/newsfirstlive-kannada/media/post_attachments/wp-content/uploads/2023/11/Leelavathi-1.jpg)
ಸ್ಯಾಂಡಲ್ವುಡ್ ಹಿರಿಯ ನಟಿ ಲೀಲಾವತಿ ಇಂದು ಕೊನೆಯುಸಿರೆಳೆದಿದ್ದಾರೆ. 85 ವರ್ಷ ವಯಸ್ಸಿನ ಅವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದು ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಲೀಲಾವತಿಯವರ ಮೂಲ ಹೆಸರು ಲೀಲಾ ಕಿರಣ್. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ, 1938ನೇ ಇಸವಿಯಲ್ಲಿ ಜನಿಸಿದರು. 6 ವರ್ಷವಿದ್ದಾಗಲೇ ಲೀಲಾವತಿಯವರು ಪೋಷಕರನ್ನ ಕಳೆದುಕೊಂಡಿದ್ದರು.
ನಾಟಕ, ರಂಗಭೂಮಿ ಬಗೆಗೆ ಚಿಕ್ಕವಯಸ್ಸಿನಲ್ಲೇ ಆಸಕ್ತಿ ಹೊಂದಿದ್ದ ಅವರು, ಮೈಸೂರಿನ ರಂಗಭೂಮಿಯಿಂದ ವೃತ್ತಿಜೀವನ ಆರಂಭಿಸಿದರು. ವೃತ್ತಿರಂಗಭೂಮಿಯಲ್ಲಿ ಸಂಪೂರ್ಣ ತೊಡಗಿಸಿಕೊಳ್ಳುವ ಮುನ್ನ ಕೆಲವೆಡೆ ಮನೆ ಕೆಲಸವನ್ನೂ ನಿರ್ವಹಿಸಿದ್ದರು.
ಬಳಿಕ ಸುಬ್ಬಯ್ಯ ನಾಯ್ಡು ಅವರ ಸಂಸ್ಥೆಯಲ್ಲಿ ರಂಗಭೂಮಿ ಕಲಾವಿದೆಯಾಗಿ ಅನೇಕ ನಾಟಕಗಳಲ್ಲಿ ಅಭಿನಯಿಸಿದರು. ಬಳಿಕ ಸ್ಯಾಂಡಲ್ವುಡ್ನತ್ತ ಮುಖ ಮಾಡಿದ ಅವರು ಮೇರು ನಟರೊಂದಿಗೆ ಅಭಿನಯಿಸಿದ ಹೆಗ್ಗಳಿಗೆ ಇವರಿಗಿದೆ.
ಅಂದಹಾಗೇಯೇ, 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಲೀಲಾವತಿ ನಟಿಸಿದ್ದಾರೆ. 400ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 50ಕ್ಕೂ ಹೆಚ್ಚು ವರ್ಷಗಳ ಕಾಲ ಚಿತ್ರರಂಗದಲ್ಲಿ ತಾರೆಯಾಗಿ ಮೆರೆದಿದ್ದಾರೆ. ಕನ್ನಡ, ತಮಿಳು, ತೆಲುಗು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ಮೊದಲೇ ಹೇಳಿದಂತೆ ಡಾ ರಾಜ್ ಕುಮಾರ್, ಉದಯ್ ಕುಮಾರ್, ಶಿವಾಜಿ ಗಣೇಶನ್, ಎನ್ಟಿಆರ್, ಕಮಲ್ ಹಾಸನ್, ವಿಷ್ಣುವರ್ಧನ್, ಜೆಮಿನಿ ಗಣೇಶನ್, ರಜನಿಕಾಂತ್, ಶಂಕರ್ ನಾಗ್, ಅನಂತ್ ನಾಗ್ ಸೇರಿ ಹಲವು ನಟರ ಜೊತೆ ನಟಿಸಿದ್ದಾರೆ. ಅಷ್ಟು ಮಾತ್ರವಲ್ಲದೆ, ಮಗ ವಿನೋದ್ ರಾಜ್ ಜೊತೆ 'ಕನ್ನಡದ ಕಂದ', 'ಶುಕ್ರ', 'ಯಾರದು' ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಆದರೆ ಈ ಹಿರಿಯ ನಟಿ ಇಂದು ಕೊನೆಯುಸಿರೆಳೆದಿದ್ದಾರೆ. ನಟಿಯ ಸಾವಿಗೆ ಸ್ಯಾಂಡಲ್ವುಡ್ ಅನೇಕ ತಾರೆಯರು ಬೇಸರ ಹೊರಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ