ಇಂದಿನಿಂದ ದ್ವಿತೀಯ PUC Exam- 1.. ಈ ಬಾರಿ ಎಷ್ಟು ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ?

author-image
Bheemappa
Updated On
ನಾಳೆ ಕರ್ನಾಟಕ ಬಂದ್ ಮಾಡಿದ್ರೆ 50 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ -ಖಾಸಗಿ ಶಾಲಾ ಒಕ್ಕೂಟ ಆತಂಕ
Advertisment
  • ಕಾಪಿ ಹೊಡೆಯೋದು ಸಾಧ್ಯವೇ ಇಲ್ಲ, ವೆಬ್ ಕಾಸ್ಟಿಂಗ್​ನಲ್ಲಿ ವಾಚಿಂಗ್
  • ಯಾವ್ಯಾವ ದಿನ ಯಾವ ವಿಷಯದ ಪರೀಕ್ಷೆ ಇದೆ, ವೇಳಾ ಪಟ್ಟಿ ಇಲ್ಲಿದೆ
  • ದ್ವಿತೀಯ ಪಿಯುಸಿ ಪರೀಕ್ಷೆಗೆ ಶಿಕ್ಷಣ ಇಲಾಖೆಯಿಂದ ಸಂಪೂರ್ಣ ಸಿದ್ಧತೆ

ಬೆಂಗಳೂರು: 2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1 ಇಂದಿನಿಂದ ಆರಂಭವಾಗಲಿವೆ. ಮಾರ್ಚ್​ 1 ರಿಂದ ಮಾರ್ಚ್ 20ರ ವರೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಿರ್ಧರಿಸಿದ ರಾಜ್ಯದ ಎಲ್ಲ ಪರೀಕ್ಷೆ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯಲಿದೆ. ಈಗಾಗಲೇ ಎಲ್ಲ ರೀತಿಯ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಮೊದಲ ದಿನ ಅಂದರೆ ಇಂದು ಬೆಳಗ್ಗೆ 10 ಗಂಟೆ ಇಂದ ಮಧ್ಯಾಹ್ನ 1 ಗಂಟೆವರೆಗೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ ಹಾಗೂ ಅರೇಬಿಕ್ ವಿಷಯಗಳ ಎಕ್ಸಾಂ ಅನ್ನು ವಿದ್ಯಾರ್ಥಿಗಳು ಬರೆಯಲಿದ್ದಾರೆ. ಪರೀಕ್ಷೆ ಸಮಯದಲ್ಲಿ ಯಾವುದೇ ಪರೀಕ್ಷೆ ಅಕ್ರಮಗಳಿಗೆ ಕಡಿವಾಣ ಹಾಕಲು ಬೇಕಾದ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್ಸುಗಳಲ್ಲಿ ವಿದ್ಯಾರ್ಥಿಗಳು ಹಾಲ್​ ಟಿಕೆಟ್​ ತೋರಿಸಿ ಉಚಿತ ಪ್ರಯಾಣ ಮಾಡಬಹುದು. ದ್ವಿತೀಯ ಪಿಯುಸಿ ಪರೀಕ್ಷೆ-1 ಇಂದಿನಿಂದ ಆರಂಭವಾಗಿದ್ದು ಕಳೆದ ಬಾರಿಯಂತೆ ಈ ಬಾರಿಯೂ 3 ಪರೀಕ್ಷೆ ನಡೆಸಲಾಗುತ್ತದೆ.

ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಈ ಬಾರಿ ಒಟ್ಟು 7,13,812 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು ಇದರಲ್ಲಿ 6,61,474 ಹೊಸಬರು ಆಗಿದ್ದಾರೆ. ಉಳಿದಂತೆ 34,071 ವಿದ್ಯಾರ್ಥಿಗಳು ಪುನಃ ಪರೀಕ್ಷೆ ಬರೆಯುತ್ತಿದ್ದಾರೆ. 18,317 ಖಾಸಗಿ ಅಭ್ಯರ್ಥಿಗಳು ಪರೀಕ್ಷೆ ತೆಗೆದುಕೊಳ್ಳಲಿದ್ದಾರೆ. 3,35,468 ಗಂಡು ಮಕ್ಕಳು, 3,78,389 ಹೆಣ್ಣು ಮಕ್ಕಳು ಹಾಗೂ ಐವರು ತೃತೀಯ ಲಿಂಗಿಗಳಿದ್ದಾರೆ. ರಾಜ್ಯದಲ್ಲಿ ಒಟ್ಟು 1,171 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಇಂದು ಬೆಳಗ್ಗೆಯಿಂದ ನಡೆಯಲಿದೆ.

ಇದನ್ನೂ ಓದಿ: ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಕೆಲವು ಉದ್ಯೋಗ.. ಪರೀಕ್ಷೆ ಇಲ್ಲ, ಸಂದರ್ಶನ ಮಾತ್ರ

publive-image

ಪ್ರತಿ ತಾಲೂಕಿನಲ್ಲೂ ಪ್ರಮುಖ ಕಾಲೇಜಿನ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ವಿಜ್ಞಾನ, ವಾಣಿಜ್ಯ (ಕಾಮರ್ಸ್) ಹಾಗೂ ಕಲಾ (ಆರ್ಟ್ಸ್​) ವಿಭಾಗದ ತಲಾ ಒಬ್ಬರು ಉಪನ್ಯಾಸಕರ ನೇತೃತ್ವದಲ್ಲಿ ನಾಲ್ವರ ತಂಡವನ್ನು ಜಿಲ್ಲಾ ಉಪ ನಿರ್ದೇಶಕರು ರಚನೆ ಮಾಡಿದ್ದಾರೆ. ಈ ತಂಡವು ವೆಬ್​ ಕಾಸ್ಟಿಂಗ್ ವೀಕ್ಷಣೆ ಮಾಡಲಿದ್ದಾರೆ. ಪರೀಕ್ಷೆ ನಡೆಯುವ ರೂಮ್​ನಲ್ಲಿ ವೆಬ್​​ಕಾಸ್ಟಿಂಗ್ ಜೊತೆಗೆ ಸಿಸಿಟಿವಿ ಕ್ಯಾಮೆರಾ ಕೂಡ ಹದ್ದಿನ ಕಣ್ಣಿಟ್ಟಿರಲಿದೆ.

ಪರೀಕ್ಷೆ ನಡೆಯುವ ಸಮಯದಲ್ಲಿ ಕೇಂದ್ರಗಳ ಸುತ್ತ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ. ಜೆರಾಕ್ಸ್, ಸೈಬರ್, ಕಂಪ್ಯೂಟ‌ರ್ ಸೆಂಟರ್‌ಗಳು ಕಾರ್ಯ ನಿರ್ವಹಿಸುವಂತೆ ಇಲ್ಲ. ಪರೀಕ್ಷೆಗೆ ಯಾವುದೇ ಸಮಸ್ಯೆ, ತೊಂದರೆ ಉಂಟು ಮಾಡಿದರೆ ಶಿಕ್ಷಣ ಕಾಯಿದೆಯ ನಿಯಮಗಳಡಿ ಕ್ರಮ ತೆಗೆದುಕೊಳ್ಳಲಾಗುತ್ತದೆ. ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ದ್ವಿತೀಯ ಪಿಯುಸಿ ಟೈಮ್​ ಟೇಬಲ್

ಮಾರ್ಚ್​ 01- ಕನ್ನಡ, ಅರೇಬಿಕ್
ಮಾರ್ಚ್ 03- ಗಣಿತ, ಶಿಕ್ಷಣ ಶಾಸ್ತ್ರ, ವ್ಯವಹಾರ ಅಧ್ಯಯನ, ತರ್ಕಶಾಸ್ತ್ರ
ಮಾರ್ಚ್​ 04- ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
ಮಾರ್ಚ್​​ 05- ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
ಮಾರ್ಚ್​ 07- ಇತಿಹಾಸ, ಭೌತಶಾಸ್ತ್ರ
ಮಾರ್ಚ್​ 10- ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಗೃಹ ವಿಜ್ಞಾನ
ಮಾರ್ಚ್​ 12- ಮನಃಶಾಸ್ತ್ರ, ಮೂಲ ಗಣಿತ, ರಸಾಯನಶಾಸ್ತ್ರ,
ಮಾರ್ಚ್​ 13- ಅರ್ಥ ಶಾಸ್ತ್ರ
ಮಾರ್ಚ್​ 15- ಇಂಗ್ಲೀಷ್
ಮಾರ್ಚ್​ 17- ಭೂಗೋಳಶಾಸ್ತ್ರ
ಮಾರ್ಚ್​ 18- ಜೀವಶಾಸ್ತ್ರ, ಸಮಾಜಶಾಸ್ತ್ರ, ಗಣಕ ವಿಜ್ಞಾನ, ವಿದ್ಯುನ್ಮಾನಶಾಸ್ತ್ರ
ಮಾರ್ಚ್​ 19- ಮಾಹಿತಿ ತಂತ್ರಜ್ಞಾನ, ರೀಟೈಲ್, ಹಿಂದೂಸ್ತಾನಿ ಸಂಗೀತ, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಅಂಡ್ ವೆಲ್‍ನೆಸ್
ಮಾರ್ಚ್​ 20- ಹಿಂದಿ

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment