ನಾಳೆಯಿಂದ ದ್ವಿತೀಯ PU ಪರೀಕ್ಷೆ.. ಕಾಪಿ ಹೊಡೆಯೋದು ಸಾಧ್ಯವೇ ಇಲ್ಲ; ಏನಿದು ವೆಬ್ ಕಾಸ್ಟಿಂಗ್?

author-image
admin
Updated On
ನಾಳೆಯಿಂದ ದ್ವಿತೀಯ PU ಪರೀಕ್ಷೆ.. ಕಾಪಿ ಹೊಡೆಯೋದು ಸಾಧ್ಯವೇ ಇಲ್ಲ; ಏನಿದು ವೆಬ್ ಕಾಸ್ಟಿಂಗ್?
Advertisment
  • ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲೂ ವೆಬ್‌ ಕ್ಯಾಸ್ಟಿಂಗ್‌ ತಂತ್ರಜ್ಞಾನ
  • ಮೊದಲ ಬಾರಿ ವೆಬ್ ಕಾಸ್ಟಿಂಗ್ ಕಣ್ಗಾವಲಿನ ಮೂಲಕ ಪರೀಕ್ಷೆ
  • ಶಿಕ್ಷಣ ಇಲಾಖೆ ಮಾಡಿಕೊಂಡಿರುವ ತಯಾರಿ ಹೇಗಿದೆ ಗೊತ್ತಾ?

ಬೆಂಗಳೂರು: ನಾಳೆಯಿಂದ ರಾಜ್ಯಾದ್ಯಂತ ದ್ವಿತೀಯ ಪಿಯು ಪರೀಕ್ಷೆ ಆರಂಭವಾಗಲಿದ್ದು ಶಿಕ್ಷಣ ಇಲಾಖೆ ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ. ಮೊದಲ ಬಾರಿಗೆ ವೆಬ್ ಕಾಸ್ಟಿಂಗ್ ಕಣ್ಗಾವಲಿನ ಮೂಲಕ ಪರೀಕ್ಷೆ ನಡೆಯಲಿದ್ದು ಶಿಕ್ಷಣ ಇಲಾಖೆ ಮಾಡಿಕೊಂಡಿರುವ ತಯಾರಿ ಹೇಗಿದೆ ಗೊತ್ತಾ?

ದ್ವಿತೀಯ ಪಿಯು ಪರೀಕ್ಷೆಗಳನ್ನು ಸುಗಮವಾಗಿ ನಡೆಸಲು ಅಗತ್ಯ ತಯಾರಿಯನ್ನು ಎಲ್ಲಾ ಜಿಲ್ಲೆಗಳಲ್ಲಿಯೂ ಮಾಡಿಕೊಳ್ಳಲಾಗಿದೆ. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲೂ ಕಾಪಿ ಹೊಡೆಯಲು ಅವಕಾಶ ಇಲ್ಲದಂತ ವೆಬ್‌ ಕ್ಯಾಸ್ಟಿಂಗ್‌ಗೆ ಪೂರ್ವಸಿದ್ಧತೆ ಮಾಡಿಕೊಳ್ಳಲಾಗಿದೆ. ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಪರಿಶೀಲನಾ ವರದಿಯನ್ನು ಇಲಾಖೆಯು ಪಡೆದು ಕೊಂಡಿದೆ.

publive-image

ಏನಿದು ವೆಬ್‌ ಕಾಸ್ಟಿಂಗ್‌?
ವೆಬ್‌ಕಾಸ್ಟಿಂಗ್ ಎನ್ನುವುದು ಅಂತರ್ಜಾಲದಲ್ಲಿ ನೇರ ಪ್ರಸಾರ ಮಾಡುವ ಪ್ರಕ್ರಿಯೆಯಾಗಿದೆ. ಈ ತಂತ್ರಜ್ಞಾನವು ಸೂಕ್ತ ಸಮಯದಲ್ಲಿ ಕಾರ್ಯನಿರ್ವಹಿಸುತ್ತದೆ. ವೆಬ್‌ಕಾಸ್ಟರ್ ಮತ್ತು ಅವರ ವೀಕ್ಷಕರ ನಡುವೆ ಕ್ರಿಯಾತ್ಮಕ, ಸಕ್ರಿಯ ಸಂಭಾಷಣೆಗಳಿಗೆ ಅನುಮತಿಸುತ್ತದೆ.

ಪ್ರತಿ ದಿನದ ಪರೀಕ್ಷಾ ಕಾರ್ಯದ ಚಟುವಟಿಕೆಗಳನ್ನು ವೆಬ್‌ ಕ್ಯಾಸ್ಟ್ ಮಾಡಲು ಜಿಲ್ಲಾ ಪಂಚಾಯ್ತಿಗಳಲ್ಲಿ ಜಿಲ್ಲಾ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗುತ್ತದೆ. ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ಶೌಚಾಲಯ, ಉತ್ತಮವಾದ ಗಾಳಿ, ಬೆಳಕು, ಪೀಠೋಪಕರಣಗಳನ್ನು ಒದಗಿಸಲು ಸಂಬಂಧಿಸಿದ ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರಿಗೆ ಮತ್ತು ಶಾಲಾ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ.

publive-image

ಪರೀಕ್ಷಾ ದಿನಗಳಂದು ಪರೀಕ್ಷಾ ಕೇಂದ್ರಗಳ ಸುತ್ತಾ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಹಾಗೂ ಪರೀಕ್ಷಾ ಕೇಂದ್ರಗಳ ಆಸುಪಾಸಿನ ಜೆರಾಕ್ಸ್ ಮತ್ತು ಸೈಬರ್ ಸೆಂಟರ್‌ಗಳನ್ನು ಮುಚ್ಚಿಸಲು ಆದೇಶ ನೀಡಲಾಗಿದೆ. ಪರೀಕ್ಷಾ ಕೇಂದ್ರಗಳ ಪ್ರದೇಶದ ವ್ಯಾಪ್ತಿಯಲ್ಲಿ ಪರೀಕ್ಷಾ ಅವಧಿಯಲ್ಲಿ ನಿರಂತರ ವಿದ್ಯುತ್‌ ಸರಬರಾಜಿಗೆ ಅಧಿಕಾರಿಗಳಿಗೆ ನಿರ್ದೇಶನ ಕೊಡಲಾಗಿದೆ. ಪರೀಕ್ಷಾ ದಿನಗಳಂದು ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಕೆಎಸ್ಆರ್ಟಿಸಿ ಉಚಿತ ಬಸ್ ವ್ಯವಸ್ಥೆ ಒದಗಿಸಿದೆ. ಬೆಂಗಳೂರು ವ್ಯಾಪ್ತಿಯಲ್ಲಿ ಬಿಎಂಟಿಸಿ ಕೂಡ ಉಚಿತ ಸಂಚಾರಕ್ಕೆ ಅನುವು ಮಾಡಿ ಕೊಟ್ಟಿದೆ.

ಕರ್ನಾಟಕದ 1171 ಕೇಂದ್ರಗಳನ್ನು ಪರೀಕ್ಷೆಗೆ ಸಜ್ಜುಗೊಳಿಸಲಾಗಿದೆ. ಮಾರ್ಚ್ 1ರಿಂದ 20ರವರೆಗೆ ರಾಜ್ಯಾದ್ಯಂತ 1171 ಕೇಂದ್ರಗಳಲ್ಲಿ ಬಿಗಿ ಭದ್ರತೆಯಲ್ಲಿ ದ್ವಿತೀಯ ಪಿಯು ಪರೀಕ್ಷೆ ನಡೆಯಲಿದೆ. ಒಟ್ಟು 7,13,862 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. 3,35,468 ಗಂಡು ಮಕ್ಕಳು, 3,78,389 ಹೆಣ್ಣು ಮಕ್ಕಳು ಹಾಗೂ ಐವರು ತೃತೀಯ ಲಿಂಗಿಗಳಿದ್ದಾರೆ. ಒಟ್ಟು 1,171 ಪರೀಕ್ಷಾ ಕೇಂದ್ರಗಳ ವ್ಯವಸ್ಥೆ ಮಾಡಲಾಗಿದೆ. ಇದರೊಂದಿಗೆ 2,342 ಸ್ಥಾನಿಕ ಜಾಗೃತದಳ, 76 ಉತ್ತರ ಪತ್ರಿಕೆ ಮೌಲ್ಯಮಾಪನ ಕೇಂದ್ರಗಳು ಹಾಗೂ 31,000 ಮೌಲ್ಯಮಾಪಕರನ್ನ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

ನಾಳೆಯಿಂದ ರಾಜ್ಯದಲ್ಲಿ ಮೊದಲ ಬಾರಿಗೆ ವೆಬ್‌ ಕಾಸ್ಟಿಂಗ್‌ ಕಣ್ಗಾವಲು ಹಾಗೂ ಬಿಗಿ ಭದ್ರತೆ ಜೊತೆಗೆ ದ್ವಿತೀಯ ಪಿಯು ಪರೀಕ್ಷೆ ನಡೆಯಲಿದ್ದು, ಶಿಕ್ಷಣ ಇಲಾಖೆ ಸಖತ್ ತಯಾರಿ ಮಾಡಿಕೊಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment