/newsfirstlive-kannada/media/post_attachments/wp-content/uploads/2025/04/Chikkmagalore-driver-death.jpg)
ಚಿಕ್ಕಮಗಳೂರಲ್ಲಿ ನಡೆದ ಈ ತ್ರಿಬಲ್ ಮರ್ಡರ್ ನಿಜಕ್ಕೂ ಬೆಚ್ಚಿ ಬೀಳಿಸುವಂತಿದೆ. ರತ್ನಾಕರ್ ಎಂಬ ಈ ಸ್ಕೂಲ್ ಡ್ರೈವರ್ 7 ವರ್ಷದ ಮಗಳು, ಅತ್ತೆ, ನಾದಿನಿಯನ್ನು ಕೊಂದು ತಾನು ಸಾವಿಗೆ ಶರಣಾಗಿದ್ದಾನೆ. ಚಿಕ್ಕಮಗಳೂರಿನ ಖಾಂಡ್ಯ ಬಳಿಯ ಮಾಗಲು ಗ್ರಾಮದಲ್ಲಿ ಈ ಭಯಾನಕ ಘಟನೆ ಬೆಳಕಿಗೆ ಬಂದಿದೆ.
ಪೂರ್ಣಪ್ರಜ್ಞಾ ಶಾಲೆ ಡ್ರೈವರ್ ರತ್ನಾಕರ್, ನಾಡಬಂದೂಕಿನಿಂದ ಮೂವರನ್ನ ಹತ್ಯೆಗೈದಿದ್ದಾನೆ. ಅತ್ತೆ ಜ್ಯೋತಿ, ನಾದಿನಿ ಸಿಂಧು, 7 ವರ್ಷದ ಮೌಲ್ಯ ಕೊಲೆಯಾಗಿದ್ದು, ಸಿಂಧು ಪತಿ ಅವಿನಾಶ್ ಕಾಲಿಗೆ ಗುಂಡೇಟು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಡ್ರೈವರ್ ರತ್ನಾಕರ್ ಮೂರು ಕೊಲೆಗೂ ಮುನ್ನ ಸೆಲ್ಫಿ ವಿಡಿಯೋ ಕೂಡ ಮಾಡಿದ್ದಾನೆ. ಸೆಲ್ಫಿ ವಿಡಿಯೋದಲ್ಲಿ ರತ್ನಾಕರ್ ತನ್ನ ನೋವು ತೋಡಿಕೊಂಡಿದ್ದಾನೆ. ನನ್ನ ಹೆಂಡತಿ ನನಗೆ ಮೋಸ ಮಾಡಿ ಹೋಗಿ 2 ವರ್ಷ ಆಯ್ತು. ಮಗುವೂ ಬೇಡ ಅಂತ ಬಿಟ್ಟು ಹೋದಳು. ನಾನೇ ನನ್ನ ಮಗಳನ್ನು ನೋಡ್ಕೋತಿದ್ದೀನಿ.
ಇದನ್ನೂ ಓದಿ: ರನ್ಯಾ ರಾವ್‌ಗೆ ಡಿವೋರ್ಸ್.. ಜೈಲಲ್ಲಿರುವ ಗೋಲ್ಡ್ ಸ್ಮಗ್ಲಿಂಗ್ ಆರೋಪಿಗೆ ಶಾಕ್ ಕೊಟ್ಟ ಜತೀನ್ ಹುಕ್ಕೇರಿ!
ನಿಮ್ಮ ಅಮ್ಮ ಎಲ್ಲಿ? ಅಮ್ಮ ಎಲ್ಲಿ? ಅಂತ ಅವಳ ಫ್ರೆಂಡ್ಸ್ ಎಲ್ಲಾ ಕೇಳ್ತಾರೆ. ಮನೆಯಲ್ಲಿದ್ದ ಫೋಟೋದಲ್ಲಿರುವ ಅಮ್ಮನನ್ನ ತೋರಿಸಿ ಬೇಜಾರು ಮಾಡ್ಕೊಂಡಿದ್ಲು ಎಂದು ಆರೋಪಿ ರತ್ನಾಕರ್ ಸೆಲ್ಫಿ ವಿಡಿಯೋದಲ್ಲಿ ತನ್ನ ಅಳಲು ತೋಡಿಕೊಂಡಿದ್ದಾನೆ.
ಅತ್ತೆ, ನಾದಿನಿ ಜೊತೆ ಮಗಳನ್ನು ಕೊಲೆ ಮಾಡಿರುವ ರತ್ನಾಕರ್ ಮನೆಯಿಂದ ನೂರು ಮೀಟರ್ ದೂರದಲ್ಲಿ ಗುಂಡು ಹಾರಿಸಿಕೊಂಡು ತಾನು ಸಾವಿಗೆ ಶರಣಾಗಿದ್ದಾನೆ. ಬಾಳೆಹೊನ್ನೂರು ಪೊಲೀಸರು 3 ಕೊಲೆಯಾದ ಹಿನ್ನೆಲೆ ಸ್ಥಳ ಮಹಜರಿಗೆ ಹೋಗಿದ್ದರು. ಈ ವೇಳೆ ಗಂಡು ಹಾರಿಸಿಕೊಂಡ ಶಬ್ದ ಕೇಳುತ್ತಿದ್ದಂತೆ ಜನರು ಬೆಚ್ಚಿ ಬಿದ್ದಿದ್ದಾರೆ.
ರತ್ನಾಕರ್ ರಕ್ತಪಾತಕ್ಕೆ ಕಾರಣವೇನು?
ರತ್ನಾಕರ್-ಸ್ವಾತಿ ದಂಪತಿ 8 ವರ್ಷದ ಹಿಂದೆ ಮದುವೆಯಾಗಿದ್ದರು. ರತ್ನಾಕರ್-ಸ್ವಾತಿ ದಂಪತಿಗೆ ಮೌಲ್ಯ ಎಂಬ 7 ವರ್ಷದ ಮಗಳು ಇದ್ದಳು. ರತ್ನಾಕರ್ ಹಾಗೂ ಸ್ವಾತಿ ನಡುವೆ ಆಗಾಗ ಗಲಾಟೆಯಾಗ್ತಿತ್ತು. ಗಂಡ-ಹೆಂಡತಿ ಗಲಾಟೆ ಮಿತಿ ಮೀರಿ ಸ್ವಾತಿ, ಪತಿಯನ್ನು ಬಿಟ್ಟು ಉಡುಪಿಯಲ್ಲಿ ನೆಲೆಸಿದ್ದಳು. ಉಡುಪಿಯಲ್ಲಿ ಕೆಲಸಕ್ಕೂ ಸೇರಿದ್ದಳು.
ಮೊದಲು ಖಾಸಗಿ ಬಸ್ ಚಾಲಕನಾಗಿದ್ದ ಮೃತ ರತ್ನಾಕರ್, ಪತ್ನಿ ದೂರವಾಗುತ್ತಲೇ ಖಾಸಗಿ ಶಾಲೆಯಲ್ಲಿ ಡ್ರೈವರ್ ಆಗಿದ್ದ. ಎರಡ್ಮೂರು ವರ್ಷದಿಂದ ಪತ್ನಿ ಸ್ವಾತಿಯಿಂದ ದೂರವಿದ್ದ ರತ್ನಾಕರ್ ಇದೇ ವಿಚಾರಕ್ಕೆ ನಿನ್ನೆ ಅತ್ತೆ ಜ್ಯೋತಿ ಜೊತೆ ಗಲಾಟೆ ಮಾಡಿದ್ದ. ನಿಮ್ಮಿಂದಾನೆ ಸ್ವಾತಿ ದೂರವಾದ್ಲು ಅಂತ ಜಗಳ ಮಾಡಿದ್ದ.
ಅತ್ತೆ ಜೊತೆ ಅಳಿಯನ ಗಲಾಟೆ ವಿಕೋಪಕ್ಕೆ ಹೋಗಿ ರತ್ನಾಕರ್ ಗುಂಡು ಹಾರಿಸಿದ್ದಾನೆ. ಅತ್ತೆ ಜ್ಯೋತಿ, ನಾದಿನಿ ಸಿಂಧು ಹಾಗೂ ಮಗಳು ಮೌಲ್ಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗುಂಡು ಹಾರಿಸಿ ಪರಾರಿಯಾಗಿದ್ದ ರತ್ನಾಕರ್ ಬಳಿಕ ತಾನು ಗುಂಡು ಹಾರಿಸಿಕೊಂಡಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ