಧಿಕಾರಿ ಎಂದು ಗುರುತಿಸಿ ಮಾನ್ಯತೆ ನೀಡಿತ್ತು. ಸಾಜೀದಾ ಸುಲ್ತಾನಾಗೆ ಸೈಫ್ ಅಲಿ ಖಾನ್ ಮೊಮ್ಮಗ. ಹೀಗಾಗಿ ಆಸ್ತಿಗಳಿಗೆಲ್ಲಾ ಸೈಫ್ ಅಲಿ ಖಾನ್ ಉತ್ತರಾಧಿಕಾರಿ. ಆದರೇ, ಅಬೀದಾ ಸುಲ್ತಾನಾ ಪಾಕಿಸ್ತಾನಕ್ಕೆ ವಲಸೆ ಹೋಗಿದ್ದರಿಂದ ಕೇಂದ್ರ ಸರ್ಕಾರವು ಆಸ್ತಿಗಳನ್ನು ಎನಿಮಿ ಪ್ರಾಪರ್ಟಿ ಎಂದು ಘೋಷಿಸಿದೆ.
ವಿಶೇಷ ವರದಿ;ಚಂದ್ರಮೋಹನ್,ನ್ಯೂಸ್ ಫಸ್ಟ್ (ನ್ಯಾಷನಲ್ ಬ್ಯೂರೋ)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ